ಒಂದೇ ತಿಂಗಳಿನಲ್ಲಿ 33 ಅಡಿ ನೀರು ಸಂಗ್ರಹ

7
ಭದ್ರಾ ಜಲಾನಯನದಲ್ಲಿ ಮಳೆ ಚುರುಕು: ಅಚ್ಚುಕಟ್ಟು ಭಾಗದ ರೈತರಿಗೆ ಹರ್ಷ

ಒಂದೇ ತಿಂಗಳಿನಲ್ಲಿ 33 ಅಡಿ ನೀರು ಸಂಗ್ರಹ

Published:
Updated:
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಆರಿದ್ರಾ ಮಳೆಯ ಆರ್ಭಟದಿಂದ ಗುರುವಾರ ಭದ್ರಾ ನದಿಯ ಒಡಲು ತುಂಬಿರುವ ದೃಶ್ಯ

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಒಂದು ತಿಂಗಳಿನಲ್ಲೇ 33 ಅಡಿ ನೀರು ಸಂಗ್ರಹವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಹೆಚ್ಚಿದೆ.

ಇದೇ ಮೇ 28ರಂದು ಜಲಾಶಯ ಮಟ್ಟ 110.9 ಅಡಿ ಇತ್ತು. ಅಂದು ಜಲಾಶಯಕ್ಕೆ ಕೇವಲ 911 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಮಳೆ ಚುರುಕುಗೊಂಡ ಕಾರಣ ಜಲಾಶಯಕ್ಕೆ ಉತ್ತಮ ಒಳಹರಿವು ಬರುತ್ತಿದ್ದು, ಗುರುವಾರ (ಜೂನ್ 28ರಂದು) ನೀರಿನ ಮಟ್ಟ 143 ಅಡಿಗೆ ತಲುಪಿದೆ. ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 7,787 ಕ್ಯುಸೆಕ್‌ ಒಳಹರಿವು ಇತ್ತು.

ಮೇ 28ರಂದು ಭದ್ರೆಯ ಒಡಲಿನಲ್ಲಿ 11.81 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಗುರುವಾರ ಒಟ್ಟಾರೆ ನೀರಿನ ಸಂಗ್ರಹ ಪ್ರಮಾಣ 28.99 ಟಿಎಂಸಿ ಅಡಿಗೆ ತಲುಪಿದೆ. ಅಂದರೆ ಕೇವಲ ಒಂದು ತಿಂಗಳಿನಲ್ಲಿ ಜಲಾಶಯದಲ್ಲಿ 16.19 ಟಿಎಂಸಿ ಅಡಿ ನೀರು ತುಂಬಿದೆ.

ದಶಕದಲ್ಲೇ ಅಧಿಕ ಮಳೆ: ಇದೇ 11ರಂದು ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ದಶಕದಲ್ಲೇ ಅತಿ ಹೆಚ್ಚು ಸರಾಸರಿ ಮಳೆಯಾಗಿದೆ. ಅಂದು ಜಲಾನಯನ ಪ್ರದೇಶದಲ್ಲಿ ಸರಾಸರಿ 66 ಮಿಲಿ ಮೀಟರ್‌ ಮಳೆ ಸುರಿದಿತ್ತು. ಹೀಗಾಗಿ, ಜೂನ್‌ 15ರಂದು ಜಲಾಶಯಕ್ಕೆ ಈ ವರ್ಷದ ಅತಿ ಹೆಚ್ಚು ಒಳಹರಿವು (29,164 ಕ್ಯುಸೆಕ್‌) ಹರಿದು ಬಂದಿತ್ತು. ಇನ್ನು ಕಳೆದ ವರ್ಷ ಜೂನ್‌ 28ರಂದು ಜಲಾಶಯದ ನೀರಿನ ಮಟ್ಟ 117 ಅಡಿ ಇತ್ತು.

ಮತ್ತೆ ಚುರುಕಾದ ಮಳೆ: ಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಜೂನ್‌ ಎರಡನೇ ವಾರ ಉತ್ತಮ ವರ್ಷಧಾರೆಯಾಗಿತ್ತು. ಆದರೆ, ಮೂರನೇ ವಾರದಲ್ಲಿ ಮಳೆ ಇಳಿಮುಖವಾಗಿತ್ತು. ಈಗ ತಿಂಗಳ ಕೊನೆ ಭಾಗದಲ್ಲಿ ಮತ್ತೆ ಮಳೆ ಚುರುಕಾಗಿದೆ. ಹೀಗಾಗಿ, ಮತ್ತೆ ಭದ್ರಾ ನದಿ ಮೈದುಂಬಿಕೊಂಡಿದ್ದು, ಜಲಾಶಯದ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯ ಮಟ್ಟವೂ ಏರುವ ನಿರೀಕ್ಷೆಯಿದೆ. ಹೀಗಾಗಿ, ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆಯಲು ಸಸಿಮಡಿ ತಯಾರಿಕೆಯತ್ತ ಚಿತ್ತ ಹರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !