ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕ್ಕೆ ಬೇಕಾದ ಸಾಹಿತ್ಯ ವಚನ

ದತ್ತಿ ಉಪನ್ಯಾಸ, ವಚನ ದಿನಾಚರಣೆಯಲ್ಲಿ ಬಸವಪ್ರಭು ಸ್ವಾಮೀಜಿ
Last Updated 3 ಜುಲೈ 2022, 2:21 IST
ಅಕ್ಷರ ಗಾತ್ರ

ದಾವಣಗೆರೆ: ಲಿಂಗಾಯತ ಧರ್ಮದ ಧರ್ಮಗ್ರಂಥವೇ ವಚನಗಳು. ಅದು ಲಿಂಗಾಯತರಿಗೆ, ಕನ್ನಡಿಗರಿಗೆ ಸೀಮತವಲ್ಲ. ವಿಶ್ವಕ್ಕೇ ಬೇಕಾದವುಗಳು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಶನಿವಾರ ಭಾರತ ಸೇವಾದಳ ಭವನದಲ್ಲಿ ನಡೆದ ದತ್ತಿ ಉಪನ್ಯಾಸ, ವಚನ ದಿನಾಚರಣೆ, ಫ.ಗು. ಹಳಕಟ್ಟಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಎಲ್ಲ ತತ್ವಗಳಿಗಿಂತ ಶ್ರೇಷ್ಠ ತತ್ವ ವಚನಗಳಲ್ಲಿದೆ. ಈ ತತ್ವಗಳನ್ನು ಪಾಲನೆ ಮಾಡುವ ಮೂಲಕ ವಚನಗಳನ್ನು ಉಳಿಸಬೇಕು ಎಂದು ಹೇಳಿದರು.

ಉಂಡುಹೋದವರು, ತಿಂದು ಹೋದವರು ಉಳಿದಿಲ್ಲ. ಈ ಪ್ರಪಂಚಕ್ಕೆ, ಸಮಾಜಕ್ಕೆ ಕೊಡುಗೆ ನೀಡಿದವರು ಮಾತ್ರ ಉಳಿದಿದ್ದಾರೆ. ಹಾಗೆ ಉಳಿದವರು ಫ.ಗು. ಹಳಕಟ್ಟಿ ಅವರು ಎಂದು ಸ್ಮರಿಸಿದರು.

ಹಲವರಿಗೆ ಹಣ ಸಂಪಾದನೆಯೇ ಜೀವನದ ಗುರಿಯಾಗುತ್ತದೆ. ಕುಳಿತರೂ, ನಿಂತರೂ ಅದೇ ಧ್ಯಾನದಲ್ಲಿ ಇರುತ್ತಾರೆ. ಹಣವನ್ನು ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಬೇಕು. ಆ ಸಂಪತ್ತನ್ನು ಸದ್ವಿನಿಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಉಳಿಸಲು ತನ್ನ ಸ್ವಂತ ಆಸ್ತಿಯನ್ನೇ ಮಾರಾಟ ಮಾಡಿದವರು. ಇದುವೇ ಸಮಾಜ ಸೇವೆ. ಇದುವೇ ದೇಶ ಸೇವೆ ಎಂದು ತಿಳಿಸಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ವಿಕೃತಗೊಳ್ಳುತ್ತಿರುವ ಈ ಜಗತ್ತಿಗೆ ವಚನಗಳು ಸರಿದಾರಿಯಲ್ಲಿ ಒಯ್ಯುವ ಬೆಳಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ ಕುರ್ಕಿ ಹೇಳಿದರು.

ವಚನ ದಿನಾಚರಣೆಯನ್ನು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಗಳು ಮಾತ್ರ ಆಚರಿಸುತ್ತಿದ್ದವು. ವಚನಗಳ ಅರಿವು, ಬೆಳಕು, ವಿಸ್ತಾರವನ್ನು ಮನಗಂಡು ಸರ್ಕಾರವೇ ಈಗ ವಚನ ಸಂರಕ್ಷಣಾ ದಿನವಾಗಿ ಆಚರಿಸುತ್ತಿದೆ ಎಂದು ಮಾಹಿತಿ ನೀಡಿದರು.

ವಚನಗಳಲ್ಲಿ ಕಥೆಗಳಿಲ್ಲ, ಉಪಕಥೆಗಳಿಲ್ಲ, ನಿರ್ದೇಶನಗಳಿಲ್ಲ. ಆದೇಶಗಳಿಲ್ಲ, ಸೂಚನೆಗಳಿಲ್ಲ. ಅದು ಅನುಭಾವಗಳ ಅಕ್ಷಯಪಾತ್ರೆ. ಇಲ್ಲಿ ಆತ್ಮವಿಮರ್ಶೆ ಇದೆ. ಆತ್ಮಸಾಕ್ಷಾತ್ಕಾರದ ದಾರಿ ಇದೆ. ಅನುಭವದ ಜ್ಞಾನದಿಂದ ಸಾಧಕನ ಸಾಧನೆಯ ಹಾದಿ ಇದೆ. ಅಂತರಂಗದ ಅರಿವು ಅಲ್ಲಿದೆ ಎಂದರು.

ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಫ.ಗು. ಹಳಕಟ್ಟಿ ಮಾಡಿದ್ದಾರೆ. ಮನೆ ಮನೆಗೆ ತೆರಳಿ ವಚನಗಳನ್ನು ಸಂಗ್ರಹಿಸಿ ಅವುಗಳನ್ನು ಮುದ್ರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಹೋಗಿದ್ದಾರೆ ಎಂದು ನೆನಪಿಸಿಕೊಂಡರು.

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಉದ್ಘಾಟಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕುಸುಮಾ ಲೋಕೇಶ್‌, ಉಪ ಸಂಚಾಕರಾದ ಪ್ರಮೀಳಾ ನಟರಾಜ್‌, ಕದಳಿ ಮಹಿಳಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಯಶಾ ದಿನೇಶ್‌, ಕನ್ನಡ ಸಾಹಿತ್ಯಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಶರಣ ಸಾಹಿತ್ಯ ಪರಿಷತ್ತಿನ ಪ್ರೊ. ಚನ್ನಪ್ಪ, ದತ್ತಿದಾನಿ ಎಚ್‌.ಎನ್‌. ನಿರಂಜನ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT