ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಕುಷ್ಠರೋಗ 29 ಪ್ರಕರಣ ಪತ್ತೆ

ನಿರಂತರ ಮನೆ ಮನೆ ಸರ್ವೆ * ಕಡಿಮೆಯಾಗುತ್ತಿದೆ ಕುಷ್ಠರೋಗ
Last Updated 21 ಸೆಪ್ಟೆಂಬರ್ 2021, 4:37 IST
ಅಕ್ಷರ ಗಾತ್ರ

ದಾವಣಗೆರೆ: ರೋಗದ ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡದೇ ಹೋದರೆ ಅಂಗವೈಕಲ್ಯಕ್ಕೆ ಕಾರಣವಾಗುವ ಕುಷ್ಠರೋಗ ಪ್ರಕರಣ ಜಿಲ್ಲೆಯಲ್ಲಿ ಕಳೆದ ಐದು ತಿಂಗಳುಗಳಲ್ಲಿ 29 ಮಂದಿಯಲ್ಲಿ ಪತ್ತೆಯಾಗಿದೆ.

ಹಿಂದೆ ಕುಷ್ಠರೋಗ ಇರುವವರೇ ಆಸ್ಪತ್ರೆಗೆ ಬರಬೇಕಿತ್ತು. ಈಗ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಒಬ್ಬರಲ್ಲಿ ರೋಗ ಲಕ್ಷಣ ಕಂಡು ಬಂದರೆ ಆ ಮನೆಯ ಎಲ್ಲ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಮುರಳೀಧರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

2019–20ರಲ್ಲಿ 81 ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ವರ್ಷ ಕೊರೊನಾ ಇದ್ದರೂ ಸಮೀಕ್ಷೆ ನಿಲ್ಲಿಸಿರಲಿಲ್ಲ. ತೀವ್ರ ಸೋಂಕಿನ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಕುಷ್ಠರೋಗ ಪತ್ತೆ ಕಾರ್ಯ ಮುಂದುವರಿಸಲಾಗಿತ್ತು. 44 ಪ್ರಕರಣಗಳು ಪತ್ತೆಯಾಗಿದ್ದವು ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಹಂತ ನಾಲ್ವರು ರೋಗಿಗಳು, ಎರಡನೇ ಹಂತದ 48 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡು ಹಂತ: ಕುಷ್ಠರೋಗವನ್ನು ಪಿ.ಬಿ. (ಪೌಸಿಬಾಸಿಲ್ಲರಿ) ಮತ್ತು ಎಂ.ಬಿ. (ಮಲ್ಟಿಬ್ಯಾಸಿಲ್ಲರಿ) ಎಂದು ಎರಡು ಹಂತಗಳಾಗಿ ಗುರುತಿಸಲಾಗುತ್ತದೆ. ಪಿ.ಬಿ. ಅಂದರೆ ಆರಂಭಿಕ ಹಂತದಲ್ಲಿ ಒಂದರಿಂದ 5ರವರೆಗೆ ಮಚ್ಚೆಗಳಷ್ಟೇ ಕಾಣಿಸಿಕೊಳ್ಳುತ್ತವೆ. ಆಗಲೇ ಗುರುತಿಸಿದರೆ 6 ತಿಂಗಳ ಚಿಕಿತ್ಸೆಯಲ್ಲಿ ರೋಗ ಗುಣಪಡಿಸಬಹುದು. ಎರಡನೇ ಹಂತಕ್ಕೆ ದಾಟಿದ ಮೇಲೆ ಗುರುತಿಸಿದರೆ 12 ತಿಂಗಳ ಎಂಡಿಟಿ (ಮಲ್ಟಿ ಡ್ರಗ್‌ ಥೆರಫಿ) ಚಿಕಿತ್ಸೆ ಅಗತ್ಯ ಇರುತ್ತದೆ. 12 ತಿಂಗಳು ಸರಿಯಾಗಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ. ಎರಡನೇ ಹಂತದಲ್ಲಿ ಚಿಕಿತ್ಸೆ ನೀಡದೇ ಇದ್ದರೆ ಗ್ರೇಡ್‌ 2 ಅಂದರೆ ಕಣ್ಣಿಗೆ ಕಾಣುವ ಅಂಗವೈಕಲ್ಯ ಉಂಟಾಗುತ್ತದೆ.

ಲಕ್ಷಣಗಳು: ಚರ್ಮದ ಬಣ್ಣ ಕಳೆದುಕೊಂಡಿರುವುದು, ಚರ್ಮ ದಪ್ಪಗಾಗುವುದು, ಹೊಳಪು ಇರುವುದು, ಎಣ್ಣೆ ಬಣ್ಣ ಕಾಣಿಸುವುದು, ಶರೀರದ ಮೇಲೆ ಗಂಟುಗಳು ಕಾಣಿಸುವುದು, ಕಣ್ಣು ಮುಚ್ಚಲ ಆಗದೇ ಇರುವುದು, ಕೈಗಳಿಗೆ ಅದರಷ್ಟಕ್ಕೇ ಗಾಯಗಳಾಗುವುದು, ಮಡುಚಿಕೊಂಡಿರುವುದು, ಪಾದಗಳು ಸ್ವಾಧೀನ ಕಳೆದುಕೊಳ್ಳುವುದು,ಕೈ ಜುಮ್ಮೆನಿಸುವುದು, ಮರಗಟ್ಟುವಿಕೆ, ಅಂಗೈಗಳಲ್ಲಿ ಸಂವೇದನೆ ಇಲ್ಲದಿರುವುದು, ವಸ್ತುಗಳನ್ನು ಹಿಡಿದುಕೊಳ್ಳಲಾಗದಿರುವುದು ಹೀಗೆ ಅನೇಕ ಲಕ್ಷಣಗಳಿವೆ. ಇವುಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ.ಮುರಳೀಧರ್‌ ತಿಳಿಸಿದರು.

300 ತಂಡ ರಚನೆ

ಮೂರು ವರ್ಷಗಳಲ್ಲಿ ಕುಷ್ಠರೋಗಿಗಳು ಪತ್ತೆಯಾಗಿರುವ ಜಿಲ್ಲೆಯ 108 ಗ್ರಾಮಗಳನ್ನು ಸಮೀಕ್ಷೆ ಮಾಡಲು 300 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬರು ಆಶಾ ಕಾರ್ಯಕರ್ತೆ, ಒಬ್ಬರು ಪುರುಷ ಸ್ವಯಂಸೇವಕರು ಇರುತ್ತಾರೆ. 108 ಗ್ರಾಮಗಳ 3,11,570 ಜನರನ್ನು ಮೂರು ವರ್ಷಗಳ ಕಾಲ ತಪಾಸಣೆಗೆ ಒಳಪಡಿಸುತ್ತಾರೆ. ರೋಗ ಕಂಡು ಬಂದರೆ ಅಂಥವರಿಗೆ ಎಂಡಿಟಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಡಾ. ಮುರಳೀಧರ್‌ ಮಾಹಿತಿ ನೀಡಿದ್ದಾರೆ.

ಗ್ರೇಡ್‌ –2 ಹಂತದಲ್ಲಿ ಇರುವವರನ್ನು ಪಾವಗಡದಲ್ಲಿ ಇರುವ ಚಿಕಿತ್ಸಾ ಕೇಂದ್ರದಲ್ಲಿ ಒಂದು ತಿಂಗಳು ಇರಿಸಿ ಚಿಕಿತ್ಸೆ ನೀಡಲಾಗುವುದು. ಚಕಿತ್ಸೆಯ ಜತೆಗೆ ಅವರಿಗೆ, ಅವರನ್ನು ನೋಡಿಕೊಳ್ಳುವ ಒಬ್ಬರಿಗೆ ಉಚಿತವಾಗಿ ಊಟೋಪಹಾರ ನೀಡಲಾಗುತ್ತದೆ. ಒಂದು ತಿಂಗಳಿಗೆ ರೋಗಿಗೆ ₹ 6 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ರೋಗ ಲಕ್ಷಣ ಇರುವವರು ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಮಾಡಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT