ಕಸ ವಿಲೇವಾರಿ ಇನ್ನು ಸುಲಭ

7
ಮಹಾನಗರ ಪಾಲಿಕೆಯಿಂದ 32 ಆಟೊ ಟಿಪ್ಪರ್‌ ಖರೀದಿ

ಕಸ ವಿಲೇವಾರಿ ಇನ್ನು ಸುಲಭ

Published:
Updated:
ದಾವಣಗೆರೆಯ ವಿದ್ಯಾನಗರದಲ್ಲಿ ರಸ್ತೆ ಪಕ್ಕ ಎಸೆದ ಕಸದ ನಡುವೆ ಆಹಾರಕ್ಕಾಗಿ ಹುಡುಕಾಡುತ್ತಿರುವ ಹಂದಿ, ದನಕರು (ಸಂಗ್ರಹ ಚಿತ್ರ)

ದಾವಣಗೆರೆ: ಮನೆಯ ಮೂಲೆಯಲ್ಲಿ ಒಂದೆರಡು ದಿನಗಳಿಂದ ದುರ್ವಾಸನೆ ಬೀರುತ್ತಿದ್ದ ಕಸದ ಬುಟ್ಟಿ; ರಸ್ತೆಯ ಪಕ್ಕದಲ್ಲಿ ಕೊಳೆತು ನಾರುತ್ತಿರುವ ಕಸದ ತೊಟ್ಟಿ; ಜನ ಎಸೆದ ಆಹಾರ ಪದಾರ್ಥಗಳನ್ನು ತಿನ್ನಲು ಹಂದಿ–ನಾಯಿಗಳ ನಡುವಿನ ಕಿತ್ತಾಟ... ಇನ್ನು ಮುಂದೆ ಇಂಥ ಅಸಹ್ಯ ದೃಶ್ಯಗಳು ನಗರದಲ್ಲಿ ಕಾಣಿಸಿಕೊಳ್ಳದಂತೆ ಮಾಡಲು ಮಹಾನಗರ ಪಾಲಿಕೆಯು ಸಮರ್ಪಕವಾಗಿ ಕಸ ವಿಲೇವಾರಿ ಮಾಡುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ನಗರದಲ್ಲಿ ದಿನಾಲೂ ಪ್ರತಿ ಮನೆಯಿಂದಲೂ ಕಸವನ್ನು ಒಯ್ಯುವ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳಲು ಮುಂದಾಗಿರುವ ಪಾಲಿಕೆಯು, ಇದಕ್ಕಾಗಿ 32 ಹೊಸ ಆಟೊ ಟಿಪ್ಪರ್‌ಗಳನ್ನು ಖರೀದಿಸಿದೆ. ಪ್ರಾಯೋಗಿಕವಾಗಿ ಕಸ ವಿಲೇವಾರಿಗೆ ಭಾನುವಾರದಲೇ ಕೆಲವು ಹೊಸ ಟಿಪ್ಪರ್‌ಗಳನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಮೂರ್ನಾಲ್ಕು ದಿನಗಳಲ್ಲಿ ಹಳೆಯ 18 ಆಟೊ ಟಿಪ್ಪರ್‌ ಸೇರಿ ಒಟ್ಟು 50 ವಾಹನಗಳಲ್ಲಿ ಕಸ ಒಯ್ಯುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಕಸ ನಿರ್ವಹಣೆ ಸಮಸ್ಯೆ:

ನಗರದಲ್ಲಿ ನಿತ್ಯ ಸುಮಾರು 170 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಮನೆ ಮನೆಗೆ ಬಂದು ಸರಿಯಾಗಿ ಕಸವನ್ನು ದಿನಾಲೂ ಒಯ್ಯದೇ ಇರುವ ಬಗ್ಗೆ ಹಲವು ಬಡಾವಣೆಗಳ ಜನ ದೂರುತ್ತಿದ್ದರು. ದಾವಣಗೆರೆ ಉತ್ತರ ಶಾಸಕ ಎಸ್‌.ಎ. ರವೀಂದ್ರನಾಥ್‌ ನೇತೃತ್ವದಲ್ಲಿ ಬಿಜೆಪಿ ನಿಯೋಗವೂ ಈಚೆಗೆ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಕಸ ವಿಲೇವಾರಿ ಸರಿಯಾಗಿ ನಡೆಯದೇ ಇರುವ ಬಗ್ಗೆ ದೂರು ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಸರಿಯಾಗಿ ಕಸವನ್ನು ಒಯ್ಯುತ್ತಿರಲಿಲ್ಲ. ಕೆಲವು ಬಡಾವಣೆಗಳಲ್ಲಿ ಎರಡು– ಮೂರು ದಿನಗಳಿಗೆ ಒಮ್ಮೆ ಬಂದು ಕಸವನ್ನು ಒಯ್ಯಲಾಗುತ್ತಿತ್ತು. ಇದರಿಂದ ಜನರೂ ರೋಸಿ ಹೋಗಿದ್ದಾರೆ.

ಪ್ರತಿ ವಾರ್ಡ್‌ಗೂ ಪ್ರತ್ಯೇಕ ವಾಹನ:

‘ಈ ಹಿಂದೆ ಕೇವಲ 18 ಆಟೊ ಟಿಪ್ಪರ್‌ಗಳಿದ್ದವು. ಖಾಸಗಿಯವರು ಸರಿಯಾಗಿ ಕಸ ವಿಲೇವಾರಿ ಮಾಡದಿರುವ ಬಗ್ಗೆ ದೂರುಗಳು ಬರುತ್ತಿದ್ದವು. ಹೀಗಾಗಿ ಪಾಲಿಕೆಯಿಂದಲೇ ನಿರ್ವಹಣೆ ಮಾಡಲು ₹ 1.75 ಕೋಟಿ ವೆಚ್ಚದಲ್ಲಿ 32 ಆಟೊ ಟಿಪ್ಪರ್‌ಗಳನ್ನು ಖರೀದಿಸಲಾಗಿದೆ. ಈಗ ಪ್ರತಿ ವಾರ್ಡ್‌ಗೂ ಪ್ರತ್ಯೇಕ ವಾಹನವನ್ನು ನೀಡಲಾಗುವುದು’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಾಹನಕ್ಕೆ ಚಾಲಕರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಾಯೋಗಿಕವಾಗಿ ಕೆಲ ಹೊಸ ಆಟೊ ಟಿಪ್ಪರ್‌ ಅನ್ನು ಕಸ ಸಂಗ್ರಹಿಸಲು ಭಾನುವಾರದಿಂದಲೇ ವಾರ್ಡ್‌ಗಳಿಗೆ ಕಳುಹಿಸಿಕೊಡಲಾಗುವುದು. ಒಂದು ವಾಹನಕ್ಕೆ ಒಬ್ಬ ಚಾಲಕ ಹಾಗೂ ಸಹಾಯಕನನ್ನು ನೀಡಲಾಗುವುದು. ಆಟೊ ಟಿಪ್ಪರ್‌ ಸಂಗ್ರಹಿಸಿದ ಕಸವನ್ನು ಕಾಂಪೆಕ್ಟರ್‌ ವಾಹನಕ್ಕೆ ಹಾಕಿಕೊಂಡು ನೇರವಾಗಿ ಆವರಗೆರೆಯಲ್ಲಿನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಒಯ್ಯಲಾಗುವುದು ಎಂದು ತಿಳಿಸಿದರು.

ಸದ್ಯ ಪ್ರತಿದಿನವೂ ತಪ್ಪದೇ ಕಸವನ್ನು ಒಯ್ಯುವಂತೆ ಮಾಡಲು ಒತ್ತು ನೀಡಲಾಗುವುದು. ದಿನಾಲೂ ಕಸ ಒಯ್ದರೆ ಜನರೂ ರಸ್ತೆ ಮೇಲೆ ಎಸೆಯುವುದಿಲ್ಲ. ಮುಂದಿನ ಒಂದು ತಿಂಗಳಲ್ಲಿ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಒಯ್ಯುವ ವ್ಯವಸ್ಥೆಗೂ ಚಾಲನೆ ನೀಡಲಾಗುವುದು ಎಂದರು.

ಹಳೆಯ ಆಟೊ ಟಿಪ್ಪರ್‌ ಒಂದು ಘನ ಮೀಟರ್‌ ಅಳತೆಯ ಕಂಟೇನರ್‌ ಹೊಂದಿತ್ತು. ಹೊಸ ಆಟೊ ಟಿಪ್ಪರ್‌ 2 ಘನ ಮೀಟರ್‌ ಅಳತೆಯ ಕಂಟೇನರ್‌ ಹೊಂದಿದ್ದು, 1.2 ಟನ್‌ ತ್ಯಾಜ್ಯವನ್ನು ಇದರಲ್ಲಿ ಹಾಕಬಹುದಾಗಿದೆ. ಈ ಹಿಂದೆ ಖಾಸಗಿಯವರಿಗೆ ಕಸ ಸಂಗ್ರಹಿಸಲು ವಾರ್ಷಿಕ ₹ 45 ಲಕ್ಷಕ್ಕೆ ಗುತ್ತಿಗೆ ನೀಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !