ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂದ’ ಕ್ರಾಂತಿ ಮೊಳಗಿಸುವ ಎಚ್ಚರಿಕೆ

ಜಾತಿ ನಿಂದನೆ ಮಾಡಿದ ಪ್ರತಿಭಟನಕಾರರೇ ಕ್ಷಮೆ ಕೇಳಲಿ: ರಾಮಪ್ಪ ತಿರುಗೇಟು
Last Updated 25 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜಕೀಯ ಪ್ರೇರಿತವಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಜಾತಿ ನಿಂದನೆ ಮಾಡುವ ಮೂಲಕ ‘ಅಹಿಂದ’ ಸಮಾಜವನ್ನು ಅವಮಾನಿಸಲಾಗಿದೆ. ಹೀಗಾಗಿ 24 ಗಂಟೆಯೊಳಗೆ ಅವರು ಕ್ಷಮೆಯಾಚಿಸದೇ ಇದ್ದರೆ ಜಿಲ್ಲೆಯಲ್ಲಿ ಅಹಿಂದ ಕ್ರಾಂತಿ ನಡೆಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ತಿರುಗೇಟು ನೀಡಿದರು.

ಅಹಿಂದ ಸಮಾಜದ ನಾಯಕರೊಂದಿಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನೇರ್ಲಗಿಯಲ್ಲಿ ನನ್ನ ಮತವಿದೆ. ಅಂದು ಮತದಾನ ನಡೆಯುತ್ತಿದ್ದ ವೇಳೆ ಅಂಗಿಗೆ ‘ಚೌಕೀದಾರ್‌’ ಫಲಕ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ನನ್ನ ಜಾತಿಯನ್ನು ನಿಂದಿಸಿ ಚುನಾವಣೆಯ ವಾತಾವರಣವನ್ನು ಕೆಡಿಸಲು ಮುಂದಾಗಿದ್ದ. ಆ ಸಂದರ್ಭಕ್ಕೆ ಅನುಗುಣವಾಗಿ ನಾನು ಪ್ರತಿಕ್ರಿಯಿಸಿದ್ದೆ. ವೀರಶೈವ ಅಥವಾ ಲಿಂಗಾಯತ ಸಮಾಜದ ಹೆಸರನ್ನು ನಾನು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ಸರಿಯಾಗಿ ತಿಳಿದುಕೊಳ್ಳದೇ ಪ್ರತಿಭಟನೆ ನಡೆಸಿ, ಜಾತಿ ನಿಂದನೆ ಮಾಡಿದ ಅವರೇ ಕ್ಷಮೆ ಕೇಳಬೇಕು’ ಎಂದು ಪ್ರತಿಪಾದಿಸಿದರು.

‘ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ–ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಕೆಲವರು ಪ್ರತಿಭಟನೆ ನಡೆಸಿದ್ದಾರೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗಗಳ ಮಠಾಧೀಶರು, ರಾಜ್ಯ ಮಟ್ಟದ ನಾಯಕರು ಹಾಗೂ ದಲಿತ ಮುಖಂಡರನ್ನು ಭೇಟಿ ಮಾಡಿ ಮುಂದೆ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಜಿಲ್ಲೆಯಲ್ಲಿ ಇನ್ನು ಮುಂದೆ ಜಾತಿ ನಿಂದನೆ ಮಾಡಿದರೆ ನಾವು ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇವರಿಗೆ ಅಂಬೇಡ್ಕರ್‌ ನೆನಪಾಗಿರಲಿಲ್ಲ. ನನ್ನ ಹೇಳಿಕೆಯಿಂದಾದರೂ ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನೆ ಆರಂಭಿಸಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವುದು ಸ್ವಾಗತಾರ್ಹವಾಗಿದೆ’ ಎಂದು ವ್ಯಂಗ್ಯವಾಡಿದ ರಾಮಪ್ಪ, ‘ಸಂವಿಧಾನವನ್ನು ಸುಟ್ಟು ಹಾಕಬೇಕು ಎಂದು ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಹೇಳಿದಾಗ; ಸಂವಿಧಾನ ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾಗ ಇವರು ಎಲ್ಲಿಗೆ ಹೋಗಿದ್ದರು’ ಎಂದು ಪ್ರಶ್ನಿಸಿದರು.

‘ಮನುಸ್ಮೃತಿಯ ಸಣ್ಣ ಕುಳಗಳು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಲಾಗಿದೆ. ಅಶಾಂತಿಯ ವಾತಾವರಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ’ ಎಂದ ಅವರು, ‘ಈಶ್ವರ ದೇವರನ್ನು ಎಲ್ಲಾ ಸಮಾಜದವರೂ ಪೂಜಿಸುತ್ತಾರೆ. ಆದರೆ, ಇವರು ತಮಗೆ ಮಾತ್ರ ಸೀಮಿತವಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಇವರೇನು ಗುತ್ತಿಗೆ ಪಡೆದಿದ್ದಾರಾ’ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಗ್ಗೆ ಪ್ರಶ್ನಿಸಿದಾಗ, ‘ವಿಡಿಯೊದಲ್ಲಿ ಏನಿದೆ ಎಂಬುದನ್ನು ಬಹುಶಃ ಅವರು ನೋಡಿಲ್ಲ. ಸರಿಯಾದ ಮಾಹಿತಿ ಇಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಬೇಕು’ ಎಂದು ಉತ್ತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ ವೆಂಕಟೇಶ್‌, ಕಾಂಗ್ರೆಸ್‌ ಮುಖಂಡ ಸೋಮಲಿಂಗಪ್ಪ, ಬೈರೇಶ್‌ ಬಿಳಿಚೋಡ್‌, ಮಲ್ಲಿಕಾರ್ಜುನ, ಶೌಕತ್‌ ಅಲಿ ನವಿಲೇಹಾಳ, ಗ್ರಾಮ ಪಂಚಾಯಿತಿ ಸದಸ್ಯ ಪ್ರಭುದೇವ, ಎನ್‌. ಜಯಣ್ಣ, ಮಂಜುನಾಥ, ಬೆಳಲಗೆರೆ ರಾಮಚಂದ್ರಪ್ಪ, ಬಿ. ಸುನೀಲ್‌ಕುಮಾರ್‌ ಇದ್ದರು

ಜಾತಿ ನಿಂದನೆಗೆ ಕ್ರಮ

‘ವಿಡಿಯೊ ವೈರಲ್‌ ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್‌ ಕ್ರೈಂನಡಿ ದೂರು ನೀಡುತ್ತೇನೆ. ಜೊತೆಗೆ ಪ್ರತಿಭಟನೆ ನಡೆಸಿದ ವೇಳೆ ಕೆಲವರು ಜಾತಿ ನಿಂದನೆಯನ್ನೂ ಮಾಡಿದ್ದಾರೆ. ಅದರ ಬಗ್ಗೆ ಮಾಹಿತಿ ಪಡೆದು ಆ ಬಗೆಗೂ ದೂರು ದಾಖಲಿಸಲಾಗುವುದು’ ಎಂದು ರಾಮಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT