ಶ್ರಾವಣ ಮಾಸದಲ್ಲಿ ದುಶ್ಚಟಗಳ ಭಿಕ್ಷೆ

7
ಚಟ ದಾಸರಿಗೆ ಸದ್ಗುಣಗಳ ದೀಕ್ಷೆ ನೀಡಿದ ಬಸವಪ್ರಭು ಸ್ವಾಮೀಜಿ

ಶ್ರಾವಣ ಮಾಸದಲ್ಲಿ ದುಶ್ಚಟಗಳ ಭಿಕ್ಷೆ

Published:
Updated:
Deccan Herald

ದಾವಣಗೆರೆ: ಆಗಷ್ಟೇ ದಿನದ ಚಟುವಟಿಕೆ ಬಿರುಸುಗೊಳ್ಳುತ್ತಿದ್ದವು. ಕಾರ್ಮಿಕರು ಕೆಲಸಕ್ಕೆ ಹೊರಟರೆ, ಬ್ಯಾಗ್‌ ಹೊತ್ತ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರು. ಇವರನ್ನು ಎದುರಾದ ಬಸವಪ್ರಭು ಸ್ವಾಮೀಜಿ ಜೋಳಿಗೆ ಒಡ್ಡಿದರು. ದುಶ್ಚಟಗಳನ್ನು ಜೋಳಿಗೆಗೆ ಅರ್ಪಿಸುವಂತೆ ಬೇಡಿದರು.

ನಗರದ ಕೊಂಡಜ್ಜಿ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂದು ದೃಶ್ಯಗಳಿವು. ಸ್ವಾಮೀಜಿ ಜೋಳಿಗೆಗೆ ಬೀಡಿ, ಸಿಗರೇಟು, ಹೆಂಡದ ಬಾಟಲಿ, ಗುಟ್ಕಾ ಪೊಟ್ಟಣಗಳನ್ನು ಹಲವರು ಹಾಕಿದರು. ಹೀಗೆ, ಭಿಕ್ಷೆ ಹಾಕಿದವರಿಂದ ದುಶ್ಚಟ ತ್ಯಜಿಸುವ ಪ್ರತಿಜ್ಞೆಯನ್ನೂ ಸ್ವಾಮೀಜಿ ಮಾಡಿಸಿದರು.

ದಾವಣಗೆರೆಯನ್ನು ದುಶ್ಚಟಗಳಿಂದ ಮುಕ್ತ ಮಾಡುವ ಉದ್ದೇಶದಿಂದ ‘ಜಯದೇವ ಜೋಳಿಗೆ’ ಹೆಸರಿನಲ್ಲಿ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನಕ್ಕೀಗ 10ನೇ ವರ್ಷ ತುಂಬಿದೆ.

ರಕ್ತಪಾತರಹಿತ ಯುದ್ಧ:  ಈ ಹಿಂದೆ ಸೈನ್ಯ ಕಟ್ಟಿಕೊಂಡು, ಶತ್ರು ದೇಶಕ್ಕೆ ಸೈನಿಕರನ್ನು ನುಗ್ಗಿಸಿ, ಯುದ್ಧ ನಡೆಸಲಾಗುತ್ತಿತ್ತು. ಇದರಿಂದ ಸೈನಿಕರ ಪ್ರಾಣ ಹಾನಿ, ಅಪಾರ ಹಣ ನಷ್ಟವಾಗುತ್ತಿತ್ತು. ಇದನ್ನು ತಪ್ಪಿಸಲು, ಮಾದಕ ವಸ್ತುಗಳನ್ನು ಭಾರತದಂಥ ದೇಶಕ್ಕೆ ಸಾಗಣೆ ಮಾಡಲಾಗುತ್ತಿದೆ. ಯುವಕರನ್ನು ಚಟಗಳಿಗೆ ದಾಸರನ್ನಾಗಿಸಿ, ನಿರ್ವೀರ್ಯರನ್ನಾಗಿ ಮಾಡಲಾಗುತ್ತಿದೆ. ಯುವಕರು ದುರ್ಬಲರಾಗಿದ್ದಾರೆ; ರಕ್ತಪಾತ ಮಾಡದೇ ಜನರನ್ನು ಕೊಲ್ಲಲಾಗುತ್ತಿದೆ ಎಂದು ಬಸವಪ್ರಭು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕೂಲಿ ಕಾರ್ಮಿಕರು ದಿನಕ್ಕೆ ₹ 200–₹ 300 ದುಡಿದು, ಸಂಜೆ ಅದನ್ನೆಲ್ಲಾ ಕುಡಿಯಲು ಕಳೆಯುತ್ತಾರೆ. ಮಕ್ಕಳು ಹಸಿವಿನಿಂದ ನರಳುತ್ತಾರೆ. ಹಣ, ಆರೋಗ್ಯ ಎರಡನ್ನೂ ಕಳೆದುಕೊಳ್ಳುತ್ತಾರೆ. ಕೊನೆಗೆ ಸಾವೂ ಬರುತ್ತದೆ. ಮಕ್ಕಳು ಅನಾಥರಾದರೆ, ಆತನ ಹೆಂಡತಿ ವಿಧವೆಯಾಗುತ್ತಾಳೆ. ದುಶ್ಚಟ ಸಾಮಾಜಿಕ ಪಿಡುಗು, ಅದು ನಾಶವಾಗಬೇಕು ಎಂದು ಹೇಳಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ ಮಾತನಾಡಿ, ‘ಶ್ರಾವಣ ಮಾಸದಲ್ಲಿ ಜೋಳಿಗೆ ಹಿಡಿದಿರುವ ಬಸವಪ್ರಭು ಸ್ವಾಮೀಜಿ ಆರೋಗ್ಯಯುತ ಸಮಾಜ ಕಟ್ಟಲು ಮುಂದಾಗಿದ್ದಾರೆ. ಇದು ಇತರ ಮಠಾಧೀಶರಿಗೂ ಮಾದರಿ’ ಎಂದರು.

ಸವಿತಾ ಸಮಾಜದ ಅಧ್ಯಕ್ಷ ಎನ್‌. ರಂಗಸ್ವಾಮಿ, ಎಂ. ಬಸವರಾಜ್‌, ಬಿ.ಎಸ್. ಪರಶುರಾಮ್, ಆರ್. ಕರಿಬಸಪ್ಪ, ಶಿವಕುಮಾರ್, ಬಿ. ವೀರಣ್ಣ ಅವರೂ ಇದ್ದರು.

‘ಧಾನ್ಯ ಬೇಡ; ಚಟ ತ್ಯಜಿಸಿ’

‘ಶ್ರಾವಣ ಭಕ್ತಿಯ ಸುಗ್ಗಿ ಕಾಲ. ಮಠದಲ್ಲಿ ಪೂಜೆ, ಭಜನೆ, ದಾಸೋಹ ನಡೆಯುತ್ತವೆ. ಇದಕ್ಕಾಗಿ ಜೋಳಿಗೆ ಹಿಡಿದು ಸ್ವಾಮೀಜಿಗಳು ದವಸ, ಧಾನ್ಯ ಬೇಡುವುದು ಸಂಪ್ರದಾಯ. ಇದನ್ನೇ ಮಾರ್ಪಡಿಸಿ, ಸಮಾಜವನ್ನು ತಿದ್ದಲು ಜಯದೇವ ಜೋಳಿಗೆ ಹಿಡಿದಿದ್ದೇವೆ. ನಮಗೆ ಧಾನ್ಯ ಬೇಡ, ನಿಮ್ಮ ಚಟಗಳನ್ನು ಜೋಳಿಗೆಗೆ ಹಾಕಿ ಬಿಡಿ. ನಿಮ್ಮ ಕುಟುಂಬ ಸಂತೋಷದಿಂದ ಇರುತ್ತದೆ’ ಎಂದು ಸ್ವಾಮೀಜಿ ಭಕ್ತರನ್ನು ವಿನಂತಿಸಿದರು.

ಮದ್ಯಪಾನ ಎಲ್ಲಾ ಅಪರಾಧಗಳ ತಾಯಿ. ಅಂಥ ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣ ನಮ್ಮ ಆಶಯ.
ಬಸವಪ್ರಭು ಸ್ವಾಮೀಜಿ, ವಿರಕ್ತಮಠ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !