ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ದೇಶದ ಅಂತಃಸತ್ವ ಬಿಟ್ಟು ಹೋದವರಲ್ಲ: ಪಾಂಡೆ

‘ಸ್ವರಾಜ್ಯ 75–ಆಡಳಿತದಲ್ಲಿ ವಿಕಾಸದತ್ತ ಭಾರತ’ ಉಪನ್ಯಾಸ ನೀಡಿದ ಡಾ. ದಿಲೀಪ್‌ ಕುಮಾರ್‌ ಪಾಂಡೆ
Last Updated 12 ಡಿಸೆಂಬರ್ 2021, 4:22 IST
ಅಕ್ಷರ ಗಾತ್ರ

ದಾವಣಗೆರೆ: ‘ಸಮಾಜದಲ್ಲಿ ಇರುವ ಅನಿಷ್ಟಗಳನ್ನು ಕಂಡ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನಾನು ಹಿಂದೂವಾಗಿ ಹುಟ್ಟಿರುವೆ. ಹಿಂದೂವಾಗಿ ಸಾಯಲಾರೆ ಎಂದು 1936ರಲ್ಲಿ ಹೇಳಿದ್ದರು. ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ 1955ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರು ಭಾರತದ ಅಂತಃಸತ್ವವನ್ನು ಬಿಟ್ಟು ಹೋದವರಲ್ಲ. ಇಲ್ಲದೇ ಇದ್ದರೆ ದೊಡ್ಡ ಅನಾಹುತವಾಗುತ್ತಿತ್ತು’ ಎಂದು ಉಪನ್ಯಾಸಕ ಡಾ. ದಿಲೀಪ್‌ ಕುಮಾರ್‌ ಪಾಂಡೆ ಅಭಿಪ್ರಾಯಪಟ್ಟರು.

ವರ್ತಮಾನ ವತಿಯಿಂದ ಶಾಂತಿ ರಾಯಲ್‌ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವರಾಜ್ಯ 75–ಆಡಳಿತದಲ್ಲಿ ವಿಕಾಸದತ್ತ ಭಾರತ’ ಬಗ್ಗೆ ಅವರು ಉಪನ್ಯಾಸ ನೀಡಿದರು.

‘ಹಿಂದೂ ಧರ್ಮದಲ್ಲಿ ಇರಲಾರೆ ಎಂದು ಹೇಳಿ ತಕ್ಷಣಕ್ಕೆ ಧರ್ಮ ಬಿಟ್ಟು ಹೋಗಲಿಲ್ಲ. ಜಗತ್ತಿನ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದರು. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳ್ಳುವಂತೆ ಅವರಿಗೆ ಆಮಿಷ ಒಡ್ಡಲಾಯಿತು. ಅಂಬೇಡ್ಕರ್‌ ಹೋಗಲಿಲ್ಲ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ₹ 7 ಕೋಟಿ ನೀಡುವುದಾಗಿ ಆಗಿನ ನಿಜಾಮ ಹೇಳಿದ್ದ. ಅಂಬೇಡ್ಕರ್‌ ನಿರಾಕರಿಸಿದ್ದರು. ಜೈನ, ಸಿಖ್‌, ಬೌದ್ಧ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ ಕೊನೆಗೆ ಬೌದ್ಧಧರ್ಮಕ್ಕೆ ಹೋದರು. ಹೋಗುವಾಗ ಅವರ ಜತೆ 5.5 ಲಕ್ಷ ಜನರನ್ನು ಕರೆದುಕೊಂಡು ಹೋದರು. ಅವರೇನಾದರೂ ಇಸ್ಲಾಂ ಧರ್ಮಕ್ಕೆ ಹೋಗಿದ್ದರೆ ಭಾರತ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ಈಗಲೇ ಹಮ್‌ ಪಾಂಚ್‌ ಹಮಾರ ಪಚ್ಚೀಸ್‌ ಎನ್ನುವವರು ಹೇಗಿರುತ್ತಿದ್ದರು’ ಎಂದು ಪ್ರಶ್ನೆ ಮುಂದಿಟ್ಟರು.

‘ಅಂಬೇಡ್ಕರ್‌ ಅವರು ಯಾವತ್ತೂ ಪ್ರಾಥಃಸ್ಮರಣೀಯರು. ಭಾರತಕ್ಕೊಂದು ಸಂವಿಧಾನವೂ ಇರಲಿಲ್ಲ. ಇಂಥ ಸಂವಿಧಾನ ಇರಬೇಕು ಎಂದು ರಚಿಸಿದವರು ಅವರು. ದೇಶಭಾಷೆ ಸಂಸ್ಕೃತವಾಗಬೇಕು. ಗೋವು ರಾಷ್ಟ್ರಪ್ರಾಣಿಯಾಗಬೇಕು. 10 ವರ್ಷಕ್ಕೊಮ್ಮೆ ನೋಟು ಬದಲಾವಣೆ ಆಗಬೇಕು ಎಂದೆಲ್ಲ ಅವರು ತಿಳಿಸಿದ್ದರು. ಆದರೆ ಅಂಬೇಡ್ಕರ್‌ರನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ’ ಎಂದರು.

ಈಜಿಪ್ಟ್‌ ನಾಗರಿಕತೆ, ಮೆಸಪಟೋಮಿಯ ನಾಗರಿಕತೆ, ಚೀನಾ ನಾಗರಿಕತೆ ಮತ್ತು ಭಾರತದ ನಾಗರಿಕತೆಗಳು ವಿಶ್ವದ ಮೊದಲ ನಾಲ್ಕು ನಾಗರಿಕತೆಗಳು ಈಜಿಪ್ಟ್‌ ನಾಗರಿಕತೆ ಇತ್ತು ಎನ್ನುವುದಕ್ಕೆ ಪಿರಮಿಡ್‌ಗಳಷ್ಟೇ ಉಳಿದವೆ. ಮೆಸಪಟೋಮಿಯಾ ಈಗ ಇಲ್ಲ. ಈ ಎರಡೂ ನಾಗರಿಕತೆಗಳ ಮೇಲೆ ಇಸ್ಲಾಂ ದಾಳಿಯಾಗಿದೆ. ಚೀನಾ ನಾಗರಿಕತೆ ಶೇ 80ರಷ್ಟು ನಾಶವಾಗಿದೆ. ಶೇ 20ರಷ್ಟು ಉಳಿದಿದೆ. ಆದರೆ ಭಾರತದ ನಾಗರಿಕತೆಯೂ ಭಾರತದ ಮೇಲೆ 3–4 ಸಾವಿರ ವರ್ಷಗಳಿಂದ ನಿರಂತರ ದಾಳಿ ಮಾಡಿ ಗಾಯಗೊಳಿಸಿದರೂ ಇನ್ನೂ ಉಳಿದಿದೆ ಮತ್ತು ನಿರಂತರವಾಗಿದೆ ಎಂದು ಹೇಳಿದರು.

ಮೈನಾರಿಟಿಸಂ, ಮಾರ್ಕಿಸ್ಟಿಸಂ ಮತ್ತು ಮಕಾಲೆಯಿಸಂ ಈ ದೇಶಕ್ಕೆ ಮಾರಕವಾಗಿದೆ. ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು ಎಂಬ ಶಿಕ್ಷಣವೇ ಸರಿ ಇಲ್ಲ. ಮಾರ್ಕಿಸ್ಟಿಸಂ ಕೂಡಾ ಅಷ್ಟೇ ಅಪಾಯಕಾರಿ. ಮೆಕಾಲೆಯಿಸಂ ನಮ್ಮನ್ನು ನಪುಂಸಕರನ್ನಾಗಿ ಮಾಡಿದೆ ಎಂದರು.

ಲಾರ್ಡ್‌ ವಿಲಿಯಂ ಬೆಂಟಿಂಕ್‌ ಆಗಿನ ಕಾಲದಲ್ಲಿ ಶಿಕ್ಷಣಕ್ಕಾಗಿ ₹ 1 ಲಕ್ಷ ಮೀಸಲಿಟ್ಟಾಗ ಎರಡು ಗುಂಪುಗಳು ಆ ಅನುದಾನ ಬೇಕು ಎಂದು ಕೇಳಿದವು. ಆಗಲೇ ದೇಶದಲ್ಲಿ ಗುರುಕುಲ ಪದ್ಧತಿ ಮತ್ತು ಮದರಸ ಪದ್ಧತಿ ಎಂಬ ಎರಡು ಶಿಕ್ಷಣ ಪದ್ಧತಿಗಳಿದ್ದವು. ಅದನ್ನೇ ಅಭಿವೃದ್ಧಿ ಪಡಿಸಬೇಕು ಎಂಬುದು ಮೊದಲ ಗುಂಪು ವಾದಿಸಿದರೆ, ಇವೆರಡೂ ಬೇಡ ಪಾಶ್ಚಿಮಾತ್ಯ ಶಿಕ್ಷಣ ನೀಡಿ ಎಂದು ಇನ್ನೊಂದು ಗುಂಪು ಕೇಳಿತು. ಈ ಗೊಂದಲವನ್ನು ಪರಿಸಹರಿಸುವುದಕ್ಕಾಗಿ ಮೆಕಾಲೆಯನ್ನು ಅಧ್ಯಯನ ಮಾಡಲು ನೇಮಿಸಲಾಯಿತು. ಆತನೇ ಇಲ್ಲಿನ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದ. ಈಗ ಗುರುಕುಲ ಪದ್ಧತಿ ನಾಶವಾಗಿ ಹೋಯಿತು. ಆದರೆ ಮದರಸ ಶಿಕ್ಷಣ ಪದ್ಧತಿ ಇನ್ನೂ ಉಳಿದುಕೊಂಡಿದೆ ಎಂದು ತಿಳಿಸಿದರು.

ವರ್ತಮಾನ ಸದಸ್ಯ ಮೇಘರಾಜ್‌ ಕೆ.ಎಂ. ಸ್ವಾಗತಿಸಿದರು. ಸಾಯಿದೀಪ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT