ಜಿಲ್ಲೆಯಲ್ಲಿ 69 ಡೆಂಗಿ ಪ್ರಕರಣ ಪತ್ತೆ

7
ಜೋರು ಮಳೆಯಿಂದ ಸಾಂಕ್ರಾಮಿಕ ರೋಗ ಇಳಿಕೆ

ಜಿಲ್ಲೆಯಲ್ಲಿ 69 ಡೆಂಗಿ ಪ್ರಕರಣ ಪತ್ತೆ

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ತೀವ್ರವಾಗಿ ಇಳಿಕೆಯಾಗಿವೆ. ಕಳೆದ ವರ್ಷ ಜೂನ್‌ ತಿಂಗಳೊಂದರಲ್ಲಿಯೇ 115 ಪ್ರಕರಣಗಳು ಪತ್ತೆಯಾಗಿದ್ದರೆ, ಈ ವರ್ಷ ಏಳು ತಿಂಗಳಲ್ಲಿ 69 ಪ್ರಕರಣಗಳಷ್ಟೇ ದೃಢಪಟ್ಟಿವೆ.

ರಾಜ್ಯದಲ್ಲಿ ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ಎಂಟನೇ ಸ್ಥಾನಕ್ಕೆ ಇಳಿಕೆಯಾಗಿದೆ.

ಇವುಗಳಲ್ಲಿ ನಗರ ಪ್ರದೇಶಗಳಲ್ಲಿ ಶೇ 26ರಷ್ಟು ಕಂಡು ಬಂದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ 74ರಷ್ಟು ಪ್ರಕರಣಗಳು ಪತ್ತೆಯಾಗಿವೆ. ನೀರು ಹರಿದುಹೋಗುವಂಥ ಮಳೆ ಬಂದಾಗ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ಸಾಂಕ್ರಮಿಕ ರೋಗಗಳು ಕೂಡಾ ಇಳಿಮುಖವಾಗುತ್ತದೆ. ಅಲ್ಲದೇ ಮಳೆ ಚೆನ್ನಾಗಿ ಆಗಿರುವುದರಿಂದ ಮನೆಯಲ್ಲಿ ವಾರಗಟ್ಟಳೆ ನೀರು ಸಂಗ್ರಹಿಸಿ ಇಡುವುದು ತಪ್ಪುವುದರಿಂದ ಅಲ್ಲೂ ಲಾರ್ವಗಳು ಹುಟ್ಟುವುದಿಲ್ಲ. ಇದರ ಜತೆಗೆ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಿಂದಾಗಿ ಜನರಿಗೆ ಅರಿವು ಮೂಡಿದೆ. ಇವೆಲ್ಲ ಕಾರಣದಿಂದ ಡೆಂಗಿ ಸಹಿತ ಸೊಳ್ಳೆಗಳಿಂದ ಹರಡುವ ಎಲ್ಲ ರೋಗಗಳು ಕಡಿಮೆಯಾಗಿವೆ ಎನ್ನುತ್ತಾರೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮೀನಾಕ್ಷಿ.

ಮಳೆಗಾಲದ ತಿಂಗಳುಗಳಾದ ಜೂನ್‌, ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ಗಳಲ್ಲಿ ಸಾಂಕ್ರಮಿಕ ರೋಗಗಳು ಅಧಿಕವಾಗಿ ಕಾಣಿಸಿಕೊಳ್ಳುತ್ತವೆ. ಈ ಬಾರಿ ಜನವರಿ ಮತ್ತು ಜೂನ್‌ ತಿಂಗಳಲ್ಲಿ ತಲಾ 17 ಪ್ರಕರಣಗಳು ಕಂಡುಬಂದಿದ್ದರೆ, ಫೆಬ್ರುವರಿ, ಮಾರ್ಚ್‌, ಏಪ್ರಿಲ್‌, ಮೇ ಮತ್ತು ಜುಲೈಯಲ್ಲಿ (23ರವರೆಗೆ) 35 ಪ್ರಕರಣಗಳು ಕಂಡು ಬಂದಿವೆ.

ಇತರ ಸಾಂಕ್ರಮಿಕ ರೋಗಗಳು

ಮಲೇರಿಯಾ, ಚಿಕೂನ್‌ಗುನ್ಯ, ಆನೆಕಾಲು, ಮೆದುಳು ಜ್ವರ ಇವು ಸೊಳ್ಳೆಯಿಂದ ಹರಡುವ ಇತರ ರೋಗಗಳು. ಆನೆಕಾಲು ರೋಗಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಂದ ಯಾವುದೇ ಶಂಕಿತ ಪ್ರಕರಣ ದಾಖಲಾಗಿಲ್ಲ. ಮೆದುಳು ಜ್ವರಕ್ಕೆ ಸಂಬಂಧಪಟ್ಟಂತೆ ಮೂರು ವರ್ಷಗಳಲ್ಲಿ 19 ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿತ್ತಾದರೂ ಯಾವುದೂ ದೃಢಪಟ್ಟಿಲ್ಲ.

ಹೆಚ್ಚಳ, ಇಳಿಕೆಗೆ ಕಾರಣಗಳು

ಮಳೆ ಕಡಿಮೆಯಾದಾಗ ನೀರಿನ ಕೊರತೆ ಉಂಟಾಗುತ್ತದೆ. ಆಗ ಇರುವ ನೀರನ್ನು ಹಲವು ದಿನಗಳ ವರೆಗೆ ಇಟ್ಟುಕೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗುತ್ತದೆ. ಮನೆಯ ಸುತ್ತಮುತ್ತಲ್ಲಲ್ಲಿ ನೀರು ನಿಂತರೆ ಅಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸ್ವಚ್ಛತೆ ಕಡಿಮೆಯಾದಾಗಲೂ ಲಾರ್ವಗಳ ಸೃಷ್ಟಿಯಾಗುತ್ತವೆ.

ಮಳೆ ಹೆಚ್ಚಿದ್ದರೆ ಕೊಳಚೆ ಹರಿದು ಹೋಗುತ್ತದೆ. ಮನೆಗಳಲ್ಲೂ ನೀರು ಸಂಗ್ರಹಿಸಿ ಹೆಚ್ಚುದಿನ ಇಡಲ್ಲ. ಸೊಳ್ಳೆಯಿಂದಲೇ ಸಾಂಕ್ರಮಿಕ ರೋಗಗಳು ಬರುತ್ತವೆ ಎಂಬುದು ಜಾಗೃತಿ ಉಂಟಾದಾಗ ಜನರು ಜಾಗರೂಕತೆ ವಹಿಸುತ್ತಾರೆ. ಇದರ ಜತೆಗೆ ಗಪ್ಪೀಸ್‌ ಮೀನುಗಳನ್ನು ಹೊಂಡ ಇರುವಲ್ಲೆಲ್ಲಾ ಬಿಟ್ಟರೆ ಅವು ಲಾರ್ವಗಳನ್ನು ತಿನ್ನುತ್ತವೆ. ಈ ಬಾರಿ ಜಿಲ್ಲೆಯ 110 ಕೆರೆಗಳಿಗೆ ಗಪ್ಪೀಸ್‌ ಬಿಡಲಾಗಿದ್ದು, ಹೊಂಡಗಳಿರವಲ್ಲೆಲ್ಲ ಮೀನು ಹಾಕಲಾಗಿದೆ. ಇದು ಕೂಡಾ ಡೆಂಗಿ ಇಳಿಕೆಗೆ ಕಾರಣ ಎಂದು ಡಾ. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ತಿಂಗಳ ಮೊದಲ ಮತ್ತು ಮೂರನೇ ಬುಧವಾರ ಗ್ರಾಮೀಣ ಭಾಗದಲ್ಲಿ ಹಾಗೂ ಮೊದಲ ಮತ್ತು ಮೂರನೇ ಶುಕ್ರವಾರ ನಗರ ಪ್ರದೇಶದಲ್ಲಿ ಲಾರ್ವ ಸರ್ವೆ ಮಾಡುತ್ತಾರೆ. ಯಾವ ಲಾರ್ವಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಎಂಬ ಮಾಹಿತಿ ಇದರಿಂದ ಸಿಗುತ್ತದೆ. ಇದರಿಂದ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ಆದರೆ ನಗರಗಳಲ್ಲಿ ಮನೆಗಳ ಸಂಖ್ಯೆ ಹೆಚ್ಚಿರುವುದರಿಂದ ಸಿಬ್ಬಂದಿ ಸಾಕಾಗದೆ ಸಂಪೂರ್ಣ ಸರ್ವೆ ಮಾಡಲಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ನೆರವು ಸಿಕ್ಕಿದರೆ ಪೂರ್ಣ ಸರ್ವೆ ಸಾಧ್ಯ ಎಂದರು.

ಬಾಲಕಿ ಸಾವು: ಇನ್ನಷ್ಟೇ ದೃಢವಾಗಬೇಕು

ಅಹಮದ್‌ನಗರದಲ್ಲಿ ಎರಡು ದಿನಗಳ ಹಿಂದೆ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಡೆಂಗಿಯಿಂದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಇನ್ನೂ ಅದು ದೃಢಪಟ್ಟಿಲ್ಲ. ಶಂಕಿತ ಪ್ರಕರಣವಾಗಿ ಗುರುತಿಸಲಾಗಿದೆ ಎಂದು ಡಾ. ಮೀನಾಕ್ಷಿ ತಿಳಿಸಿದರು.

ಬಾಲಕಿಗೆ ಜ್ವರ ಬಂದಾಗ ಸ್ಥಳೀಯ ವೈದ್ಯರಿಂದ ಔಷಧ ಕೊಡಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸಿಲ್ಲ. ಮನೆಯವರು ಬಾಲಕಿಯನ್ನು ಕಳೆದುಕೊಂಡಿರುವ ನೋವಲ್ಲಿದ್ದಾರೆ. ಹಾಗಾಗಿ ಆ ಮನೆಗೆ ಹೋಗಿಲ್ಲ. ಆಚೀಚಿನ ಮನೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ವಾರ ಕಳೆದ ಮೇಲೆ ಆಶಾ ಕಾರ್ಯಕರ್ತೆಯರು ಮತ್ತು ನಮ್ಮ ಸಿಬ್ಬಂದಿ ಅಲ್ಲಿಗೆ ಹೋಗಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಚಿಕೂನ್‌ಗುನ್ಯ ಹೆಚ್ಚಳ

ಚಿಕೂನ್‌ಗುನ್ಯಾ ಈಗ ನಿಯಂತ್ರಣದಲ್ಲಿ ಇದ್ದರೂ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿದ್ದರಿಂದ ಸರಾಸರಿಯು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.

ಕಳೆದ ವರ್ಷ ಜನವರಿಯಿಂದ ಜುಲೈವರೆಗೆ 42 ಪ್ರಕರಣಗಳು ದೃಢಪಟ್ಟಿದ್ದರೆ, ಈ ವರ್ಷ ಜನವರಿ ಒಂದೇ ತಿಂಗಳಲ್ಲಿ 40 ಪ್ರಕರಣಗಳು ದೃಢಪಟ್ಟಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಫೆಬ್ರುವರಿಯಲ್ಲಿ 19ಕ್ಕೆ ಇಳಿದಿತ್ತು. ಮಾರ್ಚ್‌ನಿಂದ ಜುಲೈ 23ರ ವರೆಗೆ ಐದು ತಿಂಗಳಲ್ಲಿ 27 ಪ್ರಕರಣಗಳು ದಾಖಲಾಗಿವೆ.

ಹೊರಗಿಂದ ಬರುತ್ತಿರುವ ಮಲೇರಿಯಾ

ಮಲೇರಿಯಾ ನಿಯಂತ್ರಣದಲ್ಲಿದ್ದರೂ ಹೊರ ಜಿಲ್ಲೆ, ಹೊರರಾಜ್ಯ, ಹೊರದೇಶಕ್ಕೆ ಹೋಗಿ ಬರುವವರ ಮೂಲಕ ಕೆಲವು ಪ್ರಕರಣಗಳು ಪತ್ತೆಯಾಗಿವೆ.

ಜನವರಿಯಿಂದ ಇಲ್ಲಿವರೆಗೆ 8 ಪ್ರಕರಣಗಳು ದೃಢಪಟ್ಟಿವೆ. ಮಲೇರಿಯಾದಲ್ಲಿ ವೈವೆಕ್ಸ್‌ ಮತ್ತು ಫಾಲ್ಸಿಪಾರಂ ಎಂಬ ಎರಡು ಇದ್ದು, ಫಾಲ್ಸಿಪಾರಂ ಹೆಚ್ಚು ಅಪಾಯಕಾರಿಯಾದುದು. ಈ ವರ್ಷ ಪತ್ತೆಯಾದ ಎಲ್ಲ 8 ಪ್ರಕರಣಗಳು ವೈವೆಕ್ಸ್‌ ಆಗಿವೆ. ಇದರಲ್ಲಿ 4 ಪ್ರಕರಣಗಳು ಹರಿಹರ ತಾಲ್ಲೂಕಿನಲ್ಲಿ ಪತ್ತೆಯಾಗಿದ್ದು, ಈ ನಾಲ್ಕೂ ಕೂಡ ಆಂಧ್ರಕ್ಕೆ ಹೋಗಿ ಬಂದವರಲ್ಲಿ ಕಂಡು ಬಂದಿದೆ. ಹರಪನಹಳ್ಳಿಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಒಬ್ಬರು ಮಂಗಳೂರಿನಿಂದ ಜ್ವರದಲ್ಲಿ ಬಂದವರು. ಜಗಳೂರಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಇನ್ನೊಬ್ಬರು ಮಲೇರಿಯಾಕ್ಕೆ ಚಿಕಿತ್ಸೆ ಪಡೆದು ಹೋಗಿದ್ದಾರೆ. ಆದರೆ ಅವರ ವಿಳಾಸ ಪತ್ತೆಯಾಗಿಲ್ಲ.

ದಕ್ಷಿಣ ಆಫ್ರಿಕಾದಲ್ಲಿ ಮಲೇರಿಯಾ ಜಾಸ್ತಿ ಇದೆ. ಜಿಲ್ಲೆಯ 32 ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಮುಂದಿನ ತಿಂಗಳು ಊರಿಗೆ ಬರುವವರಿದ್ದು, ಎಚ್ಚರಿಕೆ ವಹಿಸಬೇಕಾಗಿದೆ. ಅವರು ಬರುತ್ತಿದ್ದಂತೆ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೀನಾಕ್ಷಿ ತಿಳಿಸಿದರು.

 ಡೆಂಗಿ ಅಂಕಿ ಅಂಶ

ವರ್ಷ ಶಂಕಿತ ದೃಢ
2016 2300 446
2017 3237 805
2018 550 69

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !