ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ವಲಯ: ಬೇಕಿದೆ ಸುರಕ್ಷತೆಯ ಅಭಯ

ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳು; ಸವಾರರಿಗೂ ಬೇಕು ಅರಿವು
Last Updated 13 ಜೂನ್ 2022, 8:43 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಅವೈಜ್ಞಾನಿಕ ಹಂಪ್‌ಗಳು, ರಸ್ತೆಯಲ್ಲಿನ ತಗ್ಗು– ಗುಂಡಿಗಳು, ಅಪೂರ್ಣ ರಸ್ತೆ ಅಭಿವೃದ್ಧಿ ಕಾಮಗಾರಿ, ಸಂಚಾರ ಸೂಚನಾ ಫಲಕಗಳ ಕೊರತೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

2017–2020ರ ಅವಧಿಯ 4 ವರ್ಷಗಳಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಒಟ್ಟು 946 ಜನರು ಮೃತಪಟ್ಟಿದ್ದಾರೆ.

ಬಹುತೇಕ ಗ್ರಾಮಗಳಲ್ಲಿ ರಸ್ತೆ, ರಸ್ತೆ ತಿರುವು, ಅಪಘಾತ ವಲಯ, ಹಂಪ್ಸ್‌ ಸೇರಿದಂತೆ ಯಾವುದರ ಕುರಿತೂ ಬಹುತೇಕ ಕಡೆ ಮಾರ್ಗಸೂಚಿ ಫಲಕ ಅಳವಡಿಸಿಲ್ಲ. ಅಭಿವೃದ್ಧಿ ಕಾಮಗಾರಿಗಾಗಿ ಗುಂಡಿಗಳನ್ನು ತೋಡಿರುವುದು, ಅವೈಜ್ಞಾನಿಕ ರಸ್ತೆ ವಿಭಜಕಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಆದರೂ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನ.

ಸರ್ವೀಸ್‌ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಸೂಚನಾ ಫಲಕ ಇಲ್ಲದಿರುವುದು, ಅವೈಜ್ಞಾನಿಕ ಮೇಲ್ಸೇತುವೆ, ತಿರುವು, ಹಂಪ್ಸ್‌ಗಳಲ್ಲಿ ಚಾಲಕರು ವೇಗವಾಗಿ ವಾಹನ ಚಲಾಯಿಸುವುದು, ಕೆರೆ– ಕಟ್ಟೆಗಳಿಗೆ ತಡೆಗೋಡೆಗಳೇ ಇಲ್ಲದಿರುವುದು ಒಳಗೊಂಡಂತೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ ಎನ್ನುವುದು ಅಂಕಿ–ಅಂಶಗಳಿಂದ ದಾಖಲಾಗುತ್ತಿದೆ.

ನಗರದ ಬಿಎಸ್‌ಎನ್‌ಎಲ್ ಜಂಕ್ಷನ್‌, ಹದಡಿ ರಸ್ತೆ, ಎಂಸಿಸಿ ‘ಎ’ ಬ್ಲಾಕ್ ತಿರುವು, ಬಾಡಾ ಕ್ರಾಸ್‌, ಶಾರದಾಂಬ ಸರ್ಕಲ್‌ ಸೇರಿ ಹಲವು ಸ್ಥಳಗಳಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತಿವೆ.ಹಲವೆಡೆ ರಸ್ತೆಯ ತಿರುವಿನ ಕಡೆ (ಯೂ ಟರ್ನ್) ಗ್ರಿಲ್ ಅಳವಡಿಸಿಲ್ಲ. ಪೊಲೀಸ್‌ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 34 ಅಪಘಾತ ವಲಯಗಳನ್ನು ಗುರುತಿಸಲಾಗಿದೆ.

ದಾವಣಗೆರೆ ಉತ್ತರ ವಿಭಾಗದಲ್ಲೇ ಕಳೆದ ಮೂರು ವರ್ಷಗಳಲ್ಲಿ 134 ಜನರು ಗಂಭೀರ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟಿದ್ದಾರೆ. 2020ರಲ್ಲಿ 60, 2021ರಲ್ಲಿ 50, 2022ರ ಜೂನ್‌ವರೆಗೆ 24 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದು ಅಧಿಕಾರಿಗಳ ಮಾಹಿತಿ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಅಪಘಾತದಲ್ಲಿನ ಮರಣಗಳ ಸಂಖ್ಯೆಯನ್ನು ಶೇ 10ರಷ್ಟು ತಗ್ಗಿಸಬೇಕೆಂಬ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ನಡೆಸಿದರೂ ನಿರೀಕ್ಷಿತ ಫಲ ಕೊಟ್ಟಿಲ್ಲ.

ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಅವುಗಳನ್ನು ಅಭಿವೃದ್ಧಿ ಪಡಿಸಬೇಕು. ವೇಗ ನಿಯಂತ್ರಕ ಅಳವಡಿಸಬೇಕು. ಕೆರೆಗಳು ಇರುವ ಕಡೆ ತಡೆಗೋಡೆ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೂ ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಬಾಡಾ ಕ್ರಾಸ್‌ನಲ್ಲಿ ಈಚೆಗೆ ಪಾದಚಾರಿಯೊಬ್ಬರಿಗೆ ವಾಹನ ಡಿಕ್ಕಿ ಹೊಡೆದಿತ್ತು. ನಗರದ ಹಲವೆಡೆ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ವ್ಯಾಪಾರಿ ಸುರೇಶ್‌.

ಗ್ರಾಮೀಣ ರಸ್ತೆಗಳು ಅಪಾಯಕಾರಿ: ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲಿ ಸೂಚನಾ ಫಲಕಗಳ ಕೊರತೆ ಎದ್ದು ಕಾಣುತ್ತದೆ. ರಸ್ತೆಯವರೆಗೆ ಬೆಳೆದು ನಿಂತ ಗಿಡಗಂಟಿಗಳಿಂದ ಮುಂದಿನ ದಾರಿ ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಕಿರಿದಾದ ರಸ್ತೆಯಲ್ಲಿ ಮತ್ತು ಕೆರೆ, ಕಟ್ಟೆಗಳ ಏರಿಯಲ್ಲಿ ಇರುವ ತಿರುವುಗಳಲ್ಲಿ ಅಪಘಾತ ತಡೆಯುವ ವ್ಯವಸ್ಥೆ ಇಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸರಸ್ವತಿ ನಗರದ ನವೀನ್‌.

‘ದಾವಣಗೆರೆಯ ಬಿಎಸ್‌ಎನ್ಎಲ್‌ ರಸ್ತೆ, ಬಾಡಾ ಕ್ರಾಸ್‌ನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಎಂಸಿಸಿ ‘ಎ’ ಬ್ಲಾಕ್‌ನಲ್ಲಿ ತಿರುವಿನಲ್ಲಿ ಕಾಂಪೌಂಡ್‌ ನಿರ್ಮಿಸಿರುವುದರಿಂದ ಆ ಕಡೆಯಿಂದ ಬರುವವರು, ಈ ಕಡೆಯಿಂದ ಬರುವವರಿಗೆ ತಿಳಿಯುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದರು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌.

ಸವಾರರು ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್‌ಗಳನ್ನು ಅಳವಡಿಸಿಕೊಂಡು ಬರುವ ಕಾರಣ ರಾತ್ರಿ ಹೊತ್ತು ಕಣ್ಣಿಗೆ ಕುಕ್ಕಿ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಕೆಲವೆಡೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಗ್ನಲ್‌ಗಳನ್ನು ದುರಸ್ತಿ ಮಾಡಬೇಕು. ಅಲ್ಲದೇ ಕೆಲ ಜಂಕ್ಷನ್‌ನ ಸಿಗ್ನಲ್‌ಗಳಲ್ಲಿ ಕಡಿಮೆ ಅವಧಿ ನಿಗದಿಮಾಡಲಾಗಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆ ದಾಟಲು ಅಸಾಧ್ಯವಾಗಿದೆ. ಇನ್ನು ಕೆಲವೆಡೆ ರಸ್ತೆ ದಾಟಲು ಕೇವಲ ಎಂಟೇ ಸೆಕೆಂಡ್‌ ಮೀಸಲಿಡಲಾಗಿದೆ.ಇಷ್ಟು ಕಡಿಮೆಅವಧಿಯಲ್ಲಿ ಪಾದಚಾರಿಗಳು ರಸ್ತೆ ದಾಟಲಾಗದ್ದರಿಂದ ಸಮಯ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

‘ಹದಡಿ ರಸ್ತೆಯ ಐಟಿಐ ಕಾಲೇಜು ಬಳಿ, ಜಯದೇವ ವೃತ್ತದ ಬಳಿ ಶಂಕರ ಮಠ ಹಾಗೂ ಗಾಂಧಿ ಸರ್ಕಲ್‌ ಕಡೆಗಳಿಂದ ವಾಹನಗಳು ಒಮ್ಮೆಲೇ ಬರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು ಸಾಮಾಜಿಕ ಕಾರ್ಯಕರ್ತ ಮಣಿಕಂಠ.

‘ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ಅಜಾಗರೂಕತೆಗೆ ಸಾಕ್ಷಿ. ಜನರು ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು. ಅರಿವು ಮೂಡಿಸಿದರೂ ಸವಾರರು ಜಾಗೃತರಾಗುತ್ತಿಲ್ಲ. ಕೆಲವರು ವೇಗವಾಗಿ, ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಸಂಚಾರ ನಿಯಮಗಳನ್ನು ನಿರ್ಲಕ್ಷಿಸುತ್ತಾರೆ. ಬೆಳಗಿನ ಅವಧಿಗೆ ಹೋಲಿಸಿದರೆ, ರಾತ್ರಿ ಅಪಘಾತ ಸಂಭವಿಸುವ ಪ್ರಮಾಣ ಹೆಚ್ಚು’ ಎಂದು ‌ಹೇಳುತ್ತಾರೆ ಸಂಚಾರ ಠಾಣೆ ಪೊಲೀಸ್‌ ಅಧಿಕಾರಿಗಳು.

* ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ತ್ರಿಬಲ್‌ ರೈಡಿಂಗ್‌, ಹೆಲ್ಮೆಟ್‌ ಇಲ್ಲದ ಪ್ರಕರಣ ಚಲಾಯಿಸುವುದು ಸೇರಿ ಹಲವು ಪ್ರಕಣಗಳಲ್ಲಿ ದಂಡ ವಿಧಿಸಲಾಗಿದೆ. ರಸ್ತೆ ಸುರಕ್ಷತಾ ಸಪ್ತಾಹಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ.

–ಪ್ರವೀಣ್‌, ಪಿಎಸ್ಐ, ಉತ್ತರ ಸಂಚಾರ ಠಾಣೆ

* ನಗರ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಪ್ಪಿಸಲು ರಸ್ತೆಗಳಲ್ಲಿವೇಗ ನಿಯಂತ್ರಕ ಅಳವಡಿಸಬೇಕು. ತಿರುವುಗಳಲ್ಲಿ ಸೂಚನಾ ಫಲಕ, ಗ್ರಿಲ್‌ಗಳನ್ನು ಅಳವಡಿಸಬೇಕು.

–ಎಂ.ಜಿ. ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತ

* ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪ ದಶಕಗಳಿಂದ ಇದೆ. ಶೀಘ್ರ ಮೇಲ್ದರ್ಜೆಗೇರಿಸಬೇಕು.

–ನಾಗರಾಜ್ ಭಂಡಾರಿ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ, ಹರಿಹರ

ಜಿಲ್ಲೆಯ ಅಪಘಾತ ವಲಯಗಳು

ದಾವಣಗೆರೆ ಆವರಗೆರೆ– ಉತ್ತಮ ಚಂದ್‌ ಬಡಾವಣೆ, ಎಸ್‌.ಎಸ್‌. ಆಸ್ಪತ್ರೆಯಿಂದ ಕೆಳಸೇತುವೆ, ಹೊಸಕುಂದವಾಡ ಕ್ರಾಸ್‌, ಜಯದೇವ ವೃತ್ತದಿಂದ ಆರೈಕೆ ಆಸ್ಪತ್ರೆ, ಹೊನ್ನೂರು ಗೊಲ್ಲರಹಟ್ಟಿಯಿಂದ ಮಲ್ಲಶೆಟ್ಟಿಹಳ್ಳಿ ಯೂ ಟರ್ನ್‌, ಕೊಗ್ಗನೂರು ಭಾರತ್‌ ಡಾಬಾ, ಆನಗೋಡು ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ನಿಂದ ಹುಲುವರ್ತಿ ಕ್ರಾಸ್‌.

ಹರಿಹರ ತಾಲ್ಲೂಕಿನ ಬ್ಯಾಲದ ಹಳ್ಳಿ ಸೇತುವೆಯಿಂದ ಬ್ಯಾಲದ ಹಳ್ಳಿ ಕ್ರಾಸ್‌, ಮಲೇಬೆನ್ನೂರಿನ ಕೋಮಾರನಹಳ್ಳಿಯಿಂದ ಕೋಮಾರನಹಳ್ಳಿ ಕಣಿವೆ, ಹೊನ್ನಾಳಿಯ ಅರಕೆರೆ ಕ್ರಾಸ್‌, ನ್ಯಾಮತಿಯ ಕುರುವ ಕ್ರಾಸ್‌, ಚನ್ನಗಿರಿಯ ಬೆಂಕಿಕೆರೆ ಕಣಿವೆಯಿಂದ ಕರಿಯಮ್ಮನ ದೇವಾಲಯ, ಜಗಳೂರಿನ ದೊಣ್ಣೆಹಳ್ಳಿ ಕ್ರಾಸ್‌–ಮಾಚಿಕೆರೆ ಕ್ರಾಸ್‌ ಸೇರಿ ಜಿಲ್ಲೆಯಲ್ಲಿ 34 ಸ್ಥಳಗಳನ್ನು ಮುಖ್ಯ ಅಪಘಾತ ವಲಯಗಳನ್ನಾಗಿ ಗುರುತಿಸಲಾಗಿದೆ. ಆದರೆ ಕೆಲವೆಡೆ ಈ ಕುರಿತ ಫಲಕಗಳಿಲ್ಲ.

ಪರವಾನಗಿ ಇಲ್ಲದೇ ಸವಾರಿ ತರುವ ಕುತ್ತು

18 ವರ್ಷದೊಳಗಿನ ಬಾಲಕರು ಪರವಾನಗಿ ಇಲ್ಲದೇ ಬೇಕಾಬಿಟ್ಟಿ ಬೈಕ್ ಓಡಿಸುವುದು ಎಲ್ಲೆಡೆ ಸಾಮಾನ್ಯವಾಗಿದೆ. ನಗರದಲ್ಲಿ ದಟ್ಟಣೆ ನಡುವೆಯೂ ಅತಿ ವೇಗವಾಗಿ ಬೈಕ್‌ ಚಲಾಯಿಸುವ ಕಾರಣ ಹೆಚ್ಚಿನ ಅಪಘಾತಗಳು ಸಂಭಿಸುತ್ತಿವೆ. ಕರ್ಕಶ ಶಬ್ದ ಮಾಡುತ್ತಾ ಬೈಕ್‌ ಓಡಿಸುವ ಬಾಲಕರು ಅಜಾಗರೂಕತೆಯಿಂದ ವರ್ತಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಮಕ್ಕಳ ಪಾಲಕರು, ಪೊಲೀಸರು ಮುಂದಾಗಬೇಕು ಎಂಬುದು ಜನರ ಒತ್ತಾಯ.

ನಡೆಯುತ್ತಿದೆ ಜಾಗೃತಿ ಕಾರ್ಯಕ್ರಮ

ಎನ್‌.ಕೆ.ಆಂಜನೇಯ

ಹೊನ್ನಾಳಿ: ತಾಲ್ಲೂಕಿನ ಹಲವು ಸ್ಥಳಗಳನ್ನು ಅಪಘಾತ ವಲಯಗಳನ್ನಾಗಿ ಗುರುತಿಸಲಾಗಿದೆ. ಅಪಘಾತ ತಡೆಗೆ ಪೊಲೀಸ್‌ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಹೊನ್ನಾಳಿಯ ಗೊಲ್ಲರಹಳ್ಳಿ ಶ್ರೀನಿವಾಸ್ ಪೆಟ್ರೋಲ್ ಬಂಕ್‌ನಿಂದ ಶಂಕರ್ ರೈಸ್ ಮಿಲ್ ವರೆಗೆ, ಹರಳಹಳ್ಳಿಯಿಂದ ದಿಡಗೂರು ( ಹೊನ್ನಾಳಿಯಿಂದ ಶಿವಮೊಗ್ಗ ಮುಖ್ಯ ರಸ್ತೆ ) ಮಧ್ಯಭಾಗದಲ್ಲಿ, ಕುಂದೂರು ಗ್ರಾಮದಿಂದ ಮಲೇಕುಂಬಳೂರು ರಸ್ತೆ, ಸಾಸ್ವೆಹಳ್ಳಿ ಭಾಗದ ಕುಳಗಟ್ಟಿ ಕ್ರಾಸ್‌ನಿಂದ ಲಿಂಗಾಪುರ ರಸ್ತೆ, ಹೊನ್ನಾಳಿಯಿಂದ ಶಿಕಾರಿಪುರಕ್ಕೆ ಹೋಗುವ ರಸ್ತೆ ಆರಂಭದಲ್ಲಿ ಎಚ್. ಕಡದಕಟ್ಟೆ ಹ್ಯಾಂಡ್ ಪೋಸ್ಟ್.. ಇವು ತಾಲ್ಲೂಕಿನ ಮುಖ್ಯ ಅಪಘಾತ ವಲಯಗಳು.

ಹೊನ್ನಾಳಿ ನಗರದ ಟಿ.ಬಿ. ವೃತ್ತದಿಂದ ವಡ್ಡಿನಕೆರೆ ಹಳ್ಳದವರೆಗಿನ ರಸ್ತೆಯನ್ನು ಅಪಘಾತ ವಲಯ ಎಂದು ಹಲವು ಮಾನದಂಡಗಳ ಆಧಾರದ ಮೇಲೆ ಗುರುತಿಸಲಾಗಿದೆ ಎಂದು ಸಿಪಿಐ ಟಿ.ವಿ. ದೇವರಾಜ್ ತಿಳಿಸಿದರು.

ನಾಲ್ಕು ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ:

ತಾಲ್ಲೂಕಿನಲ್ಲಿ 2018ರಲ್ಲಿ 31, 2019ರಲ್ಲಿ 27, 2020ರಲ್ಲಿ 22, 2021ರಲ್ಲಿ 33 , 2022ರ ಮೇ ತಿಂಗಳವರೆಗೆ ಒಟ್ಟು 11 ಜನ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಾಲ್ಲೂಕಿನ ದಿಡಗೂರು ಹರಳಹಳ್ಳಿ ಮತ್ತು ಅರಕೆರೆ ಕಾಲೊನಿ ಭಾಗದಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಅಪಘಾತ ವಲಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ರಸ್ತೆ ಸುರಕ್ಷತಾ ಸಪ್ತಾಹ, ರಸ್ತೆಗಳ ಮಧ್ಯ ವೈಜ್ಞಾನಿಕ ಹಂಪ್ಸ್‌ಗಳನ್ನು ಅಳವಡಿಸುವುದು, ಹೆಚ್ಚು ಅಪಘಾತ ಆಗುವ ಸ್ಥಳದಲ್ಲಿ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸುವುದು. ಮಾಸಾಚರಣೆ ಮೂಲಕ ಅಪಘಾತದ ಕುರಿತು ಅರಿವು ಮೂಡಿಸುವುದು, ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಅರಿವು ಮೂಡಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸುವುದು,ರಸ್ತೆ ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದೂ ಸೇರಿ ಹಲವು ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಹಾಕಿಕೊಳ್ಳಲಾಗುತ್ತಿದೆ ಎಂದು ಸಿಪಿಐ ಟಿ.ವಿ. ದೇವರಾಜ್ ಮಾಹಿತಿ ನೀಡಿದರು.

ಅಪ‍ಘಾತ ವಲಯಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ ದಿನ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ವಾಹನಗಳ ದಟ್ಟಣೆಯಲ್ಲಿ ಚಾಲಕರ ಅಜಾಗರೂಕತೆಯಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿರುತ್ತವೆ. ತಾಲ್ಲೂಕಿನಲ್ಲಿ ಹಲವು ಪ್ರದೇಶಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ.

ಪಟ್ಟಣದ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–13 ಹಾಗೂ ಬೀರೂರು-ಸಮ್ಮಸಗಿ ಬಳಿ ರಾಜ್ಯ ಹೆದ್ದಾರಿ– 75 ಹಾದು ಹೋಗಿದೆ.ಈ ಸ್ಥಳವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ಆದರೆ, ಇಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

ಕಾಲೇಜಿನ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನು ವಿಸ್ತರಣೆ ಮಾಡಿ, ದೊಡ್ಡದಾದ ವೃತ್ತವನ್ನು ನಿರ್ಮಾಣ ಮಾಡುವ ಮೂಲಕ ಅಫಘಾತಗಳಿಗೆ ಕಡಿವಾಣ ಹಾಕಬೇಕು ಎಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ ಎಂದು ಸಿಪಿಐ ಕೆ.ಬಿ. ಮಧು ತಿಳಿಸಿದರು.

ರಸ್ತೆ ಸುರಕ್ಷತಾ ವಲಯ ಯೋಜನೆ ಅಡಿ ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳ ಮೇಲೆ ಹಾದು ಹೋಗಿರುವ ರಸ್ತೆಗಳ ವಿಸ್ತರಣೆ ಕಾರ್ಯ ನಡೆದಿದೆ. ಪಟ್ಟಣದ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಓಡಾಡಲು ₹ 2 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕೈಗೊಳ್ಳಲಾಗಿದೆ. ಮೂರು ತಿಂಗಳಲ್ಲಿ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನು ವಿಸ್ತರಣೆ ಮಾಡಲು ₹ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.ಹೆದ್ದಾರಿ ಮಧ್ಯೆ ರಸ್ತೆ ವಿಭಜಕದಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯವೂ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ಮಾಹಿತಿ ನೀಡಿದರು.

ಈ ಕಾಲೇಜಿನ ಮುಂಭಾಗವು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಕೂಡುವ ಸ್ಥಳವಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ. ಈ ಸ್ಥಳ ಕಿರಿದಾಗಿದ್ದು, ವ್ಯವಸ್ಥಿತವಾದ ವೃತ್ತ ಇಲ್ಲದೇ ಇರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒಂದು ಮೇಲ್ಸೇತುವೆ ಹಾಗೂ ವೃತ್ತ ನಿರ್ಮಾಣಕ್ಕಾಗಿ ₹ 4 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಶ್ರೀನಿವಾಸ್ ತಿಳಿಸಿದರು.

ಹರಿಹರಕ್ಕೆ ಬೇಕಿದೆ ರಿಂಗ್ ರಸ್ತೆ

ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನಲ್ಲಿ ಆಗಾಗ ರಸ್ತೆ ಅಪಘಾತಗಳು ಸಂಭಿಸುತ್ತಿದ್ದು, ರಿಂಗ್‌ ರಸ್ತೆ ಬೇಕು ಎಂಬ ಕೂಗು ಎದ್ದಿದೆ.

ನಗರದೊಳಗೆ ಹೊಸಪೇಟೆ-ಶಿವಮೊಗ್ಗ, ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಗಳು, ಹೊರವಲಯದಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿವೆ. ತಾಲ್ಲೂಕಿನಲ್ಲಿ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಂತರ 42 ಕಿ.ಮೀ., ಬೀರೂರು-ಸಮ್ಮಸಗಿ ಹೆದ್ದಾರಿಯ ಅಂತರ 5 ಕಿ.ಮೀ. ಹಾಗೂ 8 ಕಿ.ಮೀ.ವರೆಗೆರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ.

ಅಪಘಾತದ ದೃಷ್ಟಿಯಿಂದ ಹೊಸಪೇಟೆ ಶಿವಮೊಗ್ಗ ಹೆದ್ದಾರಿ ‘ಕಿಲ್ಲರ್ ಹೈವೇ’ ಎಂದೇ ಜನಜನಿತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹರನಗಹಳ್ಳಿ ಕ್ರಾಸ್ ಮತ್ತು ಹನಗವಾಡಿ ಕ್ರಾಸ್ ಮತ್ತು ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ನಾಗೇನಹಳ್ಳಿ ಕ್ರಾಸ್ ಹೀಗೆ ಮೂರು ಹೆದ್ದಾರಿಗಳಲ್ಲಿ ಒಟ್ಟು ಏಳು ಅಪಘಾತ ವಲಯಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ.

ಹೊಸಪೇಟೆ- ಶಿವಮೊಗ್ಗ ಹೆದ್ದಾರಿ ತಾಲ್ಲೂಕಿನಲ್ಲಿ 42 ಕಿ.ಮೀ. ಉದ್ದ, ನಗರಸಭೆ ವ್ಯಾಪ್ತಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಈ ಹೆದ್ದಾರಿಗೆ ವಿಭಜಕವಿದೆ. ಉಳಿದ ಭಾಗದಲ್ಲಿ ಒಂದೇ ರಸ್ತೆ ಇದೆ. ಕಲ್ಯಾಣ ಕರ್ನಾಟಕದಿಂದ ಮಲೆನಾಡು, ಕರಾವಳಿ ಭಾಗಕ್ಕೆ ಇದು ಹತ್ತಿರದ ಹೆದ್ದಾರಿ ಆಗಿರುವುದರಿಂದ ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳ ದಟ್ಟಣೆ ಅತ್ಯಧಿಕ.

ಬೇಕು ರಿಂಗ್ ರಸ್ತೆ: ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯು ನಗರದ ವ್ಯಾಪ್ತಿಯಲ್ಲಿ 8 ಕಿ.ಮೀ. ಇದೆ. ಇದೇ ರಸ್ತೆಯಲ್ಲಿ ಹಲವು ಶಾಲೆಗಳಿವೆ. ರಿಂಗ್ ರಸ್ತೆ ಇಲ್ಲದ್ದರಿಂದ ಅನವಶ್ಯಕವಾಗಿ ಬೇರೆ ನಗರಗಳಿಗೆ ಹೋಗುವ ವಾಹನಗಳು ನಗರದೊಳಗೆ ಹಾದು ಹೋಗಬೇಕಿದೆ. ರಿಂಗ್ ರಸ್ತೆ ನಿರ್ಮಿಸಿದರೆ ಈ ವಾಹನಗಳು ನಗರದೊಳಗೆ ಬರುವುದು ತಪ್ಪುತ್ತದೆ. ರಿಂಗ್ ರಸ್ತೆ ಆಗದಿದ್ದರೆ ಹೆದ್ದಾರಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು. ಶಾಲೆಯ ಅವಧಿಯಲ್ಲಿ ಸರಕು ಸಾಗಣೆ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.

ನಗರದಲ್ಲಿ ರಿಂಗ್ ರಸ್ತೆ ಹಾಗೂ ಹೆದ್ದಾರಿಯನ್ನು ನಾಲ್ಕು ಪಥವಾಗಿ ಅಭಿವೃದ್ಧಿಪಡಿಸಬೇಕು. ಆಗ ಅಮೂಲ್ಯ ಜೀವ ರಕ್ಷಣೆ ಸಾಧ್ಯ ಎನ್ನುತ್ತಾರೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT