ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಚಿತ್ರಣ ಬದಲಾಯಿಸಲು ಬದ್ಧ: ಸಚಿವ ಬಸವರಾಜ ಬೈರತಿ

73ನೇ ಗಣರಾಜ್ಯೋತ್ಸವ ಸಮಾರಂಭ
Last Updated 26 ಜನವರಿ 2022, 8:20 IST
ಅಕ್ಷರ ಗಾತ್ರ

ದಾವಣಗೆರೆ: ‘ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ನೀಡಲಾಗಿದೆ. ರಸ್ತೆ, ಸೇತುವೆ, ರೈಲು ಸಂಪರ್ಕ ಸೇರಿ ಹಲವು ಕಾಮಗಾರಿಗಳು ಜಿಲ್ಲೆಯ ಅಭಿವೃದ್ಧಿಯ ಚಿತ್ರಣವನ್ನೇ ಬದಲಾಯಿಸಲಿವೆ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತ ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಗ್ರಾಮೀಣ ಭಾಗದಲ್ಲಿ ಜನರು ಸ್ವಾವಲಂಬನೆಯಿಂದ ಬದುಕಲು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಕೆರೆಗಳಿಗೆ ನೀರುಣಿಸುವ ಯೋಜನೆಗಳು ತ್ವರಿತಗತಿಯಿಂದ ಅನಿಷ್ಠಾನಗೊಳುತ್ತಿದ್ದು, ರೈತರ ಸ್ವಾವಲಂಬಿ ಬದುಕಿನ ಕನಸು ನನಸಾಗುವಂತಾಗಿದೆ. ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಒಯ್ಯಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಚಟುವಟಿಕೆ ಹಾಗೂ ವಿವಿಧ ಇಲಾಖೆಗಳ ಸಾಧನೆಯ ವಿವರಗಳನ್ನು ಉಲ್ಲೇಖಿಸಿದ ಸಚಿವರು, ‘ಪಿಎಂ–ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ₹ 258.32 ಕೋಟಿ ವರ್ಗಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯಡಿ 12,719 ವಿದ್ಯಾರ್ಥಿಗಳಿಗೆ ಒಟ್ಟು ₹ 3.17 ಕೋಟಿ ಶಿಷ್ಯ ವೇತನ ಪಾವತಿಸಲಾಗಿದೆ’ ಎಂದು ತಿಳಿಸಿದರು.

ಕೋವಿಡ್‌ ಪರಿಹಾರ: ‘ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರ ₹ 1 ಲಕ್ಷ ಹಾಗೂ ಕೇಂದ್ರ ಸರ್ಕಾರ ₹ 50 ಸಾವಿರ ಪರಿಹಾರವನ್ನು ಘೋಷಿಸಿತ್ತು. ಅದರಂತೆ ಬಿಪಿಎಲ್‌ ಕುಟುಂಬದ ಒಟ್ಟು 331 ಫಲಾನುಭವಿಗಳಿಗೆ ಒಟ್ಟು ₹ 4.96 ಕೋಟಿ ಹಾಗೂ ಎಪಿಎಲ್‌ ಕುಟುಂಬದ 210 ಫಲಾನುಭವಿಗಳಿಗೆ ಒಟ್ಟು ₹ 1.05 ಕೋಟಿ ಪರಿಹಾರವನ್ನು ವಿತರಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಸಭೆಯಲ್ಲಿ 870 ಪ್ರಕರಣಗಳನ್ನು ಕೋವಿಡ್‌ನಿಂದ ಮೃತಪಟ್ಟವೆಂದು ದೃಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ₹ 4.35 ಕೋಟಿ ಪರಿಹಾರ ಮಂಜೂರಾತಿಗೆ ಕೋರಲಾಗಿದೆ’ ಎಂದು ಹೇಳಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ 2021–22ನೇ ಸಾಲಿನಲ್ಲಿ ಇದುವರೆಗೆ 32.42 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದು, ₹ 99.57 ಕೋಟಿ ಕೂಲಿ ಹಣ ಹಾಗೂ ₹ 57.20 ಕೋಟಿ ಸಾಮಗ್ರಿ ಸೇರಿ ಒಟ್ಟು ₹ 156.77 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.

‘ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಡಿ 1,612 ಮನೆ ಹಾಗೂ ಬಸವ ವಸತಿ ಯೋಜನೆಯಡಿ 5,078 ಮನೆ ಸೇರಿ ಒಟ್ಟು 6,690 ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗೆ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ, ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ ನೀಡಿದ ಸಚಿವರು, ‘ಜಲಸಿರಿ ಯೋಜನೆಯಡಿ 24X7 ನಿರಂತರ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್‌ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಎಸ್‌.ಟಿ. ವೀರೇಶ್‌, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಮಾಂಡೆಂಟ್‌ ಕಿರಣಕುಮಾರ್‌ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಸಾಧಕ ಮಕ್ಕಳಿಗೆ ಪ್ರಶಸ್ತಿ
ಅಸಾಧಾರಣ ಪ್ರತಿಭೆಯುಳ್ಳ ಎಂಟು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ₹ 10 ಸಾವಿರ ಬಹುಮಾನ ನೀಡಲಾಯಿತು.

ಸಂಗೀತ ಕ್ಷೇತ್ರದಲ್ಲಿ ಮಾಗನೂರು ಬಸಪ್ಪ ಪಿಯು ವಿಜ್ಞಾನ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ವರುಣ್‌ ವಿ. ಗೌಡ, ತರಳಬಾಳು ಸೆಂಟ್ರಲ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಅನನ್ಯ ಜಿ.ಕೆ; ಕ್ರೀಡಾ ಕ್ಷೇತ್ರದಲ್ಲಿ ಡಿ.ಆರ್‌.ಎಂ. ವಿಜ್ಞಾನ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಗಜಚೌಹಾಣ್‌ ಎಂ.ಎಚ್‌., ಎ.ಜಿ.ಆರ್‌. ಕಲಾ ಮತ್ತು ವಾಣಿಜ್ಯ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಶರೀಫ್‌ ಲಾಲ್‌ಸಾಬ್‌ ಯಲಿಗಾರ್‌; ತಾರ್ಕಿಕ ಸಾಧನಾ ವಿಭಾಗದಲ್ಲಿ ನ್ಯಾಮತಿ ತಾಲ್ಲೂಕಿನ ದೊಡ್ಡೆತ್ತಿನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಅದ್ವಿಕಕಾವ್ಯ ಎ.ಟಿ., ದಾವಣಗೆರೆಯ ಸೇಂಟ್‌ ಜಾನ್ಸ್‌ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಪೂರ್ವಿಕಾ ಎಂ.ಎ; ನಾವೀನ್ಯತೆ ವಿಭಾಗದಲ್ಲಿ ಜಗಳೂರಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆ ವಿಭಾಗದ 9ನೇ ತರಗತಿ ವಿದ್ಯಾರ್ಥಿ ವಿಸ್ಮಯ್‌ ತೇಜಸ್ವಿ ಜಿ.ಎನ್‌. ಹಾಗೂ ದಾವಣಗೆರೆಯ ಚೇತನ ಓಲಂಪಿಯಾಡ್‌ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿನಿ ಆಪ್ತಾ ಶೆಟ್ಟಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು.

ಕೃಷಿಯಲ್ಲಿ ಸಾಧನೆ ಮಾಡಿದ ಆಶಾರಾಣಿ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

*
ನೂರಾರು ಭಾಷೆ, ಧರ್ಮ, ಪ್ರಾತ್ಯ, ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ಸಾಕಾರಗೊಳಿಸಿದೆ. ದೇಶದ ಏಕತೆ, ಸಮಗ್ರತೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಪಣ ತೊಡಬೇಕು.
– ಬೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT