ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳಲ್ಲಿ 32 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಜಿಲ್ಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಶೇ 15.62ರಷ್ಟು ಹೆಚ್ಚಾದ ಪ್ರಕರಣ
Last Updated 6 ಜುಲೈ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ಐದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ‘ಪೋಕ್ಸೊ’ ಕಾಯ್ದೆಯಡಿ 32 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ರಾಜ್ಯದಲ್ಲಿ ಒಟ್ಟು 908 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆಯ ಪ್ರಮಾಣ ಶೇ 3.52ರಷ್ಟು ಇದೆ.

ಇನ್ನೊಂದೆಡೆ ಈ ಅವಧಿಯಲ್ಲಿ 6 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದರೆ, ರಾಜ್ಯದಲ್ಲಿ ಒಟ್ಟು 238 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಕ್ಕೆ ಹೋಲಿಸಿದಾಗ ಜಿಲ್ಲೆಯ ಪ್ರಮಾಣ ಶೇ 2.52ರಷ್ಟು ಇದೆ.

2018ರಲ್ಲಿ ಜಿಲ್ಲೆಯಲ್ಲಿ 47 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವರ್ಷ ಕೇವಲ ಐದು ತಿಂಗಳಲ್ಲಿ 32 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣವು ಶೇ 15.62ರಷ್ಟು ಹೆಚ್ಚಾಗಿದೆ.

ಕಳೆದ ವರ್ಷ 16 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಆರು ಮಾತ್ರ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣವು ಶೇ 8.1ರಷ್ಟು ತಗ್ಗಿದೆ.

ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣಗಳ ಅಂಕಿ–ಸಂಖ್ಯೆಗಳು ತಮ್ಮ ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪೋಷಕರಲ್ಲಿ ಹುಟ್ಟಿಕೊಳ್ಳುತ್ತಿದೆ. ಇನ್ನೊಂದೆಡೆ ಮಹಿಳೆಯರು ಮೇಲೆ ನಡೆಯುತ್ತಿರುವ ಅತ್ಯಾಚಾರ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅತ್ಯಾಚಾರ ಪ್ರಕರಣಗಳು ವರದಿಯಾದಾಗಲೆಲ್ಲ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಕೂಗು ಕೇಳಿ ಬರುತ್ತಿವೆ. ವಿವಿಧ ಸಂಘಟನೆಗಳ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಾರೆ. ಆದರೆ, ಇಂಥ ಪೈಶಾಚಿಕ ಕೃತ್ಯಗಳು ಮಾತ್ರ ನಿಲ್ಲುತ್ತಿಲ್ಲ. ಇದೊಂದು ಸಾಮಾಜಿಕ ಹಾಗೂ ಮಾನಸಿಕ ಪಿಡುಗಾಗಿ ಪರಿಣಮಿಸಿದೆ.

* *

‘ಪಿಡೊಫಿಲಿಯಾ’ ಸಮಸ್ಯೆಯಿಂದಾಗಿ ದೌರ್ಜನ್ಯ

ಸಾಮಾನ್ಯವಾಗಿ ಗೊತ್ತಿರುವವರು, ನಂಬಿಕೆ ಇಟ್ಟಿರುವವರಿಂದಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಅವಿಭಕ್ತ ಕುಟುಂಬಗಳಲ್ಲಿ ಮನೆಯ ಸದಸ್ಯರು, ಇಲ್ಲವೇ ಅಕ್ಕ–ಪಕ್ಕದ ಮನೆಯವರು; ಶಾಲೆಯ ಶಿಕ್ಷಕರು ಅಥವಾ ಸಿಬ್ಬಂದಿಯೇ ಮಕ್ಕಳ ಮೇಲೆ ಹೆಚ್ಚಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಸಂಶೋಧನೆ ಪ್ರಕಾರ ಶೇ 90ರಷ್ಟು ಪ್ರಕರಣಗಳು ಪರಿಚಯಸ್ಥರಿಂದಲೇ ಈ ಕೃತ್ಯಗಳು ನಡೆಯುತ್ತಿವೆ.

ಲೈಂಗಿಕ ದೌರ್ಜನ್ಯ ಎಸಗುವವರು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಬಾಲ್ಯದಲ್ಲಿ ಅವರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥವರ ಮನೋಸ್ಥಿತಿಯನ್ನು ‘ಪಿಡೊಫಿಲಿಯಾ’ ಎಂದು ಹಾಗೂ ಈ ತೊಂದರೆಯಿಂದ ಬಳಲುತ್ತಿರುವವರನ್ನು ‘ಪಿಡೊಫೈಲ್‌’ ಎಂದು ಕರೆಯುತ್ತೇವೆ.

ಸಾಮಾನ್ಯವಾಗಿ ಬುದ್ಧಿಶಕ್ತಿ ಕಡಿಮೆ ಇರುವ ಹಾಗೂ ದೈಹಿಕ ಬೆಳವಣಿಗೆ ಇಲ್ಲದ ಮಕ್ಕಳ ಮೇಲೆ ದೌರ್ಜನ್ಯ ನಡೆಯುವ ಪ್ರಮಾಣವೇ ಹೆಚ್ಚು. ಅನಾಥ ಮಕ್ಕಳು, ಪೋಷಕರಿಂದ ದೂರ ಇರುವ ಮಕ್ಕಳೇ ಬಲಿಪಶುಗಳಾಗುವ ಸಂಖ್ಯೆ ಹೆಚ್ಚು. ಬಡತನದಿಂದ ಬಂದ ಮಕ್ಕಳು, ತಮಗೆ ಯಾರು ಪ್ರೀತಿ ತೋರಿಸುತ್ತಾರೋ, ಅಂಥವರನ್ನು ಬೇಗನೆ ನಂಬುತ್ತಾರೆ. ತಮಗೆ ಸಹಾಯ ಮಾಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿರುತ್ತಾರೆ. ಇಂಥ ಮಕ್ಕಳ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ದೌರ್ಜನ್ಯ ಎಸಗಲಾಗುತ್ತದೆ. ಕೌಟುಂಬಿಕ ಕಲಹ ಇರುವ ಕುಟುಂಬ, ವಿಚ್ಛೇದಿತ ಪೋಷಕರ ಮನೆಗಳಲ್ಲಿನ ಹರಿಹರೆಯದವರು ಬಹುಬೇಗನೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ದುಷ್ಪರಿಣಾಮ: ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಮೇಲೆ ಅಲ್ಪಾವಧಿ ಹಾಗೂ ದೀರ್ಘಾವಧಿ ದುಷ್ಪರಿಣಾಮ ಉಂಟಾಗುತ್ತದೆ. ಅಲ್ಪಾವಧಿ ಪರಿಣಾಮವೆಂದರೆ– ಸಂತ್ರಸ್ತ ಮಕ್ಕಳು ತಮಗಿಂತ ಬಹಳ ಚಿಕ್ಕವಯಸ್ಸಿನವರಂತೆ ವರ್ತಿಸಲು ಆರಂಭಿಸುತ್ತಾರೆ. ಬೆರಳು ಚೀಪುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳಬಹುದು. ನಿದ್ರಾಹೀನತೆ, ಸರಿಯಾಗಿ ಆಹಾರ ಸೇವಿಸದಿರುವ ತೊಂದರೆ ಕಾಣಿಸಿಕೊಳ್ಳುತ್ತದೆ. ಶಾಲೆಗೆ ಹೋಗುವ ಮಕ್ಕಳ ವರ್ತನೆ ಬದಲಾಗುತ್ತದೆ. ಓದುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಬೇರೆ ಮಕ್ಕಳೊಂದಿಗೆ ಬೆರೆಯುವುದಿಲ್ಲ.

ದೀರ್ಘಾವಧಿ ಪರಿಣಾಮಗಳೆಂದರೆ– ಇವರಲ್ಲಿ ಆತ್ಮಘಾತುಕ ವರ್ತನೆ ಕಂಡುಬರುತ್ತದೆ. ಏಳು–ಎಂಟು ವರ್ಷದವರಿದ್ದಾಗ ದೌರ್ಜನ್ಯಕ್ಕೆ ಒಳಗಾಗಿದ್ದರೂ ವಯಸ್ಕರಾದ ಬಳಿಕವೂ ಆ ಘಟನೆ ಮನಸ್ಸಿನಿಂದ ಹೋಗಿರುವುದಿಲ್ಲ. ಮದ್ಯಸೇವನೆ, ಡ್ರಗ್ಸ್‌ ತೆಗೆದುಕೊಳ್ಳುವ ಚಟ ಅಂಟಿಸಿಕೊಳ್ಳುತ್ತಾರೆ. ತಮ್ಮ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಯಂತೆ ಕಂಡುಬರುವ ಜನರನ್ನು ಅವರು ಮತ್ತೆ ನಂಬುವುದೇ ಇಲ್ಲ. ತಮ್ಮ ಬಗ್ಗೆ ತಾವೇ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ತನ್ನಿಂದ ಏನೂ ಮಾಡಲಾಗುತ್ತಿಲ್ಲ ಎಂಬ ಭಾವನೆಯಿಂದ ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆಯೂ ಇದೆ.

ಬಾಲ್ಯದಲ್ಲಿ ಇವರು ಲೈಂಗಿಕ ದೌರ್ಜನ್ಯ ಅನುಭವಿಸಿರುವುದಿಂದ ದೊಡ್ಡವರಾದ ಮೇಲೆ ಅವರು ಅಸಹಜ ಲೈಂಗಿಕತೆ ಬಗ್ಗೆ ಯೋಚಿಸುತ್ತಾರೆ. ಬೇರೆ ಬೇರೆ ವಸ್ತುಗಳಿಂದ, ಮಕ್ಕಳಿಂದ ಲೈಂಗಿಕ ಸಂತ್ರಪ್ತಿ ಪಡೆಯಲು ಮುಂದಾಗುತ್ತಾರೆ. ಇಲ್ಲವೇ ಲೈಂಗಿಕತೆ ಪಾಪದ ಕೆಲಸ ಎಂಬ ತೀರ್ಮಾನಕ್ಕೆ ಬರುವ ಅಪಾಯವೂ ಇದೆ.

– ಡಾ. ಎಚ್‌.ಎನ್‌. ಆಶಾ, ಮಕ್ಕಳ ಮನೋರೋಗ ತಜ್ಞೆ, ಎಸ್‌.ಎಸ್‌. ಆಸ್ಪತ್ರೆ

**

‘ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಲಿ’

‘ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ದುರಂತ. ಇಂಥ ಪ್ರಕರಣಗಳು ನಡೆದಾಗ ಸಂತ್ರಸ್ತರಿಗೆ ತಕ್ಷಣವೇ ರಕ್ಷಣೆ ನೀಡಬೇಕು. ಇದಕ್ಕೆ ಕಡಿವಾಣ ಹಾಕಲು ತಪ್ಪಿತಸ್ಥರಿಗೆ ಗಲ್ಲಿಗೇರಿಸುವಂತಹ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಶ್ಲೀಲ ಸಾಹಿತ್ಯ, ವಿಡಿಯೊಗಳ ವೀಕ್ಷಣೆಯಿಂದಾಗಿ ಅತ್ಯಾಚಾರ ನಡೆಸುವಂತಹ ಮನೋಭಾವ ಜನರಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಚೋದನಕಾರಿ ಅಶ್ಲೀಲ ಸಾಹಿತ್ಯಗಳನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು. ಅತ್ಯಾಚಾರಕ್ಕೆ ಒಳಗಾದ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರೂ ಉಳಿದವರಂತೆ ಸಹಜ ಜೀವನ ನಡೆಸುವಂತೆ ಮಾಡುವ ವಿಶೇಷ ಪಾಲನಾ ಕೇಂದ್ರ ತೆರೆಯಬೇಕು’ ಎಂದು ಸಲಹೆ ನೀಡಿದರು.

**

ಅಂಕಿ–ಅಂಶಗಳು ಜಿಲ್ಲೆಯ ವಿವರ

47 – 2018ರಲ್ಲಿ ದಾಖಲಾದ ಪೋಕ್ಸೊ ಪ್ರಕರಣ

16 – 2018ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ

32 – 2019ರಲ್ಲಿ ದಾಖಲಾದ ಪೋಕ್ಸೊ ಪ್ರಕರಣ

6 – 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ

**

ದಾವಣಗೆರೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ

ತಿಂಗಳು ಪೋಕ್ಸೊ ಅತ್ಯಾಚಾರ

ಜನವರಿ 3 1

ಫೆಬ್ರುವರಿ 7 3

ಮಾರ್ಚ್‌ 5 0

ಏಪ್ರಿಲ್‌ 7 1

ಮೇ 10 1

ಒಟ್ಟು 32 6

**

ರಾಜ್ಯದಲ್ಲಿ ದಾಖಲಾದ ಪ್ರಕರಣ

ತಿಂಗಳು––ಪೋಕ್ಸೊ––ಅತ್ಯಾಚಾರ

2019 2018 2019 2018

ಜನವರಿ 135 168 45 44

ಫೆಬ್ರುವರಿ 142 168 44 30

ಮಾರ್ಚ್‌ 179 155 39 49

ಏಪ್ರಿಲ್‌ 162 155 41 43

ಮೇ 166 182 44 36

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT