ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 60,000ಕ್ಕೆ ಅಡಿಕೆ ದರ.. ಸಂತಸದ ಬದಲು ಆತಂಕ...

ಆಮದು ಸುಂಕ ಹೆಚ್ಚಳ; ಸ್ಥಳೀಯ ಅಡಿಕೆಗೆ ಹೆಚ್ಚಿದ ಬೇಡಿಕೆ
Last Updated 27 ಆಗಸ್ಟ್ 2022, 3:01 IST
ಅಕ್ಷರ ಗಾತ್ರ

- ಎನ್‌.ವಿ. ರಮೇಶ್‌

ಬಸವಾಪಟ್ಟಣ: ಪ್ರತಿ ಕ್ವಿಂಟಲ್‌ ಅಡಿಕೆಗೆ ₹ 40,000ದ ಆಸುಪಾಸಿನಲ್ಲಿದ್ದ ದರ ಒಂದು ವಾರದಿಂದ ₹ 60,000ಕ್ಕೆ ಏರಿಕೆ ಕಂಡಿದೆ.

ಗುಟ್ಕಾ ತಯಾರಿಕೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಗೊರಬಲು ನಮೂನೆಯ ಅಡಿಕೆಯನ್ನು ಗುಟ್ಕಾ ಕಂಪನಿಯ ಮಾಲೀಕರು ಶ್ರೀಲಂಕಾ, ನೇಪಾಳ, ಸಿಂಗಾಪುರ ಮುಂತಾದ ದೇಶಗಳಿಂದ ಖರೀದಿಸುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಅಡಿಕೆ ಆಮದಿನ ಮೇಲೆ ಶೇಕಡ 200ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿರುವುದರಿಂದ ಗೊರಬಲು ಅಡಿಕೆ ದರ ದುಬಾರಿಯಾಗಿದ್ದು, ಆಮದು ಕಡಿಮೆಯಾಗಿದೆ. ಗುಟ್ಕಾ ಕಂಪನಿಯವರು ಅನಿವಾರ್ಯವಾಗಿ ಇಲ್ಲಿನ ಅಡಿಕೆಯನ್ನೇ ಖರೀದಿಸಬೇಕಿರುವುದು ಅಡಿಕೆ ದರದ ಹೆಚ್ಚಳಕ್ಕೆ ಕಾರಣವಾಗಿದೆ.

ಅಲ್ಲದೇ ಈ ವರ್ಷ ಮಳೆ ಹೆಚ್ಚಾಗಿರುವುದರಿಂದ ಮೊದಲನೇ ಮತ್ತು ಎರಡನೇ ಬೀಡಿನ ಕೊಯಿಲಿನಲ್ಲಿ ಅಡಿಕೆ ಇಳುವರಿ ಶೇ 30ರಷ್ಟು ಕಡಿಮೆಯಾಗಿದೆ. ತಿಂಗಳಿಂದ ಸರಿಯಾಗಿ ಬಿಸಿಲೂ ಬೀಳದ್ದರಿಂದ ರೈತರಿಗೆ ಬೇಯಿಸಿದ ಅಡಿಕೆ ಒಣಗಿಸಲು ಆಗುತ್ತಿಲ್ಲ. ಮಳೆ ಹೆಚ್ಚಳದಿಂದ ಅಡಿಕೆ ಗೊನೆಗಳಲ್ಲಿರುವ ಎಳೆ ಅಡಿಕೆ ಹರಳು ನೆಲಕ್ಕೆ ಉದುರುತ್ತಿದೆ. ಇದೇ ರೀತಿ ಮಳೆ ಸುರಿಯುತ್ತಿದ್ದರೆ ಶೇಕಡ 50ರಷ್ಟು ಇಳುವರಿ ಕಡಿಮೆಯಾಗುವ ಸಂಭವವಿದ್ದು, ದರ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ದಾಗಿನಕಟ್ಟೆಯ ಅಡಿಕೆ ಬೆಳೆಗಾರ ಮತ್ತು ಅಡಿಕೆ ಬೆಳೆ ಗುತ್ತಿಗೆದಾರ ಎಂ.ಜಿ. ಕಿರಣ್‌.

ಅಡಿಕೆ ದರ ಸ್ಥಿರವಾಗಿರಬೇಕು. ಇಲ್ಲದಿದ್ದರೆ ರೈತರಿಗೆ ಈ ಬಗ್ಗೆ ಆತಂಕ ಉಂಟಾಗುತ್ತದೆ. ಹಲವರ ಲಾಬಿಯೂ ಇದರ ಹಿಂದಿದೆ. ಮಧ್ಯಮ ವರ್ಗದ ಬಹುತೇಕ ರೈತರು ಈಗಾಗಲೇ ಅಡಿಕೆ ಮಾರಾಟ ಮಾಡಿದ್ದು, ದರ ಹೆಚ್ಚಿದ್ದರಿಂದ ಪ್ರಯೋಜನವಾಗಲ್ಲ. ಆದರೆ, ಶ್ರೀಮಂತ ಬೆಳೆಗಾರರು ದರ ಹೆಚ್ಚಾದಾಗ ಮಾರಾಟ ಮಾಡುವ ಉದ್ದೇಶದಿಂದ ಅಡಿಕೆ ಉಳಿಸಿಕೊಂಡಿದ್ದಾರೆ. ಹಿಂದೊಮ್ಮೆ ಅಡಿಕೆ ದರ ಕ್ವಿಂಟಲ್‌ಗೆ ₹ 1 ಲಕ್ಷದವರೆಗೂ ಹೆಚ್ಚಾಗಿ ಒಮ್ಮೆಲೆ ಕುಸಿಯಿತು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಅಡಿಕೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ದಾಗಿನಕಟ್ಟೆಯ ಅಡಿಕೆ ಬೆಳೆಗಾರ ಒ.ಜಿ. ಕಿರಣ್‌ಕುಮಾರ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT