ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ವೈವಿಧ್ಯಮಯ ಬೆಳೆಗಳ ಮಾದರಿ ಕೃಷಿ

ಕೆ. ಗಾಣದಕಟ್ಟೆ ಗ್ರಾಮದ ಪ್ರಗತಿಪರ ರೈತ ಪೂಜಾರ್ ರಂಗಪ್ಪ
Last Updated 2 ನವೆಂಬರ್ 2022, 6:44 IST
ಅಕ್ಷರ ಗಾತ್ರ

ಚನ್ನಗಿರಿ: ಸಮಗ್ರ ಕೃಷಿ ಪದ್ಧತಿ ಹಾಗೂ ಇಸ್ರೇಲ್‌ ಮಾದರಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಅಡಿಕೆ ತೋಟದಲ್ಲಿ
ಪರ್ಯಾಯ ಬೆಳೆ ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ ತಾಲ್ಲೂಕಿನ ಕೆ.ಗಾಣದಕಟ್ಟೆ ಗ್ರಾಮದ ಪ್ರಗತಿಪರ ರೈತ ಪೂಜಾರ್
ರಂಗಪ್ಪ.

ಪಟ್ಟಣದಿಂದ ಭದ್ರಾವತಿ ರಸ್ತೆಯಲ್ಲಿ 10 ಕಿ.ಮೀ. ಸಾಗಿದರೆ ಕೆ. ಗಾಣದಕಟ್ಟೆ ಗ್ರಾಮ ಬರುತ್ತದೆ. ಗ್ರಾಮದಲ್ಲಿ ಪೂಜಾರ್ ರಂಗಪ್ಪ ಅವರಿಗೆ 40 ಎಕರೆ ಭೂಮಿ ಇದ್ದು, 30 ಎಕರೆಯಲ್ಲಿ ಈಗಾಗಲೇ ಅಡಿಕೆ ಫಸಲು ಬರುತ್ತಿದೆ. ಇದನ್ನೊಂದೇ ನಂಬಿ ಕೂರಬಾರದು ಎಂದು ವಿವಿಧ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.

ತಲಾ 3 ಎಕರೆ ಪ್ರದೇಶದಲ್ಲಿ ಸಾವಯವ ಹಾಗೂ ರಾಸಾಯನಿಕ ಕೃಷಿ ಪದ್ಧತಿ ಅಡಿ ಬಾಳೆ ಬೆಳೆ ಹಾಕಿದ್ದಾರೆ. ಉಳಿದೆಡೆ 800 ರಕ್ತ ಚಂದನ ಸಸಿ, 300 ಮಹಾಗನಿ ಸಸಿ, 200 ಸಾಗವಾನಿ ಸಸಿ, ಏಲಕ್ಕಿ, ಕಾಳು ಮೆಣಸು, 250 ನೇರಲ ಸಸಿಗಳನ್ನು ಹಾಕಿದ್ದಾರೆ. ತಾಲ್ಲೂಕಿನಲ್ಲಿಯೇ ಇದೇ ಪ್ರಥಮ ಬಾರಿಗೆ 300 ಸೇಬು ಹಣ್ಣಿನ ಸಸಿಗಳನ್ನು ಹಾಕಿದ್ದಾರೆ. ಈ ಎಲ್ಲಾ ಬೆಳೆಗಳಿಗೂ ಪ್ರತಿ ವರ್ಷ 2,000 ಲೀಟರ್ ಜೀವಾಮೃತವನ್ನು ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಅಡಿಕೆ ಸುಲಿದ ಸಿಪ್ಪೆಯನ್ನು ರೈತರು ರಸ್ತೆ ಬದಿಗಳಲ್ಲಿ ಹಾಕಿ ಸುಡುತ್ತಾರೆ. ಆದರೆ, ಇವರು ಶಿವಮೊಗ್ಗದ ಕೃಷಿ ಕೇಂದ್ರದ ಸಹಯೋಗದಲ್ಲಿ ಡಿಕಾಂಪೋಸ್ಟರ್ ಮಿಶ್ರಣವನ್ನು ತಂದು ಅಡಿಕೆ ಸಿಪ್ಪೆಯೊಂದಿಗೆ ಬೆರೆಸಿ ಗೊಬ್ಬರ ಮಾಡಿಕೊಳ್ಳುತ್ತಾರೆ. ಪ್ರಸಕ್ತ ವರ್ಷ 30 ಟ್ರ್ಯಾಕ್ಟರ್ ಲೋಡ್‌ ಗೊಬ್ಬರ ತಯಾರಿಸಿದ್ದಾರೆ. ಇದರ ಜತೆಗೆ ಎರೆಹುಳು ತೊಟ್ಟಿಗಳನ್ನು ನಿರ್ಮಿಸಿದ್ದು, ಆ ಮೂಲಕವೂ ಗೊಬ್ಬರ ಉತ್ಪಾದಿಸುತ್ತಿದ್ದಾರೆ.

ರಂಗಪ್ಪ ಅವರು ಸಮಗ್ರ ಕೃಷಿ ಪದ್ಧತಿ ಮೂಲಕ ಉತ್ತಮ ಇಳುವರಿ ಪಡೆದಿರುವುದನ್ನು ಗುರುತಿಸಿ 2020ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ಉತ್ತಮ ಕೃಷಿಕ ಹಾಗೂ 2022ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೃಷಿ ಇಲಾಖೆ ನೀಡಿ ಗೌರವಿಸಿದೆ.

‘2020ರಲ್ಲಿ ನಾಡಿನಾದ್ಯಂತ ಕೊರೊನಾ ಅಬ್ಬರ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ 4,000 ಬಾಳೆ ಕಂದುಗಳನ್ನು ಹಾಕಿದ್ದೆವು. ಕೃಷಿ ಇಲಾಖೆಯ ಸಹಕಾರದಿಂದ ₹ 26 ಲಕ್ಷ ಮೌಲ್ಯದ ಬಾಳೆ ಗೊನೆಗಳನ್ನು ಮಾರಾಟ ಮಾಡಿದೆವು’ ಎನ್ನುತ್ತಾರೆ ಪೂಜಾರ್ ರಂಗಪ್ಪ.

‘ಅಡಿಕೆ ತೋಟದಲ್ಲಿ ತೊಗರಿಮುಂತಾದ ಪೌಷ್ಟಿಕಾಂಶ ಕೊಡುವ ಬೆಳೆಗಳನ್ನು ಬೆಳೆದು ಅಡಿಕೆ ಮರಗಳಿಗೆ ಹಸಿರೆಲೆ ಗೊಬ್ಬರ ಸಿಗುವಂತೆ ಮಾಡಲಾಗಿದೆ. ವರ್ಷಕ್ಕೆ ಅಡಿಕೆ ಬೆಳೆಯೊಂದರಲ್ಲೇ ₹ 80 ಲಕ್ಷ ಆದಾಯ ಬರುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೃಷಿ ಮಾಡುತ್ತಿದ್ದೇವೆ. ರೈತರು ಯಾವುದೇ ಕಾರಣಕ್ಕೂ ಮನೆ ಮುಂದೆ ಬಂದು ಮಾರಾಟ ಮಾಡುವವರ ಬಳಿ ಬೀಜ, ಕೀಟನಾಶಕಗಳನ್ನು ಖರೀದಿಸಬಾರದು. ಕೃಷಿಯನ್ನು ನಂಬಿ ಮುನ್ನಡೆದರೆ ನಷ್ಟವಿಲ್ಲ’ ಎನ್ನುತ್ತಾರೆ ಅವರು.

.....................

ನನ್ನ ಕೃಷಿ ಕೆಲಸಗಳಿಗೆ ಮಗ ಲೋಹಿತ್ ಸಹಕಾರವಿದೆ. ಅವನು ಎಂಬಿಎ ಮುಗಿಸಿದ್ದು, ನೌಕರಿಗಾಗಿ ಹೊರಗೆ ಹೋಗದೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ನನ್ನೊಂದಿಗೆ ದುಡಿಯುತ್ತಿದ್ದಾನೆ. ಕೃಷಿ ಪರಿಕರಗಳ ಡಿಪ್ಲೊಮಾ ಕೋರ್ಟ್‌ನಲ್ಲಿ ಮೊದಲ ರಾಂಕ್ ಗಳಿಸಿ, ಚಿನ್ನದ ಪದಕವನ್ನು ಪಡೆದುಕೊಂಡಿದ್ದಾನೆ.
ಪೂಜಾರ್ ರಂಗಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT