ಶನಿವಾರ, ಮೇ 28, 2022
31 °C
ಗಾಳಿ, ಮಳೆಗೆ ಕುಸಿದು ಬೀಳುತ್ತಿವೆ ಕೋಟೆಯ ಕಲ್ಲುಗಳು

ದಾವಣಗೆರೆ: ನಿರ್ಲಕ್ಷ್ಯಕ್ಕೆ ಒಳಗಾದ ಅಣಬೇರು ಕೋಟೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸುಮಾರು 500 ವರ್ಷಗಳ ಇತಿಹಾಸ ಇರುವ ಅಣಬೇರು ಕೋಟೆ ನಿರ್ವಹಣೆ ಇಲ್ಲದೇ ಜೀರ್ಣಕ್ಕೆ ಜಾರುತ್ತಿದೆ. ಮಳೆ, ಗಾಳಿ ಜಾಸ್ತಿಯಾದಾಗ ಒಂದೊಂದೇ ಕಲ್ಲುಗಳು ಕೆಳಗೆ ಬೀಳುತ್ತಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಆಗಲಿ, ಪುರಾತತ್ವ ಇಲಾಖೆಯಾಗಲಿ ಇತ್ತ ಗಮನ ಹರಿಸುತ್ತಿಲ್ಲ.

ಕೋಟೆ ಇತಿಹಾಸ: ‘ಅಣಬೇರು ಎಂಬ ಊರಿಗೆ ಪಂಜು ಕಳ್ಳರು ನುಗ್ಗುತ್ತಿದ್ದರು. ದೋಚಿಕೊಂಡು ಪರಾರಿಯಾಗುತ್ತಿದ್ದರು. ಅದನ್ನು ತಡೆಯಲು ಊರ ದಾರಿಯಲ್ಲಿ ಕೋಟೆ ನಿರ್ಮಿಸಲಾಯಿತು. ಆಗಲೂ ಕಳ್ಳರು ಪಂಜು ಹಿಡಿದು ಕೋಟೆ ಸುತ್ತು ಹಾಕಿಕೊಂಡು ಬರುತ್ತಿದ್ದರು. ಜನರು ಕೋಟೆಯ ಮೇಲೆ ಹೋಗಿ ನಿಂತುಕೊಂಡು ಪಂಜುಕಳ್ಳರು ಬರುತ್ತಿದ್ದಂತೆ ಅವರ ಮೇಲೆ ಮೇಲಿನಿಂದ ಬಿಸಿನೀರು ಚೆಲ್ಲಿ ಓಡಿಸುತ್ತಿದ್ದರು. ಹೀಗೆ ಮಾಡಿ ಮಾಡಿ ಪಂಜು ಕಳ್ಳರು ಬಾರದಂತೆ ಮಾಡಿದ್ದರು’ ಎಂದು ಊರಿನ ಹಿರಿಯರೂ ಆಗಿರುವ, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಇತಿಹಾಸ
ತಿಳಿಸಿದರು.

‘ಈ ಕೋಟೆಗೆ ಭರಮಪ್ಪ ಕೋಟೆ ಎಂದೂ ಹೆಸರಿದೆ. 1964ರಲ್ಲಿ ಕೆಇಬಿಯವರು ಇಲ್ಲಿ ಮರದ ಕಂಬ ಹಾಕಿ ವಿದ್ಯುತ್‌ದೀಪ ಹಾಕಿದ್ದರು. ಬಹಳ ವರ್ಷಗಳ ಕಾಲ ಇದಿತ್ತು. ಆ ಬೆಳಕಿನಲ್ಲಿ ಕೋಟೆ ಬಹಳ ಸುಂದರವಾಗಿ ಕಾಣುತ್ತಿತ್ತು. ಅದನ್ನೆಲ್ಲ ನೋಡಿ ನಾವು ಖುಷಿ ಪಡುತ್ತಿದ್ದೆವು. ನಂತರ ಮರದ ಕಂಬ ಹೋದ ಮೇಲೆ ವಿದ್ಯುತ್‌ ದೀಪವೂ ಹೋಯಿತು. ಈ ಕೋಟೆ ನಮ್ಮ ಗ್ರಾಮದ ಅಸ್ಮಿತೆ. ಈಗ ಯಾರೂ ಕೋಟೆಯ ನಿರ್ವಹಣೆಯ ಕಡೆ ಗಮನ ಹರಿಸದ ಕಾರಣ ಗಿಡಮರಗಳು ಬೆಳೆದು ಅವುಗಳ ಬೇರುಗಳು ಕೋಟೆಯನ್ನು ದುರ್ಬಲಗೊಳಿಸುತ್ತಿವೆ’ ಎಂದು ವಿವರಿಸಿದರು.

ಸುಲ್ತಾನಿಪುರ, ಚಿರಡೋಣಿ ಮುಂತಾದ ಕಡೆಗಳಲ್ಲಿಯೂ ಕೋಟೆಗಳಿವೆ. ಆದರೆ ಅವೆಲ್ಲ ಅಣಬೇರು ಕೋಟೆಯ ಅರ್ಧ ಕೂಡ ಇಲ್ಲ. ಈ ಕೋಟೆಯಿಂದ ಅಣಬೇರು ಗ್ರಾಮಕ್ಕೆ ಇಂದು ಇತಿಹಾಸ ಬಂದಿದೆ. ಈ ಇತಿಹಾಸ ಉಳಿಯಬೇಕಿದ್ದರೆ ಕೋಟೆಯೂ ಉಳಿಯಬೇಕು ಎಂದರೆ ಕೋಟೆಯೂ ಉಳಿಯಬೇಕು ಎಂಬುದು ಅವರ
ಒತ್ತಾಸೆಯಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ‍ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು, ಶಾಸಕರು, ಸಂಸದರು, ಪುರಾತತ್ವ ಇಲಾಖೆ, ‍ಪ್ರವಾಸೋದ್ಯಮ ಇಲಾಖೆ ಹೀಗೆ ಸಂಬಂಧಪಟ್ಟವರು ಗಮನಹರಿಸಿ ಐತಿಹಾಸಿಕ ಕೋಟೆಯನ್ನು ಉಳಿಸಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು