ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಧರ್ಮ ಸಹಿಷ್ಣುತಾ ಮನೋಭಾವ ರೂಢಿಸಿಕೊಳ್ಳಿ: ಹನುಮಂತರಾಯ ಸಲಹೆ

ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ
Last Updated 25 ಡಿಸೆಂಬರ್ 2019, 16:59 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳು ಪರಧರ್ಮ ಸಹಿಷ್ಣುತಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು.

ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಬುಧವಾರ ನಡೆದ ಸಾಂಸ್ಕೃತಿಕ ಸಂಭ್ರಮದ ಸಿದ್ಧಗಂಗಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿ, ‘ಹೆಚ್ಚಿನ ಜನರು ಅಸಹಿಷ್ಣುತೆ ಮನೋಭಾವ ಹೊಂದಿದ್ದು, ಸಣ್ಣ ಪುಟ್ಟ ವಿಷಯಗಳೂ ಠಾಣೆಯ ಮೆಟ್ಟಿಲೇರುತ್ತಿವೆ. ಆದ್ದರಿಂದ ಇತರರನ್ನು ಪ್ರೀತಿಸಿ ಅವರನ್ನು ಗೌರವದಿಂದ ಕಾಣುವ ಮಾನವೀಯ ಗುಣ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ತಂದೆ–ತಾಯಂದಿರು ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ, ಸಾಮಾಜಿಕ, ಕೌಟುಂಬಿಕ ಮೌಲ್ಯಗಳನ್ನು ಕಲಿಸಬೇಕು. ಇದರಲ್ಲಿ ಶಿಕ್ಷಕರಷ್ಟೇ ಅಲ್ಲದೇ ಪೋಷಕರ ಹೊಣೆಗಾರಿಕೆಯೂ ಮುಖ್ಯ. ವ್ಯಕ್ತಿತ್ವ ವಿಕಸನದ ಜೊತೆಗೆ ದೇಶದ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸಬೇಕು. ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಬರೀ ಅಂಕವೊಂದೇ ಸಾಲದು. ಎಲ್ಲಾ ಗುಣಗಳು ಬೇಕು. ಜವಾಬ್ದಾರಿಯುತ ನಾಗರಿಕರಾಗಬೇಕಾದರೆ ಸಾಮಾಜಿಕ ಮೌಲ್ಯ ಮುಖ್ಯ’ ಎಂದರು.

‘ಮಕ್ಕಳನ್ನು ಎಂಬಿಬಿಎಸ್ ಹಾಗೂ ಎಂಜಿನಿಯರ್ ಓದಿ ಎಂದು ಒತ್ತಾಯಿಸಬೇಡಿ. ಅವರಿಗೆ ಆಸಕ್ತಿ ಇರುವ ವಿಷಯವನ್ನು ಕಲಿಯಲು ಬಿಡಬೇಕು. ಓದು ಮಕ್ಕಳ ಆಯ್ಕೆಯಾಗಬೇಕೇ ಹೊರತು ನಿಮ್ಮ ಆಯ್ಕೆಯಾಗಬಾರದು. ಕಲಾ, ಕಾನೂನು ವಿಷಯಗಳನ್ನೂ ಕಲಿಯಿರಿ. ಮಕ್ಕಳು ಅವರ ಇಷ್ಟದ ವಿಷಯದಲ್ಲಿ ಪ್ರಾವೀಣ್ಯತೆ ಪಡೆಯಲು, ಸಾಧನೆ ಮಾಡಲು ಸಹಕಾರ ನೀಡಬೇಕು’ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

‘ರಾಜ್ಯದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸೇವೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದ್ದು, ಡಿಫೆನ್ಸ್, ಎನ್‌ಡಿಎ, ಹೋಮ್‌ಗಾರ್ಡ್‌ ವಿಷಯಗಳನ್ನು ಕಲಿಯಬೇಕು. ಇದರಿಂದ ದೇಶಭಿಮಾನ ಮೂಡುವುದರ ಜೊತೆಗೆ ಹೆಮ್ಮೆಯಿಂದ ಜೀವನ ನಡೆಸಬಹುದು. ಫೈನ್‌ ಆರ್ಟ್ಸ್ ಸೇರಿ ಹೊಸ ಹೊಸ ವಿಷಯಗಳನ್ನು ಆಯ್ಕೆ ಮಾಡಿ ಜೀವನ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಮೊಬೈಲ್‌ನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಒಳ್ಳೆಯ ವಿಷಯಗಳನ್ನು ಕಲಿತುಕೊಳ್ಳಬೇಕು. ಶಾಲಾ– ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ಆಸ್ಪದ ನೀಡಬೇಡಿ. ಇದರಿಂದ ಸಮಯ, ಹಣ ವ್ಯರ್ಥವಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡೆಯಲ್ಲಿ ಸೋಲನ್ನು ಅನುಭವಿಸಿದಾಗ ಆ ಅನುಭವವೇ ಜೀವನದ ಗೆಲುವಿಗೆ ಪ್ರೇರೇಪಿಸುತ್ತದೆ’ ಎಂದು ಹೇಳಿದರು.

ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯ ಡಾ.ಪ್ರಭುದೇವ ಮಾತನಾಡಿ, ‘ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು. ಕಷ್ಟಪಟ್ಟಾಗ ಮಾತ್ರ ಯಶಸ್ಸು ಸಾಧ್ಯ. ಯಾವ ಕೆಲಸವೂ ಕೀಳಲ್ಲ. ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು’ ಎಂದು ಸಲಹೆ ನೀಡಿದರು.

ವಿದ್ಯಾಸಂಸ್ಥೆಯ ಜಸ್ಟಿನ್ ಡಿ’ಸೌಜ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿ ಬಿ.ಎಸ್‌. ಸೌಜನ್ಯ, ಸಿದ್ಧಗಂಗಾ ಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT