ಗುರುವಾರ , ಜೂನ್ 30, 2022
27 °C

27, 28ರಂದು 8ನೇ ಮೇ ಸಾಹಿತ್ಯ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ’ಸ್ವಾತಂತ್ರ್ಯ–75 ನೆಲದ ದನಿಗಳು ಗಳಿಸಿದ್ದೇನು? ಕಳೆದುಕೊಂಡಿದ್ದೇನು?’ ವಿಷಯ ಕುರಿತು ಮೇ ಸಾಹಿತ್ಯ ಮೇಳ ಮೇ 27 ಹಾಗೂ 28ರಂದು ನಗರದ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದೆ.

‘ಸರ್ಕಾರಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಆದರೆ ಅಮೃತವೇ ಹರಿದಿದೆ ಎಂಬ ಮಾತನ್ನು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ಸ್ಥಿತಿಯೇ ಬೇರೆ ಇದೆ. ದೇಶದಲ್ಲಿ ವ್ಯತಿರಿಕ್ತ ವಾತಾವರಣವಿದ್ದು, ಸರ್ಕಾರ ನೀಡಿರುವ ಭರವಸೆಗಳು ಹುಸಿಯಾಗಿವೆ. ಜನರಿಗೆ ವಾಸ್ತವ ತಿಳಿಸುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶ’ ಎಂದು ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ ಸೂಳಿಭಾವಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜನರ ನೋವುಗಳಿಗೆ ಸ್ಪಂದಿಸುವ ಸಾಹಿತ್ಯ ಜನರಿಗೆ ತಲುಪಿಸುವುದು. ಚಳವಳಿಗೆ ದನಿಯಾಗುವ ಸಾಹಿತ್ಯ ಪ್ರಚಾರ ಪಡಿಸುವುದು
ಸಾಹಿತ್ಯ ಮೇಳದ ಉದ್ದೇಶ. ಮೇ ತಿಂಗಳು ದುಡಿಯುವ ವರ್ಗಕ್ಕೆ ಹೋರಾಟದ ಮೂಲಕ ಹಕ್ಕು ಪಡೆದು ಜೀವನ ವಿಧಾನ ಬದಲಿಸಿದ ತಿಂಗಳು ಅದಕ್ಕಾಗಿಯೇ ಅದಕ್ಕಾಗಿ ಸಾಹಿತ್ಯ ಮೇಳ ರೂಪುಗೊಂಡಿದೆ. ಜನಸಾಮಾನ್ಯರ ನೋವುಗಳಿಗೆ ದನಿಯಾಗುವ ಕೆಲಸವನ್ನು ಈ ಸಮ್ಮೇಳನ ಮಾಡುತ್ತಿದೆ’ ಎಂದು ಹೇಳಿದರು.

ಮೇ 27ರ ಬೆಳಿಗ್ಗೆ 10ಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ರೈತ ಗೋಪಾಲಪ್ಪ, ಪರಿಸರ ಪ್ರೇಮಿ ಸಾಲುಮರದ ಮಿಟ್ಲಕಟ್ಟೆ ವೀರಾಚಾರಿ, ಪೌರಕಾರ್ಮಿಕ ಮಹಿಳೆ ಅಣಜಿ ಹನುಮಕ್ಕ, ಬೀಡಿ ಕಟ್ಟುವ ಮಹಿಳೆ ನಾಜಿಮಾಬಾನು, ಆಂಜನೇಯ ಕಾಟನ್‌ ಮಿಲ್‌ನ ಕಮಲಮ್ಮ ಹಾಗೂ ಕಲ್ಲಂಗಡಿ ವ್ಯಾಪಾರಿ ನಜೀರ್‌ ಸಾಬ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಉದ್ಘಾಟನಾ ಗೋಷ್ಠಿಯಲ್ಲಿ ಮುತ್ತು ಬಿಳಿಮಲೆ ಸಂವಿಧಾನದ ಪ್ರಸ್ತಾವನೆ‌ಯನ್ನು ಓದುವರು. ಬಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಚೆನ್ನೈನ ಜಸ್ಟಿಸ್ ಕೆ. ಚಂದ್ರು, ಪಿ.ಸಾಯಿನಾಥ್, ದೆಹಲಿಯ ಕವಿತಾ ಕೃಷ್ಣನ್, ಮಂಗಳೂರಿನ ಅಬ್ದುಸ್ಸಲಾಂಪುತ್ತಿಗೆ, ಎಂ.ಜಿ. ಈಶ್ವರಪ್ಪ, ಐವನ್ ಡಿಸಿಲ್ವಾ, ಡಿ.ಬಿ. ರಜಿಯಾ, ಅಶೋಕ ಬರಗುಂಡಿ, ಎಲ್. ಎಚ್.ಅರಣ್ ಕುಮಾರ್ ಎಚ್.ಎಸ್. ಅನುಪಮಾ ಉಪಸ್ಥಿತರಿರುವರು’ ಎಂದು ಹೇಳಿದರು.

ಮಧ್ಯಾಹ್ನ 2ರಿಂದ ನಡೆಯುವ ಅಭಿವ್ಯಕ್ತಿ ಗೋಷ್ಠಿಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್, ನಟ ಚೇತನ ಅಹಿಂಸಾ, ಗಂಗಾಧರ ಪತ್ತಾರ, ಹೆಗ್ಗೆರೆ ರಂಗಪ್ಪ, ಎಚ್. ವಿಶ್ವನಾಥ್, ಶೇಖಣ್ಣ ಕವಳಿಕಾಯಿ, ಸಿಕಂದರ ಅಲಿ, ಎಂ.ಗುರುಸಿದ್ದಸ್ವಾಮಿ ಪಾಲ್ಗೊಳ್ಳುವರು.

ಮಧ್ಯಾಹ್ನ 3.15ಕ್ಕೆ ನಡೆಯುವ ‘ಗ್ರಾಮಭಾರತ’ ಗೋಷ್ಠಿಯಲ್ಲಿ ಕೆ.ಪಿ. ಸುರೇಶ್, ಪ್ರಕಾಶ್ ಕಮ್ಮರಡಿ, ರೈತ ಮುಖಂಡ ತೇಜಸ್ವಿ ಪಟೇಲ್, ಆವರಗೆರೆರುದ್ರಮುನಿ, ಹೊನ್ನೂರು ಮುನಿಯಪ್ಪ, ನಳಿನ ಗೌಡ ಪಾಲ್ಗೊಳ್ಳುವರು. 4.30ರಿಂದ ಕಾವ್ಯಪ್ರಸ್ತುತಿ, ಸಂಜೆ 6ಕ್ಕೆ ‘ತರುಣ ಭಾರತ’ ಕುರಿತು ಗೋಷ್ಠಿ ನಡೆಯಲಿದೆ’ ಎಂದು ಹೇಳಿದರು.

ರಾತ್ರಿ 10ರಿಂದ ನಡೆಯುವ ಹೊನಲು ಬೆಳಕಿನ ಕವಿಗೋಷ್ಠಿಯಲ್ಲಿ ಆನಂದ ಋಗ್ವೇದಿ, ಎಚ್.ಎ. ಭಿಕ್ಷಾವರ್ತಿ ಮಠ, ಹುಲಿಕಟ್ಟೆ ಚನ್ನಬಸಪ್ಪ, ಇಸ್ಮಾಯಿಲ್ ಎಲಿಗಾರ್, ಲಿಂಗರಾಜ ಕಮ್ಮಾರ ಪಾಲ್ಗೊಳ್ಳುವರು ಎಂದರು.

‘28ರಂದು ನಡೆಯುವ ಕವಿಗೋಷ್ಠಿಯಲ್ಲಿ ರಂಜಾನ್ ದರ್ಗಾ ಅವಲೋಕನ ಮಾಡುವರು. ಅಂದು 10.30ಕ್ಕೆ ನಡೆಯುವ ‘ಬಹುತ್ವ ಭಾರತ’ ಕಾರ್ಯಕ್ರಮದಲ್ಲಿ ಸುಧೀಂದ್ರ ಕುಲಕರ್ಣಿ, ಚಂದ್ರಶೇಖರ ಗೋರೆಬಾಳ, ನಸ್ರೀನ್ ಮಿಠಾಯಿ, ಬಿ.ಟಿ. ವೆಂಕಟೇಶ್ ಪಾಲ್ಗೊಳ್ಳುವರು. ಮಧ್ಯಾಹ್ನ 12.30ಕ್ಕೆ ನಡೆಯುವ ‘ಮಹಿಳಾ ಭಾರತ’ ವಿಚಾರಗೋಷ್ಠಿಯಲ್ಲಿ ಮೀನಾಕ್ಷಿ ಬಾಳಿ ಹಾಗೂ ಬಾ.ಮ. ಬಸವರಾಜಯ್ಯ ಭಾಗವಹಿಸುವರು’ ಎಂದು ಹೇಳಿದರು.

‘ಮಧ್ಯಾಹ್ನ 3ಕ್ಕೆ ಅನುಭವ ಕಥನ ಕುರಿತು ಗೋಷ್ಠಿಗಳು ನಡೆಯಲಿವೆ. ಸಂಜೆ 5ಕ್ಕೆ ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ ನಡೆಯಲಿದ್ದು, ಬಸವರಾಜ್ ಹೂಗಾರ ಪ್ರಾಸ್ತಾವಿಕ ಭಾಷಣ ಮಾಡುವರು. ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪ ಭಾಷಣ ಮಾಡುವರು’ ಎಂದು ತಿಳಿಸಿದರು.

‘ಸಮಾರಂಭದಲ್ಲಿ ವಿ.ಎ. ಲಕ್ಷ್ಮಣ್, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ ಅವರಿಗೆ ’ವಿಭಾ’ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿ.ಎಸ್‌. ಜಯದೇವ, ಎಸ್‌. ಶಾಂತಮ್ಮ, ಸಿ. ಚನ್ನಬಸವಣ್ಣ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ’ ಹಾಗೂ ದಾವಣಗೆರೆಯ ಬಿ.ಟಿ. ಜಾಹ್ನವಿ ಅವರಿಗೆ ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾವುದು’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅನೀಸ್ ಪಾಶ, ಎಲ್.ಎಚ್.ಅರುಣ್ ಕುಮಾರ್, ಎಚ್.ಜಿ.ಉಮೇಶ್, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಗುಂಡಗತ್ತಿ ರಾಜಶೇಖರ, ಬುರುಡೇಕಟ್ಟೆ ಮಂಜಪ್ಪ, ಜಬೀನಾ ಖಾನಂ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.