ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 4.33 ಎಕರೆ ತೋಟದಲ್ಲಿ ವೈವಿಧ್ಯಮಯ ಬೆಳೆ

ಅಡಿಕೆ, ವೀಳ್ಯದೆಲೆಯಲ್ಲಿ ಉತ್ತಮ ಆದಾಯ ಕಂಡುಕೊಂಡ ಮಾಯಕೊಂಡದ ರೈತ ಲಕ್ಷ್ಮಣ
Last Updated 1 ಡಿಸೆಂಬರ್ 2021, 4:01 IST
ಅಕ್ಷರ ಗಾತ್ರ

ದಾವಣಗೆರೆ: ರೈತ ಬೆಳೆಯಲ್ಲಿ ನಷ್ಟವಾಗಿ ಕೈಸುಟ್ಟುಕೊಳ್ಳುವುದು ಸಹಜ. ಆದರಿಂದ ಧೃತಿಗೆಡದೇ ಮುನ್ನಡೆದರೆ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಮಾಯಕೊಂಡದ ರೈತ ಬಿ. ಲಕ್ಷ್ಮಣ.

ಲಕ್ಷ್ಮಣ ಅವರು ತಮ್ಮ4.33ಎಕರೆಜಮೀನಿನಲ್ಲಿ ಚೆಂದವಾದ ತೋಟವನ್ನು ಮಾಡಿ ಉತ್ತಮ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಆರಂಭದಲ್ಲಿ ಹಲವು ಬೆಳೆಗಳನ್ನು ಬೆಳೆದು ನಷ್ಟವಾಗಿ ಕೈಸುಟ್ಟುಕೊಂಡರೂ ಎದೆಗುಂದಲಿಲ್ಲ. ಈಗ ಅಡಿಕೆ,ವೀಳ್ಯದೆಲೆ,ತೆಂಗು ಬೆಳೆಗಳನ್ನು ಬೆಳೆದು ಆದಾಯ ಪಡೆಯುತ್ತಿದ್ದಾರೆ.

ಮಾಯಕೊಂಡದ ನೀರುಳ್ಳಿ ಭೀಮಣ್ಣ ಅವರ ಪುತ್ರರಾದ ಲಕ್ಷ್ಮಣ 8ನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ಓದು ನಿಲ್ಲಿಸಿ ಕೃಷಿ ಆರಂಭಿಸಿದರು. ಬೆಳೆದ ಬೆಳೆಯನ್ನು ಸಂತೆಯಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆರಂಭದಲ್ಲಿ ಈರುಳ್ಳಿ,ಹತ್ತಿ,ಕಾಡು ಬದನೆ, ಕುಂಬಳಕಾಯಿ,ಬಾಳೆ ಎಲ್ಲವನ್ನೂ ಬೆಳೆದರು. ಯಾವ ಬೆಳೆಯೂ ನಿರೀಕ್ಷಿಸಿದಷ್ಟು ಲಾಭ ತಂದುಕೊಡಲಿಲ್ಲ. ಅರಿಸಿಣ ಬೆಳೆ ಬೆಳೆದರೂ ಬಂದ ಹಣ ಕೂಲಿ ಆಳುಗಳಿಗೂ ಸಾಲಲಿಲ್ಲ.ಕಡೆಗೆ ಇರುವ ನಾಲ್ಕೂವರೆ ಎಕರೆ ಜಮೀನಿನಲ್ಲಿ ತೋಟ ಮಾಡುವ ಛಲ ಬಂದಿತು.

ದಿಟ್ಟ ನಿರ್ಧಾರ ಕೈಗೊಂಡು ಅಡಿಕೆ ಕೃಷಿ ಮಾಡಲು ಮುಂದಾದರು. ಇವರ ಪ್ರಯತ್ನದ ಫಲವಾಗಿ ಇಂದು 2,500 ಅಡಿಕೆ ಗಿಡಗಳು ಫಸಲು ನೀಡುತ್ತಿವೆ. ಇ‌ನ್ನೂ 2,000 ಅಡಿಕೆ ಗಿಡಗಳು ಫಸಲು ನೀಡುವ ಹಂತದಲ್ಲಿವೆ. ತೋಟದ ಸುತ್ತಲೂ 110 ತೆಂಗಿನ ಗಿಡಗಳು, 15ಸಿಲ್ವರ್ ಓಕ್‌ ಮರಗಳು, 30ತೇಗದ ಮರಗಳನ್ನು ಬೆಳೆಸಿದ್ದಾರೆ.

‘ಅಡಿಕೆ ಗಿಡಗಳ ಸುತ್ತ ವೀಳ್ಯದೆಲೆ ಬಳ್ಳಿಯನ್ನು ಹಬ್ಬಿಸಿದ್ದು,ತಿಂಗಳಿಗೆ 60ರಿಂದ 80 ಪಿಂಡಿ ಎಲೆ ಕೊಯ್ಯುತ್ತಿದ್ದಾರೆ. ಕೊರೊನಾ ಸಮಯದಲ್ಲಿ ದರ ಕುಸಿತ ಕಂಡು ನಷ್ಟ ಅನುಭವಿಸಿದರೂ ಈಗ ಉತ್ತಮ ದರ ಬಂದಿದೆ. ಒಂದು ಪಿಂಡಿಗೆ₹ 3,000ದಿಂದ ₹ 6,000ದವರೆಗೂ ದರ ಸಿಕ್ಕಿದೆ’ ಎನ್ನುತ್ತಾರೆ ಲಕ್ಷ್ಮಣ.

‘ಪ್ರಸ್ತುತ 40ರಿಂದ 55 ಕ್ವಿಂಟಲ್ ಅಡಿಕೆ ಬಂದಿದೆ. ಖರ್ಚು ಕಳೆದು ಎರಡು ವರ್ಷಗಳಿಂದ ₹ 20ಲಕ್ಷ, ಎಲೆಬಳ್ಳಿಯಿಂದ ₹ 10 ಲಕ್ಷ ಬಂದಿದೆ. ಮುಂದಿನ ದಿನಗಲ್ಲಿ 2000 ಅಡಿಕೆ ಗಿಡಗಳಿಂದಲೂ ಫಸಲು ಬರಲಿದ್ದು,100 ಕ್ವಿಂಟಲ್ ಅಡಿಕೆ ತೆಗೆಯಬಹುದು. ವರ್ಷಕ್ಕೆ ₹50 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹನಿ ನೀರಾವರಿ:‘ಇಲ್ಲಿಯವರೆಗೆ 26ಬೋರ್‌ವೆಲ್‌ ಕೊರೆಸಿದ್ದು,ಅವುಗಳಲ್ಲಿ 16 ವಿಫಲವಾಗಿವೆ. ಇರುವ 10 ಬೋರ್‌ವೆಲ್‌ಗಳಲ್ಲಿ ಹನಿ ನೀರಾವರಿ ಅಳವಡಿಸಿದ್ದು,ಎಲೆ ಬಳ್ಳಿ,ಅಡಿಕೆ ಗಿಡಗಳಿಗೆ ನೀರು ಬೀಳುವಂತೆ ಮಾಡಿದ್ದೇನೆ. ನಾನು ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಬದಲಾಗಿ ಕೆರೆ ಮಣ್ಣು ಹಾಗೂ ತಿಪ್ಪೆ ಗೊಬ್ಬರ ಮಿಶ್ರಣ ಮಾಡಿ ಸಾವಯವ ಗೊಬ್ಬರ ತಯಾರಿಸಿಕೊಂಡು ಅಡಿಕೆ ಹಾಗೂ ಎಲೆ ಬಳ್ಳಿಗಳಿಗೆ ಹಾಕುತ್ತಿದ್ದೇನೆ’ ಎಂದು ಹೇಳುತ್ತಾರೆ.

‘ಕೃಷಿಯಿಂದಲೇ ಮೂವರು ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸಿದ್ದೇನೆ. ನನ್ನ ಜೊತೆ ಪತ್ನಿ ಹನುಮಂತಮ್ಮಕೈಜೋಡಿಸಿದ್ದಾರೆ’ ಎಂದು ಹೇಳುತ್ತಾರೆ.

...

ರೈತನಿಗೆ ದುಡಿಮೆಯೇ ಮುಖ್ಯ. ಬೆಳೆ ಸರಿಯಾಗಿ ಬಾರದಿದ್ದರೆ ರೈತನ ನಿರ್ಲಕ್ಷ್ಯವೂ ಕಾರಣವಾಗುತ್ತದೆ. ಬೆಳೆಯಲ್ಲಿ ನಷ್ಟವಾಗುವುದು ಸಹಜ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬಾರದು.

– ಲಕ್ಷ್ಮಣ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT