ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹೆದ್ದಾರಿ ಪಥ ಶಿಸ್ತು ಉಲ್ಲಂಘಿಸಿದರೆ ₹500 ದಂಡ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿಕೆ
Last Updated 20 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ದಾವಣಗೆರೆ: ಹೆದ್ದಾರಿಗಳಲ್ಲಿ ಪಥ ಶಿಸ್ತು (ಲೇನ್‌ ಡಿಸಿಪ್ಲೀನ್‌) ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.

ಸಂಚಾರ ನಿಯಮಗಳ ಜಾಗೃತಿಗಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹೆದ್ದಾರಿಯಲ್ಲಿ ಕಾರ್‌ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮೀಸಲಾದ ಪಥದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಕಾರು ಮತ್ತಿತರ ವಾಹನಗಳ ಸವಾರರು ವೇಗದಲ್ಲಿ ಬೇರೆ ಬೇರೆ ಪಥಗಳಲ್ಲಿ ನುಸುಳಿಕೊಂಡು ಹೋಗುವಾಗ ಅಪಘಾತಗಳು ಸಂಭವಿಸಿ ಸಾವು– ನೋವು ದಾಖಲಾಗುತ್ತಿವೆ. ಅಪಘಾತಗಳನ್ನು ತಗ್ಗಿಸಲು ಪಥ ಶಿಸ್ತು ಕಾಪಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

‘ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳು ಫಸ್ಟ್‌ ಲೇನ್, ಒಳ ಪಥ, (ಇನ್ನರ್ ಲೇನ್) ಹಾಗೂ ಭಾರಿ ವಾಹನಗಳಾದ ಲಾರಿ, ಬಸ್, ಟ್ರಕ್, ಟ್ಯಾಂಕರ್‌ಗಳು ಸೆಕೆಂಡ್‌ ಲೇನ್, ಹೊರ ಪಥ, (ಔಟರ್ ಲೇನ್‌)ದಲ್ಲಿ ಸಂಚರಿಸಬೇಕು. ಒಂದು ವೇಳೆ ಈ ಶಿಸ್ತು ಉಲ್ಲಂಘಿಸಿದರೆ ₹ 500 ದಂಡ ವಿಧಿಸಲಾಗುವುದು’ ಎಂದು ಅವರು ಹೇಳಿದರು.

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಸಂಜೆಯಿಂದಲೇ ಶಿಸ್ತು ಉಲ್ಲಂಘನೆಗೆ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ’ ಎಂದರು.

‘ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ನಂಬರ್ ಪ್ಲೇಟ್ ಗುರುತಿಸುವ 9 ಸ್ವಯಂ ಚಾಲಿತ ಕ್ಯಾಮೆರಾ (ಆಟೊಮ್ಯಾಟಿಕ್ ನಂಬರ್‌ ಪ್ಲೇಟ್ ರೆಕಗ್ನೈಷನ್ ಕ್ಯಾಮೆರಾ)ಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಆ ವಾಹನಗಳ ನಂಬರ್, ಸ್ಥಳ, ಸಮಯ, ಜಿಪಿಎಸ್ ಲೊಕೇಷನ್ ಸಮೇತ ಚಿತ್ರಗಳು ಟೋಲ್‌ಗೇಟ್‌ಗಳಲ್ಲಿ ಇರುವ ಮಲ್ಪಿ ಫಂಕ್ಷನಲ್ ಡಿವೈಸ್‌ಗೆ ರವಾನೆಯಾಗುತ್ತವೆ. ಟೋಲ್‌ ಗೇಟ್‌ಗಳಲ್ಲಿ ವಾಹನಗಳು ನಿಂತಾಗ ಅಲ್ಲಿ ದಂಡ ವಿಧಿಸಲಾಗುವುದು. ಒಂದು ಟೋಲ್‌ ಗೇಟ್‌ನಲ್ಲಿ ತಪ್ಪಿಸಿಕೊಂಡರೆ ಮತ್ತೊಂದು ಟೋಲ್‌ಗೇಟ್‌ನಲ್ಲಿ ದಂಡ ವಿಧಿಸುವುದು ಖಚಿತ’ ಎಂದು ಮಾಹಿತಿ ನೀಡಿದರು.

‘ಪೊಲೀಸರು ಹೆಲ್ಮೆಟ್ ಧರಿಸದಿದ್ದರೆ ದುಪ್ಪಟ್ಟು ದಂಡ’
ಪೊಲೀಸರು ಹೆಲ್ಮೆಟ್ ಧರಿಸದೇ ಇದ್ದರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಸಿ.ಬಿ. ರಿಷ್ಯಂತ್ ಎಚ್ಚರಿಸಿದರು.

ನಗರದ ಪೊಲೀಸರಿಗೆ ಐಎಸ್ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ‘ಹೆಲ್ಮೆಟ್ ಧರಿಸದೇ ಒಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೊವನ್ನು ಸಾರ್ವಜನಿಕರು ಶೇರ್ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಹೆಲ್ಮೆಟ್ ಧರಿಸಿ ಎಂದು ಬಲವಂತವಾಗಿ ಹೇಳುವುದಲ್ಲ. ನಿಮ್ಮಲ್ಲೇ ಜಾಗೃತಿ ಮೂಡಬೇಕು. ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ತಿರಸ್ಕರಿಸುವುದಲ್ಲ. ಜೀವನಕ್ಕಿಂತ ಯಾವುದು ಮುಖ್ಯವಲ್ಲ. ಹೆಲ್ಮೆಟ್ ಒಂದೇ ಅಲ್ಲ. ಯಾವುದೇ ನಿಯಮ ಉಲ್ಲಂಘಿಸಿದರೂ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಸಂಚಾರ ವಿಭಾಗದ ಸಿಪಿಐ ಆರ್.ಪಿ. ಅನಿಲ್ ಇದ್ದರು. ನಗರ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಎಸ್‌ಐಗಳಾದ ಸೋಮಶೇಖರ್, ಜಯಪ್ರಕಾಶ್, ವೀರಬಸಪ್ಪ, ಜಯಪ್ಪನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT