ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಾನುಭವದ ಶಿಕ್ಷಣ ಅಗತ್ಯ

ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ
Last Updated 29 ನವೆಂಬರ್ 2019, 10:28 IST
ಅಕ್ಷರ ಗಾತ್ರ

ದಾವಣಗೆರೆ: ಶಾಲಾ, ಕಾಲೇಜುಗಳಲ್ಲಿ ಜೀವನಾನುಭವದ ಶಿಕ್ಷಣ ದೊರೆಯಬೇಕು. ಆಗ ಮಕ್ಕಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದಿಂದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಪ್ರೌಢಶಾಲೆಗಳ ಜಿಲ್ಲಾ ಶೈಕ್ಷಣಿಕ ಮತ್ತು ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತರಗತಿಯಲ್ಲಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ವೃತ್ತಿ ಶಿಕ್ಷಣವನ್ನು ಕಲಿಸಿದರೆ ಭವಿಷ್ಯದ ಬದುಕಿನಲ್ಲಿ ಉಪಯೋಗವಾಗಲಿದೆ. ಹೊಲಿಗೆ, ಕೆತ್ತನೆ ಸಹಿತ ವಿವಿಧ ವೃತ್ತಿಗಳನ್ನು ಹೇಳಿಕೊಡಬೇಕು ಎಂದು ಸಲಹೆ ನೀಡಿದರು.

ವೃತ್ತಿ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಬಿ. ಜಗದೀಶ್ವರಪ್ಪ ಪ‍್ರಾಸ್ತಾವಿಕವಾಗಿ ಮಾತನಾಡಿ, ‘ತೋಟಗಾರಿಕೆ ವೃತ್ತಿ ಶಿಕ್ಷಣ ವಿಭಾಗದಲ್ಲಿ 48 ಶಾಲೆಗಳು, ಹೊಲಿಗೆ ವಿಭಾಗದಲ್ಲಿ 42 ಶಾಲೆಗಳು ಹಾಗೂ ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯದಲ್ಲಿ 8 ಶಾಲೆಗಳು ಒಟ್ಟು ಒಟ್ಟು 98 ಶಾಲೆಗಳು ಕಲಿಕೋತ್ಸವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿವೆ’ ಎಂದು ಮಾಹಿತಿ ನೀಡಿದರು.

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿರಮಗೊಂಡನಹಳ್ಳಿ ಶಾಲೆ, ದ್ವಿತೀಯ ಸ್ಥಾನಿ ಮಲೆಬೆನ್ನೂರು ಶಾಲೆ, ತೋಟಗಾರಿಕೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕುಕ್ಕವಾಡ ಶಾಲೆಗಳ ವಿದ್ಯಾರ್ಥಿ, ಶಿಕ್ಷಕರನ್ನು ಗೌರವಿಸಲಾಯಿತು.

ಡಯಟ್‌ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜು ಉದ್ಘಾಟಿಸಿದರು. ಎಂ. ಮಂಜುನಾಥ ಸ್ವಾಮಿ, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಪರಿವೀಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಕೆ. ಫಾಲಾಕ್ಷಪ್ಪ ಪ್ರಾರ್ಥನೆ ಮಾಡಿದರು. ಪನ್ನಪ ಸ್ವಾಗತಿಸಿದರು. ಸತೀಶ್‌ ವಂದಿಸಿದರು. ಎಂ. ಭಾರತಿ ಮತ್ತು ಯಶೋದಮ್ಮ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ರೀತಿಯ ಕಸೂತಿಗಳು, ವಿಭಿನ್ನ ಹೊಲಿಗೆಗಳು, ಕೆತ್ತನೆಗಳು, ಅನುಪಯುಕ್ತ ವಸ್ತುಗಳನ್ನು ಪುನರ್‌ಬಳಕೆಯ ವಸ್ತುಗಳನ್ನಾಗಿ ಪರಿವರ್ತಿಸಿದವುಗಳು, ಹಸಿರು ಉಳಿಸುವ ಯೋಜನೆಗಳು ಹೀಗೆ ನಾನಾ ತರಹದ ವಸ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT