ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕೊಡಿಸುವುದಾಗಿ ಹಣ ಪಡೆದ ನಿವೃತ್ತ ಶಿಕ್ಷಕಿ

ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಆರೋಪ
Last Updated 22 ಸೆಪ್ಟೆಂಬರ್ 2020, 15:30 IST
ಅಕ್ಷರ ಗಾತ್ರ

ದಾವಣಗೆರೆ: ಅಂಗನವಾಡಿಗಳಲ್ಲಿ ಸಹಾಯಕಿಯರಾಗಿರುವವರಿಗೆ ಅಂಗನವಾಡಿ ಶಿಕ್ಷಕಿ (ಕಾರ್ಯಕರ್ತೆಯರ) ಹುದ್ದೆ ಕೊಡಿಸುವುದಾಗಿ ನಿವೃತ್ತ ಶಿಕ್ಷಕಿಯೊಬ್ಬರು ಹಲವರಿಂದ ತಲಾ ₹ 30 ಸಾವಿರ ಪಡೆದಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದಷ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಕೆಲಸ ಅವರು ಹೇಗೆ ಕೊಡಿಸುತ್ತಾರೆ ಎಂಬುದು ಗೊತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದನ್ನು ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.

ಬೇತೂರು ರಸ್ತೆಯ ಮಹಿಳೆ ಇಮಾಂನಗರ ವಿಳಾಸವನ್ನು ಕೃತಕವಾಗಿ ಸೃಷ್ಟಿಸಿ ಅಲ್ಲಿಯ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಕೊರೊನಾ ಬಂದಲ್ಲಿಂದ ಇಲ್ಲಿಯವರೆಗೆ ಅಂಗನವಾಡಿಯ ಮಕ್ಕಳ ಮನೆಗೆ ಆಹಾರ ತಲುಪಿಸಿಲ್ಲ. ಮಾರಾಟ ಮಾಡಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದರು.

ಕೆಲವು ಅಂಗನವಾಡಿಗಳಲ್ಲಿ ಬೆಲ್ಲ, ಶೇಂಗಾ ಮಾರಾಟ ಮಾಡುತ್ತಿದ್ದಾರೆ. ನೀವು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಲೂರು ನಿಂಗರಾಜ್‌ ಒತ್ತಾಯಿಸಿದರು.

‘ನಮ್ಮ ಕ್ಷೇತ್ರದಲ್ಲಿ ತಾಲ್ಲೂಕು ಪಂಚಾಯಿತಿಯಿಂದ ಕಾರ್ಯಕ್ರಮ ನಡೆದರೂ ಸ್ಥಳೀಯ ಸದಸ್ಯರನ್ನು ಕರೆಯದೇ ಅಪಮಾನ ಮಾಡಿದ್ದೀರಿ’ ಎಂದು ಮಾಯಕೊಂಡದ ನಾಗರಾಜ್‌ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಹೀಗಾಗಿದೆ. ನಾಲ್ಕೂವರೆ ವರ್ಷಗಳಿಂದಲೂ ನೀವು ಸ್ಪಂದಿಸಿಲ್ಲ ಎಂದು ಸದಸ್ಯ ಉಮೇಶ್‌ ಆರೋಪಿಸಿದರು. ಯಾವುದೇ ಪಕ್ಷದವರಿರಲಿ. ಜನಪ್ರತಿನಿಧಿಯಾಗಿದ್ದರೆ ಕರೆಯಲೇಬೇಕು ಎಂದು ಸಂಗಜ್ಜಗೌಡ ಸಲಹೆ ನೀಡಿದರು. ಹಿಂದೆಯೂ ಹೀಗೆ ಆಗಿತ್ತು ಎಂದು ಆಲೂರು ನಿಂಗರಾಜ್‌, ಮುರುಗೇಂದ್ರಪ್ಪ, ಹನುಮಂ ಮತ್ತಿತರರು ತಿಳಿಸಿದರು.

‘ಸಮಯದ ಅಭಾವದಿಂದ ತಿಳಿಸಲಾಗಲಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ’ ಎಂದು ಇಒ ದಾರುಕೇಶ್‌ ಉತ್ತರಿಸಿದರು.

ಪೋಷಣ್‌ ಅಭಿಯಾನ್‌ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಆಶಾ ಮುರುಳಿ ಬೇಸರಿಸಿದರು. ಪಂಚಾಯಿತಿ ಕಾರ್ಯಕ್ರಮ. ಪಿಡಿಒ ಕರೆಯಬೇಕು ಎಂದು ಸಿಡಿಪಿಒ ಅವರು ಗ್ರಾಮ ಪಂಚಾಯಿತಿ ಜವಾಬ್ದಾರಿಯನ್ನು ಜಾರಿಸಿದರು. ಆ ಕಾರ್ಯಕ್ರಮದಲ್ಲಿ ಪಿಡಿಒ ಇರಲಿಲ್ಲ. ನಿಮ್ಮ ಇಲಾಖೆಯ ಕಾರ್ಯಕ್ರಮಕ್ಕೆ ನೀವು ಕರೆಯಬೇಕು ಎಂದು ಆಶಾ ಮುರುಳಿ ತಿಳಿಸಿದಾಗ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷೆ ಮೀನಾ ಟಿ. ಶ್ರೀನಿವಾಸ್‌, ವಿವಿಧ ಸದಸ್ಯರು ಧ್ವನಿಗೂಡಿಸಿದರು.

ಮೂರು ತಿಂಗಳು ಕಳೆದರೂ ಹೋಗದ ಪತ್ರ: ‘ಮೀನು ಹಿಡಿಯುವ ಗುತ್ತಿಗೆ ಒಂದೇ ಸಂಘಕ್ಕೆ ನೀಡಲಾಗುತ್ತಿದೆ. ಬೇರೆಯವರಿಗೂ ಅವಕಾಶ ನೀಡಬೇಕು. ಅದಕ್ಕೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಬೈಲಾದಲ್ಲಿ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಮೂರು ತಿಂಗಳ ಹಿಂದಿನ ಸಭೆಯಲ್ಲಿ ಹೇಳಿದ್ದೆ. ಏನಾಗಿದೆ’ ಎಂದು ಮುರುಗೇಂದ್ರಪ್ಪ ಪ್ರಶ್ನಿಸಿದರು.

ನಡಾವಳಿ ಈಗ ಸಿಕ್ಕಿದೆ. ಬೈಲಾದಲ್ಲಿ ಅವಕಾಶ ಇಲ್ಲ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕ ಬಿ. ಉಮೇಶ್‌ ಉತ್ತರಿಸಿದರು. ‘ಮೂರು ತಿಂಗಳ ಹಿಂದಿನ ಉತ್ತರ ಅದು. ಆಮೇಲೆ ಪತ್ರ ಬರೆದಿದ್ದೀರಾ’ ಎಂದು ಮುರುಗೇಂದ್ರಪ್ಪ ಮರು ಪ್ರಶ್ನಿಸಿದರು.

ಕಳೆದ ಬಾರಿ ನೀವೇ ಸಭೆಯಲ್ಲಿ ಇದ್ದ ಮೇಲೆ ನಡಾವಳಿ ಸಿಕ್ಕಿಲ್ಲ ಎಂದು ಉತ್ತರ ನೀಡಬಾರದು ಎಂದು ಅಧಿಕಾರಿಗೆ ಇಒ ತಿಳಿಸಿದರು. ಸರ್ಕಾರಕ್ಕೆ ಕೂಡಲೇ ಬರೆಯುವುದಾಗಿ ಉತ್ತರಿಸಿದರು. ಮೂರು ತಿಂಗಳಿನಿಂದ ಪತ್ರ ಬರೆಯದೇ ಇರುವುದಕ್ಕೆ ಮುರುಗೇಂದ್ರಪ್ಪ, ಆಲೂರು ನಿಂಗರಾಜ್‌, ಮಂಜಪ್ಪ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ‘ನೀವು ಕೆಲಸ ಮಾಡುವುದಿಲ್ಲ. ನಾವು ತಾಲ್ಲೂಕು ಪಂಚಾಯಿತಿಗೆ ಬೀಗ ಹಾಕಬೇಕಾಗುತ್ತದೆ ಎಂದು ಉಮೇಶ್ ಎಚ್ಚರಿಸಿದರು.

‘ಪ್ರಗತಿ ವರದಿಯನ್ನು ಏಳು ಇಲಾಖೆಗಳಷ್ಟೇ ನೀಡಿವೆ. ಉಳಿದ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲಿ ತಿಳಿಸಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಹನುಮಂತ ನಾಯ್ಕ್‌ ತರಾಟೆಗೆ ತೆಗೆದುಕೊಂಡರು.

ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ಕಿರಣ್‌ ಕುಮಾರ್‌, ಶ್ರೇಯಾ, ಅಮೃತಾ ಎಚ್‌.ವಿ., ಆಕಾಶ್‌ ಆರ್‌., ಸಂಹಿತಾ, ಜ್ಞಾನಶ್ರೀಯನ್ನು ಈ ಸಭೆಯ ಆರಂಭದಲ್ಲಿ ಸನ್ಮಾನಿಸಲಾಯಿತು.

ನಡಾವಳಿಯೇ ಇಲ್ಲದೆ ಸಭೆ ಆರಂಭ

ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಭೆ ಕೋರಂ (13 ಸದಸ್ಯರು ಇರಬೇಕು) ಭರ್ತಿಯಾಗುವ ಹೊತ್ತಿಗೆ 11.20 ಆಯಿತು. ಬಳಿಕವೂ ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸಹಿತ ಪ್ರಮುಖ ಇಲಾಖೆಗಳ ಅಧಿಕಾರಿಗಳು ಇರಲಿಲ್ಲ. ಸದಸ್ಯರಿಗೆ ಹಿಂದಿನ ಸಭೆಯ ನಡಾವಳಿಯನ್ನೇ ನೀಡಿರಲಿಲ್ಲ. ನಡಾವಳಿ ನೀಡದೇ ಸಭೆಯೇ ಮಾಡುವುದು ಬೇಡ ಎಂದು ಸದಸ್ಯ ಮುರುಗೇಂದ್ರಪ್ಪ ಪಟ್ಟು ಹಿಡಿದರು. ಇಒ ಕೈಯಲ್ಲಿದ್ದ ನಡಾವಳಿಯನ್ನು ಜೆರಾಕ್ಸ್‌ ಮಾಡಿ ಹಂಚಿದ ಮೇಲೆ ಸಭೆ ಆರಂಭಗೊಂಡಿತು.

ಕೊರೊನಾ, ಅಧಿಕಾರಿಗಳ ಕೊರತೆಯಿಂದ ಈ ಸಮಸ್ಯೆಯಾಗಿದೆ ಎಂದು ಇ.ಒ. ದಾರುಕೇಶ್‌ ಸಮರ್ಥಿಸಿಕೊಂಡರು. ನಾಲ್ಕೇ ಸಿಬ್ಬಂದಿ ಜತೆ ಕೆಲಸ ಮಾಡಬೇಕಾಗಿದೆ ಎಂದು ಅಳಲು ತೋಡಿಕೊಂಡರು. ‘ನಡಾವಳಿ ಕೊಡಿ ಎಂದು ಹೇಳಿದರೂ ಯಾಕಪ್ಪ ಕೊಟ್ಟಿಲ್ಲ. ನಿಮ್ಮಿಂದಾಗಿ ನಾನು ಬೈಸಿಕೊಳ್ಳಬೇಕಲ್ಲ’ ಎಂದು ಸಿಬ್ಬಂದಿಗೆ ರೇಗಿದರು.

‘ವಠಾರದಲ್ಲಿ ಪಾಠ ಮಾಡಿದರೆ ಕೊರೊನಾ ಬರಲ್ವ?’

‘ಶಾಲೆಗಳನ್ನು ತೆರೆದಿಲ್ಲ. ಸಮುದಾಯಭವನ, ದೇವಸ್ಥಾನ, ಪಾರ್ಕ್‌, ವಠಾರಗಳಲ್ಲಿ ಪಾಠ ಮಾಡಲಾಗುತ್ತಿದೆ. ಅಲ್ಲಿಯೇ ಎಲ್ಲ ಮಕ್ಕಳು ಒಟ್ಟಿಗೇ ಇರುತ್ತಾರೆ. ಅಲ್ಲಿ ಪಾಠ ಮಾಡಿದರೆ ಕೊರೊನಾ ಬರಲ್ವ? ಶಾಲೆಗಿಂತ ಉತ್ತಮ ವ್ಯವಸ್ಥೆ ಅಲ್ಲಿದೆಯೇ? ಶೌಚಾಲಯ, ನೀರಿನ ವ್ಯವಸ್ಥೆ ಅಲ್ಲಿ ಸಮರ್ಪಕವಾಗಿದೆಯೇ? ಸರ್ಕಾರಿ ಶಾಲೆಗಳಿಗೆ ಮಾತ್ರ ಈ ರೀತಿ ಇದೆ. ಖಾಸಗಿ ಶಾಲೆಗಳಿಗೆ ಇದು ಯಾಕೆ ಅನ್ವಯವಾಗುವುದಿಲ್ಲ. ಎಲ್ಲರಿಗೂ ಸರಿಯಾಗಿ ಪಾಠ ಮಾಡಲು ಕ್ರಮ ಕೈಗೊಳ್ಳಿ. ಇಲ್ಲವೇ ಯಾರಿಗೂ ಪಾಠ ಬೇಡ ಎಂದು ನಿರ್ಧಾರ ಕೈಗೊಳ್ಳಿ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT