ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟದ ಕನವರಿಕೆಯಲ್ಲಿ ಹುತಾತ್ಮರ ಸ್ಮಾರಕ

Last Updated 15 ಆಗಸ್ಟ್ 2022, 5:08 IST
ಅಕ್ಷರ ಗಾತ್ರ

ದಾವಣಗೆರೆ: 1942ರ ಕ್ವಿಟ್‌ ಇಂಡಿಯಾ ಚಳವಳಿಯ ಸಮಯ. ಗಾಂಧೀಜಿಯವರನ್ನು ಬ್ರಿಟಿಷರು ಬಂಧಿಸಿ ಸೆರೆವಾಸದಲ್ಲಿ ಇರಿಸಿದ್ದರು. ಇದರಿಂದ ದೇಶದೆಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ದಾವಣಗೆರೆಯಲ್ಲೂ ಹೋರಾಟದ ಕಿಚ್ಚು ಹೊತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರು ಆಗಿನ ತಾಲ್ಲೂಕು ಕಚೇರಿಯ ಟ್ರೆಜರಿಗೆ ಮುತ್ತಿಗೆ ಹಾಕಿದರು. ಬ್ರಿಟಿಷರ ಮಿಲಿಟರಿ ಪಡೆ ಗೋಲಿಬಾರ್‌, ಲಾಠಿ ಚಾರ್ಜ್‌ ಮಾಡಿತು. ಈ ಘರ್ಷಣೆಯಲ್ಲಿ ಆರು ಮಂದಿ ಪ್ರಾಣತೆತ್ತರು. ಅವರ ಸ್ಮರಣೆಗಾಗಿ ಮಹಾನಗರ ಪಾಲಿಕೆ ಆವರಣದಲ್ಲಿ ನಿರ್ಮಾಣವಾಗಿರುವುದೇ ಹುತಾತ್ಮರ ಸ್ಮಾರಕ.

ಶಿರದಲ್ಲಿ ರಾಷ್ಟ್ರಲಾಂಛನ ಹೊಂದಿರುವ ಸ್ತಂಭದ ಕೆಳಭಾಗದಲ್ಲಿ ಹುತಾತ್ಮರ ಹೆಸರುಗಳನ್ನು ಕೆತ್ತಲಾಗಿದೆ. ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗನಹಳ್ಳಿ ಹನುಮಂತಪ್ಪ ಈ ಆರು ಹುತಾತ್ಮರ ಹೆಸರುಗಳು ಸ್ತಂಭದಲ್ಲಿ ರಾರಾಜಿಸುತ್ತಿವೆ.

1957ರಲ್ಲಿ ಪುರಸಭೆಗೆ ಕಟ್ಟಡವನ್ನು ನಿರ್ಮಿಸಿದ ಸಂದರ್ಭ ಈ ಸ್ಮಾರಕದ ನಿರ್ಮಾಣ ಆಗಿರಬಹುದು ಎನ್ನಲಾಗುತ್ತಿದೆ. ಜಯಚಾಮರಾಜೇಂದ್ರ ಒಡೆಯರ್‌ ಅವರು ಪುರಸಭೆ ಕಟ್ಟಡವನ್ನು ಉದ್ಘಾಟಿಸಿದ್ದು, ಆಗಲೇ ಸ್ಮಾರಕದ ಉದ್ಘಾಟನೆಯೂ ಆಗಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಹೋರಾಟದ ಕಾವು:

ತಾಲ್ಲೂಕು ಕಚೇರಿಯ ಟ್ರೆಜರಿಗೆ ಮುತ್ತಿಗೆ ಹಾಕಿದ್ದರಿಂದ ಲಾಠಿ ಪ್ರಹಾರ ಮಾಡಿದ್ದ ಮಿಲಿಟರಿ ಪಡೆಯ ವಿರುದ್ಧ ಹೋರಾಟಗಾರರು ಇನ್ನಷ್ಟು ಕ್ರೋಧಕೊಂಡರು. ಆಗ ಗೂಡ್ಸ್ ಶೆಡ್‌ಗೆ ಬೆಂಕಿ ಹಚ್ಚಲು ಮುಂದಾದರು. ಅದನ್ನು ತಡೆದ ಬಳ್ಳಾರಿ ಸಿದ್ದಮ್ಮ, ಗೋಂದಾಡಿ ಹನುಮಂತರಾಯರು, ಜಡೆ ಕೃಷ್ಣರಾಯರು, ಕೆ.ಟಿ. ಜಂಬಣ್ಣ, ಎ.ಎಚ್‌.ಶಿವಾನಂದ ಸ್ವಾಮಿ, ‘ಗೂಡ್ಸ್ ಶೆಡ್‌ನಲ್ಲಿ ದವಸ ಧಾನ್ಯಗಳಿವೆ. ಅದಕ್ಕೆ ಬೆಂಕಿ ಹಚ್ಚಿದರೆ ನಮಗೇ ನಷ್ಟ’ ಎಂದು ಹೇಳಿ ಹೋರಾಟಗಾರರ ಕ್ರೋಧವನ್ನು ತಣ್ಣಗಾಗಿಸಿದರು. ಬಳಿಕ ರೈಲು ಹಳಿ ಕೀಳಲು ಮುಂದಾದರು. ಇದರಿಂದ ಕುಪಿತಗೊಂಡ ಮಿಲಿಟರಿ ಪಡೆ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿತು.

ಹೊಳೆಹೊನ್ನೂರು ತೋಟದಿಂದ (ಈಗಿನ ಅರುಣ ಟಾಕಿಸ್‌ ಬಳಿ) ಮಿಲಿಟರಿ ಪಡೆ ಗೋಲಿಬಾರ್‌ ಆರಂಭಿಸಿತು. ಆಗ ನೂರಾರು ಜನ ಛಿದ್ರ ಛಿದ್ರವಾಗಿ ಓಡಿದರು. ಗಡಿಯಾರ ಕಂಬದವರೆಗೂ ಗೋಲಿಬಾರ್‌ ಮುಂದುವರಿಯಿತು. ಹಲವರಿಗೆ ಗುಂಡೇಟು ತಗುಲಿದವು. ಎಂ.ಜಿ.ಕಲ್ಲಪ್ಪ, ಕೇದಾರಪ್ಪ, ಅಂದನೂರು, ಸಿದ್ದಪ್ಪ ಕರೆಶಿವಪ್ಳರ ಅವರಿಗೂ ಗುಂಡೇಟು ಬಿದ್ದಿದ್ದವು. ಆದರೆ ಅವರ ಹೋರಾಟದ ಕಿಚ್ಚಿಗೆ ಗುಂಡೇಟುಗಳು ಸೋತವು. ಅವರೆಲ್ಲರೂ ಬದುಕುಳಿದರು.

‘ಈ ಘರ್ಷಣೆ ಸಂದರ್ಭದಲ್ಲಿ ಮಿಲಿಟರಿ ಪಡೆ ಕೆಲವರನ್ನು ಬಂಧಿಸಿ ಸೆರೆವಾಸದಲ್ಲಿರಿಸಿತು. ಹಲವರು ಭೂಗತರಾದರು. ಆಗ ಬಳ್ಳಾರಿ ಸಿದ್ದಮ್ಮ, ಉಳ್ಳೇರ ನಾಗಪ್ಪ ಅವರೊಂದಿಗೆ ಸೇರಿ ದಾವಣಗೆರೆ ಸುತ್ತ ಪ್ರಭಾತ್‌ಫೇರಿ ನಡೆಸಿದ್ದೆವು. ಜನರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಲಾಯಿತು’ ಎಂದು ಆಗಿನ ಹೋರಾಟದ ದಿನಗಳನ್ನು ಮೆಲುಕು ಹಾಕುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಮರುಳಸಿದ್ದಪ್ಪ.

‘ದಾವಣಗೆರೆಯಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಉಗ್ರಸ್ವರೂಪ ಪಡೆದಿತ್ತು. ಸುತ್ತಮುತ್ತಲ ಹಳ್ಳಿಗಳಿಗೂ ಹೋರಾಟದ ಕಿಚ್ಚು ವ್ಯಾಪಿಸಿತ್ತು. ರೈಲು ನಿಲ್ದಾಣ ಹಾಗೂ ರೈಲು ಬೋಗಿಗಳನ್ನು ಸೀಮೆಎಣ್ಣೆ ಹಾಕಿ ಸುಟ್ಟೆವು. ಈ ಕೃತ್ಯಕ್ಕೆ ಹೆದರಿದ ಬ್ರಿಟಿಷ್‌ ಸರ್ಕಾರ ಎರಡು ತಿಂಗಳು ರಾತ್ರಿ ರೈಲು ಸಂಚಾರವನ್ನು ನಿಲ್ಲಿಸಿತು’ ಎಂದು ಬ್ರಿಟಿಷರನ್ನು ಬೆದರಿಸಿದ ಪರಿಯನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಹೋರಾಟದ ಕುರುಹುಗಳು ಕಡಿಮೆ: ಆಗ ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದರೂ ದಾವಣಗೆರೆ ಭಾಗದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಮುಖ ಹೋರಾಟಗಳು ನಡೆದಿವೆ. 1920ರಲ್ಲಿ ದೇಶವ್ಯಾಪಿ ಆರಂಭವಾದ ಸ್ವದೇಶಿ ಚಳವಳಿಯ ಕಾವು ಈ ಭಾಗದಲ್ಲೂ ಜೋರಾಗಿತ್ತು. ಹೀಗಿದ್ದರೂ ಹೋರಾಟಗಾರರ ಕೆಚ್ಚನ್ನು ಪ್ರತಿಬಿಂಬಿಸುವ ಸ್ಮಾರಕಗಳ ಸಂಖ್ಯೆ ಜಿಲ್ಲೆಯಲ್ಲಿ ನಗಣ್ಯ ಎಂಬಂತಿದೆ. ಈ ಕೊರಗು ಈಗಿರುವ ಸ್ವಾತಂತ್ರ್ಯ ಹೋರಾಟಗಾರರಲ್ಲೂ ಇದೆ.

ಹರಿಜನರ ಹಾಗೂ ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ 1934ರ ಮಾರ್ಚ್‌ 2ರಂದು ಇಲ್ಲಿನ ಪಿ.ಜೆ. ಬಡಾವಣೆಯಲ್ಲಿ ಮಹಾತ್ಮ ಗಾಂಧಿ ಶಿಲಾನ್ಯಾಸ ಮಾಡಿದ ಆದಿಕರ್ನಾಟಕ ವಿದ್ಯಾರ್ಥಿ ನಿಲಯ ಹಾಗೂ ವರ್ಷದ ಹಿಂದೆ ನಗರದ ಎಸ್‌.ಎಸ್.ಆಸ್ಪತ್ರೆ ಬಳಿ (ಆವರಗೆರೆ ಗ್ರಾಮದ ಬಳಿ) ನಿರ್ಮಾಣವಾಗಿರುವ ‘ಗಾಂಧಿ ಭವನ’ ಸ್ವಾತಂತ್ರ್ಯದ ದಿನಗಳನ್ನು ನೆನಪಿಸುತ್ತವೆ.

***

ಅನೇಕ ಹೋರಾಟಗಳಲ್ಲಿ ಜೊತೆಗಾರರನ್ನು ಕಳೆದುಕೊಂಡಿದ್ದೇವೆ. ಪಾಲಿಕೆ ಮುಂದಿರುವ ಸ್ತಂಭ ಬಿಟ್ಟರೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ಇರುವ ಸ್ಮಾರಕಗಳು ತೀರಾ ಕಡಿಮೆ. ಈ ಬಗ್ಗೆ ಯಾರೂ ಗಮನಹರಿಸಿಲ್ಲ. ಸ್ವಾಂತಂತ್ರ್ಯ ತಂದುಕೊಟ್ಟ ಸ್ಥಳಗಳನ್ನು ಕಡೆಗಣಿಸಲಾಗಿದೆ.

ಎಚ್‌.ಮರುಳಸಿದ್ದಪ್ಪ, ಸ್ವಾತಂತ್ರ್ಯ ಹೋರಾಟಗಾರ

***

ಅವಸಾನದ ಅಂಚು ತಲುಪಿದ ಬಾಪೂಜಿ ಹಾಲ್‌

ಎಂ.ನಟರಾಜನ್‌

ಮಲೇಬೆನ್ನೂರು: ಸ್ವಾತಂತ್ರ್ಯ ಸಂಗ್ರಾಮದ ವೇಳೆ 1927 ಆಗಸ್ಟ್‌ 27ರಂದು ಮಹಾತ್ಮ ಗಾಂಧಿ ಅವರು ಗ್ರಾಮಕ್ಕೆ ಭೇಟಿ ನೀಡಿ ಭಾಷಣ ಮಾಡಿದ ಸ್ಥಳ ‘ಬಾಪೂಜಿ ಹಾಲ್‌’ ಸೂಕ್ತ ಅನುಪಾಲನೆ ಇಲ್ಲದೆ ದಿನಗಳನ್ನು ಎಣಿಸುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಸೇನಾಧಿಕಾರಿಗಳ ಕುದುರೆ ಕಟ್ಟಲುಬಳಸುತ್ತಿದ್ದ ಸ್ಥಳವೇ ಈ ಬಂಗಲೆ.

ಬಂಗಲೆ ದೊಡ್ಡ ಸಭಾಂಗಣ ಹೊಂದಿದ್ದು, 4 ಕೊಠಡಿ ಇವೆ. ನಾಲ್ಕು ದಿಕ್ಕಿಗೂ ದ್ವಾರಗಳಿವೆ. ತೊಲೆ, ಕಿಟಕಿ, ಬಾಗಿಲುಗಳಿಗೆ ತೇಗದ ಮರ ಬಳಸಲಾಗಿದೆ. ಮಂಗಳೂರು ಹೆಂಚಿನ ಚಾವಣಿ, ಬೆಳಕು ಹೆಂಚು ಹೊಂದಿಸಿದ್ದು, ನೆಲಕ್ಕೆ ಕಲ್ಲುಹಾಸು ಹಾಕಿದ್ದಾರೆ. ಕಟ್ಟಡವನ್ನು ಸುಣ್ಣದ ಗಾರೆಯಲ್ಲಿ ನಿರ್ಮಿಸಲಾಗಿದೆ.

ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಟ್ಟಡವನ್ನು ಕಿಡಿಗೇಡಿಗಳು ಒಡೆದು ಹಾಕಿ ಹಾಳು ಮಾಡಿದ್ದಾರೆ ಕಟ್ಟಡದ ಕಿಟಕಿ, ಬಾಗಿಲು, ತೊಲೆ ಕತ್ತರಿಸಿ ಹೊತ್ತೊಯ್ದಿದ್ದಾರೆ. ಹೆಂಚುಗಳನ್ನು ಒಡೆದಿದ್ದಾರೆ. ನಿರ್ಲಕ್ಷದಿಂದಾಗಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

‘ಈ ಮೊದಲು ಕಟ್ಟಡವು ಸರ್ಕಾರಿ ಪ್ರೌಢಶಾಲೆಗೆ ಬಳಕೆಯಾಗುತ್ತಿತ್ತು. ಪಕ್ಕದಲ್ಲೇ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಈ ಕಟ್ಟಡವನ್ನು ಹಾಳುಗೆಡವಿದ್ದಾರೆ’ ಎಂದು ಬಾಪೂಜಿ ಹಾಲ್ ಸಂರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ವೃಂದದವರು ಆರೋಪಿಸುತ್ತಾರೆ.

ಇನ್ನೊಂದೆಡೆ ಕಟ್ಟಡ ಹಳೆಯದಾಗಿದೆ, ಶಿಥಿಲವಾಗಿದೆ. ಮಕ್ಕಳು ಆಟ ಆಡಲು ಜಾಗವಿಲ್ಲ ಎಂಬ ನೆಪ ಒಡ್ಡಿ ಕಟ್ಟಡವನ್ನು ಒಡೆದು ಹಾಕುವ ಹುನ್ನಾರವೂ ಸದ್ದಿಲ್ಲದೆ ಸಾಗಿದೆ.

ಈಚೆಗೆ ಪುರಸಭೆ ಆಡಳಿತವು ಈ ಕಟ್ಟಡದ ನವೀಕರಣಕ್ಕೆ ಮೊದಲು ₹ 9 ಲಕ್ಷ, ಬಳಿಕ ಹೊಸ ಕಟ್ಟಡ ನಿರ್ಮಾಣಕ್ಕೆ ₹ 30 ಲಕ್ಷ ಅನುದಾನ ನೀಡುವ ನಿರ್ಣಯ ತೆಗೆದುಕೊಂಡಿತ್ತು. ನಗರೋತ್ಥಾನ ಯೋಜನೆ ಅಡಿ ₹ 50 ಲಕ್ಷ ಮೀಸಲಿಟ್ಟಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ಭೇಟಿ ನೀಡಿ ಕಟ್ಟಡ ನವೀಕರಣದ, ಪುನರ್ ನಿರ್ಮಾಣದ ಭರವಸೆ ನೀಡಿದ್ದರಾದರೂ ಇನ್ನೂ ಈಡೇರಿಲ್ಲ.

***

ಹರಿಹರ ತಾಲ್ಲೂಕಿನ ಏಕಮಾತ್ರ, ಸ್ವಾತಂತ್ರ್ಯ ಪೂರ್ವದ ಗತ ವೈಭವ ಸಾರುವ ಕಟ್ಟಡವನ್ನು ಪುನರುಜ್ಜೀವನಗೊಳಿಸಬೇಕು. ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ. ಇನ್ನು ಬಾಪೂಜಿ ಹಾಲ್ ಉಳಿಸುವುದು ಸರ್ಕಾರಕ್ಕೆ ಬಿಟ್ಟದ್ದು.

–ಜ್ಯೋತಿ ನಾಗಭೂಷಣ, ಬಾಪೂಜಿ ಹಾಲ್ ಸಂರಕ್ಷಣಾ ಸಮಿತಿ ಸಂಚಾಲಕ

***

ಗಾಂಧೀಜಿ ಹೊನ್ನಾಳಿಗೆ ಭೇಟಿ ನೀಡಿ 95 ವರ್ಷ

ಎನ್.ಕೆ.ಆಂಜನೇಯ

ಹೊನ್ನಾಳಿ: ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡುತ್ತಿದ್ದ ಕಾಲವದು. ಮಹಾತ್ಮ ಗಾಂಧಿ ಸ್ವಾತಂತ್ರ್ಯದ ಹೋರಾಟದ ಜೊತೆಜೊತೆಗೆ ಖಾದಿ ಬಟ್ಟೆಯ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದ್ದರು.

‘ಈ ಸಮಯದಲ್ಲಿ ದಾವಣಗೆರೆ, ಹರಿಹರಕ್ಕೆ ಖಾದಿ ಮಹತ್ವ ಸಾರಲು ಬಂದಿದ್ದ ಗಾಂಧೀಜಿ 1927ರ ಆಗಸ್ಟ್‌ 13ರಂದು ಹೊನ್ನಾಳಿ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು. ಅವರ ಜೊತೆಗೆ ಕಸ್ತೂರ ಬಾ, ಅವರ ಕಿರಿಯ ಮಗ ದೇವದಾಸ ಸೇರಿ ಹಲವರ ಗುಂಪೇ ಇತ್ತು’ ಎಂದು ತಮ್ಮ ತಂದೆ, ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್. ಹಾಲಪ್ಪ ನ್ಯಾಮತಿ ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಂಡರು ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್.

ಹಾಲಪ್ಪ ಅವರು 13, 14ರ ವಯಸ್ಸಿನಲ್ಲಿದ್ದಾಗ ಗಾಂಧೀಜಿ ಅವರನ್ನು ತಮ್ಮ ಗುಂಪಿನೊಂದಿಗೆ ಖುದ್ದು ಭೇಟಿಯಾಗಿ ಅವರನ್ನು ಹತ್ತಿರದಿಂದ ನೋಡಿದವರು. ಅವರ ಭಾಷಣದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು.

1927ರ ಆಗಸ್ಟ್‌ 13ರಂದು ಹರಿಹರದ ಮೂಲಕ ಹೊನ್ನಾಳಿ ಪ್ರವಾಸಿ ಮಂದಿರಕ್ಕೆ ಬಂದ ಗಾಂಧೀಜಿ ಕೆಲ ಸಮಯ ತಂಗಿದ್ದರು. ತುಂಗಭದ್ರಾ ನದಿ ತಟದಲ್ಲಿರುವ ಪ್ರವಾಸಿ ಮಂದಿರ ಅವರಿಗೆ ಸಾಬರಮತಿ ಆಶ್ರಮವನ್ನು ನೆನಪು ಮಾಡಿಕೊಟ್ಟಿತ್ತಂತೆ. ಅಲ್ಲಿಂದ ತಾಲ್ಲೂಕು ಕಚೇರಿಗೆ ಬಂದಿದ್ದ ಅವರು ಚರಕ ಮತ್ತು ನೂಲು ಕುರಿತು ಭಾಷಣ ಮಾಡಿದ್ದರು. ಅಲ್ಲಿಂದ ಶಿವಮೊಗ್ಗದತ್ತ ಪ್ರವಾಸ ಬೆಳೆಸಿದ್ದರು.

ಗಾಂಧೀಜಿಯವರು ಭೇಟಿ ನೀಡಿದ್ದ ಸವಿ ನೆನಪಿಗಾಗಿ 2015ರ ಅಕ್ಟೋಬರ್‌ 2ರಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಗಾಂಧೀಜಿಯ ಕಂಚಿನ ಪ್ರತಿಮೆಯನ್ನು ನೂತನ ಪ್ರವಾಸಿ ಮಂದಿರದ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT