ಮಾಲೂರು: ಅತ್ಯಾಚಾರ ಖಂಡಿಸಿ ಪ್ರತಿಭಟನೆ

7

ಮಾಲೂರು: ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published:
Updated:
Deccan Herald

ದಾವಣಗೆರೆ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಎ.ಐ.ಡಿ.ಎಸ್.ಒ, ಎ.ಐ.ಡಿ.ವೈ.ಒ ಮತ್ತು ಎ.ಐ.ಎಂ.ಎಸ್‌.ಎಸ್‌ ಕಾರ್ಯಕರ್ತರು ಜಂಟಿಯಾಗಿ ನಗರದ ಜಯದೇವ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳು ಪ್ರಜ್ಞಾವಂತ ನಾಗರಿಕರ ನೆಮ್ಮದಿ ಕೆಡಿಸುತ್ತಿವೆ. ಯಾರ ಮನೆಯೂ ಸುರಕ್ಷಿತವಲ್ಲ ಎಂಬ ವಾತಾವರಣ ನಿರ್ಮಾಣಗೊಂಡಿದೆ. ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಜಮ್ಮು–ಕಾಶ್ಮೀರದ ಕಠುವಾ, ಉತ್ತರ ಪ್ರದೇಶದ ಉನ್ನಾವ್‌, ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶದ ಜನರ ಆತ್ಮಸಾಕ್ಷಿಯನ್ನೇ ಕಲಕಿವೆ. ಇವುಗಳ ಸಾಲಿಗೆ ಈಗ ಮಾಲೂರಿನ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವೂ ಸೇರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎ.ಐ.ಎಂ.ಎಸ್.ಎಸ್. ಜಿಲ್ಲಾ ಸಂಘಟಕಿ ಭಾರತಿ ಮಾತನಾಡಿ, ‘ಹತ್ತು ದಿನಗಳ ನಂತರ ಇಡೀ ದೇಶ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಿದೆ. ಆದರೆ, ಹೆಣ್ಣುಮಕ್ಕಳಿಗೆ ನೆಮ್ಮದಿಯಿಂದ ಬದುಕಲೂ ಸ್ವಾತಂತ್ರ್ಯ ಇಲ್ಲದಂತಾಗಿದೆ. ಸಮಾಜದಲ್ಲಿ ವಿಕೃತಿಯ ಅಟ್ಟಹಾಸ ಮೆರೆಯಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಹಿಳೆಯರಿಗೆ ಗೌರವಯುತ ಬದುಕನ್ನು ನಡೆಸಲು ನೈತಿಕ ವಾತಾವರಣ ಸೃಷ್ಟಿಸಬೇಕು. ಭಗತ್‌ಸಿಂಗ್‌, ನೇತಾಜಿ ಸುಭಾಷ್‌ಚಂದ್ರ ಭೋಸ್‌, ಈಶ್ವರ ಚಂದ್ರ ವಿದ್ಯಾಸಾಗರ್, ಪ್ರೀತಿಲತಾ ಅವರು ನಮಗೆ ಆದರ್ಶರಾಗಿರಬೇಕು. ಅಶ್ಲೀಲ ಸಿನಿಮಾ ಸಾಹಿತ್ಯವನ್ನು ಸುಟ್ಟು ಹಾಕಬೇಕು’ ಎಂದು ಆಗ್ರಹಿಸಿದರು.

ಎ.ಐ.ಡಿ.ಎಸ್‌.ಒ ಜಂಟಿ ಕಾರ್ಯದರ್ಶಿ ನಾಗಜ್ಯೋತಿ, ‘ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಯನ್ನು ತಡೆಗಟ್ಟಲು ಆಗದ ಸರ್ಕಾರದಿಂದ ಇನ್ನೇನು ಮಾಡಲು ಸಾಧ್ಯ? ಅತ್ಯಾಚಾರ ಕೃತ್ಯದಲ್ಲಿ ಪ್ರಪಂಚದ ನಾಲ್ಕನೇ ಸ್ಥಾನದಲ್ಲಿರುವುದು ದೇಶದ ಅಭಿವೃದ್ಧಿಯೇ’ ಎಂದು ಪ್ರಶ್ನಿಸಿದರು.

ಎ.ಐ.ಡಿ.ವೈ.ಒ ಜಿಲ್ಲಾ ಉಪಾಧ್ಯಕ್ಷ ಮಧು ತೊಗಲೇರಿ ಅಧ್ಯಕ್ಷತೆ ವಹಿಸಿದ್ದರು. ತಿಪ್ಪೇಸ್ವಾಮಿ, ಸೌಮ್ಯಾ, ನಾಗಸ್ಮಿತಾ, ಮಮತಾ, ನೇತ್ರಾ, ರೇಣುಕಾ ಪ್ರಸನ್ನ, ಪ್ರವೀಣ್, ಗುರು, ಜೀವನ್, ಕಾವ್ಯಾ, ನಿಸಾರ್‌ ಅಹಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !