ದಾವಣಗೆರೆ: ನಗರದ ನಿಟುವಳ್ಳಿ ರಸ್ತೆಯಲ್ಲಿರುವ ಲೇಬರ್ ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 9 ಕೊಠಡಿಗಳಿವೆ. ಇವುಗಳಲ್ಲಿ ಎರಡು ಕೊಠಡಿ ಶಿಥಿಲಾವಸ್ಥೆಯಲ್ಲಿದ್ದರೆ, ಮೂರು ಕೊಠಡಿಗಳು ದುರಸ್ತಿಗಾಗಿ ಎದುರು ನೋಡುತ್ತಿವೆ. ಇನ್ನುಳಿದ 4 ಕೊಠಡಿಗಳಲ್ಲೇ 1 ರಿಂದ 7ನೇ ತರಗತಿ ವರೆಗಿನ 45 ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗುತ್ತಿದೆ.
1 ರಿಂದ 3ರ ವರೆಗಿನ (ನಲಿ–ಕಲಿ) ವಿದ್ಯಾರ್ಥಿಗಳಿಗೆ ಒಂದು ಕೊಠಡಿ, 4- 5ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಕೊಠಡಿ, 6- 7ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ. ಇನ್ನೊಂದು ಕೊಠಡಿಯನ್ನು ಕಚೇರಿಯಾಗಿ (ಆಫೀಸ್ ರೂಮ್) ಬಳಸಲಾಗುತ್ತಿದೆ.
ಕೊಠಡಿಗಳ ಕೊರತೆಯ ಕಾರಣಕ್ಕೆ ಬೇರೆ ಬೇರೆ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುವ ಸ್ಥಿತಿ ಇದೊಂದೇ ಶಾಲೆಯದ್ದಲ್ಲ. ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ಇದೇ ಅನಿವಾರ್ಯತೆ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 6,377 ಶಾಲಾ ಕೊಠಡಿಗಳಿವೆ. ಈ ಪೈಕಿ 245 ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯ ಇದೆ. 800 ಕೊಠಡಿಗಳು ದುರಸ್ತಿಯಾಗಬೇಕಿದ್ದು, ಈ ಕೊಠಡಿಗಳಲ್ಲೂ ಪಾಠ ಮಾಡದ ಸ್ಥಿತಿ ಇದೆ.
ಶಿಥಿಲಾವಸ್ಥೆಯಲ್ಲಿರುವ ಬಹುತೇಕ ಕೊಠಡಿಗಳು 30 –35 ವರ್ಷಗಳ ಹಿಂದೆ ನಿರ್ಮಾಣವಾದಂತಹವು. ಶಾಲೆಯ ಹಳೆಯ ಪೀಠೋಪಕರಣಗಳನ್ನಿಟ್ಟು ಈ ಕೊಠಡಿಗಳಿಗೆ ಬೀಗ ಹಾಕಲಾಗಿದೆ.
ಇನ್ನು ದುರಸ್ತಿಯಾಗಬೇಕಿರುವ ಕೊಠಡಿಗಳಲ್ಲಿ ಮಳೆ ನೀರು ಸೋರುವುದು, ಚಾವಣಿ ಬೀಳುವುದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ಈ ಕೊಠಡಿಗಳನ್ನು ಬಳಸಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಕೆಲವು ಕೊಠಡಿಗಳ ಬಾಗಿಲು, ಕಿಟಕಿಗಳೂ ಹಾಳಾಗಿವೆ.
ಹೊಸ ಕಟ್ಟಡಗಳೂ ಸೋರುತ್ತಿವೆ:
‘ತುಂಬಾ ಹಳೆಯ ಕೊಠಡಿಗಳು ಸೋರುವುದು ಸಹಜ. ಆದರೆ, 4–5 ವರ್ಷಗಳ ಹಿಂದೆ ನಿರ್ಮಾಣವಾದ ಕೆಲವು ಕೊಠಡಿಗಳೂ ಸೋರುತ್ತಿವೆ. ಮೊದಲೇ ಕೊಠಡಿಗಳ ಸಮಸ್ಯೆ ಇದೆ. ಹೊಸ ಕೊಠಡಿಗಳೂ ಸೋರಿದರೆ, ಎಲ್ಲಿ ಪಾಠ ಮಾಡುವುದು’ ಎಂದು ಶಿಕ್ಷಕರೊಬ್ಬರು ಪ್ರಶ್ನಿಸಿದರು.
‘ಕೊಠಡಿಗಳ ದುರಸ್ತಿಗೆ ಅನುದಾನ ಬರಲ್ಲ. ಶಾಲೆಗೆ ಹೊಸ ಕೊಠಡಿಗಳ ಮಂಜೂರಾತಿಗೆ ಗ್ರಾಮಸ್ಥರು ಕ್ಷೇತ್ರದ ಶಾಸಕರ ಮೇಲೆ ಒತ್ತಡ ಹೇರಬೇಕು. ಆದರೆ, ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ನಾವೂ ಅಸಹಾಯಕರಾಗಿದ್ದೇವೆ’ ಎಂದು ಮತ್ತೊಬ್ಬ ಶಿಕ್ಷಕ ಬೇಸರಿಸಿದರು.
‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹ 7.19 ಕೋಟಿ ಅನುದಾನದಲ್ಲಿ 51 ಕೊಠಡಿಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದರು.
ಮಳೆಯಿಂದಾಗಿ ಕೆಲ ದಿನಗಳ ಹಿಂದಷ್ಟೇ ನಗರದ 45ನೇ ವಾರ್ಡ್ ವ್ಯಾಪ್ತಿಯ ಕರೂರಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಕೊಠಡಿಯೊಂದರ ಚಾವಣಿ ಕುಸಿದು ಬಿದ್ದಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಆ ಕೊಠಡಿಯಲ್ಲಿ ಪಾಠ ಮಾಡುವುದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
‘ಶಿಥಿಲಾವಸ್ಥೆಯ ಕೊಠಡಿಗಳಿಗೆ ಬೀಗ ಹಾಕಿ’
‘2022–23ನೇ ಸಾಲಿನಲ್ಲಿ ಜಿಲ್ಲೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 225 ಕಟ್ಟಡಗಳು ಮಂಜೂರಾಗಿದ್ದವು. ಆ ಪೈಕಿ 202 ಕೊಠಡಿಗಳು ಉದ್ಘಾಟನೆಗೊಂಡು ಬಳಕೆಯಾಗುತ್ತಿವೆ. ಇನ್ನು 23 ಕೊಠಡಿಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ’ ಎಂದು ಡಿಡಿಪಿಐ ಜಿ.ಕೊಟ್ರೇಶ್ ಮಾಹಿತಿ ನೀಡಿದರು.
‘ಸುರಕ್ಷತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಶಿಥಿಲಾವಸ್ಥೆಯ ಕೊಠಡಿಗಳಲ್ಲಿ ಕೂರಿಸಬೇಡಿ. ಬೀಳುವ ಹಂತದಲ್ಲಿರುವ ಕೊಠಡಿಗಳಿಗೆ ಬೀಗ ಹಾಕಿ ಎಂದು ಶಿಕ್ಷಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ದುರಸ್ತಿ ಹಾಗೂ ಶಿಥಿಲಾವಸ್ಥೆ ಕೊಠಡಿಗಳ ತಾಲ್ಲೂಕುವಾರು ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಕೊಠಡಿಗಳ ದುರಸ್ತಿ ನಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.