ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭಾವಚಿತ್ರ ವಿರೂಪ ಪ್ರಕರಣ: ಆರೋಪಿ ಬಂಧನ

Last Updated 20 ಸೆಪ್ಟೆಂಬರ್ 2019, 12:31 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಲ್ಲಿ ಅಣಬೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಣಬೂರು ಗ್ರಾಮದ ಎಸ್. ಕುಮಾರ ಬಂಧಿತ ಆರೋಪಿ. ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿನ್ನೆಲೆ: ಸೆ.7ರಂದು ರಾತ್ರಿ ಅಣಬೂರು ಗ್ರಾಮದಲ್ಲಿ ಎರಡು ಜನಾಂಗಗಳ ನಡುವಿನ ಕೆಲವು ವ್ಯಕ್ತಿಗಳ ಮಧ್ಯೆ ಜಗಳ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ ಭಾನುವಾರ ನಸುಕಿನಲ್ಲಿ ಗ್ರಾಮದಲ್ಲಿರುವ ಅಂಬೇಡ್ಕರ್ ನಾಮಫಲಕಕ್ಕೆ ಕೆಸರು ಹಚ್ಚಿ, ಚಪ್ಪಲಿ ಹಾರವನ್ನು ಕಟ್ಟಿ ಅಪಮಾನ ಮಾಡಲಾಗಿತ್ತು. ಘಟನೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಗ್ರಾಮದಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಎರಡು ಜನಾಂಗದ ವ್ಯಕ್ತಿಗಳ ಮಧ್ಯೆ ಜಗಳದ ಹಿನ್ನೆಲೆಯಲ್ಲಿ ಮತ್ತೊಂದು ಜನಾಂಗದವರು ತಮ್ಮ ಮೇಲೆ ಜಗಳಕ್ಕೆ ಬರಬಹುದು. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದರೆ ಹೆದರಿಕೊಂಡು ಸುಮ್ಮನಿರುತ್ತಾರೆ ಎಂದು ಗ್ರಾಮದ ಎ.ಕೆ. ಕಾಲೋನಿಯ ನಿವಾಸಿಯಾದ ಆರೋಪಿ ಈ ಕೃತ್ಯವನ್ನು ಎಸಗಿದ್ದು, ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಮಫಲಕ ಸ್ವಚ್ಛಗೊಳಿಸಿದ್ದ ಆರೋಪಿ:

ಘಟನೆ ಮರುದಿನ, ಪೊಲೀಸರು ಗ್ರಾಮಕ್ಕೆ ಬಂದಾಗ ಪೂಜಾರಿಯಾಗಿರುವ ಆರೋಪಿ ಕುಮಾರ್, ಪೊಲೀಸರ ಸಮ್ಮುಖದಲ್ಲಿ ಅಂಬೇಡ್ಕರ್ ನಾಮಫಲಕವನ್ನು ನೀರಿನಿಂದ ತೊಳೆದು, ಪೂಜೆ ಮಾಡಿದ್ದ. ಆ ಸಂದರ್ಭದಲ್ಲಿ ಶ್ವಾನದಳ ಬರುತ್ತಿರುವುದನ್ನು ತಿಳಿದ ಆರೋಪಿ ಗ್ರಾಮವನ್ನು ತೊರೆದು, ತಾಲ್ಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದ.

ತಾಲ್ಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಘಟನೆಯ ತನಿಖೆ ಜಾಡುಹಿಡಿದ ಪೊಲೀಸರು, ಆರೋಪಿಯ ಮೊಬೈಲ್ ಸಂಬಾಷಣೆಯ ವಿವರಗಳ ಆಧಾರದಲ್ಲಿ ತನಿಖೆ ನಡೆಸಿ 13 ದಿನಗಳ ನಂತರ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಪಿಐ ಡಿ. ದುಇರುಗಪ್ಪ, ಪಿಎಸ್ಐ ಇಮ್ರಾನ್ ಬೇಗ್, ಹಾಗೂ ಸಿಬ್ಬಂದಿ, ಬಿ.ಜಿ. ತಿರುಮಲೇಶ್, ಎಸ್. ಗೋವಿಂದರಾಜ್ ಪ್ರವೀಣ್ ಪಾಟೀಲ್, ಆರ್. ನಾಗಭೂಷಣ್, ಆರ್. ಶಶಿಧರ್, ಎ. ರಮೇಶ, ರಾಘವೇಂದ್ರ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ವಕಾಲತ್ತು ವಹಿಸದಿರಲು ತೀರ್ಮಾನ:

ಡಾ. ಅಂಬೇಡ್ಕರ್ ಅವರ ಭಾಚಿತ್ರಕ್ಕೆ ಚಪ್ಪಲಿಹಾರ ಹಾಕಿ ಅಪಮಾನಗೊಳಿಸಿದ ಘಟನೆಯ ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸದಂತೆ ಸಂಘದಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನ್ಯಾಯಾಲಯದಲ್ಲಿ ಆರೋಪಿ ಪರ ಯಾವುದೇ ವಕೀಲರು ಹಾಜರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT