ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ನೌಕರಿಗೆ ಬೈ, ಸಾವಯವ ಕೃಷಿಗೆ ಜೈ: ಬಹುವಿಧ ಬೆಳೆಯಲ್ಲಿ ಯಶ ಕಂಡ ರೈತ ನವೀನ್

ಬಹುವಿಧ ಬೆಳೆಯಲ್ಲಿ ಯಶ ಕಂಡ ರೈತ ನವೀನ್ ನಾಗೋಳ್‌
Last Updated 7 ಸೆಪ್ಟೆಂಬರ್ 2022, 3:52 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಗಳೂರಿನ ಫಾರ್ಮಾ ಕಂಪನಿಯೊಂದರ ಕೆಲಸ ಬಿಟ್ಟುಬಂದು ಇಲ್ಲೊಬ್ಬರು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ಹರಿಹರ ತಾಲ್ಲೂಕಿನ ದೀಟೂರು ಗ್ರಾಮದ ನವೀನ್ ನಾಗೋಳ್ ಅವರು ಸಾವಯವ, ಸಮಗ್ರ ಕೃಷಿ ಕೈಗೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಮೊರೆ ಹೋಗದೇ ಸ್ವತಃ ಸಾವಯವ ಗೊಬ್ಬರ ತಯಾರಿಸಿ ಕೃಷಿ ಮಾಡುತ್ತಿದ್ದಾರೆ. ಅನೇಕ ರೈತರು ಇವರಿಂದ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

ನವೀನ್ ನಾಗೋಳ್ ಅವರು ತಮ್ಮ 6 ಎಕರೆ ಜಮೀನಿನಲ್ಲಿ ತೈವಾನ್ ಸೀಬೆ, ಸೀತಾಫಲ ಹಾಗೂ ನುಗ್ಗೆಕಾಯಿ ಬೆಳೆದಿದ್ದಾರೆ. ಇವುಗಳ ಮಧ್ಯದಲ್ಲೇ ಸೊಪ್ಪು, ತರಕಾರಿ, ಸುತ್ತಲೂ ಶ್ರೀಗಂಧದ ಗಿಡಗಳನ್ನೂ ನಾಟಿ ಮಾಡಿದ್ದಾರೆ. ಕಾಲು ಎಕರೆಯಲ್ಲಿ ಭತ್ತವನ್ನೂ ಬೆಳೆದಿದ್ದಾರೆ.

ಇದರ ಜೊತೆಗೆ ಉಪ ಕಸುಬಾಗಿ ಜೇನು ಕೃಷಿ ಮಾಡಿ ಎಲ್ಲರೂ ಕಣ್ಣರಳಿಸುವಂತೆ ಮಾಡಿದ್ದಾರೆ. ಪ್ರತಿ ತಿಂಗಳು ಕೃಷಿ, ಉಪಕಸುಬುಗಳ‌ ಮೂಲಕ ಎಲ್ಲ ಖರ್ಚು ತೆಗೆದು ತಿಂಗಳಿಗೆ ₹ 25,000ರಿಂದ ₹ 30,000 ಲಾಭ ಗಳಿಸುತ್ತಿದ್ದಾರೆ.

‘ನಮ್ಮ ತಂದೆ ಹಾಗೂ ತಾತ ಮೂಲತಃ ಕೃಷಿಕರು. ಎಲ್ಲರೂ ರಾಸಾಯನಿಕ ಬಳಸಿ ಕೃಷಿ ಮಾಡುತ್ತಾರೆ. ಆದರೆ ಸಾವಯವ ಕೃಷಿಯಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬ ಆಲೋಚನೆ ಬಂತು. ಜೀವಾಮೃತ ಒಂದರಿಂದಲೇ ಕೃಷಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ನಾನೇ ಸಾವಯವ ಗೊಬ್ಬರ ತಯಾರಿಸುತ್ತಿದ್ದೇನೆ.ಕಾಡಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನನಗೆ ಪ್ರೇರಣೆ ನೀಡಿತು’ ಎಂದು ನವೀನ್ ಹೇಳಿದರು.

‘ಒಂದು ಬೆಳೆಯಲ್ಲಿ ನಷ್ಟ ಹೊಂದಿದರೂ ಮತ್ತೊಂದು ಬೆಳೆಯಲ್ಲಿ ಆ ನಷ್ಟವನ್ನು ತುಂಬಿಕೊಳ್ಳಬೇಕು ಎಂಬುದು ನನ್ನ ಆಲೋಚನೆ. ಅದಕ್ಕಾಗಿಯೇ ತೈವಾನ್‌ ಸೀಬೆ, ಸೀತಾಫಲ, ನುಗ್ಗೆ ಗಿಡಗಳಿಂದ ಆದಾಯ ಬರುವಂತೆ ಯೋಜನೆ ರೂಪಿಸಿಕೊಂಡಿದ್ದೇನೆ. ಜಮೀನಿನಲ್ಲಿ 15 ಬಗೆಯ ಹಣ್ಣಿನ ಗಿಡಗಳನ್ನು ಹಾಕಿದ್ದೇನೆ. ಇನ್ನೂ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸುವ ಆಲೋಚನೆ ಇದೆ’ ಎಂದು ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ವಿವರಿಸಿದರು.

ಉದ್ಯೋಗ ಖಾತರಿಯಡಿ ಸಬ್ಸಿಡಿ: ‘ಉದ್ಯೋಗ ಖಾತರಿ ಯೋಜನೆಯ ಅಡಿ ತೋಟಗಾರಿಕೆ ಇಲಾಖೆಯಿಂದ
₹ 2.50 ಲಕ್ಷ ಸಬ್ಸಿಡಿ ಸಿಕ್ಕಿದೆ. ಅದರಲ್ಲಿ ₹ 2 ಲಕ್ಷ ಖರ್ಚು ಮಾಡಿ ತೈವಾನ್ ಸೀಬೆಹಣ್ಣು ಬೆಳೆದಿದ್ದಾರೆ. ಒಂದು ಎರೆ ಹುಳು ತೊಟ್ಟಿಗೆ ₹ 27,000ದಂತೆ 2 ಎರೆಹುಳು ತೊಟ್ಟಿಯನ್ನು ನಿರ್ಮಿಸಿದ್ದೇನೆ. ಒಂದು ಬಾರಿಗೆ 4 ಟನ್ ಎರೆಹುಳು ಗೊಬ್ಬರ ಸಿಗುತ್ತದೆ. 1 ಕೆ.ಜಿಗೆ ₹ 15 ಸಿಗುತ್ತಿದೆ’ ಎಂದು ನವೀನ್
ತಿಳಿಸಿದರು.

‘ಒಂದೇ ಬೆಳೆಯನ್ನು ಬೆಳೆದರೆ ಭೂಮಿಯ ಸತ್ವ ಹಾಳಾಗುತ್ತದೆ ಎಂಬುದನ್ನು ಮನಗಂಡು ಸೊಪ್ಪು, ತರಕಾರಿಗಳ ಜೊತೆಗೆ ಹುಚ್ಚೆಳ್ಳು, ಸಾಸಿವೆ, ಕರಿಎಳ್ಳು ಹಾಕಲು ಯೋಜನೆ ರೂಪಿಸಿದ್ದೇನೆ. ಹುಚ್ಚೆಳ್ಳು ಬೆಳೆಯ ಪರಾಗಸ್ಪರ್ಶದಿಂದಾಗಿ ಜೇನು ಕೃಷಿಗೆ ಅನುಕೂಲವಾಗುತ್ತದೆ' ಎಂಬುದು ನವೀನ್ ಅವರ ಅಭಿಪ್ರಾಯ.

ಹರಿಹರದಲ್ಲಿ ಈಚೆಗೆ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನವೀನ್ ಅವರನ್ನು ಗೌರವಿಸಿದೆ. ಈಚೆಗೆ ನಡೆದ ದಿಶಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ತೈವಾನ್‌ ಸೀಬೆ ಹಣ್ಣನ್ನು ನೀಡಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ.

....

ಬೆಂಗಳೂರಿನಲ್ಲಿದ್ದಾಗಬರುತ್ತಿದ್ದ ಸಂಬಳ ಜೀವನಕ್ಕೆ ಸಾಲುತ್ತಿರಲಿಲ್ಲ. ಇದರಿಂದಾಗಿ ಕೃಷಿಯಲ್ಲೇ ನೆಮ್ಮದಿ ಕಾಣಬಹುದು ಎಂಬ ನಿರ್ಧಾರಕ್ಕೆ ಬಂದೆ. ಕಷ್ಟಪಟ್ಟು ದುಡಿದರೆ ಭೂಮಿ ತಾಯಿ ಯಾವತ್ತೂ ಕೈಬಿಡುವುದಿಲ್ಲ.

ನವೀನ್ ನಾಗೋಳ್, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT