ಗಂಜಿಕೇಂದ್ರದಲ್ಲಿ ಮೂಲಸೌಲಭ್ಯಕ್ಕೆ ಕ್ರಮ

7
ತಹಶೀಲ್ದಾರ್‌ ರೆಹಾನ್‍ಪಾಷ ಭರವಸೆ

ಗಂಜಿಕೇಂದ್ರದಲ್ಲಿ ಮೂಲಸೌಲಭ್ಯಕ್ಕೆ ಕ್ರಮ

Published:
Updated:
Deccan Herald

ಹರಿಹರ: ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಸ್ಥಾಪಿಸಲಾಗಿರುವ ನೆರೆ ಸಂತ್ರಸ್ತರ ಗಂಜಿ ಕೇಂದ್ರವನ್ನು ತಹಶೀಲ್ದಾರ್‌ ರೆಹಾನ್‍ಪಾಷ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭಾನುವಾರ ಪರಿಶೀಲಿಸಿತು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ರೆಹಾನ್‍ಪಾಷಾ, ‘ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಸಂಕಷ್ಟಕೀಡಾದ ನಾಗರಿಕರ ರಕ್ಷಣೆಗೆ ಇದೇ 15 ರಿಂದ ಗಂಜಿಕೇಂದ್ರವನ್ನು ಸ್ಥಾಪಿಸಿದ್ದು, ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಗಂಜಿಕೇಂದ್ರದಲ್ಲಿ ಪ್ರತಿನಿತ್ಯ 120 ನಿರಾಶ್ರಿತರಿಗೆ ಆಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಿದ್ದು, ನಗರದ ಕೆಲ ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಉಪಾಹಾರದ ಜತೆಗೆ ನೆರವು ನೀಡಿದ್ದಾರೆ. ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾಡಳಿತದಿಂದ ಸಂಚಾರಿ ಶೌಚಾಲಯವನ್ನು ಒದಗಿಸಲಾಗಿದೆ’ ಎಂದರು.

ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ. ಚಂದ್ರಮೋಹನ್ ಮಾತನಾಡಿ, ‘ಗಂಜಿ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ತಪಾಸಣೆ ಶಿಬಿರ ಹಾಗೂ ಆರೋಗ್ಯ ಶಿಕ್ಷಣದ ಮಾಹಿತಿ ನೀಡಲಾಗಿದೆ’ ಎಂದರು.

ಸಂತ್ರಸ್ತರಿಗೆ ಕಾಡುತ್ತಿರುವ ಜ್ವರ, ಶೀತ, ಕೆಮ್ಮ, ವಾಂತಿ ಹಾಗೂ ಭೇದಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಎಇಇ ಬಿ.ಎಸ್. ಪಾಟೀಲ್ ಮಾತನಾಡಿ, ‘ಗಂಗಾ ನಗರದಲ್ಲಿ ನೆರೆಹಾವಳಿಯಿಂದ 20 ಮನೆಗಳಿಗೆ ಹಾನಿಯಾಗಿದ್ದು, ನದಿ ಪಾತ್ರದಲ್ಲಿ ನೀರಿನ ಹರಿವು ಇಳಿಮುಖವಾಗಿರುವ ಕಾರಣ, ಪೌರಕಾರ್ಮಿಕರ ಸಹಾಯದಿಂದ ಮನೆಗಳನ್ನು ಸ್ವಚ್ಛಗೊಳಿಸಲಾಗಿದೆ. ಮನೆಗಳು ನೀರಿನಿಂದ ಹಸಿಯಾಗಿದ್ದು, ಒಣಗಿದ ನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು’ ಎಂದರು.

ಪರಿಸರ ಎಂಜಿನಿಯರ್ ಮಹೇಶ್ ಕೊಡಬಾಳ್, ಕಂದಾಯ ನಿರೀಕ್ಷಕ ಡಿ. ಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿಗಳಾದ ದೇವರಾಜ್, ಜಬೀವುಲ್ಲಾ, ಹಿರಿಯ ಆರೋಗ್ಯ ಮೆಲ್ವಿಕಾರಕ ಎಂ.ವಿ. ಹೊರಕೇರಿ, ಆರೋಗ್ಯ ಸಹಾಯಕರಾದ ಮಂಜುನಾಥ್ ರೆಡ್ಡಿ, ಮಹೇಶ್, ಕಾರ್ಲಿನ್, ಉಮಾ, ಜ್ಯೋತಿ, ಕಾವ್ಯಾ, ಕಂದಾಯ, ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !