ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಶೇ 5ರಷ್ಟು ಅನುದಾನ ಮೀಸಲಿಡಿ

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶಶಿಧರ್
Last Updated 7 ಸೆಪ್ಟೆಂಬರ್ 2019, 6:44 IST
ಅಕ್ಷರ ಗಾತ್ರ

ದಾವಣಗೆರೆ: ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗೆ ಶೇ 5ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶಶಿಧರ್ ಆಗ್ರಹಿಸಿದರು.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಿ ಅಸೋಸಿಯೇಷನ್ ಆಫ್‌ ಪೀಪಲ್ ವಿತ್‌ ಡಿಸೆಬಲಿಟಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೇ 5ರಷ್ಟು ಅನುದಾನ ಮೀಸಲಿಡುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿಲ್ಲ. ಅಂಗವಿಕಲ ಕಲ್ಯಾಣ ಅಧಿನಿಯಮದ ಆಯುಕ್ತರು ಜುಲೈ ತಿಂಗಳಲ್ಲಿ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗದುಕೊಂಡ ನಂತರ 15 ಇಲಾಖೆಗಳು ಕ್ರಿಯಾ ಯೋಜನೆ ತಯಾರಿಸಿವೆ. ಯಾವ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ತಯಾರಿಸಲ್ಲವೋ ಅವುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಯೊಬ್ಬ ಅಂಗವಿಕಲರಿಗೂ ಮ್ಯಾನುವೆಲ್ ಗುರುತಿನ ಚೀಟಿ ನೀಡುತ್ತಿದ್ದು, ಅದರಲ್ಲಿ ಯುನಿಕ್ ನಂಬರ್ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಚಿಗಟೇರಿ ಆಸ್ಪತ್ರೆಯ ಜಿಲ್ಲಾ ವೈದ್ಯಕೀಯ ಪ್ರಾಧಿಕಾರದಿಂದ ವಿತರಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಅಂಗವಿಕಲರು ಇರುವುದರಿಂದ ಎಲ್ಲರಿಗೂ ವಿತರಣೆ ಅಸಾಧ್ಯವಾಗುತ್ತದೆ. ಆದ್ದರಿಂದ ತಾಲ್ಲೂಕು ಮಟ್ಟದ ವೈದ್ಯಕೀಯ ಪ್ರಾಧಿಕಾರಗಳಿಂದಲೂ 3 ಮೂರು ವಾರಗಳಲ್ಲಿ ವಿತರಣೆ ಮಾಡಲಾಗುತ್ತದೆ.

‘ಅಂಗವಿಕಲರ ಗುರುತಿನ ಚೀಟಿಗಳನ್ನು ಈ ವರ್ಷದ ಅಂತ್ಯದಲ್ಲಿ ರದ್ದುಗೊಳಿಸಲಿದ್ದು, ಆಗ ಯಾವುದೇ ಸೌಲಭ್ಯವನ್ನು ಪಡೆಯಲು ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಅಂಗವಿಕಲರೂ ಯುಐಡಿ ಕಾರ್ಡ್‌ ಪಡೆದುಕೊಳ್ಳಲು ಒತ್ತು ನೀಡಬೇಕು. ತಾಲ್ಲೂಕು ಹಾಗೂ ಜಿಲ್ಲಾ ವೈದ್ಯಕೀಯ ಪ್ರಾಧಿಕಾರಗಳನ್ನು ಸಂಪರ್ಕಿಸಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಪಿಡಿ ಸಂಸ್ಥೆ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ, ‘ಎಪಿಡಿ ಸಂಸ್ಥೆಯು ರಾಜ್ಯದ 17 ಜಿಲ್ಲೆಗಳಲ್ಲಿ ಬೇರೆ ಎನ್‌ಜಿಒ ಜತೆಗೆ ಕಾರ್ಯನಿರ್ವಹಣೆ ಮಾಡುತ್ತಿದೆ. ಸಂಸ್ಥೆಯೇ ಅಂಗವಿಕಲರಿಗೆ ಬೇಕಾದ ಸಾಧನ ಸಲಕರಣೆ ತಯಾರಿಸುತ್ತಿದೆ. ಅಂಗವಿಕಲರಿಗೆ ಪುನರ್ವಸತಿ, ಸರ್ಕಾರಿ ಸೌಲಭ್ಯ, ಜೀವನ ರೂಪಿಸಿಕೊಳ್ಳಲು ನೆರವಾಗುತ್ತಿದೆ’ ಎಂದು ಹೇಳಿದರು.

ಬಾಧಿತ ವ್ಯಕ್ತಿ ನಾಗಭೂಷಣ ಮಾತನಾಡಿ ‘ಬೆನ್ನುಹುರಿ ಅಪಘಾತಕ್ಕೊಳಗಾದ ಬಳಿಕ ಜೀವನ ಬಹಳ ಕಷ್ಟಕರ. ಅಲ್ಲಿಗೆ ನಮ್ಮ ಜೀವನ ಮುಗಿಯಿತು ಎಂದುಕೊಳ್ಳಬಾರದು. ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ಸಂಸ್ಥೆ, ಇಲಾಖೆ ನೀಡುವ ತರಬೇತಿ, ಸಹಾಯ ಪಡೆದುಕೊಳ್ಳಬೇಕು. ಛಲದಿಂದ ಸಾಧನೆ ಮಾಡಬೇಕು. ಇದರತ್ತ ಸತತ ಪ್ರಯತ್ನ ಮಾಡುತ್ತಿರಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಕಿ ಅನಸೂಯ, ಎಪಿಡಿ ಸಂಸ್ಥೆಯ ನಿರ್ದೇಶಕ ಶಿವಾಸಿ ಹಿರೇಮಠ್‌, ಎಂ.ಆರ್‌.ಡಬ್ಲ್ಯು ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ವಜ್ರೇಶ್ವರಿ ಮಹಿಳಾ ಸಂಘಟನೆಯ ಸಂಸ್ಥಾಪಕಿ ವಿಜಯ ಅಕ್ಕಿ, ಅಧ್ಯಕ್ಷೆ ಭಾರತಿ ಕೇಶವಮೂರ್ತಿ ಇದ್ದರು. ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಅಂಕಿ ಅಂಶ

22,800

ಪಿಂಚಣಿ ಜಿಲ್ಲೆಯಲ್ಲಿರುವ ಅಂಗವಿಕಲರು

₹50 ಸಾವಿರ

ಅಂಗವಿಕಲರನ್ನು ಮದುವೆಯಾದರೆ ಸಿಗುವ ಹಣ

7,000

ಯುಐಡಿ ಕಾರ್ಡ್‌ ಪಡೆಯಲು ನೋಂದಣಿಯಾದವರು

2,300

ಯುಐಡಿ ಕಾರ್ಡ್‌ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT