ಮಂಗಳವಾರ, ಡಿಸೆಂಬರ್ 10, 2019
19 °C
ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಭದ್ರಪ್ಪ ಬೇಸರ

ಎರಡು ವರ್ಷಗಳಿಂದ ಬಾರದ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವೃತ್ತಿ ರಂಗಭೂಮಿ ಕಲಾವಿದರ ಸಂಘಕ್ಕೆ ಸರ್ಕಾರ ನೀಡುತ್ತಿದ್ದ ಅನುದಾನ ಎರಡು ವರ್ಷಗಳಿಂದ ನೀಡುತ್ತಿಲ್ಲ. ಕೇವಲ ಬ್ಯಾನರ್‌ ಹಾಕಿ ಫೋಟೊ ಹೊಡೆಸಿ ದಾಖಲೆ ನೀಡುವವರಿಗೆ ಅನುದಾನ ಸಿಗುತ್ತದೆ. ನಿಜವಾಗಿ ವೃತ್ತಿ ರಂಗಭೂಮಿ ಕೆಲಸ ಮಾಡುವ ಸಂಸ್ಥೆಗಳಿಗೆ ಸಿಗುತ್ತಿಲ್ಲ ಎಂದು ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ. ಭದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಯದೇವ ವೃತ್ತದ ಶಿವಯೋಗ ಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 24ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಸಂಘವು 2014ರ ವರೆಗೆ ಸರ್ಕಾರದ ಪ್ರೋತ್ಸಾಹ ಇಲ್ಲದೇ ನಡೆಯುತ್ತಿತ್ತು. ನಂತರ ವರ್ಷಕ್ಕೆ ₹ 40 ಸಾವಿರದಂತೆ ಎರಡು ವರ್ಷ ಸರ್ಕಾರ ಅನುದಾನ ನೀಡಿತ್ತು. ಬಳಿಕ ನಿಲ್ಲಿಸಿದೆ. ಬೆಂಗಳೂರಿಗೆ ಹೋಗಿ ಕೇಳಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಂದ ಶಿಫಾರಸು ಆಗಿಲ್ಲ ಅನ್ನುತ್ತಾರೆ. ಯಾಕೆ ಆಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದರು.

‘ಕಳೆದ ವರ್ಷವೇ ಸಂಘವನ್ನು ಮುಚ್ಚಬೇಕು ಎಂದು ನಿರ್ಧರಿಸಿದ್ದೆ. ಬಸವಪ್ರಭು ಸ್ವಾಮೀಜಿ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿ, ಮುಂದುವರಿಸುವಂತೆ ತಿಳಿಸಿದ್ದರಿಂದ ಮುಂದುವರಿಸಿದೆ. ಮುಂದಿನ ವರ್ಷ 25ನೇ ವರ್ಷವನ್ನು ಅದ್ದೂರಿಯಾಗಿ ಆಚರಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂಬುದನ್ನು ತೋರಿಸಿ ಸಂಘವನ್ನು ಮುಚ್ಚುತ್ತೇನೆ’ ಎಂದು ವಿಷಾದದಿಂದ ತಿಳಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ‘ಸರ್ಕಾರವನ್ನು ನೀವು ಏನೇ ಟೀಕೆ ಮಾಡಿದರೂ ಅದಕ್ಕೆ ತಾಗಲ್ಲ. ಸರ್ಕಾರ ಆನೆಯಿದ್ದಂತೆ. ಅದು ನಡೆದದ್ದೇ ದಾರಿ. ಸರ್ಕಾರ ಕಣ್ಣು ತೆರೆದರೆ ಅನುದಾನ ಬರುತ್ತದೆ. ಕಣ್ಣು ಮುಚ್ಚಿದರೆ ಅನುದಾನ ಎಲ್ಲೋ ಹೋಗುತ್ತದೆ’ ಎಂದರು.

‘ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಯಾವುದೇ ಸರ್ಕಾರ ಇದ್ದರೂ ಸೂರು ಇಲ್ಲದವರಿಗೆ ಸೂರು ಕಟ್ಟಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ 10 ಲಕ್ಷ ಬಿಡಿ 10 ಮನೆ ನಿರ್ಮಾಣಕ್ಕೂ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ. ಕಲಾವಿದರಿಗೆ ಆಶ್ರಯ ಮನೆ ಕೊಡಿಸಲು ಬದ್ಧ. ಪಾಲಿಕೆ ವ್ಯಾಪ್ತಿಯಲ್ಲಿ 10 ಸಾವಿರ ಮನೆ ನಿರ್ಮಾಣಕ್ಕೆ 100 ಎಕರೆಯ ಮೀಸಲಿಡಲಾಗಿದೆ. ಸರ್ಕಾರದ ಅನುಮತಿ ಸಿಕ್ಕಿದ ಕೂಡಲೇ ಮನೆ ನಿರ್ಮಿಸಲಾಗುವುದು. ಆಗ ಕಲಾವಿದರಿಗೂ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಟಿ.ವಿ. ಬಂದ ಮೇಲೆ ರಂಗಭೂಮಿ ಕ್ಷೀಣಿಸ ತೊಡಗಿತು. ಮೊಬೈಲ್‌ ಬಂದ ಮೇಲೆ ಸಂಪೂರ್ಣ ನಶಿಸತೊಡಗಿತು. ಇದರಿಂದ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಾಟಕಗಳು ಸದ್ಭಾವನೆಯನ್ನು, ಉತ್ತಮ ಸಂದೇಶಗಳನ್ನು ಹರಡುತ್ತವೆ. ಅದಕ್ಕಾಗಿ ರಂಗಭೂಮಿ ಉಳಿಯಬೇಕು’ ಎಂದು ಆಶೀಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್‌.ಆರ್‌. ಲಕ್ಷ್ಮೀದೇವಿ, ಕಲಾವಿದರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನಾಗವೇಣಿ, ಹಿರಿಯ ಕಲಾವಿದ ತಿಪ್ಪೇಸ್ವಾಮಿ ಚೌಹಾಣ್‌ ಉಪಸ್ಥಿತರಿದ್ದರು.

ರಂಗಗೀತೆಗಳು, ‘ಭೂ ಕೈಲಾಸ’, ‘ವಿಷಜ್ವಾಲೆ’ ನಾಟಕಗಳು ಪ್ರದರ್ಶನಗೊಂಡವು.

ಪ್ರತಿಕ್ರಿಯಿಸಿ (+)