ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಅಕ್ರಮ ಮರಳು ಸಾಗಾಟಕ್ಕೆ ಬಿದ್ದಿದೆ ಕಡಿವಾಣ

‘ಪ್ರಜಾವಾಣಿ ಫೋನ್‌ ಇನ್’ ಕಾರ್ಯಕ್ರಮಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌
Last Updated 19 ಏಪ್ರಿಲ್ 2022, 4:10 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಶೇ 95ರಷ್ಟು ನಿಯಂತ್ರಿಸಲಾಗಿದೆ. ಹೊರ ಜಿಲ್ಲೆಗಳಿಗೆ ಮಾತ್ರವಲ್ಲ, ಒಂದು ತಾಲ್ಲೂಕಿನಿಂದ ಇನ್ನೊಂದು ತಾಲ್ಲೂಕಿಗೆ ಅಕ್ರಮವಾಗಿ ಮರುಳು ಸಾಗಾಟವಾಗದಂತೆ ಕಡಿವಾಣ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹೇಳಿದರು.

ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಕಾನೂನು ಕ್ರಮಗಳನ್ನು ‘ಪ್ರಜಾವಾಣಿ ಫೋನ್ ಇನ್‌’ ಕಾರ್ಯಕ್ರಮದಲ್ಲಿ ಅವರು ವಿವರಿಸಿದರು.

ಕೆಲವರು ಮನೆ ಕಟ್ಟಲು ಪಕ್ಕದ ನದಿ, ಹೊಳೆಗಳಿಂದ ಮರಳು ತೆಗೆದುಕೊಂಡು ಹೋಗುವಂಥ ಪ್ರಕರಣಗಳು ನಡೆಯುತ್ತಿವೆ. ಅಕ್ರಮ ಮರಳುಗಾರಿಕೆ, ಸಾಗಾಟದಲ್ಲಿ ಅಧಿಕಾರಿಗಳು ಒಳಗೊಳ್ಳುವುದನ್ನು ತಡೆಗಟ್ಟಲಾಗಿದೆ. ಅಧಿಕಾರಿಗಳ ಪಾತ್ರ ಕಂಡು ಬಂದರೆ ಮೊದಲು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಮರಳನ್ನು ಜೇಬಲ್ಲಿ ಇಟ್ಟುಕೊಂಡು ಹೋಗಲು ಸಾಧ್ಯವಿಲ್ಲ. ಅದಕ್ಕೆ ವಾಹನ ಬೇಕು. ಅಂಥ ವಾಹನ ಯಾರು ಇಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಮರಳು ಯಾರ್ಯಾರೋ ಸಾಗಾಟ ಮಾಡಲು ಆಗುವುದೂ ಇಲ್ಲ. ಅದಕ್ಕೊಂದು ನೆಟ್‌ವರ್ಕ್‌ ಬೇಕಾಗುತ್ತದೆ. ಅದೆಲ್ಲವನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಲಾಗಿದೆ. ಈಗ ಪರವಾನಗಿ ಇರುವವರಷ್ಟೇ ಸಾಗಾಟ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಒಂದು ಲೈಸನ್ಸ್‌ನಲ್ಲಿ ಎರಡು–ಮೂರು ಲೋಡ್ ಸಾಗಿಸುತ್ತಾರೆ ಎಂಬ ದೂರುಗಳಿವೆ. ಅವು ಕೂಡ ಈಗ ನಡೆಯುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಷ್ಟು ಲೈಸನ್ಸ್‌ ನೀಡಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿಗೆ ಸಾಗಿಸುವುದು ಸುಲಭವಲ್ಲ ಎಂದರು.

ಕಳ್ಳಬಟ್ಟಿ ನಿಯಂತ್ರಣ: ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಂಪೂರ್ಣ ನಿಯಂತ್ರಣದಲ್ಲಿದೆ. ಎಲ್ಲೇ ಕಳ್ಳಬಟ್ಟಿ ನಡೆಯುತ್ತಿದೆ ಎಂದು ಗೊತ್ತಾದರೂ ಅಬಕಾರಿ ಇಲಾಖೆಯುವರು ಕೂಡಲೇ ದಾಳಿ ಮಾಡಿ ಮತ್ತೆ ಹಚ್ಚುತ್ತಾರೆ. ಇಷ್ಟು ಕಟ್ಟುನಿಟ್ಟಾಗಿ ಇರಲು ಅದರಲ್ಲಿ ಆರ್ಥಿಕ ಲೆಕ್ಕಾಚಾರ ಕೂಡ ಇದೆ. ಕಳ್ಳಬಟ್ಟಿ ಹೆಚ್ಚಾದರೆ ಅಧಿಕೃತ ಮದ್ಯದಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ. ಅದು ಸರ್ಕಾರಕ್ಕೂ ನಷ್ಟ ಉಂಟು ಮಾಡುತ್ತದೆ. ಅದಕ್ಕಾಗಿ ಕಳ್ಳಬಟ್ಟಿ ನಡೆಯದಂತೆ ನೋಡಿಕೊಳ್ಳಲಾಗುತ್ತದೆ ಎಂದು ರಿಷ್ಯಂತ್‌ ತಿಳಿಸಿದರು.

ಹಳೇ ದಾವಣಗೆರೆ ಟ್ರಾಫಿಕ್‌ ಸಮಸ್ಯೆ: ದಾವಣಗೆರೆ ಹಳೇ ಭಾಗ ವಾಣಿಜ್ಯ ಕೇಂದ್ರ. ಅಲ್ಲಿ ರಸ್ತೆ ಅಗಲ ಕಡಿಮೆ ಆದರೆ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದಸಮಸ್ಯೆ ಉಂಟಾಗಿದೆ. ಘನ ವಾಹನಗಳು ಹಗಲು ಹೊತ್ತು ಬರಬಾರದು. ಅದಕ್ಕೆ ಹಳೇದಾವಣಗೆರೆಗೆ ಸಂಪರ್ಕ ಇರುವ 11 ಪ್ರವೇಶ ಕೇಂದ್ರಗಳಲ್ಲಿ ಅಟೊಮೆಟಿಕ್‌ ಹೈಟ್ ಲಿಮಿಟ್‌ ಹಾಕುವ ಬಗ್ಗೆ ಆರಂಭದಲ್ಲಿಯೇ ಸ್ಥಳೀಯರು ಮತ್ತು ಮುಖಂಡರ ಜತೆಗೆ ಚರ್ಚೆ ಮಾಡಿದ್ದೆ. ಆದರೆ, ವ್ಯಾಪಾರಿಗಳು ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಈ ಸಮಸ್ಯೆ ಪೂರ್ಣವಾಗಿ ಸರಿಪಡಿಸಲು ಆಗಿಲ್ಲ. ಆದರೂ ಶೇ 80ರಷ್ಟು ಘನವಾಹನಗಳನ್ನು ಬಾರದಂತೆ ತಡೆಯಲಾಗಿದೆ. ಕೆಲವು ರಸ್ತೆಗಳಲ್ಲಿ ಫುಟ್‌ಪಾತ್‌ ವ್ಯಾಪಾರವನ್ನು ನಿಲ್ಲಿಸಲಾಗಿದೆ. ಪಾರ್ಕಿಂಗ್ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಿದೆ. ಹಗಲು ಘನ ವಾಹನ ಬಾರದಂತೆ ತಡೆಯುವುದು, ಫುಟ್‌ಪಾತ್‌ ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಸ್ಥಳಾಂತರಿಸುವುದು, ಪಾರ್ಕಿಂಗ್‌ ವ್ಯವಸ್ಥೆ ಮಾಡುವುದು. ಇಷ್ಟು ಮಾಡಲು ಸಾಧ್ಯವಾದರೆ ಹಳೇ ದಾವಣಗೆರೆಯಲ್ಲಿ ಟ್ರಾಫಿಕ್‌ ಸಮಸ್ಯೆ ಇಲ್ಲದಂತೆ ಮಾಡಬಹುದು ಎಂದು ವಿವರಿಸಿದರು.

ವಾಹನ ಅಪಘಾತ: ಸ್ವಂತ ವಿಮೆ ಕ್ಲೇಮ್‌ಗೆ ಎಫ್‌ಐಆರ್‌ ಬೇಕಿಲ್ಲ
ದಾವಣಗೆರೆ:
‘ಸಣ್ಣ–ಪುಟ್ಟ ಅಪಘಾತ ನಡೆದಾಗ ನಿಮ್ಮ ವಾಹನದ ವಿಮಾ ಪಾಲಿಸಿಯಿಂದ ಪರಿಹಾರ ಕ್ಲೇಮ್‌ ಮಾಡುವುದಾದರೆ ಎಫ್‌ಐಆರ್‌ ಮಾಡಿಸುವ ಅಗತ್ಯವಿಲ್ಲ. ಎದುರು ಪಾರ್ಟಿಯವರ ವಿಮೆಯಿಂದ ಪರಿಹಾರ ಬಯಸುವುದಾದರೆ ಎಫ್‌ಐಆರ್‌ ಮಾಡಿಸಬೇಕಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹೇಳಿದರು.

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಸರಸ್ವತಿನಗರದ ಸಿದ್ದೇಶ್‌, ‘ತಂದೆ ಬೈಕ್‌ ನಿಲ್ಲಿಸಿಕೊಂಡಿದ್ದಾಗ ಇನ್ನೊಂದು ಬೈಕ್‌ನಲ್ಲಿ ಬಂದವರು ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಿದ್ದೆವೆ. ಆರೋಪಿಗಳನ್ನು ಹುಡುಕಿ ಆಸ್ಪತ್ರೆಯ ವೆಚ್ಚ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರಿಷ್ಯಂತ್‌, ‘ಇಂದೇ ದಕ್ಷಿಣ ಸಂಚಾರ ಠಾಣೆಗೆ ಹೋಗಿ ದೂರು ಕೊಡಿ. ಕ್ರಮ ಕೈಗೊಳ್ಳುವಂತೆ ಠಾಣೆಯ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡುತ್ತೇವೆ’ ಎಂದು ಭರವಸೆ ನೀಡಿದರು.

‘ಸಣ್ಣ–ಪುಟ್ಟ ಅಪಘಾತ ನಡೆದಾಗ ನಿಮ್ಮ ವಿಮಾ ಪಾಲಿಸಿಯಿಂದ ವಾಹನ ದುರಸ್ತಿಗೊಳಿಸಲು ಪರಿಹಾರ ಪಡೆಯುವುದಾದರೆ ಈಗಿನ ನಿಯಮದ ಪ್ರಕಾರ ಎಫ್‌ಐಆರ್‌ ಮಾಡಿಸಬೇಕಾಗಿಲ್ಲ. ಅಪಘಾತಕ್ಕೆ ಕಾರಣರಾದವರ ವಾಹನದ ಪಾಲಿಸಿಯಿಂದ ಪರಿಹಾರ ಪಡೆದುಕೊಳ್ಳುವುದಾದರೆ ಎಫ್‌ಐಆರ್‌ ಮಾಡಿಸಬೇಕಾಗುತ್ತದೆ. ಅಪಘಾತದಲ್ಲಿ ಗಾಯಗೊಂಡರೆ, ಜೀವಹಾನಿಯಾದರೆ ತಪ್ಪದೇ ಎಫ್‌ಐಆರ್‌ ಮಾಡಿಸಬೇಕು. ಇಂಥ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹೋಗಿ ಗಾಯಾಳುವಿನ ಆಸ್ಪತ್ರೆ ವೆಚ್ಚ, ಜೀವಹಾನಿಯಾಗಿರುವುದಕ್ಕೆ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಈಗ ವಿಮಾ ಪರಿಹಾರ ವಿತರಣೆ ಪ್ರಕ್ರಿಯೆ ಬೇಗನೆ ಪೂರ್ಣಗೊಳ್ಳುತ್ತಿದೆ. ಎಫ್‌ಐಆರ್‌ ಆದ ಬಳಿಕ ನಾವು ವರದಿಯನ್ನು ಇನ್ಶೂರನ್ಸ್‌ ಕ್ಲೇಮ್‌ ಟ್ರಿಬ್ಯುನಲ್‌ ಹಾಗೂ ಸಂಬಂಧಪಟ್ಟ ವಿಮಾ ಕಂಪನಿಗೆ ವಾರದೊಳಗೆ ಕಳುಹಿಸಿಕೊಂಡುತ್ತೇವೆ. ಸಾಮಾನ್ಯವಾಗಿ ಒಂದು ತಿಂಗಳೊಳಗೆ ವಿಮಾ ಪರಿಹಾರ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಚುನಾವಣೆಯ ವರ್ಷ ಪ್ರಕರಣ ಹೆಚ್ಚು
ಯಾವುದೇ ಜಿಲ್ಲೆಯಲ್ಲಿ ಚುನಾವಣೆಗಳು ಇದ್ದ ವರ್ಷ ಪೊಲೀಸ್‌ ಇಲಾಖೆಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಅಧಿಕವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದರು.

ಚುನಾವಣೆ ಇರುವ ವರ್ಷ ಉಳಿದ ವರ್ಷಗಳಿಗಿಂತ 500 ಪ್ರಕರಣಗಳು ಹೆಚ್ಚು ಇರುತ್ತವೆ. ಒಂದು ಗುಂಪು ಇನ್ನೊಂದು ಗುಂಪಿಗಿಂತ ಪ್ರಬಲ ಎಂಬುದನ್ನು ತೋರಿಸಲು ಪ್ರಕರಣಗಳು ದಾಖಲಾಗುತ್ತವೆ. ಇನ್ನು ಕೆಲವರು ಬೇರೆ ಪಕ್ಷವನ್ನು ಬೆಂಬಲಿಸಿದ್ದರೆ ಅವರನ್ನು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮಾಡಲು ಕೂಡ ಯಾವುದೋ ಸಣ್ಣ ಪ್ರಕರಣವನ್ನು ದೊಡ್ಡದು ಮಾಡಿ ದೂರು ದಾಖಲಾಗುವಂತೆ ಮಾಡುತ್ತಾರೆ. ಅವರನ್ನು ಬಂಧಿಸುವಂತೆ ರಾಜಕೀಯ ಒತ್ತಡಗಳು ಪೊಲೀಸ್‌ ಇಲಾಖೆಗೆ ಬರುತ್ತವೆ. ಅಟ್ರಾಸಿಟಿ ಪ್ರಕರಣಗಳು ಕೂಡ ಈ ಸಮಯದಲ್ಲಿ ಹೆಚ್ಚಿರುತ್ತವೆ ಎಂದು ಅನುಭವ ಹಂಚಿಕೊಂಡರು.

ಸಿಂಕ್ರಾನಿಂಗ್‌ ಸಿಗ್ನಲ್‌ ವ್ಯವಸ್ಥೆ
ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಶೇ 90ರಷ್ಟು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಸ್ಮಾರ್ಟ್‌ ಸಿಗ್ನಲ್‌ ವ್ಯವಸ್ಥೆ ಮಾಡಲಾಗಿದೆ. ಇದು ವಾಹನ ದಟ್ಟಣೆ ನೋಡಿಕೊಂಡು ಸಿಗ್ನಲ್‌ ಸಮಯವನ್ನು ಹೆಚ್ಚಿಸುವ ಇಲ್ಲವೇ ಕಡಿಮೆ ಮಾಡುವ ತಾಂತ್ರಿಕತೆಯನ್ನು ಹೊಂದಿದೆ.

‘ಸಿಂಕ್ರಾನಿಂಗ್‌ ಸಿಗ್ನಲ್‌ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಮಾರ್ಟ್‌ ಸಿಟಿಯವರಿಗೆ ಕೇಳಿದ್ದೇನೆ. ಅಂದರೆ ಪಿ.ಬಿ. ರೋಡ್‌ನಲ್ಲಿ ಇರುವಂತೆ ಒಂದೇ ರಸ್ತೆಯಲ್ಲಿ ಅಧಿಕ ಸಿಗ್ನಲ್‌ಗಳಿದ್ದಾಗ ಒಂದು ಕಡೆ ಗ್ರೀನ್‌ ಸಿಗ್ನಲ್‌ ಬಿದ್ದು, ಅಲ್ಲಿಂದ ಮುಂದಕ್ಕೆ ಹೋಗುವ ವಾಹನಗಳು ಮುಂದಿನ ಸಿಗ್ನಲ್‌ಗೆ ತಲುಪುವಾಗ ಅಲ್ಲಿಯೂ ಗ್ರೀನ್‌ ಸಿಗ್ನಲ್‌ ಇರುವಂತೆ ಮಾಡುವ ವ್ಯವಸ್ಥೆ ಇದು. ಅದಕ್ಕೆ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಐಎಸ್‌ಐ ಮಾರ್ಕ್ ಇದ್ದ ಹೆಲ್ಮೆಟ್‌ ಬಳಸಿ
ಹೆಲ್ಮೆಟ್‌ ಧರಿಸದ ಜನರಿಗೆ ಮೊದಲು ಹೆಲ್ಮೆಟ್‌ ಧರಿಸುವುದನ್ನು ಅಭ್ಯಾಸ ಮಾಡಿಸಬೇಕು. ಅದಕ್ಕಾಗಿ ಪ್ಲಾಸ್ಟಿಕ್‌ ಹೆಲ್ಮೆಟ್‌ ಧರಿಸಿದವರನ್ನೂ ಬಿಡಲಾಗಿತ್ತು. ಪ್ಲಾಸ್ಟಿಕ್ ಹೆಲ್ಮೆಟ್‌ನಿಂದ ತಲೆಗೆ ಯಾವುದೇ ರಕ್ಷಣೆ ದೊರೆಯುವುದಿಲ್ಲ. ಪ್ಲಾಸ್ಟಿಕ್‌ ಹೆಲ್ಮೆಟ್‌ ಧರಿಸಿದವರನ್ನು ಈಗ ಐಎಸ್‌ಐ ಮಾರ್ಕ್‌ ಇರುವ ಗುಣಮಟ್ಟದ ಹೆಲ್ಮೆಟ್‌ ಧರಿಸುವಂತೆ ಮಾಡಬೇಕು. ಅದಾದ ಮೇಲೆ ಹಿಂಬದಿ ಸವಾರರೂ ಹೆಲ್ಮೆಟ್‌ ಧರಿಸುವಂತೆ ಮಾಡಬೇಕು. ಇದೆಲ್ಲ ಒಂದಾದ ಮೇಲೆ ಒಂದು ಮಾಡಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಸೈಬರ್‌ ರಿಕವರಿ ಶೇ 60

*
ವಾರದ ಹಿಂದೆ ಬೈಕ್‌ ಕಳವಾಗಿತ್ತು. ಕಳವು ಮಾಡುತ್ತಿರುವ ಸಿಸಿಟಿವಿ ದೃಶ್ಯವೂ ಇದೆ. ದೂರು ನೀಡಿದ್ದೇನೆ. ಪ್ರಕರಣ ಏನಾಯಿತು?
– ಶ್ರೀನಿವಾಸ್‌, ದಾವಣಗೆರೆ

ರಿಷ್ಯಂತ್‌: ಎಐಆರ್‌ ಮಾಹಿತಿ ನನಗೆ ಕಳುಹಿಸಿಕೊಡಿ. ಪ್ರಕರಣದ ಫಾಲೋಅಪ್‌ ಮಾಡಿಸುತ್ತೇನೆ.

*

ಎಚ್‌.ಕಡದಕಟ್ಟೆ ಗ್ರಾಮದ ಶಾಲೆಯ ಎದುರಿನ ಹೊನ್ನಾಳಿ–ಶಿಕಾರಿಪುರ ಮುಖ್ಯ ರಸ್ತೆಯಲ್ಲಿ ಝೀಬ್ರಾ ಕ್ರಾಸ್‌, ಹಂಪ್‌ ನಿರ್ಮಿಸಿಲ್ಲ. ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ತೊಂದರೆಯಾಗುತ್ತದೆ.
– ಹನುಮಂತ, ಎಚ್‌.ಕಡದಕಟ್ಟೆ

ರಿಷ್ಯಂತ್‌: ಸ್ಥಳೀಯ ಠಾಣೆ ಪೊಲೀಸರಿಗೆ ಸ್ಥಳಕ್ಕೆ ತೆರಳಿ ಮಕ್ಕಳಿಗೆ ತೊಂದರೆಯಾಗದಂತೆ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ.

*

ಜಗಳ ಬಿಡಿಸುಲು ಹೋಗಿದ್ದ ನನ್ನ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯವನ್ನೂ ಪರಿಶೀಲಿಸಬಹುದು. ನನಗೆ ನ್ಯಾಯ ಕೊಡಿಸಿ.
– ಚನ್ನಬಸಪ್ಪ, ಕರವೇ ಮುಖಂಡ

ರಿಷ್ಯಂತ್‌: ಪ್ರಕರಣದ ಮಾಹಿತಿಯನ್ನು ಕಳುಹಿಸಿಕೊಡಿ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.

*

ಚನ್ನಗಿರಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ಮೇಲೆ ಕ್ರಮ ಕೈಗೊಳ್ಳಿ.
– ನಾಗರಿಕ, ಚನ್ನಗಿರಿ

ರಿಷ್ಯಂತ್‌: ಯಾವ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ನಿಖರವಾಗಿ ಮಾಹಿತಿ ಕೊಡಿ. ಅಬಕಾರಿ ಇಲಾಖೆ ಜೊತೆ ಸೇರಿ ದಾಳಿ ನಡೆಸುತ್ತೇವೆ.

*

ಕುಂಬಳೂರು ಸುತ್ತ–ಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿರುವ ಜೂಜಾಟಗಳಿಗೆ ಕಡಿವಾಣ ಹಾಕಿ.
– ನಾಗರಿಕ, ಕುಂಬಳೂರು

ಬಾಡಾ ಕ್ರಾಸ್‌ ಬಳಿ ಲಿಂಗತ್ವ ಅಲ್ಪಸಂಖ್ಯಾತರು ರಸ್ತೆಯ ಮೇಲೆ ನಿಂತುಕೊಂಡು ವ್ಯವಹಾರ ಕುದುರಿಸುತ್ತಾರೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪೊಲೀಸರು ಸ್ಥಳದಲ್ಲಿದ್ದರೂ ಸುಮ್ಮನಿರುತ್ತಾರೆ.
– ನೊಂದ ನಾಗರಿಕ, ದಾವಣಗೆರೆ

ರಿಷ್ಯಂತ್‌: ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.

*

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರಿಗೆ ಭಾನುವಾರದ ಸಂತೆಯಲ್ಲಿ ಒಂದು ತಿಂಗಳ ಹಿಂದೆ ಮೊಬೈಲ್‌ ಕಳವಾಗಿರುವ ಬಗ್ಗೆ ಕೆಟಿಜೆನಗರ ಠಾಣೆಗೆ ದೂರು ನೀಡಿದ್ದೆ. ಇಲ್ಲಿ ಹಲವರು ಮೊಬೈಲ್‌ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೊಬೈಲ್‌ ಹುಡುಕಿಕೊಡಿ.
– ಬಸವರಾಜ ಅಂಗಡಿ,

ರಿಷ್ಯಂತ್‌: ಭಾನುವಾರದ ಸಂತೆಯಲ್ಲಿ ನಾಲ್ಕೈದು ಮೊಬೈಲ್‌ ಕಳವಾಗಿರುವ ಬಗ್ಗೆ ವರದಿಯಾಗಿದೆ. ಸಂತೆ ನಡೆಯುವ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕಳುವಾಗಿರುವ ಮೊಬೈಲ್‌ ಟ್ರ್ಯಾಕ್‌ ಮಾಡುತ್ತಿದ್ದೇವೆ.

ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಿ
ಮಣ್ಣು ಸಾಗಿಸುವ ಹತ್ತಾರು ಟ್ರ್ಯಾಕ್ಟರ್‌ಗಳು ದೊಡ್ಡದಾಗಿ ಹಾಡು ಹಾಕಿಕೊಂಡು ಹೋಗುವುದರಿಂದ ಶಾಲೆಯಲ್ಲಿ ಪಾಠ ಮಾಡಿದ್ದು ಮಕ್ಕಳಿಗೆ ಕೇಳಿಸುತ್ತಿಲ್ಲ. ಟ್ರ್ಯಾಕ್ಟರ್‌ಗಳ ಡೆಕ್‌ನ ಶಬ್ದ ನಿಯಂತ್ರಿಸಲು ಕ್ರಮ ಕೈಗೊಳ್ಳಿ.
– ನಾಗರಿಕ, ಹೊಸೂರು

ರಿಷ್ಯಂತ್‌: ಊರಿಗೆ ಸ್ಥಳೀಯ ಪೊಲೀಸರನ್ನು ಇಂದೇ ಕಳುಹಿಸುತ್ತೇನೆ. ದೊಡ್ಡದಾಗಿ ಹಾಡು ಹಾಕಿಕೊಂಡು ಹೋಗುವ ಟ್ರ್ಯಾಕ್ಟರ್‌ಗಳಿಗೆ ದಂಡ ವಿಧಿಸಲಾಗುವುದು.

*

ಆಟೊಗಳು ಕರ್ಕಶ ವಾಹನಗಳನ್ನು ಮಾಡುವ ಮೂಲಕ ಬೆಚ್ಚಿಬೀಳಿಸುತ್ತಿವೆ. ವಾಹನಗಳ ಸೈಲೆನ್ಸರ್‌ ಪೈಪ್‌ ಮಾರ್ಪಾಡು ಮಾಡಿಕೊಳ್ಳುವವರ ಮೇಲೂ ಕ್ರಮ ಕೈಗೊಳ್ಳಿ.

ರಿಷ್ಯಂತ್‌: ಸೈಲೆನ್ಸರ್‌ ಪೈಪ್‌ ಮಾರ್ಪಡಿಸಿಕೊಳ್ಳುವ ವಾಹನಗಳನ್ನು ಜಪ್ತಿ ಮಾಡುತ್ತೇವೆ. ಕರ್ಕಶ ಶಬ್ದ ಮಾಡುವವರಿಗೆ ದಂಡ ವಿಧಿಸಲಾಗುವುದು.

112ಗೆ ಕರೆ ಮಾಡಿ ದೂರು ನೀಡಿ

*

ನ್ಯಾಮತಿಯ ಶಿವಾನಂದಪ್ಪ ಬಡಾವಣೆಯಲ್ಲಿ ರಾತ್ರಿ ಕುಡುಕರು ಬಂದು ಗಲಾಟೆ ಮಾಡುತ್ತಾರೆ. ಸ್ಥಳೀಯರಿಗೆ ತೊಂದರೆಯಾಗುತ್ತಿದೆ.
– ನೊಂದ ನಾಗರಿಕರು, ನ್ಯಾಮತಿ

ರಿಷ್ಯಂತ್‌: ಗಲಾಟೆ ಮಾಡಿದಾಗ 112ಕ್ಕೆ ಕರೆ ಮಾಡಿ ದೂರು ನೀಡಿ. ನಿಮ್ಮ ಹೆಸರನ್ನು ಬಹಿರಂಗಪಡಿಸದಂತೆ ಕೋರಿಕೊಂಡರೆ ಕಾಲ್‌ಸೆಂಟರ್‌ನವರು ನಿಮ್ಮ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೂ ನೀಡುವುದಿಲ್ಲ.

* ಮಸೀದಿ, ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳನ್ನು ರಾತ್ರಿ ಬಳಸುತ್ತಿರುವುದರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ.
– ನಾಗರಿಕ, ರಾಜೀವಗಾಂಧಿ ಬಡಾವಣೆ

ರಿಷ್ಯಂತ್‌: ರಾತ್ರಿ ಧ್ವನಿವರ್ಧಕ ಬಳಸಿದಾಗ 112ಕ್ಕೆ ಕರೆ ಮಾಡಿ ದೂರು ನೀಡಿ. ಪೊಲೀಸರು ಬಂದು ದಂಡ ವಿಧಿಸುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯದವರ ಗಮನಕ್ಕೂ ತಂದು ಶಬ್ದ ಮಾಲಿನ್ಯ ಆಗದಂತೆ ನೋಡಿಕೊಳ್ಳುತ್ತಾರೆ.ಯಾರೋ ಎಲ್ಲೋ ಕುಳಿತು ಆನ್‌ಲೈನ್‌ ಮೂಲಕ ವಂಚಿಸಿದರೆ ಹಿಂದೆ ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಈಗ ಶೇ 60ರಷ್ಟು ಹಣವನ್ನು ರಿಕವರಿ ಮಾಡಲಾಗುತ್ತಿದೆ. ಮೋಸ ಹೋದವರು ತಕ್ಷಣ ದೂರು ನೀಡಿದರೆ ಶೇ 100ರಷ್ಟು ರಿಕವರಿ ಮಾಡಬಹುದು. ಬ್ಯಾಂಕ್‌ ಖಾತೆಗೆ ಮೂರ್ನಾಲ್ಕು ಬಾರಿ ಆರೋಪಿ ದುಡ್ಡು ಹಾಕಿಸಿಕೊಳ್ಳುತ್ತಾನೆ. ಅದನ್ನು ಆತ ಪೂರ್ತಿ ಬಿಡಿಸಿಕೊಳ್ಳುವ ಮೊದಲು ದೂರು ದಾಖಲಾದರೆ ದೇಶದ ಎಲ್ಲೇ ಇದ್ದರೂ ಈಗ ಪತ್ತೆ ಹಚ್ಚಲು ಸಾಧ್ಯ ಎಂದು ರಿಷ್ಯಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT