ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಶ್ರಮದಿಂದ 371 ‘ಜೆ’ ಕಲಂ ವ್ಯಾಪ್ತಿಗೆ ಹರಪನಹಳ್ಳಿ: ಪಿ.ಟಿ ಪರಮೇಶ್ವರ್ ನಾಯ್ಕ

ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಪರ ಕಾಂಗ್ರೆಸ್ ಪ್ರಚಾರ ಸಭೆ
Last Updated 4 ಡಿಸೆಂಬರ್ 2021, 3:43 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ:‘ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಿಗೆ 371 ‘ಜೆ’ ಅನ್ವಯ ಲಭ್ಯವಾಗಿರುವ ಸೌಲಭ್ಯಗಳನ್ನು ಹರಪನಹಳ್ಳಿ ತಾಲ್ಲೂಕಿಗೆ ಕೊಡಿಸುವಲ್ಲಿ ನನ್ನ ಶ್ರಮ ಅಪಾರ’ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಹೇಳಿದರು.

ಗ್ರಾಮದಲ್ಲಿ ಶುಕ್ರವಾರ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ಪಕ್ಷದ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಚಿವನಾಗಿದ್ದಾಗ ಹರಪನಹಳ್ಳಿಗೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಧ್ವನಿ ಎತ್ತಿದ್ದೇನೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು, ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರವನ್ನು ಕೇಳಿದರು. ಅವರ ಒಪ್ಪಿಗೆ ಪಡೆದ ನಂತರ ಎಂ.ಪಿ.ರವೀಂದ್ರ ಅವರ ಅಭಿಪ್ರಾಯವನ್ನೂ ಕೇಳಲಾಗಿತ್ತು. ಈ ಕುರಿತು ನಾನು ನಡೆಸಿದ ಚರ್ಚೆ ವಿಧಾನಸೌಧದ ಕಡತದಲ್ಲಿದೆ. ಮಾಹಿತಿ ಕೊಡಲು ಸಿದ್ಧ’ ಎಂದು ಹೇಳಿದರು.

‘ಈ ವಿಚಾರ ಮುಂದಿಟ್ಟು ಪ್ರಚಾರ ಪಡೆಯುವ ಗೀಳು ನನಗಿರಲಿಲ್ಲ. ಅಂದು ಇಲ್ಲದವರು ಈಗ ಈ ಸೌಲಭ್ಯದ ಬಗ್ಗೆ ಹೇಳಿಕೊಂಡು, ಕಾಂಗ್ರೆಸ್ ಹೆಸರಲ್ಲಿ ಹಗಲೊಂದು, ರಾತ್ರಿಯೊಂದು ಪಕ್ಷ ಮಾಡುತ್ತಿದ್ದಾರೆ’ ಎಂದು ದೂರಿದರು.

ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಮಾತನಾಡಿ, ‘26 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ದಬ್ಬಾಳಿಕೆ ಮಟ್ಟಹಾಕಲು, ಅಭಿವೃದ್ಧಿಗಾಗಿ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ‘ಸೋಲುವ ಭೀತಿಯಿಂದಾಗಿ ಬಿಜೆಪಿ ನಾಯಕರು ಅಮಾಯಕ ಅಭ್ಯರ್ಥಿವೈ.ಎಂ. ಸತೀಶ್ ಅವರಿಂದ ಮತದಾರರಿಗೆ ₹ 50 ಸಾವಿರ ನೀಡುವ ಆಮಿಷ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್, ಮಾಜಿ ಶಾಸಕ ಅನಿಲ್ ಲಾಡ್, ಅಲ್ಲಂ ವೀರಭದ್ರಪ್ಪ ಮಾತನಾಡಿದರು. ಕಾಂಗ್ರೆಸ್‌ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ, ಮುಖಂಡರಾದ ಎಂ.ಪಿ. ಲತಾ, ಭೈರೇಶ್, ದೇವೇಂದ್ರಪ್ಪ, ಕಮ್ಮತ್ತಹಳ್ಳಿ ಮಂಜುನಾಥ್, ಕೆ.ಎಂ. ಶಿವಕುಮಾರ್ ಸ್ವಾಮಿ, ಕಲ್ಲೇಶ್ ರಾಜ್ ಪಾಟೀಲ್, ಪಿ.ಟಿ. ಭರತ್, ಸಂಷೀರ್ ಅಹಮ್ಮದ್, ಯರಬಳ್ಳಿ ಉಮಾಪತಿ, ತಳವಾರ ಮಂಜಪ್ಪ, ಯಶವಂತ ಗೌಡ, ಮಹಾಂತೇಶ್ ನಾಯ್ಕ ಇದ್ದರು.

ಕಾಂಗ್ರೆಸ್‌ ಕಾರ್ಯಕರ್ತರ ಮಾತಿನ ಚಕಮಕಿ

ಉಚ್ಚಂಗಿದುರ್ಗ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಬ್ಯಾನರ್‌ನಲ್ಲಿ ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರ ಭಾವಚಿತ್ರ ಇಲ್ಲದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿನ ಕಾರ್ಯಕರ್ತರ ಅಚಾತುರ್ಯದಿಂದ ಭಾವಚಿತ್ರ ಬಿಟ್ಟು ಹೋಗಿರುವ ಕುರಿತು ಕಾಂಗ್ರೆಸ್‌ ನಾಯಕರು ಸಮಜಾಯಿಷಿ ನೀಡಿದರೂ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಈ ಮೂಲಕ ಕ್ಷೇತ್ರದಲ್ಲಿನ ಪಿ.ಟಿ.ಪರಮೇಶ್ವರನಾಯ್ಕ, ಎಂ.ಪಿ. ರವೀಂದ್ರ ಅವರ ಸಹೋದರಿಯರಾದ ಎಂ.ಪಿ. ವೀಣಾ ಹಾಗೂ ಎಂ.ಪಿ. ಲತಾ ಅವರ ಗುಂಪಿನ ರಾಜಕೀಯ ಬಯಲಿಗೆ ಬಂದಂತಾಯಿತು ಎಂದು ಕಾರ್ಯಕರ್ತರು ಚರ್ಚೆ ಮಾಡುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT