ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಾಳುಕೊಂಪೆಯಾಗಿರುವ ಹಳೇ ಮಾಧ್ಯಮಿಕ ಶಾಲೆ

ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದ ಎಸ್‌.ನಿಜಲಿಂಗಪ್ಪ ಓದಿದ ಸರ್ಕಾರಿ ಶಾಲೆ
Last Updated 25 ಜನವರಿ 2023, 7:07 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕೆ.ಆರ್‌. ಮಾರ್ಕೆಟ್‌ನಲ್ಲಿರುವ ಸರ್ಕಾರಿ ಹಳೇ ಮಾಧ್ಯಮಿಕ ಶಾಲೆ ಹಾಳು ಕೊಂಪೆಯಂತಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತ ಸಾಗಿದೆ.

1902ರಲ್ಲಿ ಆರಂಭವಾದ ಶಾಲೆಯು ದಾವಣಗೆರೆ ನಗರದ ಅತ್ಯಂತ ಹಳೆಯದು. ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ಅವರು ಓದಿದ್ದು ಇದೇ ಶಾಲೆಯಲ್ಲಿ. ಇವರೇ ಅಲ್ಲದೇ ಇಲ್ಲಿಯೇ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ರಾಜ್ಯ–ಹೊರ ರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶಾಲೆಗೆ ಇಂದು ಒದಗಿರುವ ದುಃಸ್ಥಿತಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ದಿಕ್ಕು ತೋಚದಾಗಿದ್ದಾರೆ.

‘ಶಾಲೆಗೆ ಹೊಸದಾಗಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ 2006–2007ರಲ್ಲಿ 94 ಇತ್ತು. ಅದು ಪ್ರಸಕ್ತ ಸಾಲಿನಲ್ಲಿ 16ಕ್ಕೆ ಕುಸಿದಿದೆ. ವಿದ್ಯಾರ್ಥಿಗಳನ್ನು ದಾಖಲಿಸಲು ಬರುವ ಪಾಲಕರು ದೊಡ್ಡ ಬಂಗಲೆ ನೋಡಿ ನಮ್ಮ ಮಕ್ಕಳನ್ನು ಹೇಗೆ ಕಳುಹಿಸುವುದು ಎಂದು ಕೇಳುತ್ತಾರೆ. ಅರ್ಜಿ ತೆಗೆದುಕೊಂಡು ಹೋದವರು ಮತ್ತೆ ಬರುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ಶಾಲೆ ಉಳಿಯುವುದೇ ಕಷ್ಟ’ ಎಂದು ಶಿಕ್ಷಕ ಯು. ಮಹಾದೇವಪ್ಪ ನೊಂದುನುಡಿದರು.

‘ಪ್ರಸಕ್ತ ವರ್ಷ 1ರಿಂದ 7ನೇ ತರಗತಿವರೆಗೆ ಒಟ್ಟು 50 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ನಿರ್ವಹಣಾ ವೆಚ್ಚ ವರ್ಷಕ್ಕೆ ₹ 10,000 ಬಿಟ್ಟರೆ ಬೇರೆ ಯಾವುದೇ ಅನುದಾನ ಇಲ್ಲ. ಆದರೆ, ವರ್ಷಕ್ಕೆ ₹ 18 ಸಾವಿರದಿಂದ ₹ 20 ಸಾವಿರದಷ್ಟು ವಿದ್ಯುತ್‌ ಬಿಲ್‌ ಬರುತ್ತದೆ. ಪ್ರತಿ ವಾರ ಕಳ್ಳತನ ಮಾಮೂಲಿ. ಕಳ್ಳರು ಶಾಲೆಯ ಬೀಗ ಒಡೆದು ಕಿಟಕಿ–ಬಾಗಿಲಿನ ಸರಳುಗಳು, ನೀರಿನ ಪೈಪ್‌ ಕಿತ್ತುಕೊಂಡು ಹೋಗಿದ್ದಾರೆ. ಪ್ರತಿ ಸೋಮವಾರ ಬಂದಾಗ ಎಲ್ಲವನ್ನೂ ಪರಿಶೀಲಿಸಿ ದುರಸ್ತಿ ಮಾಡಿಸಿಕೊಳ್ಳಬೇಕು. ದುರಸ್ತಿಗೇ ಕನಿಷ್ಠ ₹ 15,000 ವೆಚ್ಚವಾಗುತ್ತದೆ. ಪ್ರತಿ ವಾರ ಶಿಕ್ಷಕರ ಜೇಬಿಗೆ ಕತ್ತರಿ ಅನಿವಾರ್ಯ. ನೋಡಿ ನೋಡಿ ಸಾಕಾಗಿ ನಾವೇ ಕರ್ನೆ ಹಿಡಿದು ಕಿಟಿಕಿಗಳ ಅರ್ಧ ಭಾಗವನ್ನು ಸಿಮೆಂಟ್‌ನಿಂದ ಮುಚ್ಚಿದ್ದೇವೆ. ಶಾಲೆಗೆ ಸೇರಿದ ಜಾಗದಲ್ಲಿಯೇ 250ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದು, ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದೆ. ಅದರಲ್ಲಿ ನಯಾ ಪೈಸೆಯನ್ನು ಶಾಲೆಗೆ ನೀಡುತ್ತಿಲ್ಲ. ಶಾಲೆಯನ್ನು ಈಗಿನ ಮಾದರಿಯಲ್ಲೇ ನೂತನವಾಗಿ ನಿರ್ಮಿಸುವುದಾಗಿ ಶಾಸಕರು ನೀಡಿದ್ದ ಭರವಸೆ ಹುಸಿಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಆಜಾದ್‌ ನಗರ, ಬಾಷಾ ನಗರ, ಬಸವರಾಜ ಪೇಟೆ, ಗಾಂಧಿನಗರ, ವಡ್ಡರ ಕೇರಿ, ಮುಸ್ತಫಾ ನಗರ ಮುಂತಾದೆಡೆಗಳಿಂದ ಬಡ, ಕೂಲಿ ಕಾರ್ಮಿಕರ ಮಕ್ಕಳೇ ಶಾಲೆಗೆ ಬರುತ್ತಾರೆ. ಶಾಲೆ ಮುಚ್ಚಿಹೋದರೆ ಏನು ಮಾಡಬೇಕು. ಶಾಲೆಯ ಹಳೆ ಕಟ್ಟಡದ 15 ಕೊಠಡಿಗಳೂ ದುಃಸ್ಥಿತಿಯಲ್ಲಿವೆ. ಮಳೆ ಬಂದರೆ ಸೋರುವುದರಿಂದ ಮಕ್ಕಳು ಕೂರಲು ಆಗದು. ಶಾಲಾ ಅಂಗಳ ಕೆರೆಯಂತಾಗುತ್ತದೆ. ಆವರಣದಲ್ಲಿ ಗಿಡ–ಗಂಟಿ ಬೆಳೆದಿದ್ದು, ವಾಣಿಜ್ಯ ಮಳಿಗೆಗಳ ವ್ಯಾಪಾರಿಗಳು, ಗ್ರಾಹಕರು ಮೂತ್ರ ವಿಸರ್ಜನೆಗೆ ಬರುತ್ತಾರೆ. ಗೇಟ್‌ ಎದುರು ವಾಹನಗಳನ್ನು ನಿಲ್ಲಿಸುವುದರಿಂದ ಮಕ್ಕಳ ತಿರುಗಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು, ಶಾಸಕರು ಶಾಲೆಯ ಉಳಿವಿಗೆ ಮುಂದಾಗಬೇಕು’ ಎಂದು ಮನವಿ ಮಾಡುತ್ತಾರೆ ಪಾಲಕರಾದ ಗೌರಮ್ಮ.

‘ಜಿಲ್ಲಾಧಿಕಾರಿಗಳೇ ನೋಡ ಬನ್ನಿ ಶಾಲೆ ದುಃಸ್ಥಿಯ’ ಪತ್ರ ಚಳವಳಿ
ಸರ್ಕಾರಿ ಹಳೇ ಮಾಧ್ಯಮಿಕ ಶಾಲೆಯ ಉಳಿವಿಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ‘ಜಿಲ್ಲಾಧಿಕಾರಿಗಳೇ ನೋಡ ಬನ್ನಿ ಶಾಲೆ ದುಃಸ್ಥಿಯ’ ಪತ್ರ ಚಳವಳಿಗೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಜಿಲ್ಲಾಧಿಕಾರಿಗೆ ನಂತರದಲ್ಲಿ ಮುಖ್ಯಮಂತ್ರಿ ಅವರಿಗೂ ಪತ್ರಗಳನ್ನು ಬರೆಯುವ ಉದ್ದೇಶ ಹೊಂದಿದ್ದಾರೆ.

‘ಜಿಲ್ಲಾಧಿಕಾರಿಗಳೇ ಹಾಳುಕೊಂಪೆಯಾಗಿರುವ ನಮ್ಮ ಶಾಲೆಗೆ ಭೇಟಿ ನೀಡಿ ನಮ್ಮ ಅಳಲು ಆಲಿಸಿ, ಮಳೆ ಬಂದರೆ ಕೂರಲು ಆಗುವುದಿಲ್ಲ, ಶಾಲಾ ಕಟ್ಟಡ ಶಿಥಿಲಗೊಂಡಿರುವುದರಿಂ ಜೀವ ಭಯದ ನಡುವೆ ಪಾಠ ಕೇಳಬೇಕಾಗಿದೆ, ಶಾಲಾ ಅಭಿವೃದ್ಧಿ ಶೂನ್ಯವಾಗಿದೆ, ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಶಾಲೆಗೆ ಮರುಜೀವ ನೀಡುವ ಮೂಲಕ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ನಮ್ಮ ಶಿಕ್ಷಣಕ್ಕೆ ನೆರವಾಗಿ’... ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

**
ನಿಜಲಿಂಗಪ್ಪ ಅವರು ಓದಿದ ಶಾಲೆ ಎಂದು ಹೇಳುತ್ತಲೇ ಶಾಲೆಯ ಅಭಿವೃದ್ಧಿಯನ್ನು ಅಧಿಕಾರಿಗಳು, ಶಾಸಕರು ಸಂಪೂರ್ಣ ಕಡೆಗಣಿಸಿದ್ದಾರೆ. ಸಮಸ್ಯೆಗಳನ್ನು ಜೀವಂತವಾಗಿರಿಸುವ ಮೂಲಕ ಶಾಲೆಯನ್ನು ಮುಚ್ಚಿಸುವ, ಆ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ.
–ಗೋಪಾಲ್, ಎಸ್‌ಡಿಎಂಸಿ ಅಧ್ಯಕ್ಷರು.

*
ಶಾಲೆಯ ದುಃಸ್ಥಿತಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮಕ್ಕಳಿಗೆ ಅಗತ್ಯ ಪಠ್ಯೋಪಕರಣ ನೀಡಿದ್ದೇವೆ. ಶಾಲಾ ಮೈದಾನದಲ್ಲಿರುವ ಮಳಿಗೆಗಳನ್ನು ತೆರವುಗೊಳಿಸಿ, ವಿದ್ಯಾರ್ಥಿಗಳ ಆಟೋಟಕ್ಕೆ ಅವಕಾಶ ಮಾಡಿಕೊಡಬೇಕು. ಶಾಲೆಯ ಉಳಿವಿಗೆ ಹಳೆಯ ವಿದ್ಯಾರ್ಥಿಗಳೂ ಕೈ ಜೋಡಿಸಲು ಸಿದ್ಧ.
-ಕೆ.ಎಂ. ಬಸವರಾಜ್‌, ಶಾಲೆಯ ಹಳೇ ವಿದ್ಯಾರ್ಥಿ, ದಾವಣಗೆರೆ

*
ನನಗೆ ಅಪ್ಪ ಇಲ್ಲ. ಅಮ್ಮ ತರಗಾರ ಕೆಲಸ ಮಾಡಿ ನನ್ನನ್ನು ಓದಿಸುತ್ತಿದ್ದಾಳೆ. ಮನೆಯಲ್ಲಿ ತುಂಬಾ ಕಷ್ಟ. ಆದರೂ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದೇನೆ. ನನ್ನಂತಹ ಹಲವರಿಗೆ ಶಾಲೆ ಆಸರೆಯಾಗಿದೆ. ದಯವಿಟ್ಟು ಶಾಲೆಯನ್ನು ಉಳಿಸಿ.
-ಭಾಗ್ಯಲಕ್ಷ್ಮೀ, 7ನೇ ತರಗತಿ ವಿದ್ಯಾರ್ಥಿನಿ, ಸ.ಹ.ಮಾ.ಶಾ., ದಾವಣಗೆರೆ

*
ಅನುದಾನದ ಕೊರತೆಯಿಂದಾಗಿ ನೂತನ ಶಾಲಾ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆ ಅಡಿ ವಿವಿಧ ಕಾಮಗಾರಿಗಳಿಗೆ ಬಳಸಿ ಉಳಿಯುವ ಹಣದಲ್ಲಿ ಶಾಲೆ ಅಭಿವೃದ್ಧಿಪಡಿಸುವುದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ. ಶಾಲೆಯ ಸಬಲೀಕರಣಕ್ಕೆ ಕ್ರಮ ವಹಿಸುತ್ತೇನೆ.
-ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT