ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗೆ ಅಧಿಕಾರಿಗಳ ಸಹಕಾರ ಅಗತ್ಯ: ರುಪ್ಸ ರಾಜ್ಯಾಧ್ಯಕ್ಷ ಲೋಕೇಶ್‌

Last Updated 26 ಜುಲೈ 2022, 3:10 IST
ಅಕ್ಷರ ಗಾತ್ರ

ದಾವಣಗೆರೆ: ‘ಖಾಸಗಿ ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿವೆ. ಅಧಿಕಾರಿಗಳು ಸಹಕಾರ ನೀಡಿದರೆ ಈ ಶಿಕ್ಷಣ ಸಂಸ್ಥೆಗಳ ಉಳಿವು ಸಾಧ್ಯ’ ಎಂದು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ)ದ ರಾಜ್ಯಾಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು.

ಇಲ್ಲಿನ ಬಂಟರ ಭವನದಲ್ಲಿ ರುಪ್ಸ ಕರ್ನಾಟಕ ಹಾಗೂ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಡ್ಯಾಮ್ಸ್)ದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಬಲವರ್ಧನೆಗಾಗಿ ರಾಜ್ಯಮಟ್ಟದ ಚಿಂತನ–ಮಂಥನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೈಕ್ಷಣಿಕ ಬಲವರ್ಧನೆಗೆ‌ ಚಿಂತನೆ ಅಗತ್ಯ. ಚಿಂತನೆ ಆವಿಷ್ಕಾರವಾಗಬೇಕು. ಆವಿಷ್ಕಾರವನ್ನು ಬಳಸಿಕೊಳ್ಳುವ ಪ್ರವೃತ್ತಿ ಬೆಳೆಯಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ 8ರಷ್ಟಿದ್ದ ಶಿಕ್ಷಣ ಸಂಸ್ಥೆಗಳ ಪ್ರಮಾಣ ಈಗ ಶೇ 86ರಷ್ಟಿದೆ. ದಿನಕ್ಕೊಂದು ನಿಯಮಗಳ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿರುವುದು ಸರಿಯಲ್ಲ ಎಂದರು.

‘ಶೈಕ್ಷಣಿಕ ಸುಧಾರಣೆಗೆ ಹಲವು ಸವಾಲು ನಮ್ಮ ಮುಂದಿವೆ. ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಸೇರಿ ಹಲವು ವಿಷಯಗಳ ಸಂಬಂಧ ಸುಪ್ರೀಂ ಕೋರ್ಟ್‌ ಕೆಲ ನಿರ್ದೇಶನ ನೀಡಿದೆ. ಹಿಂದೆ ಅಗ್ನಿ ಸುರಕ್ಷತೆ ಪರಿಶೀಲನೆ ಅಧಿಕಾರ ಹಿರಿಯ ಅಧಿಕಾರಿಗೆ ಮಾತ್ರ ಇತ್ತು. ಈಗ ಅಗ್ನಿಶಾಮಕ ಠಾಣಾಧಿಕಾರಿಯೂ ‍ಪರಿಶೀಲನೆ ಮಾಡಬಹುದು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಹಾನಿರ್ದೇಶಕ ಡಾ. ಅಮರ್‌ಕುಮಾರ್‌ ಪಾಂಡೆ ಹೇಳಿದರು.

‘ಶೋಕಿಗಾಗಿ ಶಿಕ್ಷಣ ಸಂಸ್ಥೆ ಕಟ್ಟಿದರೆ ಸಾಲದು, ಕಲಿಕಾ ಬಲವರ್ಧನೆಗೆ ಏನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂಬ ಚಿಂತನೆ ಅಗತ್ಯ. ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಫಲಿತಾಂಶ ವೃದ್ಧಿ ಗ್ರಂಥಾಲಯ’ ಎಂಬ ಹೊಸ ಪರಿಕಲ್ಪನೆಯಲ್ಲಿ ಫಲಿತಾಂಶ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಚಿಂತನೆ ಎಲ್ಲೆಡೆ ಬರಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಸ್. ಪ್ರಸನ್ನಕುಮಾರ್‌ ಹೇಳಿದರು.

ಡ್ಯಾಮ್ಸ್‌ ಸಹ ಕಾರ್ಯದರ್ಶಿ ಮಂಜುನಾಥ ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುಪ್ಸದ ಗೌರವಾಧ್ಯಕ್ಷ ಚಂದ್ರಕಾಂತ್‌ ಭಂಡಾರೆ, ಡ್ಯಾಮ್ಸ್ ಅಧ್ಯಕ್ಷ ಟಿ.ಎಂ. ಉಮಾಪತಯ್ಯ, ಡಿಡಿ‍‍ಪಿಐ ಜಿ.ಆರ್‌. ತಿಪ್ಪೇಶಪ್ಪ, ಬಿಇಒಗಳಾದ ಎಂ. ನಿರಂಜನ ಮೂರ್ತಿ, ಟಿ. ಅಂಬಣ್ಣ,ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ,ಪದಾಧಿಕಾರಿಗಳಾದ ಮುನಿಯಪ್ಪ, ನರೇಂದ್ರ ಪೈ., ಕೆ.ಸಿ. ಲಿಂಗರಾಜು, ಎನ್.ಎಂ. ಲೋಕೇಶ್‌, ಉಮಾಶಂಕರ್‌, ರಾಮಮೂರ್ತಿ ಇದ್ದರು.

ಶಿಕ್ಷಣ ಇಲಾಖೆ ಯಾರಿಗೂ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ. ನಿಯಮ ಪಾಲನೆ ಸಂಬಂಧ ಸರ್ಕಾರದ ಸೂಚನೆ ಪಾಲಿಸಬೇಕಾಗುತ್ತದೆ. ಶೈಕ್ಷಣಿಕ ಅಭಿವೃದ್ಧಿಗೆ ಒಟ್ಟಿಗೆ ಕೆಲಸ ಮಾಡೋಣ.

-ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ

ಗಂಟೆಗೊಂದು ಆದೇಶ ತಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿದೆ. ಸರ್ಕಾರಿ ಹಾಗೂ ಶಾಸಗಿ ಶಾಲೆಗಳಿಗೆ ಒಂದೇ ಮಾನದಂಡ ಇರಬೇಕು.

-ಕೆ.ಎಸ್‌. ಮಂಜುನಾಥ ಅಗಡಿ, ಡಿಎಎಂಎಸ್‌, ಸಹ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT