371 ‘ಜೆ’ ಸೌಲಭ್ಯ: ಗೊಂದಲ ನಿವಾರಣೆಗೆ ಆಗ್ರಹ

7

371 ‘ಜೆ’ ಸೌಲಭ್ಯ: ಗೊಂದಲ ನಿವಾರಣೆಗೆ ಆಗ್ರಹ

Published:
Updated:
ಹೈ.ಕ ಪ್ರಮಾಣ ವಿತರಣೆ ಕುರಿತು ಸಮಾನ ಮನಸ್ಕರ ವೇದಿಕೆ ಮುಖಂಡರು ಹರಪನಹಳ್ಳಿ ಎಸಿ ಅವರಿಂದ ಮಾಹಿತಿ ಪಡೆದರು. 

ಹರಪನಹಳ್ಳಿ: ಬಳ್ಳಾರಿ ಜಿಲ್ಲೆಗೆ ತಾಲ್ಲೂಕು ಸೇರ್ಪಡೆಗೊಂಡಿದೆಯೇ ಹೊರತು 371 ‘ಜೆ’ ಸೌಲಭ್ಯ ಸಿಗುವ ಬಗ್ಗೆ ಗೊಂದಲಗಳಿವೆ. ಹಾಗಾಗಿ ಸರ್ಕಾರ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಸಮಾನ ಮನಸ್ಕರ ವೇದಿಕೆ ಮುಖಂಡ ಜಿ. ನಂಜನಗೌಡ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 371‘ಜೆ’ ಕಲಂ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಿರುವುದಾಗಿ ಹೇಳಿದೆ. ಆದರೆ 371‘ಜೆ’ ಸೌಲಭ್ಯ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ ಎಂದರು.

ಸರ್ಕಾರ ಕೂಡಲೇ ತಾಲ್ಲೂಕಿಗೆ ಹೈ.ಕ ಸೌಲಭ್ಯ ದೊರಕಿಸಿ ಕೊಡಬೇಕು ಮತ್ತು ವಿವಿಧ ಇಲಾಖೆಯ ವಿಭಾಗೀಯ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು. ಪಶ್ಚಿಮ ತಾಲ್ಲೂಕನ್ನು ಸೇರಿಸಿಕೊಂಡು ಹರಪನಹಳ್ಳಿಯನ್ನು ಶೈಕ್ಷಣಿಕ ಜಿಲ್ಲಾ ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ‘ನಿರಂತರ ಹೋರಾಟ ನಡೆಸಿದ ಫಲವಾಗಿ ಸರ್ಕಾರ 371‘ಜೆ’ ಸೌಲಭ್ಯ ಕಲ್ಪಿಸಲು ತಾಲ್ಲೂಕನ್ನು ಬಳ್ಳಾರಿ ಸೇರಿದೆ. ಹರಪನಹಳ್ಳಿಯನ್ನು ಯಾವ ಜಿಲ್ಲೆಗಾದರೂ ಸೇರಿಸಲಿ ಆದರೆ ಹೈ.ಕ ಸೌಲಭ್ಯ ಮೊದಲು ಕಲ್ಪಿಸಬೇಕು. ಇನ್ನೊಂದು ತಿಂಗಳೊಳಗೆ ಸೌಲಭ್ಯ ಕಲ್ಪಿಸುವ ಕುರಿತು ಸ್ಪಷ್ಟ ಮಾಹಿತಿ ಸಿಗದಿದ್ದಲ್ಲಿ ಪುನಃ ಉಗ್ರ ಹೋರಾಟ ನಡೆಸಲಾಗುವುದು. ಇಲ್ಲಿನ ಕಚೇರಿಗಳು ಸ್ಥಳಾಂತರಕ್ಕೆ ಶಾಸಕರು ಅವಕಾಶ ಕೊಡಬಾರದು. ಸರ್ಕಾರ ಮಟ್ಟದದಲ್ಲಿ ಧ್ವನಿ ಎತ್ತಬೇಕು ಎಂದರು.

ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ವೇಳೆ ವಿಭಾಗೀಯ ಕಚೇರಿಗಳು ಹರಪನಹಳ್ಳಿಯಲ್ಲಿಯೇ ಉಳಿಸುವಂತೆ ಗಮನ ಸೆಳೆಯಬೇಕು. ಜಿಲ್ಲೆ ಸೇರ್ಪಡೆಗಿಂತ ಮೊದಲು 371‘ಜೆ’ ಸೌಲಭ್ಯ ಕಲ್ಪಿಸಬೇಕು’ ಎಂದು ಹೇಳಿದರು.

ಸುದ್ದಿಗೋಷ್ಠಿ ನಂತರ ಉವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದ ಹೋರಾಟಗಾರರು ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಹಾಗೂ 371‘ಜೆ’ ಸೌಲಭ್ಯ ಒದಗಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳ್ಳಾರಿ ಜಿಲ್ಲೆ ಸೇರ್ಪಡೆ ಕುರಿತು ಸರ್ಕಾರ ಮೊದಲು ಅಧಿಸೂಚನೆ ಹೊರಡಿಸುತ್ತದೆ. ನಂತರ ಸಾರ್ವಜನಿಕರಿಂದ ಕುಂದು-ಕೊರತೆ ಆಲಿಸಿ ನಂತರ ಅಂತಿಮವಾಗಿ ಅಧಿಸೂಚನೆ ಹೊರ ಬಿಳುತ್ತದೆ. ತಾಲ್ಲೂಕಿನ ಸಾರ್ವಜನಿಕರಿಗೆ ಹೈ.ಕ ಸೌಲಭ್ಯ ಪ್ರಮಾಣ ಪತ್ರ ವಿತರಿಸುವ ಕುರಿತು ಸರ್ಕಾರದಿಂದ ಇದವರೆಗೆ ಯಾವುದೇ ಆದೇಶ ಬಂದಿಲ್ಲ. ವಿಭಾಗೀಯ ಕಚೇರಿಗಳ ಸ್ಥಳಾಂತರ ಮತ್ತು ಹೈ.ಕ ಸೌಲಭ್ಯ ಕುರಿತು ಅಂತಿಮ ಅಧಿಸೂಚನೆ ಪ್ರಕಟಗೊಂಡ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಉಪವಿಭಾಗಾಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಸ್ಪಷ್ಟಪಡಿಸಿದರು.

ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಬಿ.ವೈ. ವೆಂಕಟೇಶ್, ಓಂಕಾರಗೌಡ, ಪೂಜಾರ ರಾಜಶೇಖರ್, ಹುಲಿಕಟ್ಟಿ ಚಂದ್ರಪ್ಪ, ಕರಡಿದುರ್ಗದ ಚೌಡಪ್ಪ, ನಾಗರಾಜ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !