ಹಾಸ್ಟೆಲ್‌ಗಳಿಗೆ ಮೂಲಸೌಲಭ್ಯಕ್ಕಾಗಿ ಎಬಿವಿಪಿ ಪ್ರತಿಭಟನೆ

ದಾವಣಗೆರೆ: ರಾಜ್ಯದ ಎಸ್.ಸಿ, ಎಸ್.ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟಿಸಿದರು.
ಡಿ.ಆರ್.ಆರ್. ಪಾಲಿಟೆಕ್ನಿಕ್ ಕಾಲೇಜಿನಿಂದ ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳು, ಜಯದೇವ ವೃತ್ತದಲ್ಲಿ ಪ್ರತಿಭಟಿಸಿದರು. ಬಳಿಕ ಉಪ ವಿಭಾಗಾಧಿಕಾರಿ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು.
ಮೂಲಸೌಲಭ್ಯಗಳಿಂದ ವಂಚಿತ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಶೌಚಾಲಯ, ಗುಣಮಟ್ಟದ ಆಹಾರ, ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ದೂರಿದರು.
ಪ್ರತಿ ತಿಂಗಳು ನಿಗದಿಪಡಿಸಿರುವ ಆಹಾರ ವೆಚ್ಚವನ್ನು ₹ 2000ಕ್ಕೆ ಹೆಚ್ಚಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಹಾಸ್ಟೆಲ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ಹಾಸ್ಟೆಲ್‌ಗಳಿಗೆ ವಾರ್ಡನ್, ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಹಾಸಿಗೆ, ಹೊದಿಕೆ, ದಿಂಬು, ಪುಸ್ತಕಗಳನ್ನು ಸರಿಯಾಗಿ ನೀಡಬೇಕು ಎಂದು ಹೇಳಿದರು.
ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು. ಹಾಸ್ಟೆಲ್‌ನಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಜನಾರ್ದನ್, ಶಶಾಂಕ್, ಶರತ್, ಜಿಲ್ಲಾ ಸಂಚಾಲಕ ರಾಮ್‌ಕುಮಾರ್, ಪ್ರದೀಪ್, ರಾಕೇಶ್ ಹಾಜರಿದ್ದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All