ಸೋಮವಾರ, ಮೇ 23, 2022
24 °C
₹ 512 ಕೋಟಿ ಆದಾಯ, ₹ 4.90 ಕೋಟಿ ವೆಚ್ಚದ ಆಯವ್ಯಯ ಮಂಡನೆ

ಪಾಲಿಕೆಯಲ್ಲಿ ₹ 21.56 ಕೋಟಿ ಉಳಿತಾಯ ಬಜೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಈ ವರ್ಷ ₹ 512.12 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹ 490.56 ವ್ಯಯ ಮಾಡಲು ಯೋಜನೆ ರೂಪಿಸಲಾಗಿದೆ. ಮೇಯರ್‌ ಆರ್‌. ಜಯಮ್ಮ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಆಯ–ವ್ಯಯ ಸಭೆಯಲ್ಲಿ ₹ 21.56 ಕೋಟಿ ಉಳಿತಾಯದ ಬಜೆಟ್‌ ಮಂಡನೆ ಮಾಡಲಾಗಿದೆ.

ಮೇಯರ್‌ ಪರವಾಗಿ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್‌ ಬಜೆಟ್‌ ವಿವರ ವಾಚಿಸಿದರು. ಉಪಮೇಯರ್‌ ಗಾಯತ್ರಿಬಾಯಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಉದಯ ಕುಮಾರ್‌, ರಾಕೇಶ್‌ ವೈ.ಜಾಧವ್‌, ಮಂಜುನಾಥ ಎಸ್‌., ವಿರೋಧಪಕ್ಷದ ನಾಯಕ ಗಡಿಗುಡಾಳ್‌ ಮಂಜುನಾಥ್‌, ಉಪ ಆಯುಕ್ತ (ಆಡಳಿತ) ನಳಿನಾ, ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್‌ ನಾಯಕ್‌ ಅವರೂ ಇದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆದಾಯಗಳ ನಿರೀಕ್ಷೆ: ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಮುಕ್ತನಿಧಿ ಯೋಜನೆಯಲ್ಲಿ ಪ್ರವೇಶ ತೆರಿಗೆ ಅವತರಣದಡಿ ಬಂಡವಾಳ ಆಸ್ತಿಗಳ ಸೃಜನೆಗಾಗಿ ರಾಜ್ಯ ಸರ್ಕಾರ ₹ 7.5 ಕೋಟಿ ಹಂಚಿಕೆ ಮಾಡಿದೆ.

ಎಸ್‌ಎಫ್‌ಸಿಯಲ್ಲಿ ವಿದ್ಯುತ್‌ ಅನುದಾನ ₹ 27.75 ಕೋಟಿ  ಬರಲಿದೆ. ಎಸ್‌ಎಫ್‌ಸಿಯಲ್ಲಿ ವೇತನ ಅನುದಾನ
₹ 35.31 ಕೋಟಿ ಹಂಚಿಕೆಯಾಗಿದೆ.

15ನೇ ಕೇಂದ್ರ ಹಣಕಾಸು ಆಯೋಗದ ಅನುದಾನದಡಿ, ಘನತ್ಯಾಜ್ಯ ವಿಲೇವಾರಿ, ಉದ್ಯಾನ ಅಭಿವೃದ್ಧಿ, ಬೀದಿದೀಪ, ಲೆಕ್ಕಪತ್ರ ನಿರ್ವಹಣೆ, ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ಕಾಮಗಾರಿ, ಒಳಚರಂಡಿ, ರಸ್ತೆ, ಸೇತುವೆ, ನೀರು ಸರಬರಾಜು ಮುಂತಾದ ಮೂಲಸೌಕರ್ಯಕ್ಕಾಗಿ ₹ 25.80 ಕೋಟಿ ನಿಗದಿಪಡಿಸಿದೆ.

ರಾಜ್ಯ ಹಣಕಾಸು ಆಯೋಗವು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ₹ 5 ಕೋಟಿ ವಿಶೇ ಅನುದಾನ ನೀಡಿತ್ತು. ಈ ಬಾರಿಯೂ ₹ 5 ಕೋಟಿ ನಿರೀಕ್ಷಿಸಲಾಗಿದೆ.

ಸ್ವಂತ ಆದಾಯದ ಮೂಲ: ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡಗಳು ಮತ್ತು ಖಾಲಿ ನಿವೇಶನಗಳ ಮೇಲಿನ ತೆರಿಗೆ ಪ್ರಮುಖ ಆದಾಯವಾಗಿದೆ. ಪ್ರತಿ ಆಸ್ತಿಗೆ ಆಸ್ತಿ ಗುರುತು ಸಂಖ್ಯೆ ನೀಡಿ ಗಣಕೀಕರಣ ಮಾಡುವ ಕಾರ್ಯ ಜಾರಿಯಲ್ಲಿದೆ. ಅದು ಪೂರ್ಣಗೊಂಡರೆ ಶೇ 100 ಆಸ್ತಿ ತೆರಿಗೆ ಜಾಲಕ್ಕೆ ಒಳಪಡಲಿದೆ. ಅದರಿಂದ ₹ 25 ಕೋಟಿ ತೆರಿಗೆ ಸಂಗ್ರಹವಾಗಲಿದೆ.

ವಾಣಿಜ್ಯ ಮಳಿಗೆಗಳಿಂದ ₹ 60 ಲಕ್ಷ, ನೀರು ಸರಬರಾಜು ಬಳಕೆದಾರರ ಶುಲ್ಕ ₹ 5 ಕೋಟಿ, ನೀರು ಸರಬರಾಜು ಸಂಪರ್ಕ ಶುಲ್ಕ ₹ 20 ಲಕ್ಷ, ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕ ₹ 1.30 ಕೋಟಿ, ಸಂತೆ ಸುಂಕ ₹ 55 ಲಕ್ಷ, ಘನತ್ಯಾಜ್ಯ ನಿರ್ವಹಣೆ ಶುಲ್ಕ ₹ 1.75 ಕೋಟಿ. ಕಟ್ಟಡ ಪರವಾನಗಿ ಶುಲ್ಕ ₹ 1 ಕೋಟಿ, ಉದ್ದಿಮೆ ಪರವಾನಗಿ ಶುಲ್ಕ₹ 80 ಲಕ್ಷ, ರಸ್ತೆ ಕಡಿತ ಶುಲ್ಕ ₹ 1.50 ಕೋಟಿ, ಆಸ್ತಿಗಳ ವರ್ಗಾವಣೆ ಅಧಿಬಾರ ಶುಲ್ಕ ₹ 50 ಲಕ್ಷ, ಅಭಿವೃದ್ಧಿ ಶುಲ್ಕ ₹ 30 ಲಕ್ಷ ನಿರೀಕ್ಷಿಸಲಾಗಿದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾರ್ಯಕ್ರಮಕ್ಕೆ ₹ 2.37 ಕೋಟಿ, ಸ್ವಚ್ಛಭಾರತ್‌ ಅಭಿಯಾನ–ಎಸ್‌ಡಬ್ಲ್ಯೂಎಂ ಅನುದಾನ ಕೇಂದ್ರ ಸರ್ಕಾರದಿಂದ ₹ 17.66 ಕೋಟಿ, ಸ್ಮಾರ್ಟ್‌ಸಿಟಿಯಿಂದ ₹ 9.16 ಕೋಟಿ, ಡೇ–ನಲ್ಮ್‌ ಯೋಜನೆಯಡಿ ₹ 25 ಲಕ್ಷ ಅನುದಾನ, ಶಾಸಕರ ಸ್ಥಳೀಯಾಭಿವೃದ್ಧಿ ಯೋಜನೆಯಡಿ ಉತ್ತರ ಮತ್ತು ದಕ್ಷಿಣಕ್ಕೆ ₹ 20 ಲಕ್ಷ ನಿರೀಕ್ಷಿಸಲಾಗಿದೆ.

ವೆಚ್ಚಗಳ ವಿವರ: ಆಡಳಿತ ನಿರ್ವಹಣೆಗೆ ₹ 1.75 ಕೋಟಿ, ಮಾನವ ಸಂಪನ್ಮೂಲ ವೆಚ್ಚ ₹ 41.17 ಕೋಟಿ, ಮೂಲಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿ ₹ 3.95 ಕೋಟಿ, ಹೊರಗುತ್ತಿಗೆ ವೆಚ್ಚ ₹ 9.45 ಕೋಟಿ, ಉಗ್ರಾಣ ಸಾಮಗ್ರಿ ಖರೀದಿಗೆ ₹ 1.40 ಕೋಟಿ, ಇಂಧನ, ವಿದ್ಯುತ್‌ ವೆಚ್ಚ ₹ 32.14 ಕೋಟಿ, ಸ್ಮಶಾನಗಳ ಅಭಿವೃದ್ಧಿಗೆ ₹ 1 ಕೋಟಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ₹ 25 ಲಕ್ಷ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್‌, ಕೆಎಎಸ್‌ ತರಬೇತಿಗೆ ₹ 20 ಲಕ್ಷ, ರಸ್ತೆಯಲ್ಲಿರುವ ಅನಗತ್ಯ ಉಬ್ಬು ತೆಗೆಸಲು ₹ 50 ಲಕ್ಷ, ನಗರ ಅರಣ್ಯೀಕರಣ, ಪರಿಸರ ದಿನಾಚರಣೆಗೆ ₹ 50 ಲಕ್ಷ, ಮಳೆನೀರು ಮರುಪೂರಣಕ್ಕೆ ₹ 50 ಲಕ್ಷ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ₹ 10 ಲಕ್ಷ, ವೃದ್ಧಾಶ್ರಮಗಳಿ ಪರಿಕರ ನೀಡಲು ₹ 10 ಲಕ್ಷ ಮೀಸಲಿಡಲಾಗಿದೆ.

ಉದ್ಯಾನ ನಿರ್ವಹಣೆ, ಪರಿಕರಗಳ ಖರೀದಿಗೆ ₹ 10 ಲಕ್ಷ, ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ₹ 1 ಕೋಟಿ, ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ₹ 1.5 ಕೋಟಿ, ಪರಿಶಿಷ್ಟ ಜಾತಿ/ಪಂಘಡದ ಅಭಿವೃದ್ಧಿಗೆ ₹ 25 ಲಕ್ಷ, ಅಂಗವಿಕಲರಿಗೆ ಪರಿಕರ ನೀಡಲು ₹ 20 ಲಕ್ಷ, ಪೌರ ಸನ್ಮಾನಕ್ಕೆ ₹ 5 ಲಕ್ಷ, ಇ–ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ₹ 30 ಲಕ್ಷ, ಯಾಂತ್ರೀಕೃತ ಕಸಗುಡಿಸುವ ಯಂತ್ರ ಮತ್ತು ರೋಡ್‌ ಬ್ರೇಕರ್‌ ಮಷಿನ್‌ ಖರೀದಿಗೆ ₹ 1.5 ಕೋಟಿ, ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ₹ 22.31 ಕೋಟಿ, ನಗರದ ನಾಲ್ಕು ದಿಕ್ಕುಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ ಖರೀದಿಸಲು ₹ 20 ಕೋಟಿ ಕಾಯ್ದಿರಿಸಲಾಗಿದೆ.

ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ₹ 60 ಲಕ್ಷ, ಪಾಲಿಕೆ ಸದಸ್ಯರಿಗೆ ಅಧ್ಯಯನ ಪ್ರವಾಸಕ್ಕೆ ₹ 30 ಲಕ್ಷ, ಪಾಲಿಕೆಗಳ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟ ಆಯೋಜಿಸಲು ₹ 15 ಲಕ್ಷ, ಮೇಯರ್‌ ಕಪ್‌ಗೆ ₹ 10 ಲಕ್ಷ, ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ನಿಧಿಗೆ ₹ 10 ಲಕ್ಷ, ಅಂಗವಿಕಲ ವಿದ್ಯಾರ್ಥಿಗಳಿಗೆ ಸೋಲಾರ್‌ ದೀಪ ನೀಡಲು ₹ 5 ಲಕ್ಷ, ಹಳೇಮರಗಳನ್ನು ತೆರವುಗೊಳಿಸಲು ₹ 20 ಲಕ್ಷ, ಕೈಗಾರಿಕಾ ವಸಾಹತುಗಳಿಗೆ ಮೂಲ ಸೌಕರ್ಯ ಒದಗಿಸಲು ₹ 25 ಲಕ್ಷ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲು ₹ 20 ಲಕ್ಷ, ಗರಡಿ ಮನೆಗಳಿಗೆ ₹ 1 ಕೋಟಿ, ದುಗ್ಗಮ್ಮನ ಬಾವಿ ಅಭಿವೃದ್ಧಿಗೆ ₹ 20 ಲಕ್ಷ, 2 ಸ್ಕೈವಾಕ್‌ಗೆ ₹ 1 ಕೋಟಿ ಇಡಲು ನಿರ್ಧರಿಸಲಾಗಿದೆ.

ಪ್ರತಿಮೆಗಳ ನಿರ್ವಹಣೆಗೆ ₹ 20 ಲಕ್ಷ, ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯದ ಪರಿಕರ ವಿತರಣೆಗೆ ₹ 10 ಲಕ್ಷ, ರಾಜಕಾಲುವೆ ಹೂಳೆತ್ತಲು ₹ 50 ಲಕ್ಷ, ಒಳಚರಂಡಿ ದುರಸ್ತಿ, ನಿರ್ಮಾಣಕ್ಕೆ ₹ 3 ಕೋಟಿ, ಕನ್ನಡ ಅನುಷ್ಠಾನಕ್ಕೆ ₹ 5 ಲಕ್ಷ, ಸಮುದಾಯ ಭವನಗಳ ನಿರ್ಮಾಣ, ನವೀಕರಣಕ್ಕೆ ₹ 1 ಕೋಟಿ, ಮಾನಸಿಕ ಅಸ್ವಸ್ಥದ ಬಗ್ಗೆ ಅರಿವು ಮೂಡಿಸಲು ₹ 10 ಲಕ್ಷ, ಹಳೇಕಡತ ರಕ್ಷಣೆಗೆ ₹ 50 ಲಕ್ಷ, ಜೀವ ವೈವಿಧ್ಯ ಸಂರಕ್ಷಣಾ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ₹ 5 ಲಕ್ಷ, ತಾರಸಿ ಉದ್ಯಾನಕ್ಕೆ ₹ 5 ಲಕ್ಷ, ಆಯುರ್ವೇದ ಥೀಮ್‌ ಪಾರ್ಕ್‌ಗೆ ₹ 5 ಲಕ್ಷ, ಬೊನ್ಸಾಯ್‌ ಉದ್ಯಾನಕ್ಕೆ ₹ 10 ಲಕ್ಷ ಮೀಸಲಿರಿಸಲಾಗಿದೆ.

ಆಡಳಿತ ಪಕ್ಷ, ವಿರೋಧ ಪಕ್ಷದ ನಡುವೆ ವಾಗ್ವಾದ

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಭೆಯ ಆರಂಭದಲ್ಲಿ ನಾಡಗೀತೆಯ ಮುದ್ರಿತಧ್ವನಿ ಹಾಕಲಾಯಿತು. ‘ಸರ್ವಜನಾಂಗದ ಶಾಂತಿಯ ತೋಟ’ ಎಂಬುದು ಬರುವಷ್ಟರ ಹೊತ್ತಿಗೆ ಮುದ್ರಿತಧ್ವನಿ ಕೈಕೊಟ್ಟಿತು. ಮತ್ತೆ ಮುಂದೆ ಸರಿಯಾಯಿತು. ಗೀತೆ ಮುಗಿದ ಮೇಲೆ ಈ ಬಗ್ಗೆ ಕಾಂಗ್ರೆಸ್‌ನ ಎ. ನಾಗರಾಜ್‌, ಕೆ. ಚಮನ್‌ಸಾಬ್‌ ಆಕ್ಷೇಪ ವ್ಯಕ್ತಪಡಿಸಿದರು. ‘ರಾಜ್ಯದಲ್ಲಿ ವಿವಿಧ ವಿವಾದಗಳನ್ನು ಉಂಟು ಮಾಡುವ ಮೂಲಕ ಶಾಂತಿಯನ್ನು ಕದಡಿದ್ದೀರಿ. ನಾಡಗೀತೆಯಲ್ಲಿಯೂ ಫಾರ್ವರ್ಡ್‌ ಮಾಡಲು ನೋಡುತ್ತೀರಿ’ ಎಂದು ಆರೋಪಿಸಿದರು. ಇದು ತಾಂತ್ರಿಕ ಸಮಸ್ಯೆ ಎಂದು ಮೇಯರ್‌ ಜಯಮ್ಮ, ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಶಿವಪಾರ್ವತಿ ಬಡಾವಣೆಯ ಹೆಸರು ಬದಲಾಯಿಸಿ ಮಲ್ಲಿಕಾರ್ಜುನ ಬಡಾವಣೆ ಎಂದು ಮಾಡಲು ಹೊರಟಿದ್ದೀರಿ. ಅದು ಇರುವಂತೆ ಮುಂದುವರಿಸಬೇಕು ಎಂದು ನಾಗರಾಜ್‌ ಒತ್ತಾಯಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ₹ 35 ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದೀರಿ. ಅದರಲ್ಲಿ ಕುಂದವಾಡ ಗ್ಲಾಸ್‌ಹೌಸ್‌ ಉದ್ಯಾನದಲ್ಲಿ 2,456 ಗಿಡ ಹಾಕಲಾಗಿದೆ ಎಂದು ವಿವರ ನೀಡಲಾಗಿದೆ. ಹಾಗಾಗಿ ಇದರಲ್ಲಿ ಅವ್ಯವಹಾರ ನಡೆದಂತೆ ಕಾಣುತ್ತಿದೆ. ಈ ಬಗ್ಗೆ ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು ಎಂದು ವಿರೋಧಪಕ್ಷದ ನಾಯಕ ಗಡಿಗುಡಾಳ್‌ ಮಂಜುನಾಥ್‌ ಒತ್ತಾಯಿಸಿದರು.

ಒಂದು ಗಿಡಕ್ಕೆ ₹ 1 ಲಕ್ಷ ಎಂದು ಹೇಳಿ ಒಣ ಗಿಡ ನೆಟ್ಟಿದ ಹಗರಣದ ಬಗ್ಗೆಯೂ ತನಿಖೆಯಾಗಲಿ ಎಂದು ಶಿವಪ್ರಕಾಶ್‌, ಶಿವಾನಂದ, ಕೆ.ಎಂ. ವೀರೇಶ್‌ ಆಗ್ರಹಿಸಿದರು. ಅದು ಜಪಾನ್‌ನ ಮಿಯೋವಾಕಿ ಮಾದರಿಯಲ್ಲಿ ಮಾಡಲಾಗಿದೆ. ಅಷ್ಟು ಗಿಡ ನೆಡಲು ಸಾಧ್ಯ. ಈಗಲೇ ಬೇಕಿದ್ದರೆ ಹೋಗಿ ಪರಿಶೀಲಿಸಬಹುದು ಎಂದು ಮಾಜಿ ಮೇಯರ್ ಎಸ್‌.ಟಿ. ವೀರೇಶ್‌, ಅಧಿಕಾರಿಗಳು ತಿಳಿಸಿದರು.

ಕಾರು ಪುರಾಣ

₹ 21 ಕೋಟಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ. ಆದರೆ ಮೇಯರ್‌ಗೆ ಕಾರು ಚಾಲಕನನ್ನು ನೀಡಿಲ್ಲ. ಅವರ ಪತಿ ಗೋಪಿನಾಯ್ಕ್‌ ಅವರೇ ಕಾರು ಚಲಾಯಿಸಿಕೊಂಡು ಎಲ್ಲ ಕಡೆ ಮೇಯರ್‌ ಅವರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಕೂಡಲೇ ಮೂರು ಕಾರು ಚಾಲಕರನ್ನು ನಿಗದಿ ಮಾಡಬೇಕು ಎಂದು ಎ.ನಾಗರಾಜ್‌ ಹೇಳಿದರು.

ಕಾರು ಚಾಲಕರಿದ್ದಾರೆ ಎಂದು ಮೇಯರ್‌ ಜಯಮ್ಮ ಸಮಜಾಯಿಷಿ ನೀಡಿದರು. ಕಾರು ಪುರಾಣ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಬಜೆಟ್‌ ಸಭೆಯ ವಿಶೇಷತೆ

ಡಿಜಿಟಲೀಕೃತ ಆಯವ್ಯಯ ಮಂಡನೆ ಮಾಡಲಾಯಿತು.

ಬಜೆಟ್‌ ಬಗ್ಗೆ ಮೊದಲು ಮಾತನಾಡಲು ಆಡಳಿತ ಪಕ್ಷಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಯಿತು.

ಬಜೆಟ್‌ ವಿಚಾರಗಳನ್ನು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಮಾತನಾಡಿದ್ದಕ್ಕೆ ಆಡಳಿತ ಪಕ್ಷದವರು ಆಕ್ಷೇಪಿಸಿದರು.

ಅತ್ಯುತ್ತಮ, ದೂರದೃಷ್ಟಿಯ, ಅಭಿವೃದ್ಧಿ ಪರ ಬಜೆಟ್‌. ನಗರದ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ಈ ಬಜೆಟ್‌ ಮೂಲಕ ನೀಡಲಾಗಿದೆ ಎಂದು ಎಸ್‌.ಟಿ. ವೀರೇಶ್‌, ಪ್ರಸನ್ನ ಕುಮಾರ್‌ ಬಣ್ಣಿಸಿದರು.

ಹಿಂದಿನ ವರ್ಷಗಳ ಬಜೆಟ್‌ಗಳ ಕಾಪಿ ಇದು. ಹೊಸ ಯೋಜನೆಗಳಿಲ್ಲ. ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿಲ್ಲ. ಮಹಿಳೆಯರಿಗೆ ಏನಿಲ್ಲ, ಹೊಸಬಾಟಲಿಯಲ್ಲಿ ಹಳೇಮದ್ಯದಂತೆ ನಿರಾಶಾದಾಯಕ ಬಜೆಟ್‌ ಎಂದು ಗಡಿಗುಡಾಳ್‌ ಮಂಜುನಾಥ್‌, ಎ. ನಾಗರಾಜ್‌  ಟೀಕಿಸಿದರು.

ಕೆಲವು ಒಳ್ಳೆಯ ಅಂಶಗಳಿವೆ. ಆದರೆ ಅನುಷ್ಠಾನಕ್ಕೆ ಬರುವಾಗ ಲಾಭ ಇರುವಲ್ಲಿ ಮಾತ್ರ ಕೆಲಸಗಳಾಗುತ್ತವೆ. ಡಿಜಿಟಲ್‌ ಲೈಬ್ರೆರಿ ಮೂರು ವರ್ಷಗಳಿಂದ ಬಜೆಟ್‌ನಲ್ಲಿ ಮಂಡನೆಯಾಗುತ್ತದೆ. ಆದರೆ ಲೈಬ್ರೆರಿ ಆಗುತ್ತಿಲ್ಲ. ಈ ಬಾರಿಯಾದರೂ ಮಾಡಿ ಎಂದು ಕೆ. ಚಮನ್‌ಸಾಬ್‌ ಸಲಹೆ ನೀಡಿದರು.

ಎಲ್ಲ 45 ವಾರ್ಡ್‌ಗಳನ್ನು ಸಮಾನವಾಗಿ ನೋಡಿ ಎಂದು ಶಿವಲೀಲಾ ಕೊಟ್ರಪ್ಪ ತಿಳಿಸಿದರು.

ಕಳೆದ ಬಾರಿಯ 39 ಯೋಜನೆಗಳಲ್ಲಿ 22ನ್ನು ಕೈಬಿಡಲಾಗಿದೆ ಎಂದು ಗಡಿಗುಡಾಳ್‌  ನಾಗರಾಜ್‌, ಚಮನ್‌ಸಾಬ್‌ ಆರೋಪಿಸಿದರು.

ಪ್ರಚಾರಕ್ಕಾಗಿ ಸುಳ್ಳು ಮಾಹಿತಿ ನೀಡುತ್ತಾ ಇದ್ದೀರಿ. ಅಧಿಕೃತ ಮಾಹಿತಿ ಇದ್ದರೆ ನೀಡಿ ಎಂದು ಮೇಯರ್‌ ಜಯಮ್ಮ, ಸದಸ್ಯರಾದ ಎಸ್‌.ಟಿ. ವೀರೇಶ್‌, ಪ್ರಸನ್ನಕುಮಾರ್‌ ಪ್ರತ್ಯುತ್ತರ ನೀಡಿದರು.

ಮಾದರಿ ರಸ್ತೆ ನಿರ್ಮಾಣ ಯೋಜನೆ ಕೈಬಿಟ್ಟಿಲ್ಲ. ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿದೆ. ಅರ್ಧ ಆಗಿದೆ ಎಂದು ಉಮಾ ಪ್ರಕಾಶ್‌ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು