ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಐದು ಮಂದಿ ಕೊರೊನಾ ಮುಕ್ತರಿಗೆ ಸಂಭ್ರಮದ ಬೀಳ್ಕೊಡುಗೆ

ಮತ್ತೆ ಮೂವರಿಗೆ ಸೋಂಕು
Last Updated 21 ಮೇ 2020, 15:09 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
15 ವರ್ಷದ ಬಾಲಕನಿಗೆ (ಪಿ.1483) ಕಂಟೈನ್ ಮೆಂಟ್ ವಲಯದ ಸಂಪರ್ಕದಿಂದ ಬಂದಿದೆ.

68 ವರ್ಷದ ಮಹಿಳೆಗೆ (ಪಿ.1485) ಪಿ. 667 (ಜಾಲಿನಗರದ 15 ವರ್ಷದ ಬಾಲಕಿ) ಸಂಪರ್ಕದಿಂದ ವೈರಸ್ ಬಂದಿದೆ. 6 ವರ್ಷದ ಬಾಲಕಿಗೆ (ಪಿ. 1488) ಪಿ.634ರ (ಜಾಲಿನಗರದ 42 ವರ್ಷದ ವ್ಯಕ್ತಿ) ಸಂಪರ್ಕದಿಂದ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 115ಕ್ಕೆ ಏರಿದೆ. ಅದರಲ್ಲಿ 14 ಮಂದಿ ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. 97 ಸಕ್ರಿಯ ಪ್ರಕರಣಗಳಿವೆ.

ಐವರ ಬಿಡುಗಡೆ: ಇಮಾಂ ನಗರದ ಇಬ್ಬರು ಮಹಿಳೆಯರು (ಪಿ.618, ಪಿ.620), ಜಾಲಿನಗರದ ಒಬ್ಬ ಮಹಿಳೆ (ಪಿ.628), ಒಬ್ಬ ಪುರುಷ (ಪಿ.664) ಹಾಗೂ ಬೇತೂರು ರಸ್ತೆಯ ವ್ಯಕ್ತಿ (ಪಿ.623) ಗುರುವಾರ ಬಿಡುಗಡೆಗೊಂಡಿದ್ದಾರೆ.

ಅವರಿಗೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಎದುರು ರೆಡ್‌ಕಾರ್ಪೆಟ್‌ ಹಾಸಿ, ಅವರ ಮೇಲೆ ಹೂವು ಚೆಲ್ಲಿ, ಚಪ್ಪಾಳೆ ತಟ್ಟಿ ಸಂಭ್ರಮದಿಂದ ಬೀಳ್ಕೊಡಲಾಯಿತು.

ರ‍್ಯಾಂಡಮ್‌ ಟೆಸ್ಟ್‌: ‘ಕಂಟೈನ್‌ಮೆಂಟ್‌ ವಲಯಗಳಲ್ಲಿ ರ‍್ಯಾಂಡಮ್‌ ಆಗಿ ಎಲ್ಲರ ಪರೀಕ್ಷೆ ಮಾಡಿಸುತ್ತಿದ್ದೇವೆ. ಯಾರಿಗೇ ಸೋಂಕು ಇದ್ದರೂ ಗೊತ್ತಾಗುತ್ತಿದೆ. ಹಾಗಾಗಿ 15 ವರ್ಷದ ಬಾಲಕನಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಈ ಬಾಲಕ ಸಹಿತ ಇಂದಿನ ಮೂವರೂ ಜಾಲಿನಗರ ಕಂಟೈನ್‌ಮೆಂಟ್‌ ವಲಯದವರು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಇರುವ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಹಣ್ಣು, ಹಂಪಲು, ಡ್ರೈಫ್ರೂಟ್ಸ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಮಾತನಾಡಿ, ‘ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು. ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಈಗಿರುವವರಲ್ಲಿ ಶೇ 50ರಷ್ಟು ಮಂದಿ ಗುಣಮುಖರಾಗಿದ್ದಾರೆ. ಹಾಗಾಗಿ ಜನರ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಧೈರ್ಯ ತುಂಬಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್ಒ ಡಾ. ರಾಘವೇಂದ್ರ ಸ್ವಾಮಿ, ಸರ್ಜನ್ ಡಾ. ಸುಭಾಶ್ಚಂದ್ರ, ಎಎಸ್‍ಪಿ ರಾಜೀವ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಪೊಲೀಸರು ಇದ್ದರು.

ನಾಲ್ಕೈದು ಲ್ಯಾಬ್‌ಗಳಲ್ಲಿ ಸ್ವ್ಯಾಬ್‌ ಪರೀಕ್ಷೆ: ಡಿ.ಸಿ.
ಏಕ ಕಾಲದಲ್ಲಿ ನಾಲ್ಕೈದು ಲ್ಯಾಬ್‌ಗಳಲ್ಲಿ ಗಂಟಲದ್ರವ ಪರೀಕ್ಷೆ ಮಾಡಲಾಗುತ್ತಿದೆ. ಗುರುವಾರ ರಾತ್ರಿ ಹೋಗುವವೂ ಸೇರಿ ಸುಮಾರು 600 ಮಾದರಿಗಳನ್ನು ಕಳುಹಿಸಲಾಗುವುದು. ಅದರಲ್ಲಿ 200 ಶಿವಮೊಗ್ಗಕ್ಕೆ ಹೋಗುತ್ತದೆ. ಬೆಂಗಳೂರಿನ ಆನಂದ್ ಡಯಾಗ್ನಸ್ಟಿಕ್‌ನಲ್ಲಿ ಕೆಲವು ಮಾದರಿ ಪರೀಕ್ಷೆಗೆ ಒಳಪಡಲಿದೆ. ಸ್ಥಳೀಯ ಲ್ಯಾಬ್‌ನಲ್ಲಿ 60ಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ಮಾಡಲಾಗುವುದು. ಉಳಿದವು ಎಂದಿನಂತೆ ಬೆಂಗಳೂರಿನ ಎನ್‌ಐವಿಗೆ ಹೋಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕೂಡ ಲ್ಯಾಬ್‌ ತೆರೆಯಲು ಸೂಚನೆ ನೀಡಲಾಗಿದೆ ಎಂದರು.

ಊರಿಗೆ ಬರುವವರಿಗೆ ತೊಂದರೆ ನೀಡಬೇಡಿ: ಎಸ್‌ಪಿ
ಈಗ ಹೊರರಾಜ್ಯದಿಂದ ಬರಲು ಅವಕಾಶ ನೀಡಲಾಗಿದೆ. ಹಾಗಾಗಿ ದುಡಿಯಲು ಹೊರ ಊರಿಗೆ ಹೋದವರು ಈಗ ವಾಪಸ್ಸಾಗುತ್ತಿದ್ದಾರೆ. ಅವರನ್ನು ಊರಿಗೆ ಬರಬಾರದು ಎಂದು ಹಲವರು ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅವರು ನಿಮ್ಮವರೇ, ನಿಮ್ಮ ಊರಿನವರೇ ಆಗಿರುವುದರಿಂದ ವಿನಾಕಾರಣ ತಡೆಯೊಡ್ಡುವುದು ಸರಿಯಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಅವರು ಬರುತ್ತಿದ್ದಂತೆ ಕ್ವಾರಂಟೈನ್‌ ಮಾಡಲಾಗುತ್ತದೆ. ಅವರು ಮನೆಯಿಂದ ಅಥವಾ ಕ್ವಾರಂಟೈನ್‌ ಇದ್ದಲ್ಲಿಂದ ಹೊರಗೆ ಬಾರದಂತೆ ಪೊಲೀಸರು ನೋಡಿಕೊಳ್ಳುತ್ತಾರೆ. ಊರಿನವರು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

‘ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡರು’
‘ನನ್ನ ಮಾವ ಅವರಿಗೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಆಗ ಅವರಿಗೆ ಕೊರೊನಾ ಇರುವುದು ಪತ್ತೆಯಾಯಿತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾವು ಎಲ್ಲ ಏಳು ಮಂದಿ ಬಂದು ದಾಖಲಾದೆವು. ನಮ್ಮನ್ನು ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು, ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು. ಇಸಿಜಿ, ಎಕ್ಸ್‌ರೇ ಸಹಿತ ಎಲ್ಲ ಪರೀಕ್ಷೆಗಳನ್ನು ಮಾಡಿದರು ಎಂದು ಗುರುವಾರ ಬಿಡುಗಡೆಯಾದ ಮರ್ದನ್‌ಸಾಬ್‌ ತಿಳಿಸಿದರು.

‘ನಾವು ಧೈರ್ಯವಾಗಿದ್ದರೆ ಏನೂ ಆಗಲ್ಲ. ಹೆದರಿದರೆ ಅದು ಮೈಮೇಲೆ ಬೀಳುತ್ತದೆ. ದೂರ ದೂರ ಇದ್ದು ಬಿಡಬೇಕು. ಅರಿಶಿನ, ಬಿಸಿನೀರು ಬಳಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT