ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಲ್ಲಿ ಸಿಲುಕಿರುವ ಮಹಿಳೆಯರ ವಿಳಾಸ ಪತ್ತೆ

ರಿಯಾದ್‌ನಿಂದ ಸಾವಿರ ಕಿಲೋಮೀಟರ್‌ ದೂರದಲ್ಲಿ ಗೃಹಬಂಧನದಲ್ಲಿರಿಸಿರುವ ಏಜೆಂಟ್‌
Last Updated 22 ಮೇ 2021, 18:34 IST
ಅಕ್ಷರ ಗಾತ್ರ

ದಾವಣಗೆರೆ: ಕೆಲಸಕ್ಕೆಂದು ಕರೆದುಕೊಂಡು ಹೋಗಿ ಊರಿಗೆ ಬರಲು ಬಿಡದ ಕಾರಣ ಸೌದಿ ಅರೇಬಿಯಾದಲ್ಲೇ ಸಿಲುಕಿರುವ ಇಬ್ಬರು ಮಹಿಳೆಯರ ವಿಳಾಸ ಪತ್ತೆಯಾಗಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಿಂದ ಒಂದು ಸಾವಿರ ಕಿಲೋಮೀಟರ್‌ ದೂರದಲ್ಲಿ ಮನೆಯೊಳಗೇ ಇದ್ದು, ಹೊರ ಬರಲು ಏಜೆಂಟ್‌ ಬಿಡುತ್ತಿಲ್ಲ. ಅವರನ್ನು ಬಿಡಿಸಿಕೊಂಡು ಬರಲು ಸೌದಿಯಲ್ಲಿ ಇರುವ ಭಾರತೀಯರು ಪ್ರಯತ್ನಿಸುತ್ತಿದ್ದಾರೆ.

ದಾವಣಗೆರೆ ಆಜಾದ್‌ನಗರದ ಎರಡನೇ ಮುಖ್ಯರಸ್ತೆ, ಐದನೇ ಅಡ್ಡರಸ್ತೆಯ ನಿವಾಸಿ ಮಕ್ಬುಲ್‌ಸಾಬ್‌ ಅವರ ಮಗಳು ಫೈರೋಜಾ ಬಾನು ಎರಡು ವರ್ಷಗಳ ಹಿಂದೆ ಹಾಗೂ ತುಮಕೂರಿನ ಸಬಿಹಾ ಮೂರು ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಸೌದಿಗೆ ತೆರಳಿದ್ದರು.

ರಿಯಾದ್‌ನಲ್ಲಿ ಮನೆ ಕೆಲಸಕ್ಕೆ ಜನ ಬೇಕಾಗಿದೆ ಎಂದು ದಾವಣಗೆರೆಯ ಸಿಕಂದರ್‌, ತುಮಕೂರಿನ ನಯಾಜ್‌ ಅಹಮದ್‌ ಈ ಮಹಿಳೆಯರನ್ನು ಮುಂಬೈ ಏಜೆಂಟ್‌ ಮೂಲಕ ಕಳುಹಿಸಿದ್ದರು. ಬಳಿಕ ಫೈರೋಜ್‌ಬಾನು ಅವರ ತಾಯಿ ಮೃತಪಟ್ಟಾಗಲೂ ಊರಿಗೆ ಮರಳಲು ಸೌದಿಯ ಕಫೀಲ್‌ (ಪ್ರಾಯೋಜಕ) ಬಿಟ್ಟಿರಲಿಲ್ಲ. ಈ ಬಗ್ಗೆ ಫೈರೋಜ್‌ ಅವರ ಸಹೋದರಿ ನಸ್ರಿನಾಬಾನು ‘ಪ್ರಜಾವಾಣಿ’ಗೆ ನೀಡಿದ್ದ ಮಾಹಿತಿಯಂತೆ ವರದಿ ಪ್ರಕಟವಾಗಿತ್ತು.

ಈ ವರದಿಯನ್ನು ಆಲ್‌ಲೈನ್‌ನಲ್ಲಿ ನೋಡಿ ರಿಯಾದ್‌ನಲ್ಲಿ ಇರುವ ಪಡುಬಿದ್ರಿಯ ಹಮೀದ್‌ ಅವರು ಸ್ಪಂದಿಸಿದ್ದರು. ಅವರಿಗೆ ದಮಾಮ್‌ನಲ್ಲಿ ಇರುವ ತುಮಕೂರಿನ ಯಾಸಿನ್‌ ಕೂಡ ಕೈ ಜೋಡಿಸಿದ್ದರು. ಈ ಇಬ್ಬರ ಪ್ರಯತ್ನದಿಂದ ರಿಯಾದ್‌ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‌ನಲ್ಲಿ ಇರುವುದು ಗೊತ್ತಾಗಿತ್ತು. ಅವರನ್ನು ಇಟ್ಟುಕೊಂಡಿರುವ ಕಫೀಲ್‌ನ ಹೆಸರು ಸಾಅದ್‌ ಎಂಬ ಮಾಹಿತಿಯನ್ನೂ ಪತ್ತೆ ಹಚ್ಚಿದ್ದರು. ಇದೇ ಕಫೀಲ್‌ ತುಮಕೂರಿನ ಸಬಿಹಾ ಎನ್ನುವ ಮಹಿಳೆಯನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಲ್ಲದೇ 8 ತಿಂಗಳಿನಿಂದ ವೇತನ ನೀಡದೇ ಇರುವುದು ಕೂಡ ಈ ಸಂದರ್ಭದಲ್ಲಿ ಗೊತ್ತಾಗಿದೆ.

‘ನಾನು ಮತ್ತು ಯಾಸಿನ್‌ ಈ ಇಬ್ಬರ ಇರುವನ್ನು ಪತ್ತೆ ಹಚ್ಚಿದ್ದೇವೆ. ಭಾರತ ಸರ್ಕಾರದ ರಾಯಭಾರಿಯನ್ನು ಸಂಪರ್ಕಿಸಿದ್ದೇವೆ. ನಮಗೆ ಪರಿಚಯ ಇರುವ ಸೌದಿಯವರ ಮೂಲಕ ಕಫೀಲ್‌ನನ್ನು ಮಾತನಾಡಿಸಿದ್ದೇವೆ. ವಿಸಿಟಿಂಗ್‌ ವೀಸಾದಲ್ಲಿ ಇಬ್ಬರನ್ನು ಕರೆದುಕೊಂಡು ಬಂದಿರುವುದು ಎಂಬುದು ಕೂಡ ಗೊತ್ತಾಗಿದೆ. ವಿಸಿಟಿಂಗ್‌ ವೀಸಾ ಮೂಲಕ ಕರೆದುಕೊಂಡು ಬಂದರೆ ಮತ್ತೆ ಇಲ್ಲೇ ಉಳಿಯುವುದಿದ್ದರೆ ಇಕಾಮ ಮಾಡಿಸಬೇಕು. ಇಕಾಮ ಅಂದರೆ ಭಾರತದ ಆಧಾರ್‌ ಕಾರ್ಡ್‌ ರೀತಿಯ ಕಾರ್ಡ್‌. ಇಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಅದು ಪುರಾವೆ. ಈ ಇಬ್ಬರು ಮಹಿಳೆಯರಿಗೂ ಇಕಾಮ ಮಾಡಿದ್ದೇನೆ ಎಂದು ಕಫೀಲ್‌ ಹೇಳುತ್ತಿದ್ದಾರೆ. ಇಕಾಮ ಮಾಡಿದರೆ ಅದು ಯಾರ ಹೆಸರು ಇರುತ್ತದೆಯೋ ಅವರಲ್ಲೇ ಇರಬೇಕು. ಈ ಇಬ್ಬರು ಮಹಿಳೆಯರಿಗೂ ಇಲ್ಲಿವರೆಗೆ ನೀಡಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ರಿಯಾದ್‌ನಲ್ಲಿರುವ ಹಮೀದ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸೌದಿಯಲ್ಲಿ ಇರುವ ಭಾರತದ ರಾಯಭಾರಿ ಕಚೇರಿಗೆ ಹಾಗೂ ಭಾರತ ಸರ್ಕಾರದ ಡಾ. ಜೈಶಂಕರ್‌ ಅವರಿಗೆ ಈ ಇಬ್ಬರು ಮಹಿಳೆಯರ ಬಗ್ಗೆ ಮಾಹಿತಿಯನ್ನು ಟ್ವೀಟ್‌ ಮಾಡಿದ್ದೇನೆ. ಮಾನವ ಹಕ್ಕು ಆಯೋಗವನ್ನೂ ಸಂಪರ್ಕಿಸಿದ್ದೇನೆ. ಫೈರೋಜ್‌ ಮತ್ತು ಸಬಿಹಾ ಅವರನ್ನು ಕಫೀಲ್‌ ಕೈಯಿಂದ ಬಿಡಿಸಿ ಭಾರತಕ್ಕೆ ಕಳುಹಿಸುವ ಪ್ರಯತ್ನ ಸಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT