ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 43 ಮಕ್ಕಳನ್ನು ದತ್ತು ನೀಡಿರುವ ದತ್ತುಕೇಂದ್ರ

ದತ್ತು ಸ್ವೀಕಾರದ ಮಾಹಿತಿ, ಮಕ್ಕಳ ರಕ್ಷಣೆಯ ಅರಿವಿಗಾಗಿ ನಡೆಯುತ್ತಿದೆ ಮಾಸಾಚರಣೆ
Last Updated 27 ನವೆಂಬರ್ 2020, 6:23 IST
ಅಕ್ಷರ ಗಾತ್ರ

ದಾವಣಗೆರೆ: ರಾಮನಗರದಲ್ಲಿ 2012ರಲ್ಲಿ ಆರಂಭವಾಗಿರುವ ‘ಅಮೂಲ್ಯ (ಜಿ)’ ಮಕ್ಕಳ ದತ್ತು ಕೇಂದ್ರದಿಂದ ಇಲ್ಲಿಯವರೆಗೆ 43 ಮಕ್ಕಳನ್ನು ದತ್ತು ನೀಡಲಾಗಿದೆ. ಈಗಲೂ 12 ಶಿಶುಗಳು ದತ್ತು ಮಕ್ಕಳಾಗಿ ಹೋಗಲು ತಯಾರಾಗಿವೆ.

ವಿಧವೆಯರು, ಮದುವೆಯಾಗದವರು ಗರ್ಭಿಣಿಯಾಗಿ ಬಿಡುತ್ತಾರೆ. ಅವರು ಇಷ್ಟಪಡದ ಆ ಮಗು ಜನಿಸಿದಾಗ ಕಸದ ತೊಟ್ಟಿಗೋ, ಚಾನಲ್‌ಗೋ ಹಾಕುತ್ತಾರೆ. ಕೆಲವು ಬಾರಿ ಬಡತನದ ಕಾರಣಕ್ಕೆ, ಇಲ್ಲವೇ ಹೆಣ್ಣುಮಕ್ಕಳೇ ಜನಿಸಿದಾಗಲೂ ಕೆಲವರು ಹೀಗೆ ಮಾಡುತ್ತಾರೆ. ಆ ಮಕ್ಕಳಿಗೂ ಬದುಕುವ ಹಕ್ಕಿದೆ. ಅದಕ್ಕಾಗಿ ಮಮತೆಯ ತೊಟ್ಟಿಲು ಎಲ್ಲ ಕಡೆ ಇಡಲಾಗಿದೆ. ಹೆತ್ತವರೇ ನೀಡಿದ ಅಥವಾ ಸಿಕ್ಕಿದ ಮಕ್ಕಳನ್ನು ದತ್ತು ನೀಡಲಾಗುತ್ತದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಸಮಿತಿಯ ಆದೇಶ ಆದ ಮೇಲೆ ನ್ಯಾಯಾಲಯದಿಂದ ಅನುಮತಿ ಪಡೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಹಿಂದೆ ಆಯಾ ಜಿಲ್ಲೆ ಅಥವಾ ರಾಜ್ಯದವರಷ್ಟೇ ದತ್ತು ಪಡೆಯಬಹುದಿತ್ತು. ಈಗ ದೇಶ ಮಾತ್ರವಲ್ಲ, ವಿದೇಶದವರೂ ಪಡೆಯಲು ಅವಕಾಶ ಇದೆ. ಮೂರು ವರ್ಷಗಳ ಕಾಲ ನಿಗಾ ಇಡಲಾಗುತ್ತದೆ. ಆಮೇಲೆ ಎರಡು ಮೂರು ವರ್ಷಗಳಿಗೊಮ್ಮೆ ವಿಚಾರಿಸಲಾಗುತ್ತದೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌. ಮಾಹಿತಿ ನೀಡಿದರು.

ತಂದೆತಾಯಿ ಇದ್ದೂ ಮಕ್ಕಳನ್ನು ದತ್ತು ಕೇಂದ್ರಕ್ಕೆ ನೀಡಿದಾಗ ಕೇಂದ್ರಕ್ಕೆ ಮಗುವನ್ನು ಪಡೆದ ಮೇಲೆ ನಾಲ್ಕು ತಿಂಗಳು ಕಾಯಲಾಗುತ್ತದೆ. ಅದರ ಒಳಗೆ ಮನಪರಿವರ್ತನೆಗೊಂಡು ಮಗು ವಾಪಸ್‌ ಬೇಕು ಎಂದು ಕೇಳಿದರೆ ನೀಡಲಾಗುತ್ತದೆ. ನಾಲ್ಕು ತಿಂಗಳು ಕಳೆದ ಮೇಲೆ ನೀಡಲು ಅವಕಾಶ ಇರುವುದಿಲ್ಲ ಎಂದು ವಿವರಿಸಿದರು.

ಇಲಾಖೆಗೆ ತಿಳಿಸಿದೇ ಅಪರಿಚಿತ ಮಕ್ಕಳನ್ನು ಸಾಕುವಂತಿಲ್ಲ. ಯಾಕೆಂದರೆ ಕೆಲಸಕ್ಕೆ ಆಗುತ್ತದೆ ಎಂದೋ, ವೇಶ್ಯಾಗಾರಿಕೆಗೆ ಬಳಸಲೋ ಇನ್ಯಾವುದೋ ಚಟುವಟಿಕೆಗೆ ಬಳಸುವ ಅಪಾಯ ಇರುತ್ತದೆ. ಅದಕ್ಕಾಗಿ ದತ್ತು ಸ್ವೀಕರಿಸಿಯೇ ಸಾಕಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ. ಬಸವರಾಜಯ್ಯ ಸಲಹೆ ನೀಡಿದರು.

‘ನಮ್ಮ ದತ್ತು ಕೇಂದ್ರಕ್ಕೆ ಈವರೆಗೆ 132 ಮಕ್ಕಳು ಬಂದಿದ್ದು, ಅದರಲ್ಲಿ 43 ಮಕ್ಕಳನ್ನು ದತ್ತು ನೀಡಲಾಗಿದೆ. 19 ಮಕ್ಕಳನ್ನು ಸಂಬಂಧಪಟ್ಟ ಜಿಲ್ಲೆಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ. 18 ಮಕ್ಕಳು ಮೃತಪಟ್ಟಿವೆ. 41 ಮಕ್ಕಳು ಪೋಷಕತ್ವದಲ್ಲಿವೆ. ಉಳಿದ ಮಕ್ಕಳು ದತ್ತು ಕೇಂದ್ರದಲ್ಲಿವೆ’ ಎಂದು ದತ್ತು ಕೇಂದ್ರದ ಅಧೀಕ್ಷಕಿ ನಾಗರತ್ನಮ್ಮ, ಸಂವಹನಕಾರ್ತಿ ವಾಣಿ ತಿಳಿಸಿದರು.

ದತ್ತು ಆದ್ಯತೆ ಯಾರಿಗೆ?

* ವಿಶೇಷ ಅಗತ್ಯ ಇರುವ ಮಕ್ಕಳನ್ನು ಪಡೆಯಲು ಮುಂದೆ ಬರುವವರಿಗೆ ಮೊದಲ ಆದ್ಯತೆ.

* ಮಕ್ಕಳಿಲ್ಲದ, ವಯಸ್ಸು ಕಳೆದುಕೊಳ್ಳುತ್ತಿರುವ ದಂಪತಿಗೆ ಎರಡನೇ ಆದ್ಯತೆ.

*ಮಕ್ಕಳಿಲ್ಲದ ಇತರ ದಂಪತಿಗೆ ಮೂರನೇ ಆದ್ಯತೆ.

* ಒಂದು ಮಗು ಇರುತ್ತದೆ. ಎರಡನೇ ಮಗು ದತ್ತು ತೆಗೆದುಕೊಳ್ಳಲು ನಿರ್ಧರಿಸಿರುವ ದಂಪತಿಗೆ ಕೊನೇ ಆದ್ಯತೆ.

* ಮಗುವಿಗಾಗಿ ಒಮ್ಮೆ ಅರ್ಜಿ ಸಲ್ಲಿಸಿದರೆ ಕನಿಷ್ಠ ಒಂದು ವರ್ಷ, ಗರಿಷ್ಠ ಮೂರು ವರ್ಷ ದತ್ತು ಪ್ರಕ್ರಿಯೆಗೆ ಸಮಯ ಬೇಕು.

