ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಖಾಸಗಿ ಜಮೀನಿನಲ್ಲಿ ನಿರ್ಮಾಣವಾಗಿದ್ದ 19 ಮನೆಗಳ ತೆರವು

19 ವರ್ಷಗಳ ನಂತರ ಜಾರಿಯಾದ ನ್ಯಾಯಾಲಯದ ಆದೇಶ
Last Updated 13 ಮಾರ್ಚ್ 2022, 11:32 IST
ಅಕ್ಷರ ಗಾತ್ರ

ಮಲೇಬೆನ್ನೂರು:ಸಮೀಪದ ಮಳಲಹಳ್ಳಿ ಗ್ರಾಮದ ರೈತ ಓಂಕಾರಪ್ಪ ಎಂಬುವವರ ಜಮೀನಿನಲ್ಲಿ ನಿರ್ಮಿಸಿದ್ದ 19 ಮನೆಗಳನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಅಮೀನರು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಿದರು.

ಇಷ್ಟು ವರ್ಷ ವಾಸವಾಗಿದ್ದ ಮನೆಗಳನ್ನು ತೆರವು ಮಾಡುತ್ತಿರುವುದನ್ನು ನೋಡಿ ನಿವಾಸಿಗಳು ಕಣ್ಣೀರು ಹಾಕುತ್ತಿದ್ದುದು ಕಂಡುಬಂತು. ತೆರವಿಗೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಅಧಿಕಾರಿಗಳು ನ್ಯಾಯಾಲಯ ಆದೇಶವಿರುವ ಕಾರಣ ತಾವೇನು ಮಾಡಲು ಆಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜಮೀನಿನ ಮಾಲೀಕರು ತಮ್ಮ ಜಮೀನಿನಲ್ಲಿ 19 ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ತೆರವು
ಮಾಡಿಸಿಕೊಡುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2003ರಲ್ಲಿ ನ್ಯಾಯಾಲಯ ತೀರ್ಪು ನೀಡಿ ತೆರವು ಮಾಡಲು ಆದೇಶಿಸಿತ್ತು. ಕಂದಾಯ ಇಲಾಖೆ ಸಿಬ್ಬಂದಿ ಹಲವುಬಾರಿ ತೆರವಿಗೆ ಯತ್ನಿಸಿದ್ದರು. ಆದರೆ ಹಲವು ಕಾರಣಗಳಿಂದ ಇಷ್ಟು ವರ್ಷ ತೆರವು ಕಾರ್ಯ ನಡೆದಿರಲಿಲ್ಲ.

ತೆರವು ಕಾರ್ಯಾಚರಣೆಗೆ 5 ಕುಟುಂಬದವರು ಪ್ರತಿರೋಧ ವ್ಯಕ್ತಪಡಿಸಿದವು. ಆದರೆ ಅಧಿಕಾರಿಗಳು ಸಂಜೆ 5ರ ಒಳಗೆ ನ್ಯಾಯಾಲಯದ ಆದೇಶ ಜಾರಿ ಮಾಡಬೇಕಿದೆ. ಶೀಘ್ರ ತೆರವು ಮಾಡಿ ಎಂದಾಗ ಪರಸ್ಪರ ವಾಗ್ವಾದ ನಡೆಯಿತು.

‘ಗ್ರಾಮ ಪಂಚಾಯಿತಿ ನಮಗೆ ಹಕ್ಕುಪತ್ರ ನೀಡಿ, ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಟ್ಟಿದೆ. ಭ್ಯಾಗ್ಯಜ್ಯೋತಿ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಈಗ ತೆರವು ಮಾಡಲು ಅವಕಾಶ ನೀಡುವುದಿಲ್ಲ’ ಎಂದು ನಿವಾಸಿಗಳು ಪಟ್ಟು ಹಿಡಿದರು.

ಒಂದು ಹಂತದಲ್ಲಿ ಒಂದು ಕುಟುಂಬದವರು ವಿಷ ಸೇವೆನೆಗೆ ಯತ್ನಿಸಿದಾಗ ಪೊಲೀಸರು ವಿಫಲಗೊಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ರಾಮಚಂದ್ರಪ್ಪ, ಶಾಸಕ ಎಸ್. ರಾಮಪ್ಪ, ಸಿಪಿಐ ಸತೀಶ್ ಕುಮಾರ್ ಮನೆ ಮಾಲೀಕರು ಹಾಗೂ ಜಮೀನಿನ ಮಾಲೀಕರೊಡನೆ ಸಮಾಲೋಚನೆ ನಡೆಸಿ ಸಮಾಧಾನ ಮಾಡಿದರು.

ಜಮೀನು ಮಾಲೀಕರು ನ್ಯಾಯಾಲಯದ ಆದೇಶದಂತೆ ಜಮೀನು ಬಿಡಿಸಿಕೊಡಿ ಎಂದರು. ಮನೆ ಮಾಲೀಕರು ಮನೆ ತೆರವು ಮಾಡುವುದಿಲ್ಲ ಎಂದು ವಾಗ್ವಾದ ನಡೆಸಿದರು.

ಮನೆ ನಿರ್ಮಿಸಿಕೊಂಡವರನ್ನು ಸಮಾಧಾನ ಪಡಿಸಿದ ಶಾಸಕರು, ‘ಸರ್ವೆಯಲ್ಲಿ ಸ್ವಲ್ಪ ತಪ್ಪಾಗಿದೆ. ರಸ್ತೆಗೆ ಜಮೀನು ಹೋಗಿದೆ. ತುರ್ತಾಗಿ ಯಾರಾದರೂ ಜಮೀನು ಮಾರಲು ಬಂದರೆ ವಸತಿ ಯೋಜನೆಗಾಗಿ ಜಮೀನು ಖರೀದಿಗೆ ಸಿದ್ಧ ಎಂದರು. ಆದರೆ ಯಾರೂ ಮುಂದೆ ಬರಲಿಲ್ಲ. ಮನೆ ಕಳೆದುಕೊಂಡವರಿಗೆ ಕೂಡಲೇ ಚಾವಣಿಗೆ ತಗಡು ಹಾಗೂ ಇತರೆ ವಸ್ತು ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ಆಗ ಮನೆಕಳೆದು ಕೊಂಡವರು, ‘ಮನೆ ಬಿಡುವುದಿಲ್ಲ, ಸಮಸ್ಯೆಗೆ ಪರಿಹಾರಸಿಗುವ ತನಕ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಆಗ ಗರಂ ಆದ ಶಾಸಕರು, ‘ಈವೆರೆಗೂ ನೀವು ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ’ ಎಂದು ಕೇಳಿದರು. ಬಳಿಕಸರ್ಕಾರದಿಂದ ವಸತಿ ಯೋಜನೆ ಅಡಿ ಮನೆ ಮಂಜೂರು ಮಾಡಿಸಿಕೊಡುವ ಆಶ್ವಾಸನೆ ನೀಡಿದ ಶಾಸಕರು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿದರು.

ನ್ಯಾಯಾಲಯದ ಅಮೀನರಾದ ಡಿ. ಮನೋಹರ, ಬಸಪ್ಪಾಜಿ, ಎಲ್. ಓಂಕಾರಪ್ಪ, ಶ್ರೀನಿವಾಸ ಮೂರ್ತಿ, ಮಹಾಂತೇಶ್, ಸರ್ವೆಯರ್ ಇಬ್ರಾಹಿಂ, ಉಪತಹಶೀಲ್ದಾರ್ ರವಿ ಆರ್. ವಿಎ ಆನಂದ್, ಪಿಎಸ್ಐ ರವಿಕುಮಾರ್, ಪಿಡಿಒ ಅರವಿಂದ್, ಎಇಇ ಶಿವಮೂರ್ತಿ, ಎಇ ಯೋಗೇಂದ್ರ ಲಾಲ್ ಇದ್ದರು.

ಬಳಿಕ ಮನೆ ಕಳೆದುಕೊಂಡವರು ನಂದಿಗುಡಿ- ಹರಿಹರ ರಸ್ತೆಯಲ್ಲಿ ಟೆಂಟ್ ಹಾಕಿದ್ದು ಕಂಡುಬಂತು. ಪೊಲೀಸರು ಭದ್ರತೆ ಒದಗಿಸಿದ್ದರು.2003ರಲ್ಲಿ ನೀಡಿದ್ದ ತೀರ್ಪು 19 ವರ್ಷಗಳ ನಂತರ ಜಾರಿಯಾಗಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT