ಬುಧವಾರ, ಸೆಪ್ಟೆಂಬರ್ 29, 2021
20 °C
ಭತ್ತ ಕಟಾವು ಸಮಯಕ್ಕೆ ಮೇವಿಗಾಗಿ ಕರೆತರುವ ಮಾಲೀಕರು

ಜರೆಕಟ್ಟೆಯಲ್ಲಿ ಆಂಧ್ರದ ಬಾತುಕೋಳಿ ಕಲರವ

ಬಾಲಕೃಷ್ಣ ಪಿ.ಎಚ್‌. ಶಿಬಾರ್ಲ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಂಧ್ರಪ್ರದೇಶದ ವಿಜಯವಾಡದ ಬಾತುಕೋಳಿಗಳು ಜರೆಕಟ್ಟೆ, ಮಿಟ್ಲಕಟ್ಟೆಗಳಲ್ಲಿ ಓಡಾಡುತ್ತಿವೆ. ಕಟಾವು ಆದ ಗದ್ದೆಗಳಲ್ಲಿ ಅತ್ತಿಂದಿತ್ತ ಅಲೆಯುತ್ತ ಆಹಾರ ಅರಸುತ್ತಿವೆ.

ಬಾತುಕೋಳಿ ಸಾಕಣೆದಾರರು ಆಂಧ್ರಪ್ರದೇಶದಿಂದ ಕರ್ನಾಟಕದ ಹಲವು ಪ್ರದೇಶಗಳಿಗೆ ಬಂದಿದ್ದಾರೆ. ವಿಜಯವಾಡದಿಂದ ಗೋವಿನ ಸ್ವಾಮಿರಾಜ್‌, ದುರ್ಗರಾಮ, ಯೇಸು ಸೇರಿ ಐವರ ಒಂದು ತಂಡವು 2 ಸಾವಿರ ಬಾತುಕೋಳಿಗಳೊಂದಿಗೆ ತಾಲ್ಲೂಕಿನ ಮಿಟ್ಲಕಟ್ಟೆಯಿಂದ ಹಳೇ ಬಿಸಲೇರಿಗೆ ಹೋಗುವ ದಾರಿಯಲ್ಲಿ ಬೀಡು ಬಿಟ್ಟಿದೆ. ಊರಲ್ಲಿ ಮಳೆಯಾಗುತ್ತಿದ್ದಂತೆ ಇವರು ವಾಪಸ್ಸಾಗುತ್ತಾರೆ.

ಬಾತುಕೋಳಿಗಳ ಹಿಂಡು ಸದ್ದು ಮಾಡುತ್ತ ಮಿಡತೆ, ಕಪ್ಪೆ, ಭತ್ತದ ಕಾಳು ಹೆಕ್ಕಿ ತಿನ್ನುತ್ತಿವೆ. ಅವು ಒಂದರ ಹಿಂದೆ ಒಂದು ಸಾಲುಗಟ್ಟಿ ಹೋಗುವ ಶೈಲಿಯೇ ವಿಶಿಷ್ಟ. ಎದುರು ಎರಡು ಬಾತುಗಳಿದ್ದರೆ ಕೊನೆಯವರೆಗೂ ಎರಡೇ ಬಾತು ಸರತಿಯಲ್ಲಿರುತ್ತವೆ. ಮೂರಿದ್ದರೆ ಕೊನೆಯವರೆಗೂ ಮೂರೇ ಇರುತ್ತವೆ. ಅಂಥ ಶಿಸ್ತು ಬೇರೆ ಯಾವ ಪಕ್ಷಿಗಳಲ್ಲೂ ಕಂಡು ಬರುವುದಿಲ್ಲ.

ನಿರಂತರ ಮೊಟ್ಟೆ: ಬಾತುಗಳು ಐದು–ಆರನೇ ತಿಂಗಳಿಗೆ ಮೊಟ್ಟೆ ಇಡಲು ಆರಂಭಿಸುತ್ತವೆ. ಒಮ್ಮೆ ಆರಂಭಿಸಿದರೆ ನಿರಂತರವಾಗಿ ಮೊಟ್ಟೆ ಇಡುತ್ತವೆ. ಕೊಲ್ಲಂ ತಳಿಯ ಬಾತುಗಳಾದರೆ ವರ್ಷಕ್ಕೆ 250ರವರೆಗೂ ಮೊಟ್ಟೆಗಳನ್ನಿಡುತ್ತವೆ. ಆದರೆ, ಆಂಧ್ರದಲ್ಲಿ ಕಂದು ಬಣ್ಣದ ಕಾರಂಟ್‌ ತಳಿಯ ಬಾತುಗಳನ್ನೇ ಹೆಚ್ಚಾಗಿ ಸಾಕುತ್ತಾರೆ. ಅವು ವರ್ಷಕ್ಕೆ 180ರಿಂದ 200 ಮೊಟ್ಟೆಗಳನ್ನು ಇಡುತ್ತವೆ ಎನ್ನುತ್ತಾರೆ ಗೋವಿನ ಸ್ವಾಮಿರಾಜ್‌.

‘ಗದ್ದೆಯಲ್ಲಿಯೇ ಸುತ್ತ ಬಲೆ ಕಟ್ಟಿ ಅವುಗಳಲ್ಲಿ ರಾತ್ರಿ ಹೊತ್ತಲ್ಲಿ ಬಾತುಗಳನ್ನು ಕೂಡಿ ಹಾಕುತ್ತೇವೆ. ಬೆಳಿಗ್ಗೆ ಹೊತ್ತಿಗೆ ಹೆಚ್ಚಿನ ಬಾತುಗಳು ಮೊಟ್ಟೆ ಇಟ್ಟಿರುತ್ತವೆ. ಕೆಲವು ಮಾತ್ರ ಮೇವಿಗೆ ಹೋದಲ್ಲಿ ಮೊಟ್ಟೆ ಇಡುತ್ತವೆ. ನಾವು ಮೊಟ್ಟೆಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತೇವೆ. ಕೇರಳದಿಂದ ಸಾಹುಕಾರ್‌ ವಾರಕ್ಕೊಮ್ಮೆ ಬಂದು ಟೆಂಪೊದಲ್ಲಿ ಒಯ್ಯುತ್ತಾರೆ’ ಎನ್ನುತ್ತಾರೆ ವಿಜಯವಾಡದ ಯೇಸು.

ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಮೊಟ್ಟೆಗೆ ಮಾತ್ರವಲ್ಲ, ಮಾಂಸಕ್ಕೂ ಬೇಡಿಕೆ ಇದೆ. ಕೋಳಿ ಮಾಂಸಕ್ಕಿಂತ ಭಿನ್ನ ರುಚಿಯನ್ನು ಇದು ಹೊಂದಿದೆ ಎಂದು ಅವರು ವಿವರಿಸುತ್ತಾರೆ.

‘ಅಲೆದಾಡುತ್ತಾ ಬರುವ ಇವರು ಎಲ್ಲಿ ಮೇವು ಸಿಗುತ್ತದೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಿಪುಣರು. ಈ ಬಾರಿ ನಮ್ಮ ಗದ್ದೆಯಲ್ಲಿ ಬೀಡುಬಿಟ್ಟಿದ್ದಾರೆ. ಕೋಳಿಮೊಟ್ಟೆಗಿಂತ ಬಾತು ಮೊಟ್ಟೆ ದೊಡ್ಡದಿರುತ್ತದೆ. ಸ್ಥಳೀಯರು ಒಂದು ಮೊಟ್ಟೆಗೆ ₹ 5 ಕೊಟ್ಟು ಒಯ್ಯುತ್ತಾರೆ. ದೊಡ್ಡ ಪ್ರಮಾಣದಲ್ಲಿ ಮೊಟ್ಟೆ ಖರೀದಿಸಿದರೆ ಕಡಿಮೆ ದರಕ್ಕೂ ನೀಡುತ್ತಾರೆ’ ಎಂದು ಜರೆಕಟ್ಟೆ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭತ್ತ ಕಟಾವು ಮಾಡುವಾಗ ಕಾಳುಗಳು ಗದ್ದೆಗೆ ಬಿದ್ದಿರುತ್ತವೆ. ಜತೆಗೆ ಕಪ್ಪೆ, ಹುಳ ಹುಪ್ಪಟೆಗಳಿರುತ್ತವೆ. ಕಟಾವಾದ ಬಳಿಕವೂ ನೀರಿನಾಂಶ ಗದ್ದೆಗಳಲ್ಲಿ ಇದ್ದಾಗ ಬಾತುಗಳಿಗೆ ಒಳ್ಳೆಯ ಆಹಾರ ಸಿಗುತ್ತದೆ. ಅದಕ್ಕೆ ಅಂಥದ್ದೇ ಗದ್ದೆಗಳನ್ನು ಹುಡುಕುತ್ತಾರೆ’ ಎಂದು ಜರೇಕಟ್ಟೆ ಹನುಮಂತಪ್ಪ ತಿಳಿಸಿದರು.

ವರ್ಷಕ್ಕೆ ಎರಡು ಮೂರು ತಿಂಗಳು ಕರ್ನಾಟಕದಲ್ಲಿದ್ದುಕೊಂಡು, ಬಾತುಗಳನ್ನು ಮೇಯಿಸಿಕೊಂಡು ಹೋಗುವ ಈ ಜನರು ಬಾತುಗಳನ್ನು ಕೂಡಿ ಹಾಕಿದ ಜಾಗದ ಪಕ್ಕದಲ್ಲಿಯೇ ಟೆಂಟ್‌ ಹಾಕಿಕೊಂಡು ಬದುಕುತ್ತಾರೆ. ಬಾತುಗಳ ಜತೆ ಅಲೆಯುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು