ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ರಕ್ಷಿಸಿಕೊಳ್ಳಲು ರೈತ ಮಹಿಳೆ ಏಕಾಂಗಿ ಹೋರಾಟ

ರಸ್ತೆ ಮೇಲೆ ಕುಳಿತು ಮಣ್ಣು ಸಾಗಣೆ ಲಾರಿ ತಡೆದು ಪ್ರತಿಭಟನೆ
Last Updated 28 ನವೆಂಬರ್ 2022, 3:14 IST
ಅಕ್ಷರ ಗಾತ್ರ

ಹರಿಹರ: ಮಣ್ಣು ಸಾಗಣೆ ಲಾರಿಗಳ ಧೂಳಿನಿಂದ ತನ್ನ ಬೆಳೆ ಸಂರಕ್ಷಿಸಲು ತಾಲ್ಲೂಕಿನ ಸಾರಥಿ ಗ್ರಾಮದ ಮಹಿಳೆ ಕೊಟ್ರಮ್ಮ ಏಕಾಂಗಿಯಾಗಿ ರಸ್ತೆಯಲ್ಲಿ ಅಡ್ಡಲಾಗಿ ಕುಳಿತು ಲಾರಿಯನ್ನು ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.

ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಧೂಳಿನಿಂದ ಹಾಳಾಗು ತ್ತಿದ್ದನ್ನು ಗಮನಿಸಿ, ಆಕ್ರೋಶಗೊಂಡು ಧರಣಿ ಕುಳಿತರು. ಆ ವೇಳೆ ಇಟ್ಟಿಗೆ ಭಟ್ಟಿಗಳಿಗೆ ಮಣ್ಣು ಸಾಗಣೆ ಮಾಡುತ್ತಿದ್ದ 10 ಚಕ್ರದ ಲಾರಿಗಳು ಅಲ್ಲಿಯೇ ನಿಂತವು. ವಾಹನ ಸಂಚಾರವೂ ಬಂದ್ ಆಯಿತು.

‘ಅನ್ನ ನೀಡುವ ಭೂಮಿ ತಾಯಿಯ ಮಣ್ಣನ್ನು ಮಾರುವುದು ಪಾಪದ ಕೆಲಸ. ಮಣ್ಣು ಮಾರಿಕೊಂಡರೆ ಅವರ ಜಮೀನು ಹಾಳಾಗುತ್ತದೆ. ಈ ದೊಡ್ಡ ಲಾರಿಗಳ ಸಂಚಾರದಿಂದ ರಸ್ತೆಯಲ್ಲಿ ಧೂಳು ಏಳಲಿದ್ದು, ಇದರಿಂದಾಗಿ ನನ್ನ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಹಾಳಾಗುತ್ತಿದೆ. ₹ 10 ಸಾವಿರ ನೀಡಿ ಖರೀದಿಸಿದ ಕ್ರಿಮಿನಾಶಕವನ್ನು ಎರಡು ಬಾರಿ ಸಿಂಪಡಣೆ ಮಾಡಿದ್ದೇನೆ. ಆದರೂ ಕೀಟ ಬಾಧೆ ಹತೋಟಿಗೆ ಬಂದಿಲ್ಲ. ಇದಕ್ಕೆ ಸಸಿಗಳ ಮೇಲಿನ ಧೂಳೇ ಕಾರಣ’ ಎಂದು ರತ್ನಮ್ಮ ಪ್ರಜಾವಾಣಿಗೆ ತಿಳಿಸಿದರು.

‘ಅರ್ಧ ಎಕರೆಯಲ್ಲಿ ಕುಟುಂಬ ನಿರ್ವಹಣೆ ಮಾಡಲು ಆಗುವುದಿಲ್ಲ ಎಂದು ನನ್ನ ಪತಿ ಚಂದ್ರಪ್ಪ, ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಾನು ಜಮೀನಿನಲ್ಲಿ ಬೆಳೆ ಬೆಳೆಯುತ್ತೇನೆ. ಈಗಾಗಲೆ ₹25,000 ಖರ್ಚು ಮಾಡಿದ್ದೇನೆ. ಧೂಳಿನಿಂದಾಗಿ ಬೆಳೆ ಕೈಗೆ ಸಿಗುವುದಿಲ್ಲ. ಒಂದು ದಿನಕ್ಕೆ 50ರಿಂದ 75 ಲೋಡ್ ಮಣ್ಣು ಸಾಗಣೆ ಮಾಡುತ್ತಿದ್ದು, 150 ಬಾರಿ ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿಗಳು ಓಡಾಡಿದರೆ ನಮ್ಮ ಬೆಳೆಯ ಗತಿ ಏನಾಗಬೇಕು’ ಎಂದು ಪ್ರಶ್ನಿಸಿದರು.

‘ಮಣ್ಣು ಸಾಗಣೆ ಮಾಡುವವರು ಕನಿಷ್ಠ ರಸ್ತೆಯ ಮೇಲೆ ನೀರು ಸಿಂಪಡಣೆಯಾದರೂ ಮಾಡಬೇಕು’ ಎಂದು ಆಗ್ರಹಿಸಿದರು.

ಎದುರಗಡೆಯಿಂದ ರೈತರ ಟ್ರ್ಯಾಕ್ಟರ್‌ಗಳು ಬಂದಿದ್ದರಿಂದ ಕೊಟ್ರಮ್ಮರು ಧರಣಿ ಅಂತ್ಯಗೊಳಿಸಿದರು. ಮೂರು ಗಂಟೆಗೂ ಅಧಿಕ ಸಮಯದವರೆಗೆ ಧರಣಿ ನಡೆಸಿದರು.

‘ಗರಿಷ್ಠ ಮೂರು ಅಡಿಯವರೆಗೆ ಪರವಾನಗಿ ಪಡೆದು ರೈತರ ಭೂಮಿ ಸಮತಟ್ಟು ಮಾಡಿಕೊಳ್ಳಲು ಅವಕಾಶವಿದೆ. ಆದರೆ 20ರಿಂದ 30 ಅಡಿವರೆಗೆ ಮಣ್ಣು ಮಾರಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ತಾಲ್ಲೂಕಿನ ನದಿ ಮತ್ತು ಹಳ್ಳದ ದಡದ ಭೋಗೋಳಿಕ ರಚನೆಯೇ ವಿಕಾರಗೊಳ್ಳುತ್ತದೆ. ನದಿ, ಹಳ್ಳಗಳ ಪ್ರವಾಹದ ನೀರು ದಡದ ಗ್ರಾಮಗಳ ಜಮೀನುಗಳಿಗೆ ನುಗ್ಗುತ್ತದೆ. ಕಂದಾಯ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಕ್ಷಣ ಮಣ್ಣು ಸಾಗಣೆ ತಡೆಯಬೇಕು. ತಪ್ಪಿದಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಪ್ರಭುಗೌಡ್ರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT