ಹರಿಹರ: ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ಮಾಡಿಕೊಡುವಲ್ಲಿ ಸ್ವಜನ ಪಕ್ಷಪಾತ, ವಿಳಂಬ ಮಾಡುವುದೂ ಭ್ರಷ್ಟಾಚಾರ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ ಹೇಳಿದರು.
ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಲೋಕಾಯುಕ್ತ ದಾವಣಗೆರೆ ಘಟಕ, ತಾಲ್ಲೂಕು ಆಡಳಿತ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಹರಿಹರ ಶಾಖೆಯ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ಸಾಮಾಜಿಕ ಪಿಡುಗುಗಳ ಪೈಕಿ ಒಂದಾಗಿದೆ. ರಾಜ್ಯದಲ್ಲಿ ಬರಗಾಲವಿದ್ದು, ಸಾರ್ವಜನಿಕರನ್ನು ಪೀಡಿಸದೆ ಅವರ ಕೆಲಸಗಳನ್ನು ನಿರ್ವಹಿಸಬೇಕು.
‘ಬಹುತೇಕ ನೌಕರರು ಸೇವಾ ನಿಯಮಗಳನ್ನು ಅಧ್ಯಯನ ಮಾಡುವುದಿಲ್ಲ. ಕರ್ತವ್ಯ ನಿರ್ವಹಣೆ, ಕೆಲಸ, ಕಾರ್ಯಗಳು ಹೇಗಿರಬೇಕು ಎಂಬ ಮಾಹಿತಿ ಇರುವ ಸೇವಾ ನಿಯಮಗಳನ್ನು ಪ್ರತಿ ನೌಕರ ಓದಿ ತಿಳಿದುಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿರುವ ಈ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದೇ ನೌಕರರಿಗೆ ಸುರಕ್ಷಿತ. ಶಿಕ್ಷೆಗೆ ಒಳಗಾಗಿ ನಿಮ್ಮನ್ನು ನಂಬಿರುವ ಕುಟುಂಬದ ಸದಸ್ಯರಿಗೆ ಮೋಸ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.
ನೌಕರರಿಗೆ ಕುಟುಂಬ ನಿರ್ವಹಣೆಗೆ ಅಗತ್ಯ ಇರುವ ಸಂಬಳ ಸರ್ಕಾರ ನೀಡುತ್ತದೆ. ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಭ್ರಷ್ಟಾಚಾರ ಕಾಯ್ದೆಗೆ 2018ರಲ್ಲಿ ತಂದ ತಿದ್ದುಪಡಿಯ ನಂತರ ಲಂಚ ನೀಡುವುದೂ ಶಿಕ್ಷಾರ್ಹ ಅಪರಾಧ. ಜನರು ಲಂಚ ನೀಡಬಾರದು ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ಕಿವಿಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಎಸ್. ಒಡೇನಪುರ್ ಕಾರ್ಯಕ್ರಮ ಉದ್ಘಾಟಿಸಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಬಿಇಒ ಎಂ. ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಪಿ.ಆರ್. ರಾಮಕೃಷ್ಣ, ನಗರಸಭೆ ಪೌರಾಯುಕ್ತ ಬಸವರಾಜ ಐಗೂರು, ಪಿಎಸ್‌ಐ ಶ್ರೀಪತಿ ಗಿನ್ನಿ, ನೌಕರರ ಸಂಘದ ಹರಿಹರ ಶಾಖೆ ಅಧ್ಯಕ್ಷ ಎ.ಕೆ. ಭೂಮೇಶ್, ಕಸಾಪ ಹರಿಹರ ಘಟಕ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಎಂ. ಉಮ್ಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.