‘ಪೋಷಕತ್ವ ಮುಂದುವರಿಸಿಯೂ ಮಕ್ಕಳ ಸ್ವೀಕರಿಸಬಹುದು’

ಅನಾಥ ಮಗುವನ್ನು ಯಾರಾದರೂ ಕುಟುಂಬದವರು ಒಂದು ವರ್ಷ ಸಾಕಲು ಒಯ್ಯಬಹುದು. ಅವರಿಗೆ ಹೊಂದಾಣಿಕೆ ಆಗದೇ ಇದ್ದರೆ, ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಕೂಡಲೇ ಮಗುವನ್ನು ದತ್ತುಕೇಂದ್ರಕ್ಕೆ ವಾಪಸ್‌ ಪಡೆಯಲಾಗುತ್ತದೆ. ಹೊಂದಾಣಿಕೆಯಿಂದ ಅವರು ಮತ್ತೆ ಮತ್ತೆ ಪಡೆದು ಸಾಕಿದರೆ, ಕನಿಷ್ಠ ಮೂರು ವರ್ಷದಿಂದ ಗರಿಷ್ಠ 7 ವರ್ಷ ಅವರ ಜತೆ ಯಾವುದೇ ಸಮಸ್ಯೆ ಇಲ್ಲದೇ ಇದ್ದರೆ. ಆಮೇಲೆ ಅವರದ್ದೇ ಮಗು ಎಂದು ನೀಡಲು ಅವಕಾಶ ಇದೆ. ಮಕ್ಕಳಿಲ್ಲದ ದಂಪತಿಗೆ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ವಿಜಯಕುಮಾರ್‌ ತಿಳಿಸಿದರು.

ಮಾಸಾಚರಣೆ ಉದ್ದೇಶ

ನ.20ರಿಂದ ಒಂದು ತಿಂಗಳು ದತ್ತು ಮಾಸಾಚರಣೆ ಮಾಡಲಾಗುತ್ತದೆ. ಇಷ್ಟವಿಲ್ಲದ ಗರ್ಭಧರಿಸಿದವರು ಮಕ್ಕಳನ್ನು ಬಿಸಾಕದೇ ಮಮತೆಯ ಮಡಿಲು ತೊಟ್ಟಿಲಿಗೆ ಹಾಕಬೇಕು. ಇಲ್ಲವೇ ದತ್ತುಕೇಂದ್ರಕ್ಕೆ ತಂದು ಕೊಡಬೇಕು. ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕಿದ್ದರೆ ನಿಯಮಗಳು ಏನು ಎಂಬುದನ್ನು ಅರಿಯಬೇಕು. ದತ್ತು ತೆಗೆದುಕೊಂಡ ಮಗು ಎಂಬ ಭಾವ ಪೋಷಕರಲ್ಲಿ ಇರಬಾರದು. ಅದಕ್ಕೆ ಕೌನ್ಸೆಲಿಂಗ್‌ ಮಾಡಲಾಗುತ್ತದೆ. ಹೀಗೆ ದತ್ತು ಕೇಂದ್ರಕ್ಕೆ ಮಗು ನೀಡುವ ಮತ್ತು ದತ್ತು ಕೇಂದ್ರದಿಂದ ಸ್ವೀಕರಿಸುವ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ಮಾಡಲಾಗುತ್ತಿದೆ ಎಂದು ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ದತ್ತುಕೇಂದ್ರದ ಮಕ್ಕಳ ವಿವರ

ವರ್ಷ→ದತ್ತು ಕೇಂದ್ರಕ್ಕೆ ಬಂದ ಮಕ್ಕಳು→ದತ್ತು ನೀಡಲಾದ ಸಂಖ್ಯೆ→ಬೇರೆ ಸಂಸ್ಥೆಗಳಿಗೆ ವರ್ಗವಾದ ಮಕ್ಕಳು→ಮರಣ→ಪೋಷಕರ ವಶಕ್ಕೆ

2012–13→19→5→2→3→2

2013–14→23→8→6→2→7

2014–15→22→6→7→1→8

2015–16→16→5→2→3→6

2016–17→13→5→0→4→4

2017–18→19→9→1→1→4

2018–19→11→3→0→4→2

2019–20→3→0→1→1→1

2020–21→6→2→1→0→1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT