ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಗಳಿಂದ ಬಾಕಿ ಇರುವ ಪ್ರಕರಣ ವರ್ಷದೊಳಗೆ ಇತ್ಯರ್ಥಕ್ಕೆ ಕ್ರಮ

ವಕೀಲರ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ
Last Updated 16 ನವೆಂಬರ್ 2019, 14:02 IST
ಅಕ್ಷರ ಗಾತ್ರ

ದಾವಣಗೆರೆ: 10 ವರ್ಷಗಳಿಂದ ಬಾಕಿ ಇರುವ ಎಲ್ಲ ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕರಣಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಲಾಗುವುದು. ಬಳಿಕ ಒಂದು ವರ್ಷದಲ್ಲಿ 7 ವರ್ಷಕ್ಕಿಂತ ಹಳೇಯದಾದ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಮತ್ತೆ ಐದು ವರ್ಷಕ್ಕಿಂತ ಮೇಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಭೇಟಿ ನೀಡಿ, ನ್ಯಾಯಾಲಯದ ವಕೀಲರ ಸಾಂಸ್ಕೃತಿಕ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ 5 ವರ್ಷ ಮೀರಿದ ಪ್ರಕರಣಗಳು ಇರದಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಗುಣಮಟ್ಟದ, ಪರಿಣಾಮಕಾರಿ ಮತ್ತು ಶೀಘ್ರ ನ್ಯಾಯ ಜನರಿಗೆ ದೊರಕಬೇಕು ಎಂದು ತಿಳಿಸಿದರು.

‘ಕಟ್ಟಡ, ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಬಹಳ ಮುಂದಿದೆ. ದೆಹಲಿ, ಹರ್ಯಾಣ, ಪಂಜಾಬ್‌ಗಳ ನ್ಯಾಯಾಲಗಳ ವ್ಯವಸ್ಥೆಯಷ್ಟೇ ನಮಗಿಂತ ಮುಂದಿವೆ. ಹಾಗಾಗಿ ನ್ಯಾಯದಾನದಲ್ಲಿಯೂ ನಾವು ಮುಂದೆ ಇರಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಯ ನ್ಯಾಯಾಲಯದ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ₹ 15 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ. ವಕೀಲರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ ಎಂದು ತಿಳಿಸಿದರು.

‘ನಾನು ಹೈಕೋರ್ಟ್‌ಗಿಂತ ಇಂಥ ನ್ಯಾಯಾಲಯಗಳಲ್ಲಿಯೇ ಹೆಚ್ಚು ಕಲಿತಿದ್ದೇನೆ. 13 ಜಿಲ್ಲೆಗಳ ನ್ಯಾಯಾಲಯಗಳಿಗೆ ಭೇಟಿ ನೀಡಿ ಇಲ್ಲಿಗೆ ಬಂದಿದ್ದೇನೆ. ಕೆಳಸ್ತರದ ನ್ಯಾಯಾಲಯಗಳ ಮೂಲ ಸೌಕರ್ಯ ಚೆನ್ನಾಗಿರಬೇಕು’ ಎಂದು ಹೇಳಿದರು.

‘ಸಂವಿಧಾನ ದಿನವನ್ನು ಎಲ್ಲ ನ್ಯಾಯಾಲಯಗಳಲ್ಲಿ ಸಂಭ್ರಮದಿಂದ ಆಚರಿಸಬೇಕು. ಯಾಕೆಂದರೆ ಸಂವಿಧಾನ ಇರುವುದರಿಂದ ನ್ಯಾಯಾಲಯಗಳು ಇವೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚನೆಯ ಕೊನೇ ಸಂವಾದದಲ್ಲಿ ಎಲ್ಲ ಗೊಂದಲಗಳಿಗೆ, ಸಂಶಯಗಳಿಗೆ ಸುದೀರ್ಘವಾಗಿ ಉತ್ತರವನ್ನು ನೀಡಿದ್ದರು. ಅದನ್ನೆಲ್ಲ ನಾವು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ಜನರಲ್ ರಿಜಿಸ್ಟ್ರಾರ್ ರಾಜೇಂದ್ರ ಬದಮಿಕರ್, ಇನ್‌ಫ್ರಾಸ್ಟ್ರಕ್ಚರ್ ಮತ್ತು ಮೈಂಟೆನೆನ್ಸ್‌ ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್ ಜಿ ಕುಲಕರ್ಣಿ ಉಪಸ್ಥಿತರಿದ್ದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್‌. ದಿವಾಕರ್ ಪರಿಚಯಿಸಿದರು. ಜಂಟಿ ಕಾರ್ಯದರ್ಶಿ ಎಸ್.ಬಸವರಾಜು ವಂದಿಸಿದರು. ಬಿ.ಎಸ್‌. ಲಿಂಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT