ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕ್ಷಣೆಗೆ ಬಂದಿದ್ದು ಜನಸಾಗರ.. ಫಲಿತಾಂಶ ಹರೋಹರ..!

ನಾಮಪತ್ರ ಸಲ್ಲಿಸಿ ಸತ್ಯಾಗ್ರಹ ಕುಳಿತಿದ್ದ ಮಹಿಮ ಪಟೇಲ್‌
Last Updated 18 ಮಾರ್ಚ್ 2023, 5:28 IST
ಅಕ್ಷರ ಗಾತ್ರ

ದಾವಣಗೆರೆ: 2004 ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಮಹಿಮ ಪಟೇಲ್‌ 2008ರಲ್ಲಿ ತಮ್ಮದೇ ಪಕ್ಷ ಸ್ಥಾಪಿಸಿ ನಾಮಪತ್ರ ಸಲ್ಲಿಸಿ ಚುನಾವಣೆ ಮುಗಿಯುವವರೆಗೆ ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಅವರನ್ನು ನೋಡಲು ಕ್ಷೇತ್ರದಿಂದ 40,000ಕ್ಕೂ ಅಧಿಕ ಮಂದಿ ಬಂದಿದ್ದರು. ಆದರೆ, ಚುನಾವಣೆಯಲ್ಲಿ ಅವರ ಪರ ಮತ ಚಲಾಯಿಸಿದವರ ಸಂಖ್ಯೆ 10,000ವನ್ನೂ ತಲುಪಿರಲಿಲ್ಲ.

ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು 1999ರಲ್ಲಿ ತನ್ನ ಕೊನೆಯ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿ 3ನೇ ಸ್ಥಾನ ಪಡೆದಿದ್ದರು. ಮರು ವರ್ಷ ಅವರು ನಿಧನರಾದರು. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜೆ.ಎಚ್‌. ಪಟೇಲ್‌ ಪುತ್ರ ಮಹಿಮ ಅವರಿಗೆ 10,000ಕ್ಕೂ ಅಧಿಕ ಮತಗಳ ಗೆಲುವು ದೊರೆತಿತ್ತು. ಕಾಂಗ್ರೆಸ್‌ನ ವಡ್ನಾಳ್‌ ರಾಜಣ್ಣ, ಬಿಜೆಪಿಯ ಮಾಡಾಳ್‌ ವಿರೂಪಾಕ್ಷಪ್ಪ ನಂತರದ ಸ್ಥಾನಗಳಿಗೆ ತೃಪ್ತರಾಗಿದ್ದರು.

2008ರ ಚುನಾವಣೆಯ ಹೊತ್ತಿಗೆ ಮಹಿಮ ಪಟೇಲ್‌ ಅವರು ಸ್ವರ್ಣಯುಗ ಪಾರ್ಟಿ ಸ್ಥಾಪಿಸಿದ್ದರು. ‘ಸರಳ ಚುನಾವಣೆ ನಡೆಯಬೇಕು. ಯಾರೂ ಯಾವುದೇ ಆಮೀಷ ಒಡ್ಡಬಾರದು. ಯಾರೂ ಆಮೀಷಕ್ಕೆ ಒಳಗಾಗಬಾರದು. ಇಂಥ ಮಾದರಿ ಚುನಾವಣೆ ನಡೆಯಬೇಕು. ಇದುವೇ ಪಕ್ಷದ ಸಿದ್ಧಾಂತ’ ಎಂಬ ಧ್ಯೇಯದೊಂದಿಗೆ ರಾಜ್ಯದ 32 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದರಲ್ಲಿ ಚನ್ನಗಿರಿಯಿಂದ ಸ್ವತಃ ತಾವೇ ನಾಮಪತ್ರ ಸಲ್ಲಿಸಿದ್ದರೆ, ಹರಿಹರದಿಂದ ತೇಜಸ್ವಿ ಪಟೇಲ್‌ ಸ್ಪರ್ಧಿಸಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಹಿಮ ಪಟೇಲ್‌ ಅವರು ಸೂಳೆಕೆರೆ ಸಿದ್ದೇಶ್ವರ ದೇವಸ್ಥಾನದ ಬಳಿ ಸಿದ್ಧನಾಲಾ ಪಕ್ಕದಲ್ಲಿ ಉಪವಾಸ ಸತ್ಯಾಗ್ರಹ ಕೂತಿದ್ದರು. 27 ದಿನಗಳ ಈ ಸತ್ಯಾಗ್ರಹದಲ್ಲಿ 9 ದಿನ ನೀರು, ನಿಂಬೆ ಮತ್ತು ಜೇನುತುಪ್ಪ, ಮತ್ತೆ 9 ದಿನ ಎಳನೀರು ಮಾತ್ರ, ಉಳಿದ 9 ದಿನ ಉಪ್ಪು, ಖಾರವಿಲ್ಲದ ಮಜ್ಜಿಗೆ ಇಷ್ಟನ್ನೇ ಸೇವಿಸಿದ್ದರು.

ಚನ್ನಗಿರಿ ಕ್ಷೇತ್ರದಿಂದ ಅವರ ಅಭಿಮಾನಿಗಳು ತಂಡೋಪತಂಡವಾಗಿ ಟ್ರ್ಯಾಕ್ಟರ್‌ ಮತ್ತಿತರ ವಾಹನಗಳಲ್ಲಿ ಬಂದು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ, ರಾಜಕೀಯದ ಬಗ್ಗೆ ಚರ್ಚಿಸಿ ಹೋಗಿದ್ದರು. ಹಾಗೆ ಬಂದವರ ಸಂಖ್ಯೆ 40,000 ದಾಟಿತ್ತು. ಬಂದವರಿಗೆಲ್ಲ ಪಾನಕ ನೀಡಲಾಗಿತ್ತು. ‘ಎಲ್ಲರೂ ಹೆಂಡ ಕುಡಿಸುತ್ತಿದ್ದರೆ ನೀವು ಪಾನಕ ಕುಡಿಸುತ್ತೀದ್ದೀರಿ’ ಎಂದು ಕೆಲವರು ಹಾಸ್ಯಚಟಾಕಿ ಹಾರಿಸಿ ಹೋಗಿದ್ದರು.

ಚುನಾವಣೆ ಮುಗಿದು ಫಲಿತಾಂಶ ಬಂದಾಗ ಬಿಜೆಪಿಯ ಮಾಡಾಳ್‌ ವಿರೂಪಾಕ್ಷಪ್ಪ 39,526 ಮತ ಪಡೆದು ಗೆದ್ದಿದ್ದರೆ, ಕಾಂಗ್ರೆಸ್‌ನ ವಡ್ನಾಳ್‌ ರಾಜಣ್ಣ ಕೇವಲ 993 ಮತಗಳ ಅಂತರದಿಂದ ಸೋತಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹೊದಿಗೆರೆ ರಮೇಶ್‌ ಅವರಿಗೂ 21,499 ಮತಗಳು ಬಿದ್ದಿದ್ದವು. ಬದಲಾವಣೆಗಾಗಿ ಚುನಾವಣೆ ಎಂದು ಉಪವಾಸ ಸತ್ಯಾಗ್ರಹ ಮಾಡಿದ್ದ ಮಹಿಮ ಪಟೇಲ್‌ಗೆ 9,519 ಮತಗಳಷ್ಟೇ ಬಿದ್ದಿದ್ದವು.

ಸದ್ಯ ಜೆಡಿಯು ಪಕ್ಷದಲ್ಲಿ ಇರುವ ಮಹಿಮ ಪಟೇಲ್ ಈಗಲೂ ರಾಜಕೀಯದಲ್ಲಿ ಸರಳತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಜನರು ತಲೆತೂಗುತ್ತಿದ್ದಾರೆ. ಆದರೆ, ಅದು ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ.

‘ಜನರಿಗೆ ಸರಿ, ತಪ್ಪು ಗೊತ್ತು’

ಜನರು ಏನೂ ಅರಿಯದವರಲ್ಲ. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದು ಗೊತ್ತು. ಆದರೆ, ಸರಿಯಾದುದನ್ನು ಆಯ್ಕೆ ಮಾಡಲು ಆಮೀಷಗಳು ಬಿಡುತ್ತಿಲ್ಲ. ಜಾತಿ, ಧರ್ಮ, ಹಣ, ಹೆಂಡಗಳು ಅವರನ್ನು ಸ್ವತಂತ್ರವಾಗಿ ಮತ ಚಲಾಯಿಸಲು ಬಿಡುತ್ತಿಲ್ಲ. ಅವೆಲ್ಲದರ ಬಂಧನದಿಂದ ಮುಕ್ತವಾದ ದಿನ ಉತ್ತಮ ಚುನಾವಣಾ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಮಹಿಮ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪವಾಸ ಸತ್ಯಾಗ್ರಹ ಕುಳಿತು ಚುನಾವಣೆ ಎದುರಿಸಿದ್ದರ ಬಗ್ಗೆ ಹೆಮ್ಮೆ ಇದೆ. ಅದರ ಬಗ್ಗೆ ಯಾವುದೇ ಬೇಸರ ಇಲ್ಲ. ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ ಎಲ್ಲ ಜನರ ಮನದಾಳದಲ್ಲಿದೆ. ಅವರು ಆಮಿಷಗಳ ಬಂಧನದಿಂದ ಒಂದಲ್ಲ ಒಂದು ದಿನ ಬಿಡುಗಡೆಯಾಗಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸುತ್ತಾರೆ’ ಎಂದು ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT