ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜತೆಗಿರುವನು ಚಂದಿರ’ಕ್ಕೆ ಅಡ್ಡಿಪಡಿಸಿದವರ ಮೇಲೆ ಕ್ರಮಕ್ಕೆ ಆಗ್ರಹ

Last Updated 6 ಜುಲೈ 2022, 12:48 IST
ಅಕ್ಷರ ಗಾತ್ರ

ದಾವಣಗೆರೆ: ಸೌಹಾರ್ದವನ್ನು ಸಾರುವ ‘ಜತೆಗಿರುವನು ಚಂದಿರ’ ಎಂಬ ನಾಟಕದ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಂಗ ಬಳಗ ದಾವಣಗೆರೆ ಇದರ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗದ ರಂಗ ಬೆಳಕು ತಂಡವು ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಈ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ನಾಟಕ ಅರ್ಧ ಆಗುವ ಹೊತ್ತಿಗೆ ರೀಧರ ಆಚಾರ್‌, ಮಂಜಣ್ಣ ಹಾಗೂ ಸಂಜಯ್‌ ಡೊಂಗ್ರೆ ಎಂಬ ಮೂವರು ಆರೋಪಿಗಳು ನಾಟಕಕ್ಕೆ ಅಡ್ಡಿಪಡಿಸಿ ನಿಲ್ಲಿಸಿದ್ದರು. ಈ ಮೂಲಕ ಸೌಹಾರ್ದಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೇ ರಂಗಭೂಮಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ನಾಟಕವನ್ನು ನೋಡದೇ, ಅದರಲ್ಲಿ ಇರುವ ವಿಚಾರ, ಸಂದೇಶಗಳನ್ನು ಅರ್ಥಮಾಡಿಕೊಳ್ಳದೇ ಪೂರ್ವಗ್ರಹ ಪೀಡಿತರಾಗಿ ಅಡ್ಡಿಪಡಿಸಿರುವುದು ರಂಗಭೂಮಿಯಲ್ಲಿ ದುಡಿಯವ ರಂಗಕರ್ಮಿಗಳಿಗಷ್ಟೇ ಅಲ್ಲದೇ ರಂಗಾಸಕ್ತರಿಗೂ, ಸೌಹಾರ್ದ ಬಯಸುವ ಎಲ್ಲರಿಗೂ ಆತಂಕವನ್ನು ಸೃಷ್ಟಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಯಾವುದೇ ಕಲಾ ಪ್ರಕಾರಗಳಲ್ಲಿ ಆಕ್ಷೇಪಾರ್ಹ ವಿಚಾರಗಳಿದ್ದರೆ ಅದನ್ನು ಎತ್ತಿ ತೋರಿಸುವ, ಚರ್ಚೆ, ಸಂವಾದ ಮಾಡುವ, ಅಲ್ಲೂ ಸರಿಕಾಣದೇ ಇದ್ದರೆ ಕಾನೂನು ಹೋರಾಟ ಮಾಡುವ ಹಕ್ಕುಗಳು ಎಲ್ಲರಿಗೂ ಇವೆ. 'ಜತೆಗಿರುವನು ಚಂದಿರ' ನಾಟಕದಲ್ಲಿ ಆಕ್ಷೇಪಾರ್ಹ ವಿಚಾರಗಳು ಇರದೇ ಇದ್ದರೂ ಅಡ್ಡಿ ಪಡಿಸಿರುವುದು ಸಮಾಜ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ರಂಗಭೂಮಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಲಾಗಿದೆ.

ರಂಗ ಬಳಗ ತಂಡದ ಡಾ. ಎಂ.ಜಿ. ಈಶ್ವರಪ್ಪ, ಬಾ.ಮ. ಬಸವರಾಜಯ್ಯ, ಪ್ರೊ. ಎ.ಬಿ. ರಾಮಚಂದ್ರಪ್ಪ, ಬಲ್ಲೂರು ರವಿಕುಮಾರ್, ಹೆಗ್ಗೆರೆ ರಂಗಪ್ಪ, ಅನಿಸ್ ಪಾಷಾ, ಸಿದ್ದರಾಜು ಎಸ್.ಎಸ್., ದೇವೇಂದ್ರಪ್ಪ ಕೆ., ಬಿ.ಎನ್. ಮಲ್ಲೇಶ್, ಸುಧಾ ಎಚ್.ಎನ್., ಎಸ್. ಹಾಲಪ್ಪ, ಅಣ್ಣಪ್ಪ, ಇಮ್ತಿಯಾಜ್ ಹುಸೇನ್, ಕೃಷ್ಣಪ್ಪ ನವಿಲೆಹಾಳ್, ಜಯಣ್ಣ ಜಾಧವ್, ಶಂಭುಲಿಂಗಪ್ಪ, ಬಿ.ಟಿ. ಜಾಹ್ನವಿ ಸಹಿತ ಹಲವರು ಸಹಿ ಹಾಕಿರುವ ಈ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್‌ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT