ಶುಕ್ರವಾರ, ಡಿಸೆಂಬರ್ 6, 2019
24 °C
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್

ಮನಸ್ಸು ಹತೋಟಿಯಲ್ಲಿದ್ದರೆ ಏಡ್ಸ್‌ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯೌವನಾವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಏಡ್ಸ್‌ನಂಥ ಮಾರಕ ಕಾಯಿಲೆಯಿಂದ ದೂರವಿರಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನುನೂ ಸೇವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡಿಗೇರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಮಂಗಳವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊರದೇಶದಿಂದ ಬಂದಿರುವ ಏಡ್ಸ್ ಎಂಬ ಕಾಯಿಲೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರೋಗಬಂದ ನಂತರ ಪರಿತಪಿಸುವ ಬದಲು ರೋಗಗಳು ಬಾರದಂತೆ ಮುನ್ನೆಚರಿಕೆಯನ್ನು ವಹಿಸಬೇಕು. ಎಚ್.ಐ.ವಿ. ಇದೆ ಎಂದು ತಿಳಿದಾಕ್ಷಣ ಕುಗ್ಗಿ ಹೋಗದೇ ಅದಕ್ಕೆ ಪರಿಹಾರ ಕಂಡುಕೊಂಡು ಬದುಕುಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣಾಧಿಕಾರಿ ಡಾ.ಕೆ.ಎಚ್.ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘2010ಕ್ಕೆ ಎಚ್‌ಐವಿ ಮುಕ್ತ ಸಮಾಜ ಮಾಡಲು ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಕಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆ ಕೂಡ ಕೈಜೋಡಿಸಿದೆ’ ಎಂದು ತಿಳಿಸಿದರು.

ಅನುಮಾನ ಇರುವ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಚ್‌ಐವಿ ಇರುವುದು ಖಾತ್ರಿಯಾದರೆ ಚಿಕಿತ್ಸೆ ಪಡೆಯಬೇಕು. ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಎಲ್ಲರಿಗೂ ದೊರೆಯಲಿದೆ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್, ‘ಇದು ಸಂಭ್ರಮದ ದಿನಾಚರಣೆಯಲ್ಲ. ಜಾಗೃತಿ ಮೂಡಿಸುವ ದಿನ. ಜನರಲ್ಲಿ ಅರಿವಿನ ಜತೆಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಸಮುದಾಯಗಳು ಮಾಡಬೇಕು’ ಎಂದು ತಿಳಿಸಿದರು.

ಚೀಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಎಲ್. ನಾಗರಾಜ್, ‘ವಿಶ್ವದಲ್ಲಿ ಏಡ್ಸ್‌ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಇದು ಅಪಾಯಕಾರಿ ಸ್ಥಾನ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ವೀರಭದ್ರೇಶ್ವರ ವೀರಗಾಸೆ ತಂಡ ಜಾಗೃತಿ ಕಲಾ ಪ್ರದರ್ಶನ ನೀಡಿತು. ಮಲ್ಲಿಕಾರ್ಜುನ, ರವಿಕುಮಾರ್ ಮತ್ತು ಸಂಗಡಿಗರು ’ಸಮುದಾಯವೇ ಶಕ್ತಿ’ ಎಂಬ ಶೀರ್ಷಿಕೆಯಡಿ ಏಡ್ಸ್ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು.

ಏಡ್ಸ್‌ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಬಿ.ಕೆ ಪ್ರಕಾಶ್. ವಕೀಲೆ ಮಧುರ.ಎಂ.ಎನ್. ಅವರೂ ಇದ್ದರು.

ಪ್ರತಿಕ್ರಿಯಿಸಿ (+)