ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019: ಸಂಕಟ–ಸಂಭ್ರಮದ ಮೆರವಣಿಗೆ...

2020: ಕನಸುಗಳ ಹಾಯಿದೋಣಿಯಲ್ಲಿ ಪಯಣ...
Last Updated 30 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ನೋವು–ನಲಿವು’ಗಳನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡು ತೇಲಿಬಂದ ‘2019’ ಎಂಬ ನದಿ, ಇನ್ನೇನು ಕಡಲನ್ನು ಸೇರುವ ಗಳಿಗೆ ಬಂದಿದೆ. ಇನ್ನೇನಿದ್ದರೂ ‘2020’ ಎಂಬ ಹೊಸ ಕನಸುಗಳ ಹಾಯಿದೋಣಿಯಲ್ಲಿ ಕುಳಿತು ನಾಳೆಯಿಂದ (ಜನವರಿ 1) ಕಡಲಿನಲ್ಲಿ ಪಯಣ ಮುಂದುವರಿಸಬೇಕಾಗಿದೆ.

ಸಾಗಿಬಂದ ದಾರಿಗಳತ್ತ ಹೊರಳಿದರೆ ಸಂಕಟ–ಸಂಭ್ರಮಗಳ ನೆನಪಿನ ಮೆರವಣಿಗೆ. ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ, ಜನಾಕರ್ಷಣೆ ತಾಣವಾದ ಗಾಜಿನಮನೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಏರಿಕೆ, ಉತ್ತಮ ಮಳೆಯಾಗಿ ಭರ್ತಿಯಾದ ಭದ್ರಾ ಜಲಾಶಯದಂತಹ ಸಂಗತಿಗಳು ತಂಗಾಳಿಯ ಹಿತಾನುಭವ ನೀಡುತ್ತವೆ. ರೌಡಿಶೀಟರ್‌ ಬುಳ್ಳ ನಾಗನ ಕೊಲೆ, ಸಿಡಿಲಿಗೆ ಯುವಕರಿಬ್ಬರ ಬಲಿ, ಅಪಘಾತದಲ್ಲಿ ಮೂವರ ಸಜೀವ ದಹನದಂತಹ ವಿದ್ಯಮಾನಗಳು ಬಿರುಗಾಳಿಯಂತೆ.

ಲೋಕಸಭಾ ಚುನಾವಣೆಯಲ್ಲಿ ಸಂಸದ ಸಿದ್ದೇಶ್ವರ ಅವರ ವಿಜಯಯಾತ್ರೆ, ಪಾಲಿಕೆ ಚುನಾವಣೆ ಅತಂತ್ರ ಫಲಿತಾಂಶ ರಾಜಕೀಯ ಒಳಸುಳಿಗಳನ್ನು ಬಿಂಬಿಸಿದರೆ; ಮೀಸಲಾತಿ ಹೆಚ್ಚಳಕ್ಕಾಗಿ ರಾಜನಹಳ್ಳಿಯಿಂದ ಬೆಂಗಳೂರಿಗೆ ನಡೆದ ಪಾದಯಾತ್ರೆ, ವಿಶ್ವಧರ್ಮ ಭಾವೈಕ್ಯತಾ ಪ್ರವಚನ, ‘ಮತ್ತೆ ಕಲ್ಯಾಣ’ ಕಾರ್ಯಕ್ರಮಗಳು ಕ್ರಾಂತಿಯ ಕಹಳೆಗಳನ್ನು ಮೊಳಗಿಸಿವೆ. 2019ರ ಪ್ರಮುಖ ಘಟನಾವಳಿಗೆ ಇಣುಕು ನೋಟ ಇಲ್ಲಿದೆ.

ಮುಂದುವರಿದ ‘ಕಮಲ’ ಯಾತ್ರೆ; ಸಿದ್ದೇಶ್ವರಗೆ ದಾಖಲೆ ಗೆಲುವು

* ಏಪ್ರಿಲ್‌ 23ರಂದು ನಡೆದ ಲೋಕಸಭಾ ಚುನಾವಣಾ ಚುನಾವಣೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ವಿರುದ್ಧ 1,69,702 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕವೂ ಜಿಲ್ಲೆಯ ಇತಿಹಾಸದಲ್ಲಿನ ಅತಿ ದೊಡ್ಡ ಗೆಲುವು ಎಂಬ ಖ್ಯಾತಿಗೂ ಪಾತ್ರರಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೊನ್ನಾಳಿಗೆ ಬಂದು ಸಿದ್ದೇಶ್ವರ ಪರ ಚುನಾವಣಾ ಪ್ರಚಾರವನ್ನೂ ಮಾಡಿದ್ದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ತಮಗೆ ನೀಡಿದ್ದ ಕಾಂಗ್ರೆಸ್‌ ಟಿಕೆಟ್‌ ಅನ್ನು ಶಾಸಕ ಶಾಮನೂರು ಶಿವಶಂಕರಪ್ಪ ನಿರಾಕರಿಸಿದ್ದರು. ಬಳಿಕ ತೇಜಸ್ವಿ ಪಟೇಲ್‌ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಶಾಮನೂರು ಕುಟುಂಬಕ್ಕೆ ಆಪ್ತರಾಗಿರುವ ಮಂಜಪ್ಪ ಅವರಿಗೆ ಟಿಕೆಟ್‌ ಕೊಡಲಾಯಿತು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಯಕೊಂಡ ಕ್ಷೇತ್ರದ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಸೇರಿದ್ದ ಮಾಜಿ ಶಾಸಕ ಬಸವರಾಜ ನಾಯ್ಕ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದಪ್ಪ ಅವರೂ ಬಿಜೆಪಿಗೆ ಮರಳಿದ್ದರು.

* ಫೆ.28ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಶೈಲಜಾ ಬಸವರಾಜ್‌ ಹಾಗೂ ಉಪಾಧ್ಯಕ್ಷೆಯಾಗಿ ಸುರೇಂದ್ರ ನಾಯ್ಕ ಆಯ್ಕೆಯಾದರು. ನವೆಂಬರ್‌ 11ಕ್ಕೆ ನಡೆದ ಚುನಾವಣೆಯಲ್ಲಿ ಯಶೋದಮ್ಮ ಮರುಳಪ್ಪ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

* ಮೇ ತಿಂಗಳಲ್ಲಿ ಹರಿಹರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಹರಪನಹಳ್ಳಿ ಪುರಸಭೆಯು ಕಾಂಗ್ರೆಸ್‌ ತೆಕ್ಕೆಗೆ ಬಂದಿದೆ.

* ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಜಿಲ್ಲೆಯವರಿಗೆ ಸಚಿವರಾಗುವ ಭಾಗ್ಯ ದೊರೆಯಲಿಲ್ಲ. ಕೆ.ಎಸ್‌. ಈಶ್ವರಪ್ಪ ಅವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.

* ಸಚಿವ ಸ್ಥಾನ ವಂಚಿತ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಯಿತು.

ಪಾಲಿಕೆ ಫಲಿತಾಂಶ ಅತಂತ್ರ

ನವೆಂಬರ್‌ 12ರಂದು 45 ಸ್ಥಾನಗಳಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊಮ್ಮಿತು. ಅಧಿಕಾರದಲ್ಲಿದ್ದ ಕಾಂಗ್ರೆಸ್‌ 22 ಸ್ಥಾನಗಳನ್ನು ಪಡೆದರೆ, ಕಳೆದ ಬಾರಿ ಕೇವಲ ಒಬ್ಬರೇ ಸದಸ್ಯರಿದ್ದ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿದೆ. ಐವರು ಪಕ್ಷೇತರರು ಹಾಗೂ ಜೆಡಿಎಸ್‌ನಿಂದ ಒಬ್ಬರು ಆಯ್ಕೆಯಾಗಿದ್ದಾರೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ.

ಧಾರ್ಮಿಕ ವಲಯದ ಕಂಪು

* ದಾವಣಗೆರೆಯಲ್ಲಿ ಜನವರಿ 10ರಿಂದ ಫೆಬ್ರುವರಿ 2ರವರೆಗೆ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ಅವರಿಂದ ವಿಶ್ವಧರ್ಮ ಭಾವೈಕ್ಯತಾ ಪ್ರವಚನ ನಡೆಯಿತು. ಲಿಂಗಾಯತ ಧರ್ಮದ ಮಹತ್ವದ ಬಗ್ಗೆ ಸ್ವಾಮೀಜಿ ನೀಡುತ್ತಿದ್ದ ಪ್ರವಚನ ಆಲಿಸಲು ಜನಸಾಗರವೇ ಹರಿದು ಬರುತ್ತಿತ್ತು.

* ಲಿಂಗಾಯತ ಪ್ರತ್ಯೇಕ ಧರ್ಮದ ವಿರುದ್ಧ ನಿಂತ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ದಾವಣಗೆರೆಯಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ವೀರಶೈವ ಧರ್ಮ ರತ್ನ’ ಬಿರುದು ನೀಡಿ ಸತ್ಕರಿಸಲಾಯಿತು.

* ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಪುನರಾಯ್ಕೆಯಾದರು.

* ಫೆಬ್ರುವರಿ 8, 9ರಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಮೊದಲ ಬಾರಿಗೆ ವಾಲ್ಮೀಕಿ ಜಾತ್ರೆ ನಡೆಯಿತು.

* ಆಗಸ್ಟ್‌ 22ರಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯಿತು.

* ಸೆ. 29ರಿಂದ ಅಕ್ಟೋಬರ್‌ 8ರವರೆಗೆ ದಾವಣಗೆರೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ ಅವರ ದಸರಾ ಧರ್ಮ ಸಮ್ಮೇಳನ ನಡೆಯಿತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದ್ದರು.

* ಹರಿಹರದ ಆರೋಗ್ಯ ಮಾತೆ ಚರ್ಚ್‌ಗೆ ಕ್ಯಾಥೋಲಿಕ್‌ ಕ್ರೈಸ್ತರ ವಿಶ್ವಗುರು ಪೋಪ್‌ ಫ್ರಾನ್ಸಿಸ್‌ ಅವರು ‘ಕಿರು ಬೆಸಿಲಿಕಾ’ ಮನ್ನಣೆಯನ್ನು ನೀಡಿದ್ದಾರೆ.

* ನಂದಿಗುಡಿಯ ವೃಷಭಪುರಿ ಸಂಸ್ಥಾನದ ಪೀಠಾಧಿಪತಿ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮನನೊಂದು ನ. 23ರಂದು ಮಠವನ್ನು ತೊರೆದು ಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಮಠದಿಂದ ಒಂದು ತಿಂಗಳು ದೂರ ಉಳಿದಿದ್ದ ಸ್ವಾಮೀಜಿ ಡಿಸೆಂಬರ್‌ 22ಕ್ಕೆ ಮಠಕ್ಕೆ ಮರಳಿಬಂದರು.

ಕಾಡಿದ ಅಪರಾಧ ಜಗತ್ತು...

* ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಾಜನ್‌ ರಾಜಗೋಪಾಲ್‌ನನ್ನು ಪೊಲೀಸರು ಬಂಧಿಸಿದ್ದರು.

* ದಾವಣಗೆರೆ ತಾಲ್ಲೂಕಿನ ಹುಣಸೆಕಟ್ಟೆ ಬಳಿ ಕೊಲ್ಲಾಪುರದ ಬೆಳ್ಳಿ ವ್ಯಾಪಾರಿಯ ಕಾರನ್ನು ದರೋಡೆ ಮಾಡಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿ, ಆರೋಪಿಗಳಿಂದ ₹ 58 ಲಕ್ಷ ಮೌಲ್ಯದ ಬೆಳ್ಳಿ ವಶಪಡಿಸಿಕೊಳ್ಳಲಾಗಿತ್ತು.

* ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿ ಕೋಟ್ಯಧಿಪತಿಯಾಗಿದ್ದ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನ ಅಮೀರ್‌ ಅಹ್ಮದ್‌ ಬಂಧನ.

* ಮೇ 11ರಂದು ರೌಡಿಶೀಟರ್‌ ಬುಳ್ಳ ನಾಗನ ಕೊಲೆ; ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಮಾಜಿ ಸದಸ್ಯ ಜೆ.ಎನ್‌. ಶ್ರೀನಿವಾಸ್‌ ಸೇರಿ ಹಲವರ ಬಂಧನ.

* ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ನರೇಗಾ ಕೆಲಸಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಇಬ್ಬರು ಯುವಕರ ಸಾವು.

* ಬೆಂಗಳೂರಿನ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ದಾವಣಗೆರೆ ಜಿಲ್ಲೆಯ 500ಕ್ಕೂ ಹೆಚ್ಚು ಜನರಿಗೆ ₹ 20 ಕೋಟಿಗಿಂತಲೂ ಹೆಚ್ಚು ವಂಚನೆ.

ಅಗ್ನಿ ಅವಘಡ:

* ಜನವರಿ 10ಕ್ಕೆ ‘ಮುದ್ದಳ್ಳಿ ಗಂಗಾ ಎಂಟರ್‌ಪ್ರೈಸಸ್‌– ಮುದ್ದಳ್ಳಿ ಟ್ರೇಡರ್ಸ್‌’ ಹಾರ್ಡ್‌ವೇರ್‌ ಮಳಿಗೆಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿ.

* ಜೂನ್‌ 29ರಂದು ದಾವಣಗೆರೆಯ ಸೋನಿ ಎಲೆಕ್ಟ್ರಾನಿಕ್ ಮಳಿಗೆಗೆ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ಭಸ್ಮ.

* ಡಿಸೆಂಬರ್‌ 25ರಂದು ರಾತ್ರಿ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯಲ್ಲಿ ರಾಸಾಯನಿಕ ತುಂಬಿದ್ದ ಟ್ಯಾಂಕರ್‌ ಮತ್ತು ಟೈರ್‌ಗಳಿದ್ದ ಲಾರಿ ನಡುವೆ ಡಿಕ್ಕಿಯಾಗಿ ರಾಜಸ್ಥಾನದ ಮೂವರು ಸಜೀವ ದಹನವಾಗಿದ್ದರು.

ಮೀಸಲಾತಿ ಹೆಚ್ಚಳಕ್ಕಾಗಿ ಪಾದಯಾತ್ರೆ

ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಜೂನ್‌ 9ರಿಂದ ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದರು. ಹಲವು ರಾಜಕೀಯ ನಾಯಕರು, ಸ್ವಾಮೀಜಿಗಳು ಹಾಗೂ ವಾಲ್ಮೀಕಿ ಸಮುದಾಯದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆಯು ದಾವಣಗೆರೆ–ಚಿತ್ರದುರ್ಗ–ತುಮಕೂರು ಜಿಲ್ಲೆಯ ಮೂಲಕ ಸಾಗಿ ಜೂನ್‌ 24ರಂದು ಬೆಂಗಳೂರಿಗೆ ತಲುಪಿತ್ತು. ಜೂ. 25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಸಮಾವೇಶ ಮಾಡಿ, ಸರ್ಕಾರಕ್ಕೆ 2 ತಿಂಗಳ ಗಡುವು ನೀಡಲಾಗಿತ್ತು. ಬಳಿಕ ಸರ್ಕಾರವು ಈ ವಿಚಾರವಾಗಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಸಮಿತಿಯನ್ನೂ ರಚಿಸಿತ್ತು.

ನಡೆಯದ ವಿಶ್ವ ಕನ್ನಡ ಸಮ್ಮೇಳನ

* ₹ 20 ಕೋಟಿ ಮಂಜೂರು ಮಾಡಿ 2018ರ ಫೆಬ್ರುವರಿಯಲ್ಲಿ ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿದ್ದ ವಿಶ್ವ ಕನ್ನಡ ಸಮ್ಮೇಳನ 2019ರಲ್ಲೂ ನಡೆಯಲಿಲ್ಲ. ವಿಶ್ವ ಕನ್ನಡ ಸಮ್ಮೇಳನವನ್ನು ಮುಖ್ಯಮಂತ್ರಿ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.

* ದಾವಣಗೆರೆಯಲ್ಲಿ ಜನವರಿ 30 ಹಾಗೂ 31ರಂದು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.

* ಮಾರ್ಚ್‌ 2ರಂದು ಮೈಸೂರಿನ ರಂಗಾಯಣ ತಂಡವು ನಾಲ್ಕೂವರೆ ಗಂಟೆಗಳ ಅವಧಿಯ ‘ಶ್ರೀರಾಮಾಯಣ ದರ್ಶನಂ’ ನಾಟಕವನ್ನು ಪ್ರದರ್ಶಿಸಿತ್ತು.

ರೈಲುನಿಲ್ದಾಣ ಅಭಿವೃದ್ಧಿ

* ಅಂದಾಜು ₹ 12.95 ಕೋಟಿ ವೆಚ್ಚದಲ್ಲಿ ದಾವಣಗೆರೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸ್ಮಾರ್ಟ್‌ ರೈಲು ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

* ಹರಿಹರ–ದಾವಣಗೆರೆ–ತೋಣಹುಣಸೆ ನಡುವೆ ಜೋಡಿ ಮಾರ್ಗ ಪೂರ್ಣಗೊಂಡಿತು. ಆದರೆ, ಅಶೋಕ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಈ ವರ್ಷವೂ ಆರಂಭಗೊಂಡಿಲ್ಲ.

ಗಾಜಿನಮನೆಗೆ ಜನಸಾಗರ

* ಜನವರಿ 26ರಿಂದ ಹತ್ತು ದಿನಗಳ ಕಾಲ ಗಾಜಿನ ಮನೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನ ಬಂದು ವೀಕ್ಷಿಸಿದರು. ಆಗಸ್ಟ್‌ 23ರಿಂದ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಗಾಜಿನ ಮನೆಗೆ ಅಗತ್ಯ ಸಂಪನ್ಮೂಲವನ್ನು ಸ್ಥಳೀಯವಾಗಿ ಸಂಗ್ರಹಿಸಲು ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ವಲಯದಲ್ಲಿ ಏರಿಳಿತ

* ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ 62.53 ಫಲಿತಾಂಶ ಬಂದಿದ್ದು, ರಾಜ್ಯಕ್ಕೆ 22ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ 63.29 ಫಲಿತಾಂಶ ಬಂದಿದ್ದು, ರಾಜ್ಯಕ್ಕೆ 23ನೇ ಸ್ಥಾನ ಪಡೆದಿತ್ತು.

* ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 85.94 ಫಲಿತಾಂಶ ಬಂದಿದ್ದು, ರಾಜ್ಯಕ್ಕೆ 9ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ 81.56 ಫಲಿತಾಂಶದೊಂದಿಗೆ 15ನೇ ಸ್ಥಾನದಲ್ಲಿತ್ತು.

* ದಾವಣಗೆರೆಯ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ 50ನೇ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು.

* ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಡಿಸೆಂಬರ್‌ 26ರಂದು ಆಗಸದಲ್ಲಿ ನಡೆದ ನೆರಳು–ಬೆಳಕಿನಾಟವನ್ನು ಜಿಲ್ಲೆಯ ಜನ ಸಂಭ್ರಮದಿಂದ ವೀಕ್ಷಿಸಿದರು.

ನಿಲ್ಲದ ಪ್ರಾಣಿ–ಮಾನವ ಸಂಘರ್ಷ

* ಮೇ 11ರಂದು ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಜನರ ಮೇಲೆ ದಾಳಿ ನಡೆಸಿದ ಕರಡಿಯನ್ನು ಸೆರೆ ಹಿಡಿಯಲಾಯಿತು.

* ಜುಲೈನಲ್ಲಿ ಹೊಳೆಸಿರಿಗೆರೆಯಲ್ಲಿ ನಾಲ್ವರು ಗ್ರಾಮಸ್ಥರ ಮೇಲೆ ಚಿರತೆ ದಾಳಿ ನಡೆಯಿತು.

* ಸೆಪ್ಟೆಂಬರ್‌ನಲ್ಲಿ ಜಗಳೂರು ತಾಲ್ಲೂಕಿನ ಕೆಳಗೋಟೆ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ್ದವು.

* ಅಕ್ಟೋಬರ್‌ನಲ್ಲಿ ಹರಪನಹಳ್ಳಿ ತಾಲ್ಲೂಕಿನ ಅಲಗಿವಾಡ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಸಾಸ್ವೇಹಳ್ಳಿ ಸಮೀಪದ ಚೀಲಾಪುರದಲ್ಲಿ ಬೀದಿ ನಾಯಿಗಳನ್ನು ತಿನ್ನುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.

* ನವೆಂಬರ್‌ನಲ್ಲಿ ಹೊನ್ನಾಳಿ ತಾಲ್ಲೂಕಿನ ದಿಗ್ಗೇನಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ.

* ಡಿಸೆಂಬರ್‌ನಲ್ಲಿ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ಇಬ್ಬರ ಮೇಲೆ ಕರಡಿ ದಾಳಿ.

ವರ್ಷದ ಪ್ರಮುಖ ವಿದ್ಯಮಾನಗಳು...

* ಡಾ. ಎಂ.ಎಸ್‌. ಎಲಿ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪ್ರದಾನ.

* ದಾವಣಗೆರೆ ಜಿಲ್ಲೆಯ ಸಾಲುಮರದ ವೀರಾಚಾರಿ, ರಂಗಕರ್ಮಿ ಜಯಕುಮಾರ್‌ ಕೊಡಗನೂರು, ಸಾಹಿತಿ ಎಸ್.ಟಿ. ಶಾಂತಗಂಗಾಧರ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

* ಮಾರ್ಚ್‌ 4ರಂದು ಬಾಲಭವನದಲ್ಲಿ ‘ಚಿನ್ನಾರಿ ಎಕ್ಸ್‌ಪ್ರೆಸ್‌’ ರೈಲು ಸಂಚಾರ ಆರಂಭ.

* ಜಗಳೂರು ವಿಧಾನಸಭಾ ಕ್ಷೇತ್ರದ 53 ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆಗೆ ₹ 600 ಕೋಟಿ ಮಂಜೂರು.

* ಫೆ. 17ರಂದು ನಡೆದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ತಳಿಯ ಶ್ವಾನಗಳು ಪಾಲ್ಗೊಂಡು ಗಮನ ಸೆಳೆದವು.

* ಜೂನ್‌ 9ರಂದು ಮಳೆಗಾಗಿ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಭಾನುವಾರದ ಸಂತೆಯನ್ನು ಆರಂಭಿಸಲಾಯಿತು.

* ಐಸಿಎಆರ್‌ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ‘ನಿಕ್ರಾ’ ಯೋಜನೆಯಡಿ 2019ನೇ ಸಾಲಿನ ಅತ್ಯುತ್ತಮ ಕೆವಿಕೆ ಪ್ರಶಸ್ತಿ ಲಭಿಸಿದೆ.

* ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಪಿಎಚ್‌ಸಿ ರಾಷ್ಟ್ರಮಟ್ಟದ ಸ್ವಚ್ಛ ಮಹೋತ್ಸವ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದೆ.

* ಜುಲೈ 9ರಂದು ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸದಾಶಿವ ಶೆಟ್ಟಿ ಅವರ ಜನ್ಮದಿನವನ್ನು ಶಿಷ್ಯಂದಿರು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ರೋಲ್ಸ್‌ ರಾಯ್ಸ್‌ ಕಾರಿನಲ್ಲಿ ಸುತ್ತಾಡಿಸಿ ಆಚರಿಸಿದ್ದರು.

* ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ.ಪಿ. ವೀರಭದ್ರಪ್ಪ ಅವರು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿ ಆಯ್ಕೆ.

* ಹುಳಿಯಾರು ಪಟ್ಟಣದ ವೃತ್ತಕ್ಕೆ ಕನಕದಾಸರ ಹೆಸರಿಡುವ ವಿಚಾರದಲ್ಲಿ ಉಂಟಾಗಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ನಡುವಿನ ಭಿನ್ನಾಭಿಪ್ರಾಯ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕಾಗಿನೆಲೆ ಗುರುಪೀಠದ ಶಾಖಾ ಮಠದಲ್ಲಿ ಬಗೆಹರಿಯಿತು.

ಕಣ್ಣೀರು ತರಿಸಿದ ಈರುಳ್ಳಿ

ಅಕ್ಟೋಬರ್‌ನಲ್ಲಿ ಬಿದ್ದ ಮಳೆಗೆ ಈರುಳ್ಳಿ ಕೊಳೆತು ಮಾರುಕಟ್ಟೆಯಲ್ಲಿ ಕಡಿಮೆ ಆವಕವಾಗುತ್ತಿತ್ತು. ಇದರಿಂದಾಗಿ ಡಿಸೆಂಬರ್‌ನಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ ₹ 100ರ ಗಡಿ ದಾಟುವ ಮೂಲಕ ಗ್ರಾಹಕರಲ್ಲಿ ಕಣ್ಣೀರು ತರಿಸಿತ್ತು. ಈರುಳ್ಳಿಯ ದಾಸ್ತಾನು ಇಲ್ಲದಿರುವುದರಿಂದ ಬಹುತೇಕ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗಲಿಲ್ಲ.

ನೋವು–ನಲಿವು ತಂದ ಮಳೆ

ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾಗಿ ಜಲಮೂಲಗಳು ಭರ್ತಿಯಾಗಿವೆ. ಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಭತ್ತ ಬೆಳೆಯುವ ರೈತರಿಗೆ ಅನುಕೂಲವಾಗಿದೆ.

ಆಗಸ್ಟ್‌ನಲ್ಲಿ ಭಾರಿ ಮಳೆಯಿಂದಾಗಿ ಹಲವು ಮನೆಗಳು ಕುಸಿದು ಬಿದ್ದಿದ್ದವು. ಹೊನ್ನಾಳಿ, ಹರಪನಹಳ್ಳಿ, ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ನೆರೆಯ ಭೀತಿ ಎದುರಾಗಿತ್ತು. ಆ. 18ರಂದು ಸಂಜೆ ನಗರದಲ್ಲಿ ಸತತ 4 ಗಂಟೆ ಕಾಲ ದಾಖಲೆ ಮಳೆಯಾಗಿತ್ತು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಜಿಲ್ಲೆಯಿಂದ ಭಾರಿ ಪ್ರಮಾಣದಲ್ಲಿ ಆಹಾರಧಾನ್ಯ, ಹಣಕಾಸಿನ ನೆರವು ನೀಡಲಾಗಿತ್ತು. ಅಕ್ಟೋಬರ್‌ 21ರಂದು ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಹಲವು ಮನೆಗಳು ಕುಸಿದು ಬಿದ್ದಿದ್ದವು. ಈರುಳ್ಳಿ ಬೆಳೆ ಕೊಳೆಯುವಂತಾಗಿತ್ತು.

ಹರಕೆ ಕೋಣನ ವಿವಾದ

ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದೇವತೆ ಮಾರಿಕಾಂಬ ದೇವಿಗೆ ಹರಕೆ ಬಿಟ್ಟಿದ್ದ ಕೋಣ ಅಕ್ಟೋಬರ್‌ನಲ್ಲಿ ನಾಪತ್ತೆಯಾಗಿತ್ತು. ಶಿವಮೊಗ್ಗ ತಾಲ್ಲೂಕಿನ ಹಾರ್ನಹಳ್ಳಿ ಗ್ರಾಮದವರು ತೆಗೆದುಕೊಂಡು ಹೋಗಿದ್ದಾರೆ ಎಂದು ವಿವಾದ ಹುಟ್ಟಿಕೊಂಡಿತ್ತು.

ಪ್ರಕರಣ ಠಾಣೆಯ ಮೆಟ್ಟಿಲೇರಿದ್ದರಿಂದ ವಿವಾದ ಬಗೆಹರಿಸಲು ಕೋಣನ ಡಿಎನ್‌ಎ ಪರೀಕ್ಷೆ ಮಾಡಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ, ಅಂತಿಮವಾಗಿ ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯಸ್ತಿಕೆಯಲ್ಲಿ ಕೋಣನನ್ನು ಬೇಲಿಮಲ್ಲೂರು ಗ್ರಾಮಕ್ಕೇ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳುವುದರೊಂದಿಗೆ ವಿವಾದ ಸುಖಾಂತ್ಯಗೊಂಡಿತು.

ಪ್ರೇಮಿಗಳ ದಿನ ಒಂದಾದ ಡಿಸಿ–ಸಿಇಒ

ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್‌ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ ಅವರು ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಇದೇ ತಿಂಗಳು ಗೌತಮ್‌ ಹಾಗೂ ಅಶ್ವತಿ ಅವರು ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಸಿಇಒ ಆಗಿ ವರ್ಗಾವಣೆಗೊಂಡರು.

ಬಳಿಕ ಜಿಲ್ಲಾಧಿಕಾರಿಯಾಗಿ ಜಿ.ಎನ್‌. ಶಿವಮೂರ್ತಿ ಹಾಗೂ ಸಿಇಒ ಆಗಿ ಬಸವರಾಜೇಂದ್ರ ಬಂದಿದ್ದರು. ನಂತರ ಮಹಾಂತೇಶ ಬೀಳಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಪದ್ಮ ಬಸವಂತಪ್ಪ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು.

ಅಗಲಿದ ಗಣ್ಯರು...

* ದಾವಣಗೆರೆಯ ಹೋಟೆಲ್‌ ಉದ್ಯಮಿ ಆದರ್ಶ ಹೆಗಡೆ ನಿಧನ

* ದಾವಣಗೆರೆಯ ಹಿರಿಯ ರಾಜಕಾರಣಿ, ಪತ್ರಕರ್ತ ಸಿ. ಕೇಶವಮೂರ್ತಿ.

* ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದವರಾದ ಬೆಂಗಳೂರಿನ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ.ಎಲ್. ಪ್ರವೀಣ್ ಕುಮಾರ್‌ ನಿಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT