ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟ ಪರಿಹಾರಕ್ಕೆ ಭದ್ರತೆ ಇಲ್ಲದೆ ಶೇ 20ರಷ್ಟು ಹೆಚ್ಚುವರಿ ಸಾಲ

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಸುಶೃತ ಶಾಸ್ತ್ರಿ
Last Updated 14 ಜುಲೈ 2020, 16:45 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಗ್ರಾಹಕರು ಆರ್ಥಿಕವಾಗಿ ಚೇತರಿಸಿಕೊಳ್ಳಲು ಗ್ಯಾರಂಟೀಸ್‌ ಎಮರ್ಜನ್ಸಿ ಕ್ರೆಡಿಟ್‌ ಲೈನ್‌ (ಜಿಇಸಿಎಲ್‌) ಮೂಲಕ ಮೂಲ ಸಾಲದ ಮೇಲೆ ಶೇ 20ರಷ್ಟು ಹೆಚ್ಚುವರಿ ಸಾಲವನ್ನು ಭದ್ರತೆ ಇಲ್ಲದೆ ನೀಡಲಾಗುವುದು’ ಎಂದುಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಸುಶೃತ ಡಿ. ಶಾಸ್ತ್ರಿ ತಿಳಿಸಿದರು.

ಮಂಗಳವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಅವರು ಬ್ಯಾಂಕಿಂಗ್‌ ಕುರಿತ ಜನರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ನ್ಯಾಷನಲ್‌ ಕ್ರೆಡಿಟ್‌ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿ.(ಎನ್‌.ಸಿ.ಜಿ.ಟಿ.ಸಿ) ಮೂಲಕ ಕೇಂದ್ರ ಸರ್ಕಾರ ಶೇ 100 ಭದ್ರತೆಯನ್ನು ಒದಗಿಸುತ್ತದೆ. ಹೀಗಾಗಿ ₹ 25 ಕೋಟಿಗಿಂತ ಕಡಿಮೆ ವಾರ್ಷಿಕ ವ್ಯವಹಾರ ಇರುವವರು ಈ ಯೋಜನೆಯನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದರು.

‘ಇದರ ಜೊತೆಗೆ ಈವರೆಗೆ ವಿವಿಧ ಸಾಲ ಪಡೆದವರಿಗೆ ಕೊರೊನಾ ಕಾರಣದಿಂದ ಸಾಲ ಮರುಪಾವತಿ ಮಾಡಲು ಕಷ್ಟವಾಗುತ್ತಿದ್ದಾರೆ ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಸಾಲದ ಕಂತು ತುಂಬುವುದಕ್ಕೆ ಸಮಯದ ವಿನಾಯಿತಿ ನೀಡಲಾಗಿದೆ. ಅಲ್ಲಿಯವರೆಗೆ ದಂಡವಿಲ್ಲದೆ ನಿಗದಿತ ಬಡ್ಡಿದರವೇ ಅನ್ವಯವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರಧಾನಮಂತ್ರಿ ಜನಧನ್‌ ಯೋಜನೆಯಡಿ ಪ್ರತಿ ಮಹಿಳೆಯ ಖಾತೆಗೆ ತಿಂಗಳಿಗೆ ₹ 500ರಂತೆ ಮೂರು ತಿಂಗಳು ಒಟ್ಟು ₹ 1500 ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 3,13,197 ಖಾತೆಗಳಿಗೆ ಹಣ ಜಮೆಯಾಗಿದೆ. ಕೃಷಿಕರಿಗೆ ಬೆಳೆಸಾಲದ ಜತೆಗೆ ಪಶುಸಂಗೋಪನೆಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್ಸ್‌ (ಕೆಸಿಸಿಎಸ್‌) ಮೂಲಕ ಸಾಲ ನೀಡಲು ಅವಕಾಶ ಇದೆ. ದನ, ಕೋಳಿ, ಕುರಿ, ಮೀನು ಮುಂತಾದವುಗಳನ್ನು ಸಾಕಬಹುದಾಗಿದೆ. ಉದಾಹರಣೆಗೆ ಒಂದು ದನ ಸಾಕುವುದಾದರೆ ತಿಂಗಳಿಗೆ 7 ಸಾವಿರದಂತೆ ಎರಡು ತಿಂಗಳಿಗೆ ₹ 14 ಸಾವಿರ ಸಾಲ ನೀಡಲಾಗುತ್ತದೆ. ಕೃಷಿಕರು ಈ ಯೋಜನೆಯನ್ನು ಬಳಸಿಕೊಳ್ಳಬಹುದು’ ಎಂದರು.

ಬೀದಿ ವ್ಯಾಪಾರಿಗಳಿಗೂ ಸಾಲ

‘ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯಡಿ ₹ 10 ಸಾವಿರವರೆಗೆ ಸಾಲ ನೀಡಲಾಗುತ್ತದೆ. ವಾಣಿಜ್ಯ, ಸಹಕಾರ, ರಾಷ್ಟ್ರಿಯ ಬ್ಯಾಂಕ್‌ಗಳು ಸೇರಿದಂತೆ ಎಲ್ಲಿ ಬೇಕಾದರೂ ಸಾಲ ಪಡೆಯಬಹುದು. ಒಂದು ವರ್ಷದಲ್ಲಿ ಮರುಪಾವತಿ ಮಾಡಬೇಕು. ಶೇ 7 ಬಡ್ಡಿ ಸಹಾಯಧನ ರೂಪದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಪಾವತಿ ಮಾಡುತ್ತದೆ ಎಂದು ಸುಶೃತ ಡಿ. ಶಾಸ್ತ್ರಿ ತಿಳಿಸಿದರು.

ಕೋವಿಡ್‌ ರಿಲೀಫ್‌ ಲೋನ್‌ ಎಂಬ ಯೋಜನೆಯೂ ಇದೆ. ಆಯಾ ಬ್ಯಾಂಕ್‌ನ ಖಾತೆದಾರರಲ್ಲಿ ಅರ್ಹರಿಗೆ ಸಾಲ ನೀಡಲಾಗುತ್ತದೆ. ಆಯಾ ಬ್ಯಾಂಕ್‌ನವರು ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಕೆನರಾ ಬ್ಯಾಂಕ್‌ನಿಂದ ಅರ್ಹರಿಗೆ ಈಗಾಗಲೇ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದರು.

ಸಿಬಿಲ್ ಸ್ಕೋರ್ ಇದ್ದರೆ ಸಾಲ ಸಲೀಸು

ದಾವಣಗೆರೆ: ಮುದ್ರಾ ಯೋಜನೆ ಸ್ಥಗಿತಗೊಂಡಿಲ್ಲ, ಚಾಲ್ತಿಯಲ್ಲಿದೆ. ₹10 ಲಕ್ಷದವರೆಗೆ ಸಾಲ ಪಡೆಯಲು ಕೇಂದ್ರ ಸರ್ಕಾರವೇ ಭದ್ರತೆ ಒದಗಿಸಲಿದೆ. ನೀವು ಯಾವುದೇ ಅಡಮಾನ ಕೊಡಬೇಕಿಲ್ಲ ಎನ್ನುತ್ತಾರೆ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ ಡಿ.ಶಾಸ್ತ್ರಿ.

ಮಂಗಳವಾರ ನಡೆದ ‘ಪ್ರಜಾವಾಣಿ ಫೋನ್ ಇನ್‌’ ಕಾರ್ಯಕ್ರಮದಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ಬಗ್ಗೆ ಮಾಹಿತಿ ನೀಡಿದ ಅವರು, ಸಿಬಿಲ್, ಕ್ರಿಫ್‌ ಸ್ಕೋರ್‌ಗಳು ಹೆಚ್ಚು ಇದ್ದರೆ ಸಾಲ ಪಡೆಯುವುದು ಸಲೀಸು ಎನ್ನುತ್ತಾರೆ.

* ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಸಾಲ ಕೇಳಲು ಹೋಗಿದ್ದೆ. ಸಾಲ ಏಕೆ ಕೊಡುತ್ತಿಲ್ಲ?

– ವೀರಭದ್ರಪ್ಪ, ಹುಲಿಕಟ್ಟೆ

ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳು ಯಾವುದಾದರೂ ಒಂದು ಹಣಕಾಸು ಸಂಸ್ಥೆಯಲ್ಲಿ ಸಾಲ ಇದ್ದರೆ ಮತ್ತೊಂದು ಹಣಕಾಸು ಸಂಸ್ಥೆಯಲ್ಲಿ ಸಾಲ ತೆಗೆದುಕೊಳ್ಳಲು ಅವಕಾಶವಿಲ್ಲ. ಈ ಹಿಂದೆ ನೀವು ₹ 30 ಸಾವಿರ ಬೆಳೆ ಸಾಲ ತೆಗೆದುಕೊಂಡಿರುವುದರಿಂದ ಅದೇ ಜಮೀನಿಗೆ ಮತ್ತೆ ಸಾಲ ಸಿಗುವುದಿಲ್ಲ. ಆ ಸಾಲವನ್ನು ಮರುಪಾವತಿ ಮಾಡಿ, ಮತ್ತೊಂದು ಬ್ಯಾಂಕಿನಲ್ಲಿ ಸಾಲ ಪಡೆಯಬಹುದು. ಅಂದಿನ ‘ಬೆಳೆಸಾಲ’ವೇ ಇಂದಿನ ‘ಕಿಸಾನ್ ಕ್ರೆಡಿಟ್ ಕಾರ್ಡ್‌’. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲೇ ತೆಗೆದುಕೊಂಡಿದ್ದರೂ ಅದು ಕಿಸಾನ್ ಕ್ರೆಡಿಟ್ ಸಾಲವೇ ಆಗಿದೆ.

* ಮುದ್ರಾ ಯೋಜನೆಯಡಿ ಸಾಲ ಕೇಳಲು ಹೋದರೆ ಸಾಗಹಾಕುತ್ತಿದ್ದಾರೆ. ಏನು ಮಾಡುವುದು?

– ಕೊಟೇಶ್, ಜಗಳೂರು

ಕಟ್‌ಬಾಕಿ ಸಾಲ ಇದ್ದರೆ ನಿಮಗೆ ಸಾಲ ಕೊಡಲು ಅವಕಾಶ ಇರುವುದಿಲ್ಲ. ನಿಮ್ಮ ಸಿಬಿಲ್ ಕ್ಲಿಯರ್ ಆಗಿದ್ದರೆ ಸಾಲ ಸಿಕ್ಕೇ ಸಿಗುತ್ತದೆ. ಒಂದು ವೇಳೆ ಕುರಿ ಸಾಕಣೆ ಮಾಡಬೇಕಾದರೆ ಎಷ್ಟು ಘಟಕಗಳು ಬೇಕು ಎಂಬುದರ ಪ್ರಾಜೆಕ್ಟ್ ತೆಗೆದುಕೊಂಡು ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ಡಿಸಿಸಿ ಬ್ಯಾಂಕ್‌ ಈಗ ಕಂಪ್ಯೂಟರೀಕರಣವಾಗಿದ್ದು, ಆನ್‌ಲೈನ್‌ ಸೌಲಭ್ಯ ಇದೆ. ಅಕೌಂಟ್‌ನಲ್ಲಿ ಜಮಾ ಆಗಿದ್ದರೆ ಹಣ ಸಿಗುತ್ತದೆ. ಯಾವ ಅಕೌಂಟ್‌ಗೆ ಜಮಾ ಆಗಿದೆ ಎಂಬುದು ತಿಳಿಯದಿದ್ದರೆ ಲಿಖಿತ ರೂಪದಲ್ಲಿ ಕೊಡಿ.

* ಕೃಷಿಭೂಮಿ ಆಧಾರವಾಗಿ ಇಟ್ಟುಕೊಂಡು ಗೃಹ ಸಾಲ ತೆಗೆದುಕೊಳ್ಳಬಹುದೇ?

– ಗುರುಮೂರ್ತಿ, ಹರಳಹಳ್ಳಿ

ಕೃಷಿಭೂಮಿಯಲ್ಲಿ ಗೃಹ ನಿರ್ಮಾಣ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸಾಲ ಇಲ್ಲ. ಕೃಷಿ ಭೂಮಿಯಲ್ಲಿ ಉತ್ಪಾದನೆ ಎಷ್ಟು ಇದೆ ಎಂಬುದರ ಮೇಲೆ ಸಾಲ ನೀಡುತ್ತಾರೆ. ಫಾರ್ಮ್ ಹೌಸ್‌ನಲ್ಲಿ ಹಸು, ಕುರಿ ಸಾಗಾಣಿಕೆಯಂತಹ ಚಟುವಟಿಕೆ ಇರಬೇಕು. ಉತ್ಪಾದನೆ ಮತ್ತು ಲಾಭವನ್ನು ಲೆಕ್ಕ ಹಾಕಿ ಎಷ್ಟು ಸಾಲ ಸಿಗುತ್ತದೆ ಎಂಬುದನ್ನು ನಿರ್ಧರಿಸುತ್ತಾರೆ. ಜಮೀನುಗಳನ್ನು ಕೃಷಿ ಬಿಟ್ಟು ಕೃಷಿಯೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ನಿರ್ಬಂಧವಿದೆ. ಬದಲಾವಣೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು.

* ಕಿರಾಣಿ ಅಂಗಡಿ ನಡೆಸಲು ‘ಮುದ್ರಾ’ ಯೋಜನೆಯಡಿ ಮಂಜೂರಾಗಿರುವ ಸಾಲ ಕೊಡುತ್ತಿಲ್ಲ? ಪರಿಹಾರ ಸೂಚಿಸಿ?

– ಖಾಸಿಂ, ಜಗಳೂರು

ದೊಡ್ಡಮಟ್ಟದ ಸಾಲ ತೆಗೆದುಕೊಳ್ಳಬೇಕು. ಸಾಲವನ್ನು ನೀವು ನಿರ್ವಹಿಸಿದ ರೀತಿ ಬಹಳ ಮುಖ್ಯವಾಗುತ್ತದೆ. ಸಾಲದ ಇತಿಹಾಸವನ್ನು ಸಿಬಿಲ್‌ ಸ್ಕೋರ್‌ನಿಂದ ನಿರ್ಧಾರ ಮಾಡಲಾಗುತ್ತದೆ. ಸ್ಕೋರ್‌ ಏಕೆ ಕಡಿಮೆ ಬಂದಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ಸಾಲ ನೀಡಲು ಆಗುವುದಿಲ್ಲ. ಆ ಸ್ಕೋರ್ ಅನ್ನು ಉತ್ತಮಪಡಿಸಲು ಪ್ರಯತ್ನಿಸಿ.

* ಮುದ್ರಾ ಯೋಜನೆಯಡಿ ಬಟ್ಟೆ ಅಂಗಡಿ ತೆರೆಯಲು ಸಾಲ ಕೇಳಿದರೆ ಭದ್ರತೆ ನೀಡುವಂತೆ ಕೇಳುತ್ತಿದ್ದಾರೆ

– ವಿರೂಪಾಕ್ಷ, ನಿಟುವಳ್ಳಿ, ದಾವಣಗೆರೆ

₹ 10 ಲಕ್ಷದ ವರೆಗಿನ ಸಾಲಕ್ಕೆ ಮೇಲಾಧಾರ ಭದ್ರತೆ ಕೊಡುವ ಅಗತ್ಯವಿಲ್ಲ. ಸಾಲ ಪಡೆಯಲು ಅವಕಾಶ ಇದೆ. ಅರ್ಜಿಯನ್ನು ಬ್ಯಾಂಕ್‌ಗೆ ಲಿಖಿತ ರೂಪದಲ್ಲಿ ಸಲ್ಲಿಸಿ, ಬಾಯಿ ಮಾತಿನಲ್ಲಿ ಕೇಳಬೇಡಿ.

* ಮುದ್ರಾ ಯೋಜನೆಯಡಿ ಏನೇನು ಸಾಲಸೌಲಭ್ಯಗಳು ಸಿಗುತ್ತವೆ?

– ರಾಜು, ಚನ್ನಗಿರಿ

ಮುದ್ರಾ ಯೋಜನೆ ಎಂದರೆ ಅದು ಸಾಲದ ವ್ಯವಸ್ಥೆ, ತಾವು ಯಾವ ಉದ್ದೇಶಕ್ಕಾಗಿ ಹೊಸದಾಗಿ ಉದ್ಯೋಗ ಆರಂಭಿಸಬೇಕಿದ್ದರೆ ಅಥವಾ ಇರುವ ಉದ್ಯೋಗವನ್ನು ಅಭಿವೃದ್ಧಿಪಡಿಸಬೇಕಿದ್ದರೆ, ಈ ಯೋಜನೆಯಡಿ ಯಾವುದೇ ಭದ್ರತೆ ಇಲ್ಲದೇ ಸಾಲ ಸಿಗುತ್ತದೆ. ಕುರಿ ಶೆಡ್‌ ನಿರ್ಮಿಸಬೇಕು ಎಂಬ ಉದ್ದೇಶವಿದ್ದರೆ ಆ ಜಾಗವನ್ನು ಅಡಮಾನವಾಗಿ ಕೊಡಬೇಕಾಗುತ್ತದೆ. ಆಗ ಕುರಿಗಳನ್ನು ಖರೀದಿ ಮಾಡಲು ಹಣಕಾಸಿನ ನೆರವು ಪಡೆಯಬಹುದು. ಎಲ್ಲಾ ಮಾಹಿತಿಯನ್ನು ಒಳಗೊಂಡ ಒಂದು ಯೋಜನಾ ವರದಿಯನ್ನು ಸಿದ್ಧಪಡಿಸಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಬೇಕು.

* ಮುದ್ರಾ ಯೋಜನೆಯಡಿ ಅಡಿಕೆ ಕೊಯ್ಲು ಮಾಡುವ ಯಂತ್ರಗಳಿಗೆ ಸಾಲ ಸಿಗುತ್ತದೆಯೇ?

– ರಮೇಶ್, ಜಯನಗರ, ದಾವಣಗೆರೆ

ಅಡಿಕೆ ಕೊಯ್ಲು ಮಾಡುವ ಯಂತ್ರಗಳಿಗೆ ಸಾಲ ಪಡೆಯಬೇಕು ಎಂದರೆ ತಾಂತ್ರಿಕ ಸೌಲಭ್ಯಗಳು ಇವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ನೀವೇ ಅಭಿವೃದ್ಧಿಪಡಿಸಿದ ಯಂತ್ರದ ವಿನ್ಯಾಸ ಇರಬೇಕು. ಇಲ್ಲವೇ ಬೇರೆಯವರಿಂದ ಅಧಿಕೃತವಾಗಿ ಖರೀದಿಸಿದ ಯಂತ್ರದ ವಿನ್ಯಾಸವನ್ನು ನೀಡಬೇಕು. ಅದರ ಮೇಲೆ ಯಾವ ಯೋಜನೆಯಲ್ಲಿ ಎಷ್ಟು ಸಾಲ ನೀಡಬೇಕು ಎಂಬುದು ನಿರ್ಧಾರವಾಗುತ್ತದೆ. ಮೂಲ ಮಾಹಿತಿಗಳನ್ನು ಲೀಡ್‌ ಬ್ಯಾಂಕ್‌ನಲ್ಲಿ ಪಡೆಯಬಹುದು. ಆದರೆ, ಸಾಲ ಮಂಜೂರು ಮಾಡುವುದು ನಿಮ್ಮ ವ್ಯಾಪ್ತಿಯ ಬ್ಯಾಂಕ್‌ ಆಗಿದೆ.

* ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಬೆಳೆ ಸಾಲ ಇದೆ. ಮರುಪಾವತಿ ಮಾಡಿದರೆ ಬಡ್ಡಿಯಲ್ಲಿ ರಿಯಾಯ್ತಿ ಸಿಗುವುದೇ?

ಶಿವಮೂರ್ತಿ, ನವಿಲೇಹಾಳ್

ಬೆಳೆಸಾಲಕ್ಕೆ ಕೇಂದ್ರ ಸರ್ಕಾರ ಚಾಲ್ತಿಯಲ್ಲಿರುವ ರೈತರಿಗೆ ಶೇ 4ರಷ್ಟು ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಬ್ಯಾಂಕ್‌ನಲ್ಲಿ ಹಲವು ಸವಲತ್ತುಗಳು ಸಿಗಬಹುದು. ಆದರೆ, ಬೆಳೆ ಸಾಲ ಇರುವುದರಿಂದ ಧೀರ್ಘಾವಧಿ ಸೌಲಭ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಬ್ಯಾಂಕ್ ವ್ಯವಹಾರ ಮುಂದುವರಿಸಿಕೊಳ್ಳಿ. ನಿಮ್ಮ ಜಮೀನಿನಲ್ಲಿ ಮುಂದೆ ಏನಾದರೂ ಯೋಜನೆಗಳನ್ನು ಮಾಡಲು ಅನುಕೂಲವಾಗುತ್ತದೆ. ಪೂರ್ತಿ ಹಣ ಕಟ್ಟಿ ಬೆಳೆಸಾಲ ನವೀಕರಣ ಮಾಡಿಸಿಕೊಳ್ಳಿ.

* ಟೈಲ್ಸ್‌, ಸಿಮೆಂಟ್ ಅಂಗಡಿ ತೆರೆಯಲು ಸಾಲ ಸಿಗುತ್ತದೆಯೇ?

– ಮಂಜುನಾಥ್, ಕುಕ್ಕವಾಡ

ಅಂಗಡಿ ತೆರೆಯಲು ಸ್ಥಳೀಯ ಸಂಸ್ಥೆಯ ಲೈಸೆನ್ಸ್ ಇರಬೇಕು. ಜಾಗ ಅಥವಾ ಮಳಿಗೆ ಇರಬೇಕು. ಇವುಗಳು ಇದ್ದರೆ ಲಿಖಿತವಾಗಿ ಅರ್ಜಿ ಕೊಡಿ, ಒಂದು ವೇಳೆ ಸಾಲ ನೀಡದಿದ್ದರೆ ಯಾವ ಕಾರಣಕ್ಕೆ ಕೊಡುವುದಿಲ್ಲ ಎಂಬುದರ ಉತ್ತರ ಪಡೆಯಿರಿ. ಇಲ್ಲವೇ ಸಾಲ ಪಡೆಯಿರಿ.

* ನನಗೆ 5 ಎಕೆರೆ ಜಮೀನಿದೆ. ನಾವು ನಗರದಲ್ಲಿ ಇದ್ದೇವೆ. ಕೃಷಿ ಸಾಲ ಸಿಗುತ್ತದೆಯೇ?

– ರೇವಣಸಿದ್ದಪ್ಪ, ಕುರುಡಿ

ಜಮೀನು ಇದ್ದರೆ ಬ್ಯಾಂಕ್ ಸಾಲ ಪಡೆಯುವ ಅರ್ಹತೆ ಇದೆ. ತಾಂತ್ರಿಕ ಸಮಸ್ಯೆಗಳು, ಇಲ್ಲವೇ ಪಹಣಿ ಮೇಲೆ ಯಾವುದಾದರೂ ಬ್ಯಾಂಕಿನ ಆಧಾರವಿದೆಯೇ ಪರಿಶೀಲಿಸಿಕೊಳ್ಳಿ.

* ಲೋಟ ತಯಾರಿಕೆ ಘಟಕ ಸ್ಥಾಪಿಸಬೇಕು ಎಂದುಕೊಂಡಿದ್ದೇನೆ. ಯಂತ್ರ ಖರೀದಿಸಲು ₹ 9 ಲಕ್ಷವಾಗಲಿದೆ. ಮುದ್ರಾ ಯೋಜನೆಯಡಿ ಸಾಲ ಸಿಗಬಹುದೇ?

– ರಾಜು, ಎಸ್‌ಒಜಿ ಕಾಲೊನಿ

ಮುದ್ರಾ ಯೋಜನೆಯಡಿ ₹10 ಲಕ್ಷದವರೆಗಿನ ಸಾಲಕ್ಕೆ ಕೇಂದ್ರ ಸರ್ಕಾರದಿಂದ ಭದ್ರತೆ ಸಿಗುತ್ತದೆ. ಹೊಸದಾಗಿ ಘಟಕ ತೆರೆಯಲು ₹ 20 ಲಕ್ಷ ಬೇಕು ಎಂದರೆ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಡಿ (ಪಿಎಂಇಜಿಪಿ) ಯೋಜನೆಯಡಿ ಅವಕಾಶ ಇದೆ. ಜಿಲ್ಲೆಯಲ್ಲಿ ತುಂಬಾ ಘಟಕಗಳು ಲಾಭ ಪಡೆಯುತ್ತಿವೆ. ಶೇ 25ರಷ್ಟು ಸಬ್ಸಿಡಿ ಸಿಗುತ್ತದೆ. ಕೆವಿಐಸಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.

* ಮಾಯಕೊಂಡದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹೆಚ್ಚಿನ ಜನಸಂದಣಿ ಇದ್ದು, ಹುಚ್ಚವ್ವನಹಳ್ಳಿಯಲ್ಲಿ ಶಾಖೆ ತೆರೆಯಬಹುದೇ?

– ಕಂಬರಾಜು, ಹುಚ್ಚವ್ವನಹಳ್ಳಿ

ಯಾವುದೇ ಬ್ಯಾಂಕ್ ಶಾಖೆ ತೆರೆಯಬೇಕಾದರೆ ಆಯಾ ಬ್ಯಾಂಕಿನ ವ್ಯವಹಾರದ ಮೇಲೆ ನಿರ್ಧಾರವಾಗುತ್ತದೆ. ನಿಮ್ಮ ಗ್ರಾಮದ ಜನಸಂಖ್ಯೆ 5 ಸಾವಿರಕ್ಕಿಂತ ಹೆಚ್ಚು ಇದ್ದರೆ, ಹಣಕಾಸಿನ ವ್ಯವಹಾರ ಚೆನ್ನಾಗಿದ್ದರೆ ಆಯಾ ಬ್ಯಾಂಕಿನ ಕೇಂದ್ರ ಕಚೇರಿಯವರು ಶಾಖೆ ತೆರೆಯುತ್ತಾರೆ. ಪ್ರಸ್ತುತ ಕೋವಿಡ್‌ ಬಿಕ್ಕಟ್ಟು ಇರುವುದರಿಂದ ಶಾಖೆ ತೆರೆಯುವುದು ಕಷ್ಟ. ನಾವು ಶಾಖೆ ತೆರೆಯಲು ಮನವಿ ಮಾಡುತ್ತೇವೆ.

* ಕೋವಿಡ್ ಸಂಕಷ್ಟ ಪರಿಹಾರ ಯೋಜನೆಯಡಿ ಟ್ರ್ಯಾಕ್ಟರ್‌ ತೆಗೆದುಕೊಳ್ಳಲು ಸಾಲ ಸಿಗುತ್ತದೆಯೇ?

– ಶ್ರೀಧರ್, ಕುಂದೂರು

6 ಎಕರೆ ನೀರಾವರಿ ಜಮೀನು ಇದ್ದರೆ ನೀವು ಬೆಳೆ ಸಾಲ ತೆಗೆದುಕೊಂಡಿರುವ ಬ್ಯಾಂಕ್‌ನಲ್ಲೇ ಅರ್ಜಿ ಸಲ್ಲಿಸಿ. ಅಡಮಾನ ಇರುತ್ತೆ. ಉತ್ಪಾದನೆ ನೋಡಿಕೊಂಡು ಸಾಲ ನೀಡುತ್ತಾರೆ.

* ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.70 ಲಕ್ಷ ಕೃಷಿ ಸಾಲ ಇದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಸಾಲಮನ್ನಾ ಜಾರಿಗೊಳಿಸಿದ್ದರು. ಆದರೆ, ನನ್ನ ಸಾಲ ಮನ್ನಾ ಆಗಿಲ್ಲ?

– ಸಿ.ಕೆ.ನಾಗರಾಜ, ಸಿದ್ದಮಲ್ಲಾಪುರ, ಚನ್ನಗಿರಿ

ಚಾಲ್ತಿ ಇದ್ದವರಿಗೆ ಹಣ ಬರುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಬದಲಾವಣೆಯಾಗಿದ್ದರೆ, ಚಾಲ್ತಿಯಲ್ಲಿದೆಯೇ ಎಂಬುದನ್ನು ನೋಡಿಕೊಳ್ಳಿ. ಸಾಲದ ಹಣ ಕಟ್ಟಿ ರಿನ್ಯುವಲ್ ಮಾಡಿಕೊಳ್ಳಿ.

* ವಿಜಯಾ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲ ಪಡೆದಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೃಷಿ ಸಾಲದ ಕಂತನ್ನೂ ಪಾವತಿಸಲು ಕಷ್ಟವಾಗುತ್ತಿದೆ. ಪರಿಹಾರ ತಿಳಿಸಿ.

– ಕೊಟ್ರಗೌಡ, ದಾವಣಗೆರೆ

ಬ್ಯಾಂಕ್‌ಗೆ ರಜೆ ಇರುವುದಿಲ್ಲ. ಲಾಕ್‌ಡೌನ್ ಬ್ಯಾಂಕ್‌ಗಳಿಗೆ ಅನ್ವಹಿಸುವುದಿಲ್ಲ. ಮೊದಲು ಕೃಷಿ ಸಾಲವನ್ನು ಪಾವತಿಸಿ. ಸಾಲ ನವೀಕರಿಸಿದರೆ ಲಾಭ ಇದೆ. ಕಟ್‌ಬಾಕಿ ಮಾಡಿಕೊಂಡರೆ ಕಷ್ಟವಾಗುತ್ತದೆ.

* ಮುದ್ರಾ ಯೋಜನೆಯಡಿ ಕಿರಾಣಿ ಅಂಗಡಿ ತೆರೆಯಲು ಸಾಲ ಕೇಳಿದರೆ ಇಲ್ಲ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು?

– ಹಾಲೇಶ್, ಗುಡಿಹಳ್ಳಿ

ಮುದ್ರಾ ಯೋಜನೆ ನಿಲ್ಲುವ ಪ್ರಶ್ನೆಯೇ ಇಲ್ಲ. ಸಾಲ ಮರುಪಾವತಿಸಿ ಅರ್ಜಿ ಸಲ್ಲಿಸಿದರೆ ಮತ್ತೆ ಸಾಲ ಸಿಗುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿ ಸಾಲ ಪಾವತಿಸಲು ಆಗದಿದ್ದರೆ ಲಿಖಿತವಾಗಿ ಮನವಿ ಕೊಡಿ. ಸಾಲ ಮರುಪಾವತಿಸಿದಿದ್ದರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತದೆ. ಹೊಸದಾಗಿ ಸಾಲ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.

* ಬಟ್ಟೆ ವ್ಯಾಪಾರ ಮಾಡಲು ಸಾಲ ಬೇಕಾಗಿದೆ. ಅತ್ತೆಯ ಸಾಲ ಇರುವುದರಿಂದ ನಮಗೆ ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು?

– ಸುಧಾ, ತೋರಣಗಟ್ಟೆ, ಜಗಳೂರು

ಬಟ್ಟೆ ಅಂಗಡಿ ತೆರೆಯಲು ₹ 50 ಸಾವಿರ ಮೇಲ್ಪಟ್ಟು ಸಾಲ ಬೇಕಿದ್ದರೆ ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಮಾಡಲು ಲೈಸನ್ಸ್‌ ಪಡೆದಿರುವ ದಾಖಲೆ ಬೇಕಾಗುತ್ತದೆ. ಸಾಲದ ಕೊಟೇಷನ್, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್‌, ಪಾನ್‌ ಕಾರ್ಡ್ ಒಳಗೊಂಡ ಮಾಹಿತಿ ತೆಗೆದುಕೊಂಡು ಅರ್ಜಿ ಸಲ್ಲಿಸಿದರೆ ಸಿಗುತ್ತದೆ. ಅತ್ತೆಯ ಜೊತೆಯಲ್ಲಿ ಇದ್ದು, ಒಂದೇ ರೇಷನ್ ಕಾರ್ಡ್‌ ಇದ್ದರೆ ನಿಮಗೆ ಸಾಲ ಸಿಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT