ಭಾನುವಾರ, ಅಕ್ಟೋಬರ್ 25, 2020
24 °C
ಕಾದು ನೋಡುವ ತಂತ್ರಕ್ಕೆ ಮೊರೆಹೋದ ಥಿಯೇಟರ್ ಮಾಲೀಕರು

ದಾವಣಗೆರೆ: 2 ಪರದೆಗಳಲ್ಲಷ್ಟೇ 3 ಸಿನಿಮಾ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತೆರೆ ಕಂಡು ಲಾಕ್‌ಡೌನ್ ವೇಳೆ ಸ್ಥಗಿತಗೊಂಡಿದ್ದ ಮೂರು ಚಿತ್ರಗಳು ಮತ್ತೆ ನಗರದ ಒಂದು ಚಿತ್ರಮಂದಿರ ಹಾಗೂ ಎಸ್.ಎಸ್‌.ಮಾಲ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ಉಳಿದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಒಂದು ತಿಂಗಳು ಮುಂದೂಡುವ ಸಾಧ್ಯತೆ ಇದೆ.

‘ಶಿವಾರ್ಜುನ’ ಚಿತ್ರ ಪುಷ್ಪಾಂಜಲಿ ಥಿಯೇಟರ್‌ನಲ್ಲಿ ನಾಲ್ಕು, ಎಸ್.ಎಸ್‌.ಮಾಲ್‌ನ ಮೂವಿ ಟೈಮ್‌ನ ಒಂದು ಪರದೆಯಲ್ಲಿ ಒಂದು ಪ್ರದರ್ಶನ ಕಾಣಲಿದೆ. ಉಳಿದಂತೆ ಎಸ್.ಎಸ್.ಮಾಲ್‌ನ ಒಂದು ಪರದೆಯಲ್ಲಿ ‘ಅವನೇ ಶ್ರೀಮನ್ನಾರಾಯಣ’ ಎರಡು ಹಾಗೂ ‘ಲವ್‌ ಮಾಕ್‌ಟೇಲ್’ ತಲಾ ಒಂದು ಪ್ರದರ್ಶನ ನಡೆಯಲಿದ.

ಕೊರೊನಾ ಕಾರಣದಿಂದ ಲಾಕ್‌ಡೌನ್ ಆದ 7 ತಿಂಗಳ ನಂತರ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಜಿಲ್ಲೆಯಲ್ಲಿ 20 ಚಿತ್ರಮಂದಿರಗಳು ಇದ್ದು, ಎರಡರಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗುತ್ತಿವೆ. ಚಿತ್ರಮಂದಿರಗಳ ಮಾಲೀಕರಿಗೆ ಸ್ಪಷ್ಟ ನಿರ್ದೇಶನ ಬಾರದ ನಿಮಿತ್ತ ಉಳಿದ ಚಿತ್ರಮಂದಿರಗಳ ಮಾಲೀಕರು ದೃಢ ನಿರ್ಧಾರಕ್ಕೆ ಬಂದಿಲ್ಲ.

ಬಹಳಷ್ಟು ಚಿತ್ರಮಂದಿರಗಳು ಬಾಡಿಗೆಯಲ್ಲಿ ನಡೆಯುತ್ತಿವೆ, ಲಕ್ಷಗಟ್ಟಲೆ ಬಾಡಿಗೆ ಇದೆ. ಥಿಯೇಟರ್ ಆರಂಭಿಸಿದರೆ ಬಾಡಿಗೆ ಕಟ್ಟಲು ಆಗುವುದಿಲ್ಲ. ಥಿಯೇಟರ್ ಮಾಲೀಕರ ಬೇಡಿಕೆಗಳು ಈಡೇರದಿರುವುದು ಹಾಗೂ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ವಿಳಂಬವಾಗುತ್ತಿರುವುರಿಂದ ಮಾಲೀಕರು ಡಿಸೆಂಬರ್‌ವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ.

ಬೆಂಗಳೂರು ಹೊರತುಪಡಿಸಿದರೆ ಮಧ್ಯ ಕರ್ನಾಟಕದ ದಾವಣಗೆರೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕಲೆಕ್ಷನ್ ಪಾಯಿಂಟ್, ದಾವಣಗೆರೆಯಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಂಡರೆ ಚಿತ್ರ ಗೆದ್ದಂತೆಯೇ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಚಿತ್ರಗಳನ್ನು ರಿಲೀಸ್ ಮಾಡಿದರೆ ಪ್ರೇಕ್ಷಕರು ಬರುತ್ತಾರಾ ಎನ್ನುವ ಆತಂಕ ಮಾಲೀಕರನ್ನು ಕಾಡುತ್ತಿದೆ.

ಮಾರ್ಗಸೂಚಿ ಏನು?

ಕೊರೊನಾ ಕಾರಣದಿಂದ ಸರ್ಕಾರ ಮಾಲೀಕರಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಥಿಯೇಟರ್‌ನಲ್ಲಿ ಶೇ 50ರಷ್ಟು ಮಂದಿ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಒಂದು ಶೋ ಮುಗಿದ ನಂತರ ಥಿಯೇಟರ್ ಅನ್ನು ಸ್ಯಾನಿಟೈಸ್ ಮಾಡಬೇಕು. ಜನಸಂದಣಿ ತಪ್ಪಿಸಲು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಬೇಕು. ಚಿತ್ರ ನೋಡಲು ಬರುವ ಪ್ರೇಕ್ಷಕರ ಮೊಬೈಲ್ ಸಂಖ್ಯೆ ಹಾಗೂ ವಿವರ ಪಡೆಯಬೇಕು ಎಂದಿದೆ.

‘ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಆದರೆ ಪ್ರತಿ ಶೋಗೆ ಮುನ್ನ ಸ್ಯಾನಿಟೈಸ್ ಮಾಡಿಸಲು ₹1 ಸಾವಿರ ವೆಚ್ಚವಾಗುತ್ತದೆ. ಕೆಲವೊಂದು ಶೋಗಳಿಗೆ 10 ಜನವೂ ಬಂದಿರುವುದಿಲ್ಲ. ಒಂದು ಟಿಕೆಟ್‌ಗೆ ₹100 ಎಂದರೂ ಆ ಹಣವೆಲ್ಲಾ ಸ್ಯಾನಿಟೈಸ್ ಮಾಡಲು ಖರ್ಚಾಗುತ್ತದೆ ನಮಗೆ ಖರ್ಚಾಗುತ್ತದೆ‘ ಎನ್ನುತ್ತಾರೆ ಗೀತಾಂಜಲಿ ಚಿತ್ರಮಂದಿರದ ಮಾಲೀಕ ಚಂದ್ರಶೇಖರ್.

ಹೊನ್ನಾಳಿ ವರದಿ: ‘ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಇದರಿಂದಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಇದರಿಂದಾಗಿ ಚಿತ್ರ ಪ್ರದರ್ಶನ ಮಾಡುತ್ತಿಲ್ಲ’ ಎನ್ನುತ್ತಾರೆ ಬಸವೇಶ್ವರ ಚಿತ್ರಮಂದಿರದ ಮಾಲೀಕ ಎನ್.ಪಿ. ಪ್ರಕಾಶ್.

‘ಚಿತ್ರಮಂದಿರದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಎರಡು ವಾರಗಳ ಕಾಲ ಒಳಿತು ಕೆಡಕುಗಳನ್ನು ನೋಡಿಕೊಂಡು ಪ್ರಾರಂಭಿಸುತ್ತೇವೆ’ ಎನ್ನುತ್ತಾರೆ ಶಾಂತಾ ಟಾಕೀಸ್ ಮಾಲೀಕ ಎಚ್.ಬಿ.ಶಿವಯೋಗಿ  ಮ್ಯಾನೇಜರ್ ಚಂದ್ರು ಹೇಳುತ್ತಾರೆ. 

ಅದೇ ರೀತಿ ಹರಿಹರ ತಾಲ್ಲೂಕಿನಲ್ಲಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಥಿಯೇಟರ್‌ಗಳು ಆರಂಭವಾಗುವುದಿ‌ಲ್ಲ ಎಂದು ಅಲ್ಲಿನ ಮಾಲೀಕರು ಸ್ಪಷ್ಪಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು