ಮಂಗಳವಾರ, ಅಕ್ಟೋಬರ್ 4, 2022
26 °C
ಜಲರಾಶಿಯ ಹರಿವನ್ನು ವೀಕ್ಷಿಸಲು ಮುಗಿಬಿದ್ದ ಜನ

ಜಗಳೂರು: 4 ದಶಕಗಳ ನಂತರ ಕೋಡಿ ಬಿದ್ದ ಅಣಜಿ ಕೆರೆ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಜಿಲ್ಲೆಯ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಪುರಾಣ ಪ್ರಸಿದ್ಧ ದಾವಣಗೆರೆ ತಾಲ್ಲೂಕಿನ ಅಣಜಿ ಕೆರೆ ಸರಿಸುಮಾರು 4 ದಶಕಗಳ ನಂತರ ನಂತರ ಕೋಡಿ ಬಿದ್ದಿದೆ. 

‘ಕೆರೆ ಹೊನ್ನಮ್ಮ’ ಹೆಸರಿನ ಪೌರಾಣಿಕ ಐತಿಹ್ಯ ಹೊಂದಿರುವ ಅಣಜಿ ಕೆರೆ 800 ಎಕರೆ ವಿಸ್ತೀರ್ಣ ಹೊಂದಿದೆ. ಐದು ವರ್ಷಗಳ ಹಿಂದೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಸಮೀಪದ ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆಯ ಅಡಿ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದೆ. ನದಿ ನೀರು ಹಾಗೂ ಪ್ರಸ್ತುತ ಮುಂಗಾರಿನ ಸತತ ಮಳೆಯ ಪರಿಣಾಮವಾಗಿ ಕೊನೆಗೂ ಕೆರೆ ಭರ್ತಿಯಾಗಿದ್ದು, ಎರಡು ದಿನಗಳಿಂದ ಕೋಡಿ ಬಿದ್ದು ಹರಿಯುತ್ತಿದೆ. ಕೆರೆಯ ಪೂರ್ವ ಭಾಗದಲ್ಲಿ ಜಗಳೂರು ರಸ್ತೆಗೆ ಹೊಂದಿಕೊಂಡಿರುವ ಕೋಡಿಯಲ್ಲಿಯ ಹರಿವನ್ನು ಆಸುಪಾಸಿನ ಗ್ರಾಮಸ್ಥರು, ದಾವಣಗೆರೆ–ಜಗಳೂರು ಮಾರ್ಗವಾಗಿ ತೆರಳುತ್ತಿರುವ ಪ್ರಯಾಣಿಕರು ಮುಗಿಬಿದ್ದು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ.

‘ನಾನು ಚಿಕ್ಕವನಾಗಿದ್ದಾಗ 1980ರಲ್ಲಿ ಅಣಜಿ ಕೆರೆ ಕೋಡಿ ಬಿದ್ದು ಹರಿದಿತ್ತು. ನಂತರ ಕೆರೆ ತುಂಬಿರಲಿಲ್ಲ. ಐದಾರು ವರ್ಷಗಳ ಹಿಂದೆ 22 ಕೆರೆಗಳ ಏತ ನೀರಾವರಿ ಯೋಜನೆಯಡಿ ಸೇರ್ಪಡೆಯಾದಾಗ ಪ್ರತಿ ವರ್ಷ ಸ್ವಲ್ಪ ಪ್ರಮಾಣದ ನೀರು ಮಾತ್ರ ಹರಿದು ಬಂದಿತ್ತು. ದೊಡ್ಡ ಕೆರೆ ಕೋಡಿ ಬಿದ್ದಿರುವುದರಿಂದ ಈ ಭಾಗದ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂತರ್ಜಲ ಸುಧಾರಣೆಯಾಗಲಿದ್ದು, ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ’ ಎಂದು ಹುಲಿಕಟ್ಟೆ ಗ್ರಾಮದ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರುದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ತಮ್ಮ ನೆನಪು ಹಂಚಿಕೊಂಡರು.

ಅಣಜಿ ಕೆರೆ ಭರ್ತಿಯಾಗಿರುವ ಕಾರಣ ಆಸುಪಾಸಿನ ಗ್ರಾಮಗಳ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದ ಅಡಿಕೆ ಮುಂತಾದ ಬಹುವಾರ್ಷಿಕ ವಾಣಿಜ್ಯ ಬೆಳೆಗಳಿಗೆ ಅನುಕೂಲವಾಗಲಿದೆ.

ಕೋಡಿ ಬಿದ್ದು ಹರಿಯುತ್ತಿರುವ ನೀರು ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಹರಿದು ಹೋಗಲಿದೆ. ಈಗಾಗಲೇ ತುಪ್ಪದಹಳ್ಳಿ ಕೆರೆ ಸಹ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಮುಂದೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲ್ವಿ ಜಲಾಶಯಕ್ಕೆ ಸೇರಲಿದೆ. ಮಾರ್ಗಮಧ್ಯದಲ್ಲಿ ಬಸವನಕೋಟೆ ಸಮೀಪ ನಿರ್ಮಿಸಿರುವ ಒಂದು ಕಿ.ಮೀಗೂ ಹೆಚ್ಚು ಹಿನ್ನೀರು ಸಂಗ್ರಹವಾಗುವ ಬೃಹತ್ ಚೆಕ್ ಡ್ಯಾಂ ಸೇರಿದಂತೆ ಸುಮಾರು ಹಳ್ಳಕೊಳ್ಳಗಳು ಹಾಗೂ ಕೆರೆಕಟ್ಟೆಗಳಿಗೆ ಅಮೂಲ್ಯ ಜಲಧಾರೆ ಹರಿಯಲಿದೆ.

ತಡೆಗೋಡೆ ಅಗತ್ಯ

ಸುಮಾರು ಅರ್ಧ ಕಿ.ಮೀ ಅಂತರದ ಕೆರೆ ಏರಿಯ ರಸ್ತೆಯನ್ನು ಈಚೆಗೆ ನೂತನವಾಗಿ ನಿರ್ಮಿಸಲಾಗಿದೆ. ಮೆಟ್ಲಿಂಗ್ ಮುಂತಾದ ಕಾಮಗಾರಿಯಿಂದಾಗಿ ನೂತನ ರಸ್ತೆಯನ್ನು ಹಳೆಯ ರಸ್ತೆಗಿಂತ ಎರಡು ಅಡಿಗಳಷ್ಟು ಎತ್ತರವಾಗಿ ನಿರ್ಮಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಕಬ್ಬಿಣದ ತಡೆಗೋಡೆ ಬಹುತೇಕ ಹೂತು ಹೋಗಿದೆ. ರಸ್ತೆಯ ಒಂದು ಭಾಗದಲ್ಲಿ ನೂರು‌ ಅಡಿಗೂ ಹೆಚ್ಚು ಆಳದ ಪ್ರಪಾತ ಇದೆ. ಮತ್ತೊಂದು ಮಗ್ಗುಲಲ್ಲಿ ಆಳವಾದ ಕೆರೆ ನೀರಿನ ಅಪಾರ ಜಲರಾಶಿಯಿದೆ.

ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಯಾಗಿರುವ ಇಲ್ಲಿ ಸಾವಿರಾರು ವಾಹನಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿವೆ. ಕೂಡಲೇ ತಡೆಗೋಡೆಯನ್ನು ಎತ್ತರಿಸದೇ ಇದ್ದಲ್ಲಿ ಅಪಾಯ ಕಾದಿದೆ. ಈ ಹಿಂದೆ ಹಲವು ಬಾರಿ ಕೆರೆ ಏರಿಯಿಂದ ಬಸ್ ಪ್ರಪಾತಕ್ಕೆ ಬಿದ್ದು ಸಾವು‌ನೋವಿಗೆ ಕಾರಣವಾಗಿತ್ತು. ನಂತರದಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